ಗುಜರಾತ್‌ನಲ್ಲಿ ಅಧಿಕಾರಿಗಳಿಗೆ ಅಭದ್ರತೆ- ಪ್ರಧಾನಿ ವಾಗ್ದಾಳಿ

7

ಗುಜರಾತ್‌ನಲ್ಲಿ ಅಧಿಕಾರಿಗಳಿಗೆ ಅಭದ್ರತೆ- ಪ್ರಧಾನಿ ವಾಗ್ದಾಳಿ

Published:
Updated:

ವನಸದಾ (ಪಿಟಿಐ): ಗುಜರಾತ್‌ನಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು, ಅಲ್ಪಸಂಖ್ಯಾತರು ಹಾಗೂ ಸಮಾಜದ ಇನ್ನಿತರ ಕೆಲ ವರ್ಗದವರು ಅಸುರಕ್ಷತೆಯಿಂದ ಬದುಕುವಂತಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದರು.ಗೋಧ್ರಾ ಪ್ರಕರಣದ ನಂತರದ ಗಲಭೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿ, ನಂತರ ಅಮಾನುತುಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಸ್ಥಿತಿಯನ್ನು ಮನಸ್ಸಿನಲ್ಲಿ ಇರಿಸಿಕೊಂಡು ಪ್ರಧಾನಿ ಹೀಗೆ ಹೇಳಿದ್ದು ಸ್ಪಷ್ಟವಾಗಿತ್ತು.ಅಧಿಕಾರಿಗಳು, ಅಲ್ಪಸಂಖ್ಯಾತರು ಮತ್ತು ಇನ್ನಿತರ ವರ್ಗದವರಿಂದ ಸರ್ಕಾರದ ವಿರುದ್ಧ ಹಲವು ದೂರುಗಳು ಕೇಂದ್ರಕ್ಕೆ ಬರುತ್ತಿವೆ. ಅಧಿಕಾರಿಗಳಿಂದಲೂ ಇಂತಹ ದೂರು ಕೇಳಿಬರುತ್ತಿರುವುದು ದುರದೃಷ್ಟಕರ  ಎಂದು ಅವರು ಹೇಳಿದರು.ನವಸಾರಿ ಜಿಲ್ಲೆಯ ಬುಡಕಟ್ಟು ಜನರೇ ಹೆಚ್ಚಾಗಿರುವ ವನಸದಾ ಪಟ್ಟಣದಲ್ಲಿ ಪ್ರಥಮ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ, ವಿರೋಧ ಪಕ್ಷಗಳಂತೆ ತಾವು ಜನರ ಮಧ್ಯೆ ಬಿರುಕು ತರುವ ರಾಜಕೀಯ ಮಾಡುವುದಿಲ್ಲ. ಇದರಿಂದ ಯಾವುದೇ ರಾಜಕೀಯ ಪಕ್ಷಕ್ಕೆ ದೀರ್ಘಾವಧಿಯಲ್ಲಿ ಲಾಭವಾಗುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು.

ಜಾತಿ, ಜನಾಂಗ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಬೇರೆ ಮಾಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರಗತಿ ಸಾಧಿಸುವುದು ಕಾಂಗ್ರೆಸ್‌ನ ನೀತಿ ಎಂದು ತಿಳಿಸಿದ ಪ್ರಧಾನಿ, ಸೂಕ್ತ ರಕ್ಷಣೆ ಇಲ್ಲವೆಂದು ಗುಜರಾತ್‌ನ ಅಲ್ಪಸಂಖ್ಯಾತರಿಂದ ತಮಗೆ ಅನೇಕ ದೂರುಗಳು ಬಂದಿವೆ ತಿಳಿಸಿದರು.ತಿರುಗೇಟು: ಗುಜರಾತ್‌ನಲ್ಲಿ ಅಲ್ಪಸಂಖ್ಯಾತರು ಅಸುರಕ್ಷತೆಯಲ್ಲಿ ಬದುಕು ದೂಡುತ್ತಿದ್ದಾರೆ ಎಂಬ ಪ್ರಧಾನಿ ಅವರ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ.

ಆ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತಕ್ಕಿಂತ ಬಹಳ ಹಿಂದೆ ಇದೆ ಎಂಬುದು ಚುನಾವಣಾ ಫಲಿತಾಂಶದ ನಂತರ ನಿಚ್ಚಳವಾಗುತ್ತದೆ ಎಂದು ಬಿಜೆಪಿ ವಕ್ತಾರ ಷಹನವಾಜ್ ಹುಸೇನ್ ಲಖನೌದಲ್ಲಿ ತಿರುಗೇಟು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry