ಸೋಮವಾರ, ಮೇ 17, 2021
31 °C

ಗುಗ್ಗಳೋತ್ಸವಕ್ಕೆ ಹೊರಟವರು ಮಸಣ ಸೇರಿದರು!

ಪ್ರಜಾವಾಣಿ ವಾರ್ತೆ/ ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಸಂಬಂಧಿಕರ ಗುಗ್ಗಳೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದವರಿಗಾಗಿ ಜವರಾಯ ಹೊಂಚು ಹಾಕಿ ಕುಳಿತ್ತಿದ್ದ. ಅರೆಕ್ಷಣದಲ್ಲೇ ನಾಲ್ಕು ಜನರ ಪ್ರಾಣಪಕ್ಷಿ ಹಾರಿ ಹೋದವು. ಇನ್ನೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದರು. 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡು ಘಟನೆಯ ಭೀಭತ್ಸತೆಗೆ ಸಾಕ್ಷಿಯಾದರು. ಶವವಾಗಿ ಬಿದ್ದಿದ್ದ ನತದೃಷ್ಟ ವ್ಯಕ್ತಿಗಳ ಸಂಬಂಧಿಕರ ದುಃಖದ ಕಟ್ಟೆಯೊಡೆದಿತ್ತು...ಪಟ್ಟಣದ ಹೊರವಲಯದಲ್ಲಿ ಲಕ್ಷ್ಮೀ ನಗರ ಬಳಿ ಚಿಕ್ಕೋಡಿ-ಅಂಕಲಿ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ 7.30ಕ್ಕೆ ತಾಲ್ಲೂಕಿನ ಯಡೂರ ಸುಕ್ಷೇತ್ರಕ್ಕೆ ಗುಗ್ಗಳೋತ್ಸವಕ್ಕೆ ತೆರಳುತ್ತಿದ್ದ ಕ್ರೂಸರ್ ವಾಹನ ಪಲ್ಪಿಯಾಗಿ ಇಡೀ ಪರಿಸರದಲ್ಲಿ ಶೋಕದ ವಾತಾವರಣ ಮಡುವುಗಟ್ಟಿತ್ತು. ಜನರಲ್ಲಿ ದುಗುಡ, ಆತಂಕ ಮನೆ ಮಾಡಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಶವಗಳನ್ನು ಕಂಡು ಬೋರಾಡಿ ಅಳುತ್ತಿದ್ದ ದೃಶ್ಯ ಮನಕಲುಕುವಂತಿತ್ತು.ಘಟನೆಯಲ್ಲಿ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ಡ್ಯಾಂ ಬಳಿಯ ನಿರ್ವಾನಟ್ಟಿಯ ಶಿವಲಿಂಗ ನಿರ್ವಾಣಿ ಮೂಡಲಗಿ (50), ಬಾಳೇಶ ನಿಂಗಪ್ಪ ನಾಗನೂರೆ (32), ಅವರಗೋಳ ನಿವಾಸಿ ನೀಲವ್ವ ಸತ್ಯಪ್ಪ ಅಂಕಲಗಿ (55) ಹಾಗೂ ವಾಹನ ಚಾಲಕ, ಹಿಡಕಲ್‌ಡ್ಯಾಂ ನಿವಾಸಿ ವಿಕಾಸ ಬಬನ ಪಾಟೀಲ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಡಕಲ್‌ಡ್ಯಾಮ್‌ನ ಬಾಬು ಸತ್ಯೆಪ್ಪ ಪಾಟೀಲ (60) ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.ನಿರ್ವಾನಟ್ಟಿ ನಿವಾಸಿಗಳಾದ ರಾಜು ಕಾಡಾಪೂರೆ (40), ನಿರ್ವಾಣಿ ಬಾಳಪ್ಪ ಮೂಡಲಗಿ (30), ಬಾಳಪ್ಪ ಲಕ್ಷ್ಮಣ ಮೂಡಲಗಿ (60), ಕಲ್ಲಪ್ಪಾ ಲಕ್ಷ್ಮಣ ಮೂಡಲಗಿ (60), ಲಗಮಣ್ಣಾ ಬಸವಣ್ಣಿ ಖೋಡಿ (54), ನಿರ್ವಾಣಿ ಬೈರಪ್ಪಾ ನಾಗನೂರೆ(50), ಶಿವಪ್ಪ ಕೆಂಪಣ್ಣ ಮೂಡಲಗಿ (36), ನಿರ್ವಾನಟ್ಟಿಯ ಬಸಪ್ಪಾ ಸತ್ಯಪ್ಪಾ ಖೋಡಿ(40) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ಕಳುಹಿಸಲಾಗಿದೆ.

ನಿರ್ವಾನಟ್ಟಿಯ ಸಿದ್ದಪ್ಪ ಯಲ್ಲಪ್ಪ ಖೋಡಿ(27), ಮಲ್ಲಿಕಾರ್ಜುನ ಖೋತ (40) ಮತ್ತು ಇಂಗಳಗಿ ನಿವಾಸಿ ಬಸವ್ವಾ ಮಾರುತಿ ಮೇಲ್ಮಟ್ಟಿ (40) ಅವರಿಗೆ ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ಡ್ಯಾಂ ಬಳಿಯ ನಿರ್ವಾನಟ್ಟಿಯ ಮೂಡಲಗಿ ಕುಟುಂಬದವರು ಸುಕ್ಷೇತ್ರ ಯಡೂರ ವೀರಭದ್ರ ದೇವರ ಸನ್ನಿಧಿಯಲ್ಲಿ ಗುಗ್ಗಳೋತ್ಸವ ಆಚರಿಸಲು ಗುರುವಾರ ಬೆಳಿಗ್ಗೆ ತಮ್ಮ ಸಂಬಂಧಿಕರೊಂದಿಗೆ ಎರಡು ವಾಹನಗಳ ಮೂಲಕ ತೆರಳುತ್ತಿದ್ದರು. ಮೊದಲು ಹೊರಟ ವಾಹನ ಸುಕ್ಷೇತ್ರ ಯಡೂರ ತಲುಪುವಷ್ಟರಲ್ಲಿಯೇ ಹಿಂದಿನಿಂದ ಬರುತ್ತಿದ್ದ ಇನ್ನೊಂದು ವಾಹನ ಚಿಕ್ಕೋಡಿ ಬಳಿ ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ.ಅಪಘಾತಕ್ಕೀಡಾದ ವಾಹನ ಸುಮಾರು 100 ಮೀಟರ್‌ಗೂ ಹೆಚ್ಚು ಅಂತರದವರೆಗೆ ಪಲ್ಪಿಯಾಗುತ್ತಾ ಹೋಗಿದೆ. ಮೂವರು ಪುರುಷರ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ, ಹಿಂಬದಿ ಸೀಟಿನಲ್ಲಿ ಮಹಿಳೆಯೊಬ್ಬಳ ಶವ ಸಿಕ್ಕಿಕೊಂಡಿತ್ತು. ಘಟನಾ ಸ್ಥಳದಲ್ಲಿ ವಾಹನದ ಅವಶೇಷಗಳು, ರಕ್ತದ ಕಲೆಗಳು, ಗುಗ್ಗಳೋತ್ಸವಕ್ಕೆ ತಗೆದುಕೊಂಡು ಹೋಗುತ್ತಿದ್ದ ಪೂಜಾ ಸಾಮಗ್ರಿಗಳು, ವಸ್ತ್ರಗಳು, ಹರಡಿಕೊಂಡಿದ್ದವು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯಸ್ಥಿತಿ ವಿಚಾರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಚಾಲಕನ ನಿಷ್ಕಾಳಜಿಯಿಂದಾಗಿಯೇ ವಾಹನ ಪಲ್ಪಿಯಾಗಿ ಈ ದುರ್ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸ್ಥಳ ಪರಿಶೀಲನೆ ನಡೆಸಿ ಘಟನೆಗೆ ಸ್ಪಷ್ಟ ಕಾರಣದ ಕುರಿತು ತನಿಖೆ ನಡೆಸಲಾಗುವುದು' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.