ಗುಂಪಿನಲ್ಲಿ `ಗೋವಿಂದ'ನಾಗಬೇಕು!

7
ಮಾತ್‌ಮಾತಲ್ಲಿ : ಕಲಾದೇಗುಲ ಶ್ರೀನಿವಾಸ್

ಗುಂಪಿನಲ್ಲಿ `ಗೋವಿಂದ'ನಾಗಬೇಕು!

Published:
Updated:
ಗುಂಪಿನಲ್ಲಿ `ಗೋವಿಂದ'ನಾಗಬೇಕು!

ಸಂಕೋಚ, ನಾಚಿಕೆಗೆ ಪರ್ಯಾಯ ಎಂಬಂತಿದ್ದವ ನಾನು. ತರಗತಿಯಲ್ಲಿ ಪ್ರಶ್ನೆಗೆ ಉತ್ತರ ಕೊಡುವುದಾಗಲಿ, ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಮಾತಾಡುವುದಾಗಲಿ ನನಗೆ ಆಗಿಬರುತ್ತಿರಲಿಲ್ಲ. ಆದರೆ ಬಹುತೇಕ ಹಳ್ಳಿಗಳಂತೆ ನಮ್ಮ ಮನೆಯಲ್ಲೂ ಕರೆಂಟ್ ಇರಲಿಲ್ಲ. ಹಾಗಾಗಿ ರೇಡಿಯೊ ಸಂಸರ್ಗದಲ್ಲೇ ಬೆಳೆದೆವು.ನನ್ನ ಸಂಗೀತಪ್ರೀತಿಗೆ, ನಿರೂಪಣೆಯ ಆಕರ್ಷಣೆಗೆ ಬಿದ್ದದ್ದು ಈ ರೇಡಿಯೊ ಸಹವಾಸದಿಂದಲೇ ಅಂತ ಅನ್ಸುತ್ತೆ. ರೇಡಿಯೊದಲ್ಲಿ ನನ್ನನ್ನು ಹೆಚ್ಚು ಸೆಳೆಯುತ್ತಿದ್ದುದು ನಿರೂಪಕರ ಅಸ್ಖಲಿತ ಮಾತು ಮತ್ತು ಜಾಹೀರಾತುಗಳು! `ನಾನೂ ಈ ಜಾಹೀರಾತುಗಳನ್ನು ಓದಬೇಕಲ್ಲ? ಇವರಂತೆಯೇ ನಾನೂ ರೇಡಿಯೊದಲ್ಲಿ ಮಾತನಾಡಬೇಕಲ್ಲ ಅಂತ ಆಸೆಪಡುತ್ತಿದ್ದೆ. ಕರುಬುತ್ತಿದ್ದೆನೆನ್ನಿ. ಆಮೇಲೆ ನಮ್ಮ ಮನೆಗೆ ಟಿವಿ ಬಂತು. ನಿರೂಪಕರು, ಜಾಹೀರಾತು ಲೋಕದ ಸಾಕ್ಷಾತ್ ದರ್ಶನವಾಯಿತು. ಆಗ ಮನಸ್ಸು ಇನ್ನೂ ಗಟ್ಟಿಯಾಯಿತು.ಕನಸು ಏನೇ ಇದ್ದರೂ ಅದಕ್ಕಿಂತ ದೊಡ್ಡ ಅಂಜಿಕೆ, ನಾಚಿಕೆ ಇತ್ತಲ್ಲ. ಏನು ಮಾಡೋದು? ನೀನು ಹೀಗಿದ್ದರೆ ಏನೂ ಮಾಡೋದಕ್ಕಾಗೋದಿಲ್ಲ ಎಂದು ಮನೆಯಲ್ಲಿ ಬೈತಿದ್ರು. ಇಷ್ಟು ಹೊತ್ತಿಗೆ ಸುಗಮ ಸಂಗೀತದಲ್ಲಿ ಅಷ್ಟಿಷ್ಟು ಸಾಧನೆ ಮಾಡುವ ಮಟ್ಟಕ್ಕೆ ಬಂದಿದ್ದೆ. ದಿ. ಜಿ. ವಿ. ಅತ್ರಿ ಅವರ ವಿದ್ಯಾರ್ಥಿ ನಾನು. ಸಂಗೀತದಲ್ಲೇ ಹೆಸರು ಮಾಡಬೇಕೆಂಬ ಹಂಬಲ ಬೇರೆ.ನಮ್ಮೂರು ಮಾಗಡಿ ಹತ್ತಿರ. ಹಾಗಾಗಿ ಬೆಂಗಳೂರಿನ ಸಂಪರ್ಕವಿತ್ತು. 2001ರಲ್ಲಿ `ಇನ್ ಬೆಂಗಳೂರು' ಅನ್ನೋ ಕೇಬಲ್ ಟೀವಿಯಲ್ಲಿ ವಾರ್ತಾ ವಾಚಕ ಹುದ್ದೆಗೆ ಆಯ್ಕೆಯಾಗುವ ಮೂಲಕ ಮಾಧ್ಯಮ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಲು ಅವಕಾಶವಾಯಿತು. ಅಲ್ಲಿ ಬರಿಯ ನ್ಯೂಸ್ ರೀಡರ್ ಆಗಿ ಉಳಿಯದೆ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿತು. ಸ್ಟುಡಿಯೊದಲ್ಲಿ ಆತ್ಮವಿಶ್ವಾಸದಿಂದ ಇದ್ದರೆ ಮಾತ್ರ ತಪ್ಪಿಲ್ಲದಂತೆ ವಾರ್ತೆ ಓದಲು, ಕಾರ್ಯಕ್ರಮ ನಡೆಸಿಕೊಡಲು ಸಾಧ್ಯ. ಅಂದರೆ ಪರದೆ ಮೇಲೆ ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳುವ ರೀತಿಯಿಂದ ಗೆಲ್ಲುವುದು.ಈ ನಿಟ್ಟಿನಲ್ಲಿ ನಾನು ಮೊದಲ ದಿನವೇ ಸೈ ಅನಿಸಿಕೊಂಡೆ. ನಂತರದ ನನ್ನ ಪಯಣ ಉದಯ ಟೀವಿಗೆ. ಅಲ್ಲಿ ನ್ಯೂಸ್ ರೀಡರ್ ಆಗಿದ್ದವನು ಕೆಲವೇ ತಿಂಗಳಲ್ಲಿ ರಾತ್ರಿ 8.30ರ ಅಗ್ರ ರಾಷ್ಟ್ರೀಯ ವಾರ್ತೆ ಓದಲು ನಿಯೋಜಿತನಾದೆ. ಇದು ಮತ್ತೊಂದು ಪ್ಲಸ್ ಪಾಯಿಂಟ್. ನಂತರ ಸುವರ್ಣ ವಾಹಿನಿಯಲ್ಲಿಯೂ ಕೆಲಸ ಮಾಡಿದೆ.ಈ ಎಲ್ಲಾ ಸಂದರ್ಭಗಳೂ, ಅನುಭವಗಳೂ ನನ್ನ ಮಾತುಗಾರಿಕೆಗೆ ಸಾಣೆಕೊಡಲು ಸಿಕ್ಕಿದ ಸುವರ್ಣಾವಕಾಶಗಳು ಎಂದೇ ಪರಿಭಾವಿಸಿದೆ. ಮಾತ್ರವಲ್ಲ ಗುರುಗಳು, ಗಾಡ್‌ಫಾದರ್‌ಗಳಿಲ್ಲದೆ ಯಾವುದೇ ಕ್ಷೇತ್ರದಲ್ಲಿ ಹೆಸರು ಗಳಿಸೋದರಲ್ಲಿರುವ ಕಷ್ಟ-ಸುಖಗಳ ಪರಿಚಯವೂ ಆಯಿತೆನ್ನಿ.ನಮ್ಮ `ಕಲಾದೇಗುಲ' ಸಂಘಟನೆಯಲ್ಲಿ 2003ರಲ್ಲಿ ನಡೆಸಿದ ಕಾರ್ಯಕ್ರಮದ ಮೂಲಕ ನಾನು ನಿರೂಪಣಾ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ. ಕಾರ್ಯಕ್ರಮದ ಪರಿಕಲ್ಪನೆ, ಗೀತೆಗಳ ಆಯ್ಕೆ, ಸಂಗೀತ ನಿರ್ದೇಶನದಿಂದ ಹಿಡಿದು ಇಡೀ ಕಾರ್ಯಕ್ರಮ ನನ್ನ ಕನಸಿನ ಸಾಕಾರದ ರೂಪದಲ್ಲಿ ಮೂಡಿಬಂತು.ಈ ಕಾರ್ಯಕ್ರಮ ನನ್ನನ್ನು ನಿರೂಪಣಾ ಕ್ಷೇತ್ರಕ್ಕೆ ಪರಿಚಯಿಸಿತಲ್ಲದೆ ನನಗೆ `ಕಲಾದೇಗುಲ ಶ್ರೀನಿವಾಸ್' ಎಂಬ ಅನ್ವರ್ಥನಾಮವನ್ನೂ ಕೊಡಮಾಡಿತು. ನಿಮಗೆ ಗೊತ್ತಾ? ನನ್ನನ್ನು ವಿಜಯ್ ಶ್ರೀನಿವಾಸ್ ಅಂತಲೂ ಕರೀತಾರೆ. ಈ `ವಿಜಯ್' ಅನ್ನೋ ಹೆಸರು ಪಿ.ಬಿ. ಶ್ರೀನಿವಾಸ್ ಅವರು ಒಂದು ಸಂದರ್ಭದಲ್ಲಿ ಇಟ್ಟಿದ್ದು.ಮಾತು ಒಂದು ಕಲೆ. ನಿರೂಪಕ ಇಡೀ ಕಾರ್ಯಕ್ರಮದ ಕೀಲಿಕೈ. ಸೆಂಟರ್ ಆಫ್ ಅಟ್ರಾಕ್ಷನ್. ಅವರಾಡುವ ಪ್ರತಿ ಮಾತಿಗೂ ಮೌಲ್ಯವಿರುತ್ತದೆ. ಮುಂದಣಕ್ಕೂ ಹಿಂದಣಕ್ಕೂ ಕೈಮರ. ಹಾಗಾಗಿ ಮಾತು ಸಾಂದರ್ಭಿಕ ಮತ್ತು ಸಕಾಲಿಕವಾಗಿರುವಂತೆ ಪ್ರಜ್ಞೆಯಿಂದ ಇರಬೇಕಾಗುತ್ತದೆ. ಜಾಣ್ಣುಡಿ, ನಾಣ್ಣುಡಿ, ಗಾದೆ, ದೊಡ್ಡವರ ಮಾತುಗಳ ಉದ್ಧರಣೆ, ಇತಿಹಾಸ, ಪುರಾಣದ ಸನ್ನಿವೇಶಗಳ ಪ್ರಸ್ತಾಪದ ಮೂಲಕ ಸಾಮಾನ್ಯ ಜ್ಞಾನದ ಅರಿವನ್ನೂ ನೀಡಬೇಕು. ಆದರೆ ಈ ಯಾವುದೂ ಅಪ್ರಸ್ತುತವಾಗಬಾರದು!ಇದಕ್ಕೆ ಓದುವ ಅಭ್ಯಾಸ, ಜಗತ್ತನ್ನು ತೆರೆದ ಕಣ್ಣಿಂದ, ಮನಸ್ಸಿನಿಂದ ನೋಡುವ ಅಭ್ಯಾಸ ರೂಡಿಸಿಕೊಳ್ಳಬೇಕು. ಅಂದರೆ ಪ್ರತಿ ಕಾರ್ಯಕ್ರಮಗಳಿಗೂ ಮೊದಲು ಒಂದಷ್ಟು ಹೋಮ್‌ವರ್ಕ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ `ಬಾಯಿ ಬಿಟ್ಟರೆ ಬಣ್ಣಗೇಡು' ಎಂಬಂತಾಗುವ ಅಪಾಯ ತಪ್ಪಿದ್ದಲ್ಲ!ಒಂದು ಮಾತಿದೆ ನೋಡಿ: `ಗುಂಪಿನಲ್ಲಿ ಗೋವಿಂದನಾಗೋದು' ಅಂತ. ನಾನು ಇದನ್ನು ಬೇರೆ ರೀತಿ ಪರಿಭಾವಿಸುತ್ತೇನೆ. ನಾವು ಒಳ್ಳೆ ಕೆಲಸ ಮಾಡುವ ಮೂಲಕ ಗುಂಪಿನಲ್ಲಿ ಎದ್ದು ಕಾಣಬೇಕು, ಗುರುತಿಸುವಂತಾಗಬೇಕು. ಆ ಮೂಲಕ `ಗುಂಪಿನಲ್ಲೊಬ್ಬನೇ ಗೋವಿಂದ'ನಾಗಬೇಕು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry