ಗುಂಡು ಹಾರಿಸಿದ ಯುವಕ; ಬಾಲಕನಿಗೆ ಗಾಯ

7

ಗುಂಡು ಹಾರಿಸಿದ ಯುವಕ; ಬಾಲಕನಿಗೆ ಗಾಯ

Published:
Updated:

ಬೆಂಗಳೂರು: ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಕಾರಿನ ಮೇಲೆ ಯುವಕನೊಬ್ಬ ಏರ್ ಪಿಸ್ತೂಲ್‌ನಿಂದ ಮನಬಂದಂತೆ ಗುಂಡು ಹಾರಿಸಿರುವ ಘಟನೆ ಸದಾಶಿವನಗರದ ಮಾರುತಿ ವೃತ್ತದ ಬಳಿ ಭಾನುವಾರ ರಾತ್ರಿ ನಡೆದಿದ್ದು, ಘಟನೆಯಲ್ಲಿ ಆ ವ್ಯಕ್ತಿಯ ಮಗನಿಗೆ ಗುಂಡೇಟು ಬಿದ್ದಿದೆ.ವೈಯಾಲಿಕಾವಲ್ ಸಮೀಪದ ವೆಂಕಟರಂಗಪುರ ನಿವಾಸಿ ನಿಂಗರಾಜು ಎಂಬುವರ ಪುತ್ರ ನಿತಿನ್ (14) ಎಂಬಾತನ ತಲೆಯ ಎಡ ಭಾಗಕ್ಕೆ ಗುಂಡೇಟು ಬಿದ್ದಿದೆ. ಗಾಯಾಳು ನಿತಿನ್‌ಗೆ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ತಲೆಗೆ ಹೊಕ್ಕಿದ್ದ ಗುಂಡನ್ನು ಹೊರ ತೆಗೆದಿದ್ದಾರೆ. ನಿತಿನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಟ್ಯಾಕ್ಸಿ ಇಟ್ಟುಕೊಂಡಿರುವ ನಿಂಗರಾಜು ಅವರ ಸಂಬಂಧಿಕರೊಬ್ಬರು ಕನಕಪುರದಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತ ನಾರಾಯಣ ಮತ್ತು ಅವರ ಪತ್ನಿ ಜ್ಯೋತಿ ಅವರೊಂದಿಗೆ ಭಾನುವಾರ ಬೆಳಿಗ್ಗೆ ಕಾರಿನಲ್ಲಿ ಕನಕಪುರಕ್ಕೆ ಹೋಗಿ ರಾತ್ರಿ 11.30ರ ಸುಮಾರಿಗೆ ನಗರಕ್ಕೆ ಬಂದು ಸ್ನೇಹಿತರನ್ನು ಮನೆಗೆ ಬಿಟ್ಟು, ವಾಪಸ್ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.`ಘಟನೆ ನಂತರ ಗುಂಡು ಹಾರಿಸಿದ ಆ ಯುವಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ನಿಂಗರಾಜು ಅವರಿಗೆ ಆ ಕಾರಿನ ಸಂಖ್ಯೆಯನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ. ಆದರೂ ಎರಡು  ಸಂಖ್ಯೆಗಳನ್ನು ನೀಡಿದ್ದಾರೆ. ಆ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಆ ಕಾರಿನಲ್ಲಿ ನಾಲ್ಕೈದು ಮಂದಿ ಯುವಕರಿದ್ದರು ಎಂದು ನಿಂಗರಾಜು ಹೇಳಿಕೆ ಕೊಟ್ಟಿದ್ದಾರೆ~ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು. ಘಟನೆ ಸಂಬಂಧ ಸದಾಶಿವನಗರ ಪೊಲೀಸರು ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry