ಶನಿವಾರ, ಮೇ 8, 2021
24 °C

ಗುಜರಾತಿನ ಗಟ್ಟಿ ಕುಳ

ಬಿ.ಎಸ್.ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

ಕೋಮುವಾದದ ಕಪ್ತಾನ ಎಂಬ ಕುಖ್ಯಾತಿ ಮತ್ತು ಗುಜರಾತಿನ ಪ್ರಗತಿಯ ಪಹರೆಗಾರ ಎಂಬ ಖ್ಯಾತಿಯ ಭಿನ್ನ ವಿಶೇಷಣಗಳನ್ನು ಹೊತ್ತಿರುವ 62ರ ಹರಯದ ನರೇಂದ್ರ ದಾಮೋದರದಾಸ್ ಮೋದಿ ನ್ಯಾಯದೇವತೆಯ ಕಣ್ಣಲ್ಲೀಗ ನಿರ್ದೋಷಿ.2002ರ ಫೆಬ್ರುವರಿ 27ರಂದು ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿ ಸಂಭವಿಸಿದ ರೈಲು ಹತ್ಯಾಕಾಂಡದ ನಂತರ ತಮ್ಮ ಅಂಗಿಗೆ ಅಂಟಿದ್ದ ರಕ್ತದ ಕಲೆಗಳನ್ನು ಅವರೀಗ ಸ್ವಚ್ಛವಾಗಿಯೇ ತೊಳೆದುಕೊಂಡಿದ್ದಾರೆ.

 

ಅಂದು ಗುಜರಾತನ್ನು ಮಹಾಮಸಣವನ್ನಾಗಿಸಿದ್ದ  ಕೋಮುಗಲಭೆಗಳಲ್ಲಿ ಗುಲ್‌ಬರ್ಗ್ ಸೊಸೈಟಿ ಹತ್ಯಾಕಾಂಡ ಮೋದಿಯ ಕೊರಳಿಗೆ ಉರುಳಾಗಿತ್ತು. ಪ್ರಕರಣದ 57 ಆರೋಪಿಗಳಲ್ಲಿ ಮೋದಿ ಪ್ರಮುಖ ಆರೋಪಿಯಾಗಿದ್ದರು.ಸುಪ್ರೀಂ ಕೋರ್ಟ್ ಅಣತಿಯ ಮೇರೆಗೆ ವಿಚಾರಣೆ ನಡೆಸಿದ ವಿಶೇಷ ತನಿಖಾ ತಂಡ  (ಎಸ್‌ಐಟಿ) ಮೊನ್ನೆಮೊನ್ನೆಯಷ್ಟೇ ತನ್ನ ವರದಿಯನ್ನು ಅಖೈರುಗೊಳಿಸಿದೆ. ಮೋದಿ ಅಪರಾಧಿಯಲ್ಲ ಎಂದು ಹೇಳಿದೆ.ಹೀಗಾಗಿ ಮೋದಿ ಕಡೆಗೂ `ತಾನು~ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ! `ತಮ್ಮವರು~ ಮಾಡಿದ ತಪ್ಪಿಗೆ ವೈಯಕ್ತಿಕವಾದ ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಳ್ಳದೇ ಬಚಾವಾಗಿದ್ದಾರೆ!ಆವತ್ತು ಗುಲ್‌ಬರ್ಗ್ ಹೌಸಿಂಗ್ ಸೊಸೈಟಿಯ ಘಟನೆಯಲ್ಲಿ ಜೀವಂತ ಸುಟ್ಟು ಹೋದ 69 ಜನರಲ್ಲಿ ಎಹಸಾನ್ ಜಾಫ್ರಿ ಎಂಬ ಕಾಂಗ್ರೆಸ್ಸಿನ ಮಾಜಿ ಸಂಸದರೂ ಇದ್ದರು.ಪ್ರಕರಣವನ್ನು ಸ್ವತಃ ಜಾಫ್ರಿ ಅವರ ಪತ್ನಿ ಜಕಿಯಾ ಜಾಫ್ರಿಯೇ ಸುಪ್ರೀಂ ಕೋರ್ಟ್‌ವರೆಗೂ ಕೊಂಡೊಯ್ದು ಹೋರಾಡಿದ್ದರು. ಆದರೆ ಆ ಅಸಹಾಯಕ ಹೆಣ್ಣುಮಗಳು ಮೋದಿಯನ್ನು ಕೊನೆಗೂ ಕಾನೂನಿನ ಹೆಡೆಮುರಿಗೆ ಕಟ್ಟುವಲ್ಲಿ ಸೋತು ಸುಣ್ಣಾಗಿದ್ದಾರೆ.ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲಿ ಮೋದಿ ಅವರನ್ನು ಹೋಲುವಂತಹ ವ್ಯಕ್ತಿ ಮತ್ತೊಬ್ಬರಿಲ್ಲ. ಹಿಂದೂ ಸಾಮ್ರಾಜ್ಯಶಾಹಿಯ ಕನಸನ್ನು ನನಸು ಮಾಡುವ ಭರದಲ್ಲಿ ಮೋದಿ ಹಿಟ್ಲರ್ ಮತ್ತು ಸ್ಟಾಲಿನ್‌ರನ್ನು ಮೀರಿಸುವಂತೆ ಭೋರ್ಗರೆದ ಮನುಷ್ಯ ಎಂಬ ಟೀಕೆಗಳಿವೆ.

 

ಹೊರನೋಟಕ್ಕೆ ಅಂತರ್ಮುಖಿಯಂತೆ ಕಂಡುಬಂದರೂ ವೇದಿಕೆ ಹತ್ತಿ ಬಾಯ್ದೆರೆದರೆ ಪಾಕಿಸ್ತಾನದ ವಿರುದ್ಧ ಕೆಂಡದ ಉಂಡೆಗಳನ್ನೇ ಕಾರುವ ಕಠೋರ ಭಾಷಣಕಾರ. ತನಗಾಗದವರನ್ನು, ರಾಜಕೀಯ ವಿರೋಧಿಗಳನ್ನು ತುಚ್ಛವಾಗಿ ಲೇವಡಿ ಮಾಡುವ ಸನಾತನ ಪದಪುಂಜಗಳ ವಕ್ತಾರ.ಮೋದಿ ಹುಟ್ಟಿದ್ದು ಗುಜರಾತ್‌ನ ವಾದ್‌ನಗರದಲ್ಲಿ. 1950ರ ಸೆಪ್ಟೆಂಬರ್ ತಿಂಗಳ 17ರಂದು ಜನನ. ಮಧ್ಯಮ ವರ್ಗಕ್ಕೆ ಸೇರಿದ ದಾಮೋದರದಾಸ್ ಮೂಲ್‌ಚಂದ್ ಮೋದಿ ಹಾಗೂ ಹೀರಾಬೆನ್ ದಂಪತಿಯ ಆರು ಮಕ್ಕಳಲ್ಲಿ ಮೂರನೆಯವರು ನರೇಂದ್ರ ಮೋದಿ. ಮೂಲತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ. ಗುಜರಾತ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ.1960 ದಶಕದಲ್ಲಿ ಹೊಟ್ಟೆಪಾಡಿಗಾಗಿ ಅಹಮದಾಬಾದಿನ ಗೀತಾಮಂದಿರ್ ಬಳಿಯ ಬಸ್ ನಿಲ್ದಾಣದಲ್ಲಿ ಸೋದರನ ಜೊತೆ ಪುಟ್ಟ ಗೂಡಂಗಡಿ ಇಟ್ಟುಕೊಂಡಿದ್ದ ಚಾಯ್‌ವಾಲಾ. ಸಂಘದ ಕಾರ್ಯಕರ್ತರ ಪಾಲಿಗೆ ಹರಟೆಯ ಅಡ್ಡೆಯಾಗಿದ್ದ ಈ ಅಂಗಡಿಯೇ ಕಡೆಗೊಂದು ದಿನ ಮೋದಿ ಪಾಲಿಗೆ ಚಿಂತಕರ ಚಾವಡಿಯಾಯಿತು. ಸಂಘದ ಸಿದ್ಧಾಂತಗಳನ್ನು ಚಹಾದ ಕುದಿಯಲ್ಲೇ ಅದ್ದಿ ಸೋಸತೊಡಗಿದ ತರುಣ ಮೋದಿ ಅದೊಂದು ದಿನ ಪೂರ್ಣ ಪ್ರಮಾಣದಲ್ಲಿ ಸಂಘದ ಪ್ರಚಾರಕನಾಗಿ ಹೊರಬಿದ್ದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಮೋದಿಗೆ 1974ರ ಜಯಪ್ರಕಾಶ್ ನಾರಾಯಣ ಅವರ ನವನಿರ್ಮಾಣ ಚಳವಳಿ ಹೋರಾಟಗಳ ಕೊಳ್ಳಿಗೆ ಅಗ್ನಿಸ್ಪರ್ಶ ಮಾಡಿದಂತಾಯಿತು.ಚಳವಳಿ ದೇಶದಾದ್ಯಂತ ಕಾವೇರುತ್ತಿದ್ದಂತೆಯೇ ಅವರ ಸಾಮಾಜಿಕ ಮತ್ತು ರಾಜಕೀಯ ಬದುಕಿನ ಗ್ರಾಫೂ ಎತ್ತರಿಸತೊಡಗಿತು. ತದನಂತರ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಜೀವನ ಪ್ರವೇಶಿಸಿದ ಅವರು ಪಂಚಾಯ್ತಿ ಹಂತದಿಂದ ಲೋಕಸಭೆಯವರೆಗಿನ ಚುನಾವಣೆಗಳಲ್ಲಿ ಪಕ್ಷದ ನಾಯಕನಾಗಿ ಯಶಸ್ಸನ್ನು ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಲೇ ಏರಿಬಂದರು. 1988ರಲ್ಲಿ ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದ ಅವರು ಮುಂದಿನ ಎಂಟೇ ವರ್ಷಗಳಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದರು.

 

ಹಿಡಿದ ಕೆಲಸಗಳನ್ನು ಪಟ್ಟಾಗಿ ಮಾಡುವ ಛಾತಿಯಿಂದಾಗಿ 1998ರಲ್ಲಿ ಐದು ರಾಜ್ಯಗಳ ಪಕ್ಷದ ಉಸ್ತುವಾರಿ ಹೊತ್ತರು. ಹತ್ತಿದ ಕುರ್ಚಿಗಳನ್ನು ಒದೆಯುವಾಗ ಇನ್ನಷ್ಟು ಮೇಲಿನ ಕುರ್ಚಿಗಳನ್ನೇ ಹಿಡಿಯುತ್ತಾ ಬಂದ ಮೋದಿಗೆ ಪೂರ್ಣಪ್ರಮಾಣದಲ್ಲಿ ಅದೃಷ್ಟ ಖುಲಾಯಿಸಿದ್ದು 2001ರಲ್ಲಿ.ಆ ವರ್ಷದ ಅಕ್ಟೋಬರ್ 7 ರಂದು ರಾಜ್ಯದ ಮುಖ್ಯಮಂತ್ರಿ ಚುಕ್ಕಾಣಿ ಹಿಡಿದ ಮೋದಿ ಆವತ್ತೇ ತನ್ನ ರಾಜಕೀಯ ಗುರು ಕೇಶೂಭಾಯ್ ಪಟೇಲರನ್ನು ಶಾಶ್ವತವಾಗಿ ಪಕ್ಕಕ್ಕೆ ಒತ್ತಿಬಿಟ್ಟರು. ಅವರೀಗ ಗುಜರಾತ್ ಕಂಡಿರುವ ಸುದೀರ್ಘ ಅವಧಿಯ ಏಕೈಕ ಮುಖ್ಯಮಂತ್ರಿ.ರಾಜ್ಯದಲ್ಲಿ ಪಕ್ಷವನ್ನೂ ಗಟ್ಟಿಯಾಗಿ ನೆಲೆಗೊಳಿಸಿದ ಸಂಘಟನಾ ಚತುರ. ಇದನ್ನು ಅವರ ವಿರೋಧಿಗಳೂ ಒಪ್ಪಿದ್ದಾರೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ 2002ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 126 ಸ್ಥಾನಗಳನ್ನು ಗೆಲ್ಲುವಂತೆ ನೋಡಿಕೊಂಡರು. ಮೋದಿಯ ಬಂಡವಾಳ ಅಡಗಿರುವುದೇ ಅವರ ಅವಿರತ ಕ್ರಿಯಾಶೀಲದ ಗಡಸು ವ್ಯಕ್ತಿತ್ವದಲ್ಲಿ.

 

ಎಂಥದೇ ಸಂದರ್ಭದಲ್ಲೂ ಹಿಂದೆ ಸರಿಯದ ಅಚಲ ನಿರ್ಧಾರಗಳ ಮನೋಧರ್ಮದಲ್ಲಿ. ಅವರೊಳಗಿನ ವಿಚಾರಗಳ ಎದೆಸೀಳಿದರೆ ಸಾಕು ಹಿಂದುತ್ವದ ಅಗ್ನಿಕುಂಡಕ್ಕೆ ತುಪ್ಪ ಸುರಿಯುವಂತಹ ಶೌರ್ಯ ಇಣುಕುತ್ತದೆ! ನೆರೆ ಗಡ್ಡದ ಮೋದಿಯವರದ್ದು ಈಗ ಮಾಗಿದ ಜೀವನ. ವೃದ್ಧಾಪ್ಯದ ಸೊಬಗು ಚಹರೆಯಲ್ಲಿ ಸ್ಪಷ್ಟವಾಗಿಯೇ ಲಾಸ್ಯವಾಡುತ್ತಿದೆ.ಆದರೇನು? ಮೊರದಗಲದ ಮುಖದಲ್ಲಿ ಇನ್ನೂ ಆತ್ಮವಿಶ್ವಾಸ ಪುಟಿಯುತ್ತಿದೆ. ಮೊನ್ನಿನ ಎಸ್‌ಐಟಿ ವರದಿಯಿಂದಾಗಿ ಈಗ ಹೊಸ ಬೆಳಕಿನ ಸೆಳಕು ಕಂಗೊಳಿಸುತ್ತಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ತಾನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಹೇಳುವುದಕ್ಕೆ ಅವರ ಪಾಲಿಗೆ ಸಮಯ ಕೂಡಿಬಂದಂತಿದೆ.ರಾಷ್ಟ್ರೀಯ ನಾಯಕನಾಗುವ ಅವರ ಅದಮ್ಯ ಕನಸಿಗೆ ಸಂಪೂರ್ಣ ಇಂಬು ನೀಡಿದೆ. ಮೋದಿಗಿನ್ನೂ ಅಧಿಕೃತವಾಗಿ ಮದುವೆಯಾಗಿಲ್ಲ. ಆದರೆ ಶಿಕ್ಷಕಿಯೊಬ್ಬರು ಅವರ ಕಾಳಜಿ ಹೊತ್ತಿದ್ದಾರೆಂಬ ಮಾತುಗಳನ್ನು ಅವರೆಂದೂ ತಳ್ಳಿಹಾಕುವ ಗೋಜಿಗೆ ಹೋಗಿಲ್ಲ!ಮೋದಿ ಅವರನ್ನು ಶತ್ರುಗಳಷ್ಟೇ ಸರಿಸಮಾನ ಸಂಖ್ಯೆಯಲ್ಲಿ ಒಪ್ಪುವ ಅಭಿಮಾನಿಗಳೂ ಇದ್ದಾರೆ ಎಂಬುದು ಸೋಜಿಗವೇ ಸರಿ. ಅದಕ್ಕೆ ಕಾರಣ ಅವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳು ಎಂಬುದು ನಿಸ್ಸಂಶಯ.ಹೇಳಿಕೇಳಿ ಗುಜರಾತ್ ಅನಾದಿ ಕಾಲದಿಂದ ವಣಿಕರ ನಾಡು. ಸಾರ್ಥದ ಮೂಸೆಗಳಲ್ಲಿ ಮಿಂದ ಇಲ್ಲಿನ ಜನರ ಪಾಲಿಗೆ ಐಶ್ವರ್ಯ ಯಾವತ್ತೂ ಮುನಿಸಿಕೊಂಡ ಉದಾಹರಣೆಗಳಿಲ್ಲ. ಭುಜ್‌ನಂತಹ ಪ್ರಕೃತಿ ವಿಕೋಪಗಳನ್ನು ಧೈರ್ಯವಾಗಿ ಗೆಲ್ಲಬಲ್ಲ ಛಾತಿ ತೋರಿದ ಈ `ಗುಜ್ಜು~ಗಳು ವಿಶ್ವದ ಭೂಪಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉಪ್ಪಿನಿಂದ ಹಿಡಿದು ವಜ್ರದ ವ್ಯಾಪಾರದವರೆಗೂ ಇವರು ಕೈಯಾಡಿಸದೇ ಇರುವ ಕ್ಷೇತ್ರಗಳೇ ಕಮ್ಮಿ.ನರೇಂದ್ರ ಮೋದಿ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ವಿದೇಶಿ ಬಂಡವಾಳ ಹಾಗೂ ದೇಸಿ ಬಂಡವಾಳ ಬೃಹತ್ ಪ್ರಮಾಣದಲ್ಲಿ ಹರಿದು ಬಂದಿದೆ. ರಾಷ್ಟ್ರೀಯ ನಿವ್ವಳ ಉತ್ಪನ್ನದಲ್ಲಿ ರಾಜ್ಯದ ಪಾಲು ಶೇಕಡ 11ರ ಅಂಕಿಯನ್ನು ದಾಟಿದೆ. ಯಾವತ್ತೂ ಬೊಕ್ಕಸ ಬಡವಾಗದಂತೆ ನೋಡಿಕೊಂಡಿದ್ದಾರೆ.

 

ವಿದ್ಯುತ್ ಕ್ಷೇತ್ರದಲ್ಲಿ ಆಗುತ್ತಿದ್ದ ನಷ್ಟವನ್ನು ಗಮನಾರ್ಹವಾಗಿ ತಪ್ಪಿಸಿದ ಗರಿಮೆ ಹೊಂದಿದ್ದಾರೆ. ಯಾವುದೇ ಕಾರಣಗಳಿಗೂ ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿ ಹಿಂದುಳಿಯದಂತೆ ಎಚ್ಚರ ವಹಿಸಿದ್ದಾರೆ.ಹಲವು ವಿರೋಧಗಳ ನಡುವೆಯೂ ನರ್ಮದಾ ಆಣೆಕಟ್ಟಿನ ಎತ್ತರವನ್ನು 95 ಮೀಟರುಗಳಿಂದ 110.64 ಮೀಟರ್‌ಗೆ ಏರಿಸುವ ಮೂಲಕ ತಮ್ಮ ಚಂಡಿತನ ಎಂತಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ರಸ್ತೆ, ನೀರು, ವಿದ್ಯುತ್, ಶಿಕ್ಷಣ, ಉದ್ಯೋಗ ಹಾಗೂ ಮಹಿಳೆಯರ ಪಾಲಿನ ಕ್ಷೇಮಾಭ್ಯುದಯಗಳಿಗೆ ಮೋದಿ ಹತ್ತು ಹಲವು ಸುಧಾರಣೆಗಳನ್ನು ರೂಪಿಸಿ ಸೈ ಎನಿಸಿಕೊಂಡಿದ್ದಾರೆ.ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಹಿಂದಿನ ವರ್ಷ ರಾಜ್ಯಪಾಲರಾದ ಕಮಲಾ ಬೇನಿವಾಲ್ ಅವರೊಂದಿಗೆ ಮೋದಿ ನಡೆಸಿದ ತಿಕ್ಕಾಟ, ಜಯಲಲಿತಾ ಅವರನ್ನು ಮುಗಿಸುವುದಕ್ಕೆ ಅವರ ಆಪ್ತಗೆಳತಿ ಶಶಿಕಲಾ ಸಂಚು ರೂಪಿಸಿದ್ದರು ಎಂಬಂತಹ ಸಂಗತಿಯ ಸುಳಿವನ್ನು ಜಯಾ ಅವರಿಗೆ ಸ್ವತಃ ಮೋದಿಯೇ ನೀಡಿದ್ದು, ರಾಜತಾಂತ್ರಿಕ ಕಾರಣಗಳಿಂದಾಗಿ ಅಮೆರಿಕ ಇವರಿಗೆ ವೀಸಾ ನಿರಾಕರಿಸಿದ್ದು... ಇವೆಲ್ಲಾ ಮೋದಿಯವರನ್ನು ಕೇಂದ್ರೀಕರಿಸಿದ ಇತ್ತೀಚಿನ ವಿಶೇಷಗಳು.“ಯುದ್ಧಗಳಲ್ಲಿ ಕಳೆದುಕೊಂಡ ಜನರಿಗಿಂತಲೂ ಹೆಚ್ಚು ಜನರನ್ನು ನಾವು ಭಯೋತ್ಪಾದಕರ ದಾಳಿಗಳಲ್ಲಿ ಕಳೆದುಕೊಂಡಿದ್ದೇವೆ” ಎನ್ನುವ ಮೋದಿಗೆ ಭಯೋತ್ಪಾದನೆಯ ವಿರುದ್ಧ ಸದಾ ಯುದ್ಧ ಸಾರುವ ತವಕ. “ಅವರನ್ನು” ಮಟ್ಟ ಹಾಕಬೇಕೆನ್ನುವ ರಣೋತ್ಸಾಹ.

 

ಹಾಗಾಗಿಯೇ ಅವರ ಅಭಿವೃದ್ಧಿ ಹಾದಿಗಳನ್ನು ಅವರ ವಿರೋಧಿಗಳು ಮತಾಂಧ ಹಳಿಗಳ ಮೇಲಿನ ರೈಲು ಎಂದು ಕರೆಯುತ್ತಾರೆ. ಮೋದಿ ಒಬ್ಬ ಅಪ್ಪಟ ಕೋಮುವಾದಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಹರಾಜು ಹಾಕಿದ ಪಾಪಿ, ಲೆಕ್ಕಕ್ಕೇ ಸಿಗದಷ್ಟು ಪ್ರಮಾಣದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಅಪರಾಧಿ ಎಂದು ಅವರನ್ನು ಹೀಗಳೆಯುತ್ತಾರೆ. ಆದರೆ ಮೋದಿ ಇವರ‌್ಯಾರಿಗೂ ಉತ್ತರ ನೀಡುವ ಉಸಾಬರಿಗೆ ಹೋಗಿಲ್ಲ. ಸುಮ್ಮನೆ ತಮ್ಮ ಪಾಡಿಗೆ ತಾವು ಹೆಜ್ಜೆ ಹಾಕುತ್ತಲೇ ಇದ್ದಾರೆ.ಗುಜರಾತ್‌ನಲ್ಲಿ ತಮ್ಮದೇ ಆದ ಅಭಿವೃದ್ಧಿ ಮಂತ್ರಕ್ಕೆ ಕಟ್ಟುಬಿದ್ದು ಪಾಲಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆಲ್ಲಾ ಬೀಸಣಿಗೆಯ ಗಾಳಿಯಂತೆ ನ್ಯಾಯಾಂಗ ಮತ್ತು ಅದರ ವಿನಾಯ್ತಿಗಳ ಅಸ್ತ್ರಗಳು ಅವರನ್ನು ದೋಷಮುಕ್ತ ಎಂದು ಸಾರಿವೆ. ಸಹಜವಾಗಿಯೇ ಮೋದಿ ಈಗ ಗರ್ವಭರಿತರಾಗಿದ್ದಾರೆ.ಮೋದಿಯನ್ನು ಅವರ ಪ್ರೀತಿಪಾತ್ರರು `ಛೋಟೆ ಸರ್ದಾರ್~ ಎಂತಲೂ ಕರೆಯುತ್ತಾರೆ. ಅವರ ಆಡಳಿತಾವಧಿಯಲ್ಲಿ ಸಂಭವಿಸಿದ ಕೋಮುಗಲಭೆಗಳ ಕರಾಳ ದಿನಗಳನ್ನು ಪಕ್ಕಕ್ಕಿಟ್ಟು ಮೆರೆಯಿಸುವ ಅಪಾರ ಅಭಿಮಾನಿಗಳಿದ್ದಾರೆ.ಯಾರಾದರೂ ಮೋದಿ ಅವರನ್ನು `ಗುಜರಾತ್‌ನಲ್ಲಿ ನಿಮ್ಮ ಆಡಳಿತಾವಧಿಯಲ್ಲಿ ನಡೆದ ಕೋಮುಗಲಭೆಗಳು ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಲ್ಲವೇ? ಎಂದು ಕೇಳಿದರೆ `ಇಂದಿರಾಗಾಂಧಿ ಕೊಲೆಯಾದ ನಂತರ 1984ರಲ್ಲಿ ದೆಹಲಿಯಲ್ಲಿ ಸಿಖ್ಖರ ನರಮೇಧವೇ ನಡೆಯಿತಲ್ಲಾ ಅದು ಬಿಳಿ ಚುಕ್ಕೆಯೇ? ಎಂದು ಕೇಳುತ್ತಾರೆ. ಇದು ಮೋದಿ ವೈಖರಿ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.