ಗುಂಡಿಬಿದ್ದ ರಸ್ತೆ, ಸಂಚಾರಕ್ಕೆ ಸಂಚಕಾರ

ಸೋಮವಾರ, ಜೂಲೈ 22, 2019
27 °C
ಕಣ್ಮುಚ್ಚಿಕುಳಿತ ಪಟ್ಟಣ ಪಂಚಾಯಿತಿ

ಗುಂಡಿಬಿದ್ದ ರಸ್ತೆ, ಸಂಚಾರಕ್ಕೆ ಸಂಚಕಾರ

Published:
Updated:

ನರಸಿಂಹರಾಜಪುರ: ಪಟ್ಟಣದ ಪ್ರವಾಸಿ ಮಂದಿರ ಮೂಲಕ ಉಪಬಂಧಿಖಾನೆಗೆ ಹೋಗುವ ರಸ್ತೆಯ ತುಂಬಾ ಗುಂಡಿಗಳು ಬಿದ್ದಿದ್ದು ಇದನ್ನು ದುರಸ್ತಿ ಪಡಿಸಬೇಕಾದ ಪಟ್ಟಣ ಪಂಚಾಯಿತಿ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಸಾರ್ವಜನಿರಿಂದ ಕೇಳಿಬಂದಿದೆ.ಪ್ರಮುಖವಾಗಿ ಈರಸ್ತೆಯ ಮೂಲಕವೇ ಉಪಬಂಧಿಖಾನೆ,ದೂರವಾಣಿ ಇಲಾಖೆಯ ಕಚೇರಿ,ರಾವೂರು, ಲಿಂಗಾಪುರ ಮುಂತಾದ ಸ್ಥಳಗಳಿಗೆ ಹಾದು ಹೋಗಬೇಕಾಗಿದೆ. ಈ ರಸ್ತೆಯ ಪ್ರಾರಂಭದಲ್ಲಿರುವ ಚರ್ಚ್‌ನ ಮುಂಭಾಗದಲ್ಲಿ ಹಾದು ಹೋಗುವ ರಸ್ತೆಯ ಎರಡು ಬದಿಯೂ ಸಹ ಕಳೆದ ಒಂದು ವರ್ಷಗಳ ಹಿಂದೆಯೇ ಮಣ್ಣು ರಾಶಿ ಹಾಕಲಾಗಿದೆ. ಇದನ್ನು ತೆರೆವುಗೊಳಿಸಲು ಪಟ್ಟಣ ಪಂಚಾಯಿತಿಯಾಗಲಿ ಹಾಗೂ ಇದನ್ನು ರಸ್ತೆಯ ಬದಿಯಲ್ಲಿ ತಂದು ಹಾಕಿರುವವರಾಗಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.ರಸ್ತೆಯ ತುಂಬಾ ಗುಂಡಿಗಳು ಬಿದ್ದಿರುವುದರಿಂದ ಮಳೆಬಂದಾಗ ರಸ್ತೆಯ ಬದಿಯಲ್ಲಿ ಹಾಕಿರುವ ಮಣ್ಣು ಕೊಚ್ಚಿಕೊಂಡು ಬಂದು ಕೆಸರಿನರಾಡಿಯೇ ತುಂಬಿಕೊಳ್ಳುತ್ತದೆ.ಮಳೆ ಬಂದಾಗ ರಸ್ತೆಯಾವುದು ಗುಂಡಿಯಾವುದು ಎಂಬುದು ತಿಳಿಯುವುದೇ ಇಲ್ಲ. ಇದರಿಂದ ಸಾಕಷ್ಟು ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಇವೆ. ದ್ವಿಚಕ್ರವಾಹನದವರಂತೂ ಈ ರಸ್ತೆಯ ಮೂಲಕ ಹಾದು ಹೋಗುವಾಗ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಬೀದಿ ದೀಪದ ವ್ಯವಸ್ಥೆಯು ಸಹ ಇಲ್ಲದಿರುವುದರಿಂದ ಓಡಾಟ ನಡೆಸುವುದೇ ದುಸ್ತರವಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕಾದವರು ಮೌನವಹಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನುತ್ತಾರೆ ಗ್ರಾಮಸ್ಥರು.ಈ ಬಗ್ಗೆ `ಪ್ರಜಾವಾಣಿ' ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ತಹಶೀಲ್ದಾರ್ ಜೆ.ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಿದಾಗ ರಸ್ತೆಯ ಬದಿಯಲ್ಲಿರುವ ಮಣ್ಣನ್ನು ತೆರವುಗೊಳಿಸಿ ಸಾರ್ವಜನಿಕರಿಗಾಗುತ್ತಿರುವ ತೊಂದರೆ ಯನ್ನು ಬಗೆಹರಿಸಲು ಸೂಕ್ತಕ್ರಮಕೈಗೊಳ್ಳಲಾಗುವುದು ಎಂದರು.ರಸ್ತೆಯ ಬದಿಯಲ್ಲಿ ಹಾಕಿರುವ ಮಣ್ಣರಾಶಿಯನ್ನು ಯಾರು ಹಾಕಿದ್ದಾರೆಂಬುದರ ಬಗ್ಗೆ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು.ಸಂಬಂಧಪಟ್ಟವರು ಕೂಡಲೇ ಸಮಸ್ಯೆಯನ್ನು ಬಗೆಹರಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry