ಗುಂಪು ಘರ್ಷಣೆ: ನ್ಯಾಯಾಂಗ ತನಿಖೆಗೆ ಆಗ್ರಹ

7

ಗುಂಪು ಘರ್ಷಣೆ: ನ್ಯಾಯಾಂಗ ತನಿಖೆಗೆ ಆಗ್ರಹ

Published:
Updated:
ಗುಂಪು ಘರ್ಷಣೆ: ನ್ಯಾಯಾಂಗ ತನಿಖೆಗೆ ಆಗ್ರಹ

ಬಾಗಲಕೋಟೆ: ನವನಗರದಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಅಮಾಯಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಜಾತಿನಿಂದನೆ ಹಾಗೂ ಮಾನವಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎನ್ನಲಾದ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನವನಗರ ಠಾಣೆ ಪಿಎಸ್‌ಐ ಮುತ್ತಗಿ ಅವರನ್ನು ಅಮಾನತುಗೊಳಿಸಿ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಅಹಿಂದ ಕಾರ್ಯಕರ್ತರು ಶುಕ್ರವಾರ ರ್ಯಾಲಿ ನಡೆಸಿದರು.ನವನಗರದ ಆರ್‌ಟಿಓ ವೃತ್ತದಿಂದ ಆರಂಭಗೊಂಡ ರ್ಯಾಲಿಯು ಜಿಲ್ಲಾಡಳಿತ ಭವನದ ಎದುರು ಸಭೆಯಾಗಿ ಮಾರ್ಪಟ್ಟಿತು. ಜಿಲ್ಲಾಡಳಿತ ಭವನದ ಎದುರು ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು, ಘರ್ಷಣೆ ನಿಯಂತ್ರಿಸುವಲ್ಲಿ ವಿಫಲರಾದ ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡ ಮುತ್ತಣ್ಣಬೆಣ್ಣೂರ, ಕ್ಷುಲ್ಲಕ ಕಾರಣಕ್ಕೆ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ಕೆಲವರ ಮಧ್ಯೆ ಉಂಟಾದ ಘರ್ಷಣೆಯನ್ನು ಪೊಲೀಸರು ಮತೀಯ ಗಲಭೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ದೂರಿದರು.ಘರ್ಷಣೆ ನಡೆದ ದಿನದಿಂದ ಏ.14ರವರೆಗೆ ಬಂಧಿಸಲ್ಪಟ್ಟಿರುವ ಉಭಯ ಸಮುದಾಯದ ಅಮಾಯಕರು, ಹಿರಿಯರ ಜಾತಿನಿಂದನೆ ಮಾಡಿದ್ದಲ್ಲದೇ ಕೈಕೊಳ ತೊಡಿಸುವ ಮೂಲಕ ಮಾನವಹಕ್ಕುಗಳನ್ನು ಉಲ್ಲಂಘಿಸಿರುವ ಎಸ್‌ಪಿ ಅಭಿಷೇಕ್ ಗೋಯಲ್ ಮತ್ತು ಪಿಎಸ್‌ಐ ಮುತ್ತಗಿ ಅವರನ್ನು ಅಮಾನತುಗೊಳಿಸಬೇಕು.  ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗೂ ಪೊಲೀಸರು ದಾಖಲಿಸಿಕೊಂಡಿರುವ ಫಿರ್ಯಾದಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಬೆಣ್ಣೂರ ಆಗ್ರಹಿಸಿದರು.ಸರ್ಕಾರ, ಸಚಿವರು ಹಾಗೂ ಶಾಸಕರ ಕುಮ್ಮಕ್ಕಿನಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆಸಿ ಖೊಟ್ಟಿ ಪ್ರಕರಣ ದಾಖಲಿಸಿರುವುದು ಸ್ಪಷ್ಟವಾಗಿ ಕಂಡುಬಂದಿರುವುದರಿಂದ ಜಿಲ್ಲಾಧಿಕಾರಿಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮನವಿ ಮಾಡಿಕೊಂಡರು.25ರಿಂದ ಧರಣಿ ಬೆದರಿಕೆ

ಅಮಾಯಕರ ಬಿಡುಗಡೆ, ಪೊಲೀಸ್ ಅಧಿಕಾರಿಗಳ ಅಮಾನತು ಹಾಗೂ ನ್ಯಾಯಾಂಗ ತನಿಖೆಯ ಬೇಡಿಕೆಗಳನ್ನು ಈಡೇರಿಸದಿದ್ದರೆ ಏಪ್ರಿಲ್ 25ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಅಲ್ಪಸಂಖ್ಯಾತ ಸಮುದಾಯದ ಉಸ್ಮಾನ ಗಣಿ, ಇಬ್ರಾಹಿಂಸಾಬ್ ಹುಮ್ನಾಬಾದ್ ಮತ್ತಿತರರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಸೌದಾಗರ, ತರಫದಾರ, ಭೀಮಗೌಡ ಭಜನ್ನವರ, ವಿ.ಪಿ.ಮೇಘರಾಜ, ಎ.ಕೆ.ಪಟೇಲ್, ಎಚ್.ಎಲ್.ರೇಷ್ಮಿ, ಸಲೀಂ ಮೋಮಿನ್, ಮಾರುತಿ ಹೊಸಮನಿ, ಮಂಜುನಾಥ ವಾಲೀಕಾರ, ಎಂ. ಯುಸೂಫ್‌ಖಾನ್, ಲಕ್ಷ್ಮೀ ಕಾಂಬಳೆ, ಕವಿತಾ ಚವಾಣ, ಪುಷ್ಪಾ ಚವಾಣ, ಲಕ್ಷ್ಮೀ ಮಡಿವಾಳರ ಸೇರಿದಂತೆ ನವನಗರದ 45ನೇ ಸೆಕ್ಟರ್‌ನ ಅನೇಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry