ಸೋಮವಾರ, ಡಿಸೆಂಬರ್ 9, 2019
20 °C

ಗುಂಡುತೋಪು: ಮರೆಯಾಗುತಿವೆ ಹಸಿರ ಗುರುತು

Published:
Updated:

ನೀವೇನಾದರೂ ಬೆಂಗಳೂರಿನ ಹೊರವಲಯದಲ್ಲಿ ನಡೆದು ಹೋಗುವಾಗ ಅಥವಾ ವಾಹನ ಚಾಲನೆ ಮಾಡಿಕೊಂಡು ಹೋಗುವಾಗ, ದೂಳು ತುಂಬಿರುವ, ಹಳ್ಳ ಕೊಳ್ಳಗಳಿರುವ ರಸ್ತೆಗಳೇನಾದರೂ ಕಂಡು ಬಂದರೆ, ಅಲ್ಲೇ ಆಸುಪಾಸಿನಲ್ಲಿ ಮಾವಿನ ಅಥವಾ ನೇರಳೆ ಮರಗಳ ತೋಪು ಕಂಡರೆ,  ಅದರ ತಂಪು ನೆರಳಿನಲ್ಲಿ ಒಂದಷ್ಟು ಹೊತ್ತು ಕಳೆಯುವುದನ್ನು ಮರೆಯಬೇಡಿ. ಒಂದಾನೊಂದು ಕಾಲದಲ್ಲಿ ಬೆಂಗಳೂರಿನ ಸುತ್ತಮುತ್ತಲ ಗ್ರಾಮಗಳ ಅವಿಭಾಜ್ಯ ಅಂಗವಾಗಿದ್ದ ಅರಣ್ಯದಂತೆಯೇ ಕಾಣುತ್ತಿದ್ದ ಗುಂಡುತೋಪಿನಲ್ಲೇ ನೀವು ನಿಂತಿರಬಹುದು.

ಗುಂಡುತೋಪುಗಳು ಸಮುದಾಯದ ಆಸ್ತಿ.  ಗ್ರಾಮಸ್ಥರೇ ಅಲ್ಲಿ ಗಿಡಗಳನ್ನು ನೆಟ್ಟು, ಅದರ ನಿರ್ವಹಣೆಯನ್ನೂ ಮಾಡುತ್ತಿದ್ದರು. ಸ್ಥಳೀಯರ ಸಾಮಾಜಿಕ  ಹಾಗೂ ಸಾಂಸ್ಕೃತಿಕ ಬದುಕಿನೊಂದಿಗೂ ಇವು ನಿಕಟವಾಗಿ ಸಂಬಂಧ ಹೊಂದಿವೆ. ಕೆರೆಗಳ ಆಸುಪಾಸಿನಲ್ಲೇ ಹೆಚ್ಚಾಗಿ ಕಾಣಸಿಗುವ ಈ ತೋಪುಗಳಲ್ಲಿ ಮಾವು, ನೇರಳೆ, ಹಿಪ್ಪೆ ಮತ್ತು ಹಲಸಿನ ಮರಗಳಿರುತ್ತವೆ. ಕೆಲವೊಮ್ಮೆ ಈ ತೋಪುಗಳಲ್ಲೇ ಊರಿನ ಸ್ಮಶಾನವೂ ಇರುತ್ತಿತ್ತು. ಹಳ್ಳಿಗಳು ಈ ತೋಪುಗಳನ್ನು ಬಹುಬಗೆಯಲ್ಲಿ ಬಳಸುತ್ತಿದ್ದವು.ಇಲ್ಲಿನ ಗ್ರಾಮದ ದೇವಸ್ಥಾನದ ದುರಸ್ಥಿಯಂತಹ ಕೆಲಸಕ್ಕೆ ಇಲ್ಲಿನ ಮರಗಳನ್ನು ಬಳಸಲಾಗುತ್ತಿತ್ತು. ಕೆಲವೊಮ್ಮೆ ಈ ಮರಗಳನ್ನು ಹರಾಜು ಹಾಕಿ ಅದರಲ್ಲಿ ಸಿಗುವ ಹಣವನ್ನು ಗ್ರಾಮದ ಹಬ್ಬಕ್ಕೆ ಖರ್ಚು ಮಾಡಲಾಗುತ್ತಿತ್ತು. ಸ್ವಂತ ಮರಗಳಿಲ್ಲದ ಬಡ ಕುಟುಂಬಗಳು ಅಂತ್ಯಸಂಸ್ಕಾರ ಅಥವಾ ಮದುವೆಯಂಥ ಸಮಾರಂಭಗಳಿಗೆ ಬೇಕಿರುವ ಉರುವಲನ್ನು ಈ ತೋಪುಗಳಿಂದ ಪಡೆಯುವ ಅವಕಾಶವಿತ್ತು.ಈ ತೋಪುಗಳು ಜಾನುವಾರುಗಳು ಮೇಯುವ ಸ್ಥಳವಾಗಿದ್ದಂತೆಯೇ ಇಲ್ಲಿನ ಮರಗಳು ದನಗಾಹಿಗಳಿಗೆ ನೆರಳನ್ನು ಒದಗಿಸುತ್ತಿತ್ತು. ಮಕ್ಕಳಿಗಿದು ಮರ ಹತ್ತಿ ಆಡುತ್ತಾ ಮಾವು ಹಾಗೂ ನೇರಳೆ ಹಣ್ಣನ್ನು ಮನಸೋ ಇಚ್ಛೆ ತಿನ್ನುತ್ತಾ ಮಧ್ಯಾಹ್ನಗಳನ್ನು ಕಳೆಯುವ ಸ್ಥಳವಾಗಿತ್ತು.ರಾಮನವಮಿಯಂಥ ಹಬ್ಬಗಳಲ್ಲಿ ಗ್ರಾಮಸ್ಥರು ತೋಪುಗಳಲ್ಲಿ ಸೇರಿ, ಅಡುಗೆ ಮಾಡಿ ಹಂಚಿ ತಿನ್ನುತ್ತಿದ್ದರು (ಅರಿಸೇವೆ). ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸಲು ತೋಪಿನಲ್ಲಿದ್ದ ತರಗಲೆ ಹಾಗೂ ಮಣ್ಣನ್ನು ಉಪಯೋಗಿಸಿಕೊಳ್ಳಲಾಗುತ್ತಿತ್ತು. ವಿಶಾಲವಾದ ತೋಪುಗಳಲ್ಲಿ ದೇವಸ್ಥಾನಗಳೂ ಇರುತ್ತಿದ್ದು, ಅಲ್ಲಿ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಈ ತೋಪುಗಳು ಅಲೆಮಾರಿ ಸಮುದಾಯಗಳಿಗೂ ನೆಲೆ ನೀಡಿದ್ದವು. ಆ ಮರಗಳ ನೆರಳಲ್ಲೇ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು ಅವರು.ಇನ್ನಿತರ ನಗರ ಪ್ರದೇಶದ ಸಾಮುದಾಯಿಕ ಆಸ್ತಿಗಳಂತೆಯೇ  ತೋಪುಗಳು ಮತ್ತು ಸ್ಥಳೀಯ ಸಮುದಾಯದ ನಡುವಣ ಸಂಬಂಧ ಶಿಥಿಲವಾಗಿದೆ. ಬೆಂಗಳೂರಿನ ಹೊರ ವಲಯದಲ್ಲಿ ನಾವು ನಡೆಸಿದ ಕ್ಷೇತ್ರಕಾರ್ಯದಲ್ಲಿ ತಿಳಿದು ಬಂದಂತೆ ಶಾಲೆ, ಪಶು ಆಸ್ಪತ್ರೆ, ಉದ್ಯಾನ, ಸಮುದಾಯ ಕೇಂದ್ರ ಮತ್ತು ಬಡವರ ವಸತಿ ಹೀಗೆ ಹಲವು ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಈ ಪ್ರದೇಶದಲ್ಲಿದ್ದ ಗುಂಡುತೋಪುಗಳನ್ನು ಕಡಿಯ­ಲಾಗಿದೆ.

ಇನ್ನು ಕೆಲವನ್ನು ಬೇಸಾಯಕ್ಕೆ ಒತ್ತುವರಿ ಮಾಡಿಕೊಂಡಿದ್ದರೆ, ಇನ್ನೂ ಕೆಲವು ಕಟ್ಟಡ ನಿರ್ಮಾಣದ ಅವಶೇಷಗಳ ರಾಶಿ ಹಾಕುವ ಸ್ಥಳವಾಗಿವೆ. ಮತ್ತಷ್ಟು ತೋಪುಗಳು ಸಾರ್ವಜನಿಕ ಶೌಚಾಲಯದಂತೆ ಬಳಕೆಯಾಗುತ್ತಿವೆ. ಗ್ರಾಮ, ಅಲ್ಲಿನ ದೇವಸ್ಥಾನಗಳ ಅಭಿವೃದ್ಧಿಗೆ ಹಣದ ರೂಪದಲ್ಲಿ ಚಂದಾ ಸಂಗ್ರಹಿಸಲು ಸಾಧ್ಯವಾದ ಮೇಲೆ ತೋಪುಗಳ ಮರಗಳ ಹರಾಜಿನಿಂದ ಬರುವ ಹಣದ ಮಹತ್ವ ಕಡಿಮೆಯಾಯಿತು. ಹಿರಿಯರ ನೆನಪಿನಿಂದ ತೋಪುಗಳು ಮರೆಯಾಗುತ್ತಿವೆ. ಕಿರಿಯರಿಗಂತೂ ತೋಪು ಎಂದರೆ ಏನೂ ಎಂಬುದೇ ತಿಳಿದಿಲ್ಲ.ಇಷ್ಟೆಲ್ಲಾ ಆದರೂ ನಗರೀಕರಣಕ್ಕೆ ಒಳಗಾಗುತ್ತಿರುವ ಪ್ರದೇಶಗಳಲ್ಲಿ, ಇಲ್ಲೊಂದು ತೋಪಿರಬಹುದು ಎಂದು ಭಾವಿಸಲೇ ಸಾಧ್ಯವಿಲ್ಲದ ಪ್ರದೇಶಗಳಲ್ಲಿ ಕೂಡಾ ತೋಪುಗಳು ಉಳಿದುಕೊಂಡಿವೆ. ನಲ್ಲೂರಹಳ್ಳಿಯ ತೋಪು ಐಟಿಪಿಎಲ್ ಸಾಫ್ಟ್‌ವೇರ್ ಪಾರ್ಕ್‌ನ ಹಿಂದೆಯೇ ಇದೆ. ನಲ್ಲೂರುಹಳ್ಳಿಯ ಕೆರೆಯ ದಂಡೆಯ ಮೇಲೆ ಇರುವ ದೊಡ್ಡ ಮರಗಳ ಈ ತೋಪು ಈಗಲೂ ಆಕರ್ಷಣೀಯ.ದೊಡ್ಡಗುಬ್ಬಿಯಲ್ಲಿರುವ ತೋಪನ್ನು ಸ್ಥಳೀಯರೇ ಕಷ್ಟಪಟ್ಟು ಉಳಿಸಿಕೊಂಡಿದ್ದಾರೆ. ಭಟ್ಟರಹಳ್ಳಿಯಲ್ಲಿದ್ದ ಗುಂಡುತೋಪಿನ ಸುತ್ತ ಬೇಲಿ ಹಾಕಿ ಅದನ್ನೊಂದು ಪಾರ್ಕ್‌ನಂತೆ ಪರಿವರ್ತಿಸಲಾಗಿದೆ. ಸ್ಥಳೀಯರು ಇದನ್ನು ಬಳಸುತ್ತಿದ್ದಾರೆ ಎಂಬುದೇನೋ ನಿಜ. ಆದರೆ ಇಲ್ಲಿನ ಮರಗಳ ಹಣ್ಣು ಮತ್ತು ನಾಟಾದ ಮೇಲೆ ಅವರಿಗೆ ಯಾವ ಹಕ್ಕೂ ಈಗ ಉಳಿದುಕೊಂಡಿಲ್ಲ.ಹಲವು ತೋಪುಗಳ ಮರಗಳಡಿಯಲ್ಲಿ ಇಂದಿಗೂ ಯಾವುದೇ ರಕ್ಷಣೆ ಇಲ್ಲದೆ ಬಿದ್ದಿರುವ ವೀರಗಲ್ಲುಗಳು ಹಾಗೂ ಕೆತ್ತನೆಯುಳ್ಳ ಕಲ್ಲುಗಳು ಕಾಣಸಿಗುತ್ತವೆ. ಈ ಕಲ್ಲುಗಳ ಬಳಿ ಬಹುಮುಖ್ಯವಾದ ನಾವು ಕೇಳಲೇಬೇಕಾದ ಕಥೆಗಳಂತೂ ಖಂಡಿತವಾಗಿಯೂ ಇವೆ. ಇರುವ ಕೆಲವೇ ತೋಪುಗಳು ಹಿಂದಿನ ದಿನಗಳಂತೆ ಉಳಿದಿಲ್ಲವಾದರೂ ಹಕ್ಕಿಗಳಿಗೆ ಗೂಡಾಗಿ, ಬಡವರಿಗೆ ಉರುವಲಾಗಿ, ಆಗಾಗ ಬರುವ ದನಗಾಹಿಗಳಿಗೆ ಹಾಗೂ ದಾರಿಹೋಕರಿಗೆ ನೆರಳಾಗಿ ಉಳಿದುಕೊಂಡಿವೆ.ಆಧುನೀಕರಣದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ನಗರದಲ್ಲಿ ನಾವು ಅಲ್ಲಲ್ಲಿ ಹಂಚಿಹೋಗಿರುವ ಕೆಲವೇ ಕೆಲವು ಅಮೂಲ್ಯ ತೋಪುಗಳತ್ತ ಗಮನ ಹರಿಸಬೇಕಿದೆ. ವೇಗದಲ್ಲಿ ಸಾಗುತ್ತಿರುವ ಈ ಐಟಿ ಸಿಟಿಯಲ್ಲಿ ತೋಪನ್ನು ಪರಿಸರ ರಕ್ಷಣೆಯ, ಜನರ ಸಂವಾದ ತಾಣವಾಗಿ, ಪ್ರಕೃತಿ ಅಧ್ಯಯನ ಮತ್ತು ಶಿಕ್ಷಣದ ಕ್ಷೇತ್ರವಾಗಿ ಮರುರೂಪಿಸಲು ಸಾಧ್ಯವಿದೆ.

ಪೂರಕ ಮಾಹಿತಿ: ಸೀಮಾ ಮುಂಡೋಲಿ, ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ, ಬಿ.ಮಂಜುನಾಥ, ಅಶೋಕ ಟ್ರಸ್ಟ್ ಫಾರ್ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್

ಪ್ರತಿಕ್ರಿಯಿಸಿ (+)