ಗುಂಡೇಟಿಗೆ ಆನೆ ಬಲಿ
ಪಿರಿಯಾಪಟ್ಟಣ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹೆಣ್ಣಾನೆಯೊಂದನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಾಡಂಚಿನಲ್ಲಿರುವ ಲಕ್ಷ್ಮೀಪುರ ಗ್ರಾಮದ ಸರ್ವೆ ನಂ.32/7ರಲ್ಲಿ ಆನೆಯ ಮೃತದೇಹ ಪತ್ತೆಯಾಗಿದೆ. ಮಂಗಳವಾರ ರಾತ್ರಿ ಹೆಣ್ಣಾನೆಯೊಂದು ತನ್ನ ಮರಿಯೊಂದಿಗೆ ಸೀನೇಗೌಡ ಎಂಬುವವರ ತೋಟದ ಮನೆಯ ಬಳಿ ಬಂದಿದ್ದು ಬಾಳೆ ಮತ್ತು ಜೋಳದ ಬೆಳೆಯನ್ನು ಹಾಳು ಮಾಡಿದೆ. ಜಮೀನಿಗೆ ಆನೆ ಬಂದಿರುವುದನ್ನು ನೋಡಿದ ಸೀನೇಗೌಡ ಬಂದೂಕಿನಿಂದ ಆನೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು ಜೊತೆಯಲ್ಲಿದ್ದ ಆನೆ ಮರಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಆನೆಗೆ ಅಂದಾಜು 35 ವರ್ಷ ಪ್ರಾಯವಾಗಿರಬಹುದು. ಆನೆಗೆ ಹಾರಿಸಲಾದ ಗುಂಡು ನೇರವಾಗಿ ಮೆದುಳಿಗೆ ತಲುಪಿರುವುದರಿಂದ ಅದು ಮೃತ ಪಟ್ಟಿದೆ ಎಂದು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಶ್ರೀನಿವಾಸ್ ತಿಳಿಸಿದ್ದಾರೆ. ಆನೆಯ ತಲೆಯಿಂದ ಸೀಸದ ಗುಂಡುಗಳನ್ನು ಹೊರ ತೆಗೆಯಲಾಗಿದೆ. ಕೃತ್ಯಕ್ಕೆ ಬಳಸಲಾದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದಾನೆ.
ಸ್ಥಳಕ್ಕೆ ಅರಣ್ಯ ಇಲಾಖೆ ಎಡಿಜಿಪಿ ಕೆಎಸ್ಎನ್ ಚಿಕ್ಕೆರೂರು, ಮಡಿಕೇರಿ ಎಸ್ಇ ಎ.ಆರ್.ಅನ್ವೇಕರ್, ಡಿವೈಎಸ್ಪಿ ಮುತ್ತುಸ್ವಾಮಿ ನಾಯ್ಡು, ಡಿಸಿಎಫ್ ಕೇಶವ್, ಸರ್ಕಲ್ ಇನ್ಸ್ಪೆಕ್ಟರ್ ಎಸ್.ಈ.ಗಂಗಾಧರಸ್ವಾಮಿ, ಆರ್.ಎಫ್.ಓ. ಎಂ.ಎಂ.ಅಚ್ಚಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.