ಗುಂಡಿ ಮುಚ್ಚದಿದ್ದರೆ ಧರಣಿ

7
ಅಧಿಕಾರಿಗಳ ಸಭೆಯಲ್ಲಿ ಮೇಯರ್ ಎಚ್ಚರಿಕೆ

ಗುಂಡಿ ಮುಚ್ಚದಿದ್ದರೆ ಧರಣಿ

Published:
Updated:

ಬೆಂಗಳೂರು:  `ಬರುವ ಗುರುವಾರದಿಂದ ನಗರದ ಯಾವ ರಸ್ತೆಯಲ್ಲೂ ಗುಂಡಿ ಇರದಂತೆ ಮುಚ್ಚಬೇಕು. ಇಲ್ಲದಿದ್ದರೆ ಎಂಜಿನಿಯರ್‌ಗಳ ಕಚೇರಿ ಮುಂದೆ ನಾನೇ ಧರಣಿ ಕೂರಬೇಕಾಗುತ್ತದೆ'-ಮೇಯರ್ ಬಿ.ಎಸ್. ಸತ್ಯನಾರಾಯಣ ಶುಕ್ರವಾರ ಬಿಬಿಎಂಪಿ ಎಂಜಿನಿಯರ್‌ಗಳಿಗೆ ನೀಡಿದ ಎಚ್ಚರಿಕೆ ಇದು. `ನಗರದ ಯಾವ ರಸ್ತೆಗೆ ಹೋದರೂ ಗುಂಡಿಗಳೇ ಕಾಣುತ್ತಿವೆ. ಸಂಚಾರ ದುಸ್ತರವಾಗಿದೆ. ಜನ ಬಿಬಿಎಂಪಿಗೆ ಶಾಪ ಹಾಕುತ್ತಿದ್ದಾರೆ. ಇನ್ನುಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಹೇಳಿದರು.`ಸೋಮವಾರ ಗಣೇಶ ಚತುರ್ಥಿ. ಹಬ್ಬ ಮುಗಿದ ಮಾರನೇ ದಿನದಿಂದ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ರಸ್ತೆಗಳಲ್ಲಿ ಗುಂಡಿಗಳು ಇಲ್ಲದಂತೆ ಕ್ರಮ ಕೈಗೊಳ್ಳಬೇಕು. ಗುರುವಾರದಿಂದ ನಾನು ಪರಿಶೀಲನೆ ನಡೆಸುತ್ತೇನೆ' ಎಂದು ತಿಳಿಸಿದರು.

`ಗುರುವಾರದ ಬಳಿಕ ಒಂದು ವಾರವಷ್ಟೇ ಅವಕಾಶ. ಬಳಿಕ ಗುಂಡಿಗಳಿಗೆ ಸಂಬಂಧಿಸಿದಂತೆ ದೂರು ಬಂದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.`ಕಂದಾಯ ವಿಭಾಗದ ಪ್ರತಿಯೊಬ್ಬ ಸಿಬ್ಬಂದಿ ನಿತ್ಯ 25 ಮನೆಗಳಿಗೆ ಭೇಟಿಕೊಟ್ಟು ತೆರಿಗೆ ಪಾವತಿ ಮಾಹಿತಿ ಕಲೆಹಾಕಬೇಕು. ಪ್ರಮಾದಗಳು ಕಂಡುಬಂದರೆ ದಂಡ ವಿಧಿಸಬೇಕು' ಎಂದು ಸೂಚಿಸಿದರು. `ಪ್ರತಿ ಶನಿವಾರ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿಗೆ ದೊಡ್ಡ ಆಂದೋಲನ ನಡೆಸಲಾಗುವುದು. ಅದಕ್ಕೆ ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು. ಮಾರುಕಟ್ಟೆ ಸ್ವಚ್ಛತಾ ಆಂದೋಲನ ಮುಂದಿನ ಸೋಮವಾರದಿಂದ ಶುರುವಾಗಲಿದೆ' ಎಂದರು.`ನಗರದಲ್ಲಿ ಹಾಕಲಾದ ಹೋರ್ಡಿಂಗ್‌ಗಳಿಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡಿ, ದುಡ್ಡು ಪಡೆಯುವಾಗ ಬಿಬಿಎಂಪಿಗೆ ಅದರ ಮಾಲೀಕರಿಂದ ಏಕೆ ತೆರಿಗೆ ಬರುತ್ತಿಲ್ಲ' ಎಂದು ಪ್ರಶ್ನಿಸಿದರು. `ಅನಧಿಕೃತ ಹೋರ್ಡಿಂಗ್‌ಗಳ ತೆರವು ಕಾರ್ಯಾಚರಣೆ ಚುರುಕುಗೊಳಿಸಬೇಕು' ಎಂದು ಆದೇಶಿಸಿದರು. ಆಯುಕ್ತ ಎಂ.ಲಕ್ಷ್ಮಿನಾರಾಯಣ ಮತ್ತು ಎಲ್ಲ ವಿಭಾಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry