ಬುಧವಾರ, ಆಗಸ್ಟ್ 4, 2021
22 °C

ಗುಂಪಿಗೆ ಸೇರದ ಸದಸ್ಯ

ಬಿ.ಎಸ್. ಶೈಲಜಾ Updated:

ಅಕ್ಷರ ಗಾತ್ರ : | |

ಕಳೆದ ಶತಮಾನದ ಆದಿಯಲ್ಲಿ ವೀಕ್ಷಣೆ ಆರಂಭಿಸಿದ ಎಡ್ವಿನ್ ಹಬಲ್ ಗೆಲಾಕ್ಸಿಗಳ ದೂರ ಮತ್ತು ವೇಗವನ್ನು ಕುರಿತ ಸೂತ್ರವನ್ನು ಕಂಡುಹಿಡಿದದ್ದು ಎಲರ್ಲಿಗೂ ತಿಳಿದ ವಿಷಯ. ಇದರ ಬಗ್ಗೆ ಅವರು ರಚಿಸಿದ ಸುದೀರ್ಘ ಸಂಪುಟದಲ್ಲಿ  ಆಕಾಶಗಂಗೆಗೆ ಸಮೀಪದ ಸುಮಾರು 18 ಗೆಲಾಕ್ಸಿಗಳನ್ನು ಗುರುತಿಸಿ ಸ್ಥಳೀಯ ಗುಂಪು (ಲೋಕಲ್ ಗ್ರೂಪ್) ಎಂದು ಗುರುತಿಸಿದರು. ಇದರಲ್ಲಿ ಆಕಾಶ ಗಂಗೆ ಮತ್ತು ಆಂಡ್ರೊಮಿಡಾ ಇವೆರಡೂ ದೊಡ್ಡ ಗೆಲಾಕ್ಸಿಗಳು.  ಉಳಿದ ಅನೇಕ ಸಣ್ಣ ಸಣ್ಣ ಗೆಲಾಕ್ಸಿಗಳೆಲ್ಲವೂ ಸುಮಾರು ಹತ್ತು ದಶಲಕ್ಷ ಜ್ಯೋತಿರ್ವರ್ಷ ದೂರದಲ್ಲಿ ಲಹರಡಿಕೊಂಡಿವೆ. ಇವುಗಳ ಮೂರು ಆಯಾಮದ ರೇಖಾನಕ್ಷೆಯಿಂದ ಅವುಗಳ ಹಂಚಿಕೆ ತಿಳಿಯಬಹುದು.ಐಸಿ 342 ಎಂಬ ಸಂಖ್ಯೆಯ ಗೆಲಾಕ್ಸಿ ಮೊದಲು ಈ ಗುಂಪಿಗೇ ಸೇರಿದೆ ಎಂದು ಭಾವಿಸಲಾಗಿತ್ತು. ಆದರೆ ಹಬಲ್ ನಡೆಸಿದ ವೀಕ್ಷಣೆಯಿಂದ ಅದರ ದೂರ ಕರಾರುವಾಕ್ಕಾಗಿ ತಿಳಿದು ಬಹುಶಃ ಅದು ಗುಂಪಿಗೆ ಸೇರಿಲ್ಲ ಎಂದು ತಿಳಿಯಿತು. 10 ದಶಲಕ್ಷ  ಜ್ಯೋತಿರ್ವರ್ಷ ದೂರ ಎಂದರೆ ಗುಂಪಿನ ಅಂಚು ಎಂದಾಯಿತು. ಅದು ನೇರವಾಗಿ ಗುಂಪಿನ ಗುರುತ್ವಾಕರ್ಷಣೆಗೆ ಒಳಪಟ್ಟಿಲ್ಲ. ಆದರೆ, ಅದು ಕೆಲವೊಂದು ಸಣ್ಣ ಸದಸ್ಯ ಗೆಲಾಕ್ಸಿಗಳ ಮೇಲೆ ತನ್ನ ಗುರುತ್ವ ಪ್ರಭಾವ  ಬೀರುತ್ತಿದೆ ಎಂಬುದಂತೂ ಸಾಬೀತಾಗಿದೆ.ನಮ್ಮ ಗೆಲಾಕ್ಸಿಯ ಕೇಂದ್ರ ಭಾಗದ ದಟ್ಟ ಸಾಂದ್ರತೆಯ ದೂಳಿನ ದಿಕ್ಕಿನಲ್ಲಿ ಈ ಗೆಲಾಕ್ಸಿ ಅಡಗಿದೆ. ಆದ್ದರಿಂದ ಪತ್ತೆ ಮಾಡುವುದು ಬಹಳ ಕಷ್ಟವೇ ಆಗಿತ್ತು. 1885ರಲ್ಲಿ ಇದನ್ನು ಪತ್ತೆ ಮಾಡಲಾಯಿತು. ಅದರಲ್ಲಿ ಇರುವ ನೀಲಿ ನಕ್ಷತ್ರಗಳು ಸುರುಳಿ ಆಕಾರವನ್ನು ಸೂಚಿಸುತ್ತವೆ. ಹೈಡ್ರೋಜನ್ ಸೋಸುಕವನ್ನು ಬಳಸಿ ತೆಗೆದ ಚಿತ್ರಗಳಿಂದ ಹೊಸ ನಕ್ಷತ್ರಗಳು ರಚನೆಯಾಗುತ್ತಿರುವ ಸ್ಥಳಗಳನ್ನು ಗುರುತಿಸುವುದೂ ಸಾಧ್ಯವಾಗಿದೆ.ಈಚೆಗೆ ಈ ಗೆಲಾಕ್ಸಿಯಲ್ಲಿ ನಕ್ಷತ್ರ ರಚನೆಯ ಸ್ಫೋಟ ಉಂಟಾಗಿರಬಹುದು ಎಂದು ವೀಕ್ಷಣೆಗಳು ಸೂಚಿಸುತ್ತವೆ. ಅಂದರೆ ಯಾವುದೇ ಗೆಲಾಕ್ಸಿಯಲ್ಲಿ  ವರ್ಷಕ್ಕೆ ಇಂತಿಷ್ಟು ದ್ರವ್ಯ ರಾಶಿಯು ನಕ್ಷತ್ರವಾಗಿ ಮಾರ್ಪಡುತ್ತಿವೆ ಎಂದು ಲೆಕ್ಕ ಹಾಕಬಹುದು. ಕೆಲವೊಮ್ಮೆ ಇದ್ದಕ್ಕಿದ್ದಂತೆ ನಕ್ಷತ್ರಗಳು ಒಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಚಿತವಾಗುವುವು. ಇದನ್ನು ನಕ್ಷತ್ರ ರಚನೆಯ ಸ್ಫೋಟ ಎಂದು ಕರೆಯಬಹುದು.

 

ಈ ವರ್ಗದವುಗಳನ್ನು ಸ್ಟಾರ್ ಬರ್ಸ್ಟ್ ಗೆಲಾಕ್ಸಿಗಳು ಎಂದು ಕರೆಯುವರು. ಹೀಗೇಕೆ ಎಂಬುದಕ್ಕೆ ಸಮರ್ಪಕವಾದ ಉತ್ತರ ದೊರೆತಿಲ್ಲ.ಇದನ್ನು ಹುಡುಕಲು ನಮಗೆ ದೊರಕಿರುವ ಅತಿ ಸಮೀಪದ ಉದಾಹರಣೆಯೇ ಐಸಿ 342. ಈ ಕಾರಣದಿಂದ ಈ ಗೆಲಾಕ್ಸಿಯ ಅಧ್ಯಯನ ಬಹಳ ಮಹತ್ವ ಪಡೆದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.