ಗುಂಪಿನಲ್ಲಿಯೇ ಮುಗಿದ ಭಾರತದ ಹೋರಾಟ

ರಿಯೊ ಡಿ ಜನೈರೊ (ಪಿಟಿಐ): ಮಹತ್ವದ ಕೊನೆಯ ಲೀಗ್ ಪಂದ್ಯದಲ್ಲಿ ಕಳಪೆ ಆಟವಾಡಿದ ಭಾರತ ಮಹಿಳಾ ತಂಡದವರು ಒಲಿಂಪಿಕ್ಸ್ನ ಹಾಕಿ ಹಣಾಹಣಿಯಲ್ಲಿ 0–5 ಗೋಲುಗಳಿಂದ ಬಲಿಷ್ಠ ಅರ್ಜೆಂಟೀನಾ ಎದುರು ಶರಣಾದರು. ಆದ್ದರಿಂದ ಸುಶೀಲಾ ಚಾನು ನಾಯಕತ್ವದ ತಂಡದ ಹೋರಾಟ ಗುಂಪು ಹಂತದಲ್ಲಿಯೇ ಅಂತ್ಯ ಕಂಡಿತು.
36 ವರ್ಷಗಳ ಬಳಿಕ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದ ಭಾರತದ ವನಿಯತೆಯರು ಸಾಂಬಾ ನಾಡಿನಲ್ಲಿ ಒಂದೂ ಗೆಲುವಿಲ್ಲದೇ ನಿರಾಸೆ ಅನುಭವಿಸಿದರು. ತಂಡ ಹಿಂದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕ ವಿರುದ್ಧ ಸೋಲು ಅನುಭವಿಸಿತ್ತು. ಜಪಾನ್ ವಿರುದ್ಧದ ಹೋರಾಟದಲ್ಲಿ 2–2 ಗೋಲುಗಳಿಂದ ಡ್ರಾ ಮಾಡಿಕೊಂಡಿದ್ದೇ ಭಾರತ ತಂಡದ ಸಾಧನೆಯೆನಿಸಿತು. ಇದರಿಂದ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯಿತು.
ಪಂದ್ಯದ ಆರಂಭದಿಂದಲೇ ಚುರುಕಿನ ಆಟಕ್ಕೆ ಒತ್ತು ಕೊಟ್ಟ ಅರ್ಜೆಂಟೀನಾ ತಂಡಕ್ಕೆ ಮಾರ್ಟಿನಾ ಕಾವೆಲ್ಲರ್ 16ನೇ ನಿಮಿಷದಲ್ಲಿ ಮುನ್ನಡೆ ತಂದುಕೊಟ್ಟರು. ಇದೇ ಆಟಗಾರ್ತಿ 29ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ಗಳಿಸಿದರು.
ಮಾರಿಯಾ ಗ್ರನಾಟೊ (23ನೇ ನಿಮಿಷ), ಕಾರ್ಲಾ ರೆಬಾಚಿ (26ನೇ ನಿಮಿಷ) ಮತ್ತು ಅಗಸ್ಟಿನಾ ಅಲ್ಬೆರ್ಟರಿ (27ನೇ ನಿ.) ಗೋಲುಗಳನ್ನು ಕಲೆ ಹಾಕಿ ಗೆಲುವಿನ ಅಂತರ ಹೆಚ್ಚಿಸಿದರು.
ಒಂದು ವೇಳೆ ಈ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದ್ದರೆ ಭಾರತಕ್ಕೆ ನಾಕೌಟ್ ಹಂತ ಪ್ರವೇಶಿಸಲು ಅವಕಾಶವಿತ್ತು. ಗುಂಪಿನಲ್ಲಿ ಎರಡನೇ ಗೆಲುವು ಪಡೆದು ಅರ್ಜೆಂಟೀನಾ ಒಟ್ಟು ಆರು ಪಾಯಿಂಟ್ಸ್ನಿಂದ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡಿತು.
ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಅರ್ಜೆಂಟೀನಾ ತಂಡದ ಚುರುಕಿನ ಪಾಸ್ ಮತ್ತು ಬಲಿಷ್ಠ ರಕ್ಷಣಾ ವಿಭಾಗಕ್ಕೆ ತಕ್ಕ ಪೈಪೋಟಿ ಒಡ್ಡಲು ಭಾರತಕ್ಕೆ ಸಾಧ್ಯವಾಗಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.