ಗುಜರಾತ್‌ನಲ್ಲಿ ಜಾತಿ ಸಮೀಕರಣದ ಕಸರತ್ತು

7

ಗುಜರಾತ್‌ನಲ್ಲಿ ಜಾತಿ ಸಮೀಕರಣದ ಕಸರತ್ತು

Published:
Updated:

ನರೋಡ ಪಾಟಿಯಾ: ದಶಕದ ಹಿಂದಿನ `ಗೋದ್ರಾ ಹಿಂಸಾಚಾರ'ಕ್ಕೆ ಪ್ರತಿಕಾರವಾಗಿ ನಡೆದ ನರೋಡ ಪಾಟಿಯಾ `ಹತ್ಯಾಕಾಂಡ'ದ ಕರಾಳ ನೆನಪುಗಳು ಸಂತ್ರಸ್ತರನ್ನು  ಬಿಡದೆ ಕಾಡುತ್ತಿವೆ. 2002ರ ಫೆಬ್ರುವರಿ 28 ರಂದು ಮುಂಜಾನೆ ಕಟ್ಟಾ ಹಿಂದುತ್ವವಾದಿಗಳು ಕಣ್ಣೆದುರೇ ಮಕ್ಕಳು, ಮಹಿಳೆಯರು ಮತ್ತು ಮುದುಕರೆನ್ನದೆ ಕೈಗೆ ಸಿಕ್ಕವರನ್ನು ಕೊಂದು ರಕ್ತದೋಕುಳಿ ಆಡಿದ ಘಟನೆ ಹೃದಯದ ಮೇಲೆ ಬರೆ ಎಳೆದಿದೆ. ಜೀವಮಾನವಿಡೀ ಮಾಸದಂಥ ಗಾಯ ಮಾಡಿದೆ.ನರೋಡ ಮತ್ತು ಪಾಟಿಯಾ ಅಕ್ಕಪಕ್ಕದಲ್ಲಿರುವ ಎರಡು ಕೊಳೆಗೇರಿಗಳ ಹೆಸರು. ಅಹಮದಾಬಾದ್‌ಗೆ ಹೊಂದಿಕೊಂಡೇ ಇವೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಲ್ಲೊಂದು, ಇಲ್ಲೊಂದು ಹಿಂದುಗಳ ಮನೆ ಇವೆ. ಎಲ್ಲರೂ ಬಡವರು. ಕೂಲಿ ಮಾಡುವ ಹೆಬ್ಬೆಟ್ಟು ಮಂದಿ. ಮತ್ತೊಂದು ಸಂಗತಿ  ಕರ್ನಾಟಕದ ಬಹುತೇಕರಿಗೆ ಗೊತ್ತಿಲ್ಲ. ಪಾಟಿಯಾದ ಬಹುತೇಕ ಮುಸ್ಲಿಮರು ನಮ್ಮ ಉತ್ತರ ಕರ್ನಾಟಕದ ಗುಲ್ಬರ್ಗ, ರಾಯಚೂರು, ವಿಜಾಪುರ, ಕೊಪ್ಪಳ, ಯಾದಗಿರಿ ಕಡೆಗಳಿಂದ ನಾಲ್ಕು ದಶಕಗಳ ಹಿಂದೆ ವಲಸೆ ಬಂದವರು. ಹಿಂದು- ಮುಸ್ಲಿಂ ಗಲಭೆಯಲ್ಲಿ ರಕ್ತ ಸಂಬಂಧಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಕ್ಕಿದವರು.ಶರೀಫಾ ಇಕ್ಬಾಲ್ 18 ವರ್ಷದ ಮಗನನ್ನು ಕಣ್ಣ ಮುಂದೆಯೇ ಕಳೆದುಕೊಂಡಿದ್ದಾರೆ. ಮೂರು ಗಂಡು, ಒಂದು ಹೆಣ್ಣು ಮಗುವಿನ ತಾಯಿ ಗಲಭೆ ಆರಂಭವಾಗುತ್ತಿದ್ದಂತೆ ಮಕ್ಕಳ ಎಳೆದುಕೊಂಡು ಓಡಿ ಹೋಗಿ ಪಕ್ಕದ ದಾಬಾವೊಂದರಲ್ಲಿ ಅವಿತುಕೊಳ್ಳುವಾಗ ಹಿರಿಯ ಮಗ ಆಟೋ ಚಾಲಕ ಶೇಖ್ ಶರೀಫ್ ಗಲಭೆಕೋರರ ಕೈಗೆ ಸಿಕ್ಕಿಬಿದ್ದ. `ಆತನನ್ನು ಹೊಡೆದು ಕೊಲ್ಲಲಾಯಿತು. ನಾನು ಸಣ್ಣ ಕಿಂಡಿಯಲ್ಲಿ ಎಲ್ಲವನ್ನು ಕಣ್ಣಾರೆ  ಕಂಡೆ' ಎಂದು ಹೇಳುವಾಗ ಕಣ್ಣಂಚು ಹನಿಗೂಡುತ್ತವೆ.`ಸತ್ತ ಮಗನಿಗೆ ಬೆಲೆ ಕಟ್ಟಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಐದು ಲಕ್ಷ ಪರಿಹಾರ ಕೊಟ್ಟಿವೆ. ದುಡ್ಡು ತಗೊಂಡು ಏನ್ ಮಾಡೋದ್ರಿ. ಸತ್ತ ಮಗ ಮತ್ತೆ ಬರುತ್ತಾನೇನ್ರಿ' ಎಂದು ಮಹಿಳೆ ಪ್ರಶ್ನಿಸುತ್ತಾರೆ. ನರೋಡ ಪಾಟಿಯಾ ಗಲಭೆಯಲ್ಲಿ ಶರೀಫಾ ಅವರ ಮನೆ, ಗಂಡ ಮತ್ತು ಹಿರಿಯ ಮಗ ಓಡಿಸುತ್ತಿದ್ದ ಆಟೊಗಳನ್ನು ಸುಡಲಾಗಿದೆ.  `ಖಾಕಿ ಚಡ್ಡಿ, ಕೇಸರಿ ಬಟ್ಟೆ ತಲೆಗೆ ಸುತ್ತಿಕೊಂಡ ಜನ ಮಗನಿಗೆ ತಲ್ವಾರ್‌ನಲ್ಲಿ ಹೊಡೆಯುವುದನ್ನು ಕಣ್ಣಾರೆ ಕಂಡು ಮರೆಯುವುದೆಂಗ್ರಿ. ಜೀವ ಇರುವವರೆಗೂ ಮರೆಯೋದಿಲ್ರಿ' ಎಂದು ಶರೀಫಾ ಹೇಳುವಾಗ ಸಂಕಟದಿಂದ ಒದ್ದಾಡುತ್ತಾರೆ.`ನಮಗೆ  ಈ ಊರು ಬೇಡವಾಗಿದೆ. ಯಾವಾಗ ಏನೋ ಎಂಬ ಭಯ ಕಾಡ್ತೈತಿ. ಪೊಲೀಸರು ಬೀಟ್ ಬರ‌್ತಾರ‌್ರಿ. ಆದರೂ ನಿದ್ದೆ ಬರೋಲ್ರಿ. ಜೀವ ಕೈಯಲ್ಹಿಡಿದು ಬದುಕಬೇಕ್ರಿ. ಬೇರೆ ಎಲ್ಲಾದ್ರು ಆಸರಿ ಸಿಕ್ಕರೆ ಹೊರಟು ಹೋಗ್ತೇವ್ರಿ' ಎಂಬ ಅವರ ಮಾತಿನಲ್ಲಿ ಆತಂಕ-ಭಯವಿದೆ. ಸುರಪುರ ತಾಲ್ಲೂಕು ರಂಗಂಪೇಟೆಯ ಶೇಖ್ ಅಬ್ದುಲ್‌ವಹಾಬ್, ಯಾದಗಿರಿ ಜಿಲ್ಲೆ ಹತ್ತಿಕುಣಿಯ ಮಹಮದ್ ಜೆಲಾನಿ, ಬಟ್ಟೆಗಳ ಲಾಡಿ ತಯಾರಿಸುವ ಪುಟ್ಟ ಉದ್ಯಮಿ ಪುದುಚೇರಿಯ ಪ್ರಕಾಶ ಎಲ್ಲರಿಗೂ ಇದೇ ದುಗುಡವಿದೆ.ಬರಗಾಲದಿಂದ ತತ್ತರಿಸುವ ಉತ್ತರ ಕರ್ನಾಟಕ ಜನ ದುಡಿಮೆಗಾಗಿ ಗುಜರಾತಿಗೆ ಬಂದವರು. ನರೋಡ ಪಾಟಿಯಾ ಗಲಭೆಯಲ್ಲಿ ಇವರೆಲ್ಲರ ಮನೆಮಠ, ಅಂಗಡಿ- ಮುಂಗಟ್ಟುಗಳು ಸುಟ್ಟಿವೆ. ಮತ್ತೆ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. 10 ವರ್ಷದ ಹಿಂದಿನ ದುಃಸ್ವಪ್ನ ಮತ್ತೆ ಕಾಡದಿರಲಿ ಎಂದು ಕಂಡಕಂಡ ದೇವರಿಗೆ ಹರಕೆ ಕಟ್ಟುತ್ತಿದ್ದಾರೆ.ಹಿಂಸಾಚಾರ ಕಣ್ಣಾರೆ ಕಂಡ ಪಾಟಿಯಾದ `ನಜೀರ್ ಮಾಸ್ತರ್' ಮನಸಿನಲ್ಲಿ ದಶಕದ ಹಿಂದಿನ ಕಹಿ ನೆನಪು ಇನ್ನೂ ಹಸಿಹಸಿಯಾಗಿದೆ. ಕೋರ್ಟ್‌ನಲ್ಲಿ ಅವರು ಸಾಕ್ಷಿ ಕೂಡಾ ಹೇಳಿದ್ದಾರೆ. `ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಮಾಯಾ ಬೆನ್, ಹಿಂದುತ್ವವಾದಿ ಬಾಬು ಭಜರಂಗಿ ಅವರಿಗೆ ಕೊನೆಗೂ ಜೀವಾವಧಿ ಶಿಕ್ಷೆಯಾಗಿದೆ. ಇದರಿಂದ ಉರಿಯುತ್ತಿದ್ದ ಹೊಟ್ಟೆಗೆ ಮಂಜಿನ ಗಡ್ಡೆ ಇಟ್ಟಷ್ಟು ಖುಷಿಯಾಗಿದೆ' ಎಂದು ಸಂತಸಪಡುತ್ತಾರೆ.ನಂಬಿಕೆ ಇಲ್ಲ: ಮುಸ್ಲಿಂ ಸಮಾಜ ಮೋದಿ ಅವರನ್ನು ನಂಬುವ ಸ್ಥಿತಿಯಲ್ಲಿಲ್ಲ. ಮುಖ್ಯಮಂತ್ರಿ ಹೋದ ವರ್ಷ ಮುಸ್ಲಿಮರನ್ನು ಓಲೈಸಲು `ಸದ್ಭಾವನಾ ಯಾತ್ರೆ' ಮಾಡಿದ್ದರು. ರಕ್ಷಣೆಯ `ಅಭಯ' ನೀಡಿದ್ದರು. ಆದರೆ ಈಗ ಎಲ್ಲವನ್ನು ಮರೆತಿದ್ದಾರೆ. ಮುಸ್ಲಿಮರನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಿಂದ ದೂರವಿಟ್ಟು ಗುಜರಾತನ್ನು ಧರ್ಮದ ಆಧಾರದಲ್ಲಿ ಒಡೆದಿದ್ದಾರೆ.

ಬಿಜೆಪಿ ಒಬ್ಬನೇ ಒಬ್ಬ ಮುಸ್ಲಿಮನಿಗೂ ಟಿಕೆಟ್ ನೀಡಿಲ್ಲ. ಗುಜರಾತಿನ ಆರು ಕೋಟಿ ಜನರಲ್ಲಿ ಮುಸ್ಲಿಮರ ಸಂಖ್ಯೆ ಶೇ 10ರಷ್ಟು. 2007ರಲ್ಲಿ ಈ ಸಮಾಜದ ಐವರು ಶಾಸಕರಿದ್ದರು. ಎಲ್ಲರೂ ಕಾಂಗ್ರೆಸ್ ಪಕ್ಷದವರು. ಈ ಸಲ ಏಳು ಮಂದಿಗೆ ಸೋನಿಯಾ ಟಿಕೆಟ್ ನೀಡಿದ್ದಾರೆ. ಬಿಜೆಪಿ, ಜಿಪಿಪಿ ಒಬ್ಬರನ್ನೂ ಕಣಕ್ಕಿಳಿಸಿಲ್ಲ.ರಾಜ್ಯದಲ್ಲಿ ಕ್ಷತ್ರಿಯರು, ದಲಿತರು, ಆದಿವಾಸಿ, ಹಿಂದುಳಿದ ವರ್ಗ ಮತ್ತು ಮುಸ್ಲಿಮರು ಒಗ್ಗೂಡಿದರೆ ಶೇ 80ರಷ್ಟಾಗುತ್ತದೆ.  ಕಾಂಗ್ರೆಸ್ 70ರ ದಶಕದಲ್ಲಿ ಮಾಡಿದ್ದು ಇದನ್ನೇ. ಸಾಮಾಜಿಕವಾಗಿ- ಆರ್ಥಿಕವಾಗಿ ಹಿಂದುಳಿದ ಸಮಾಜಗಳನ್ನು ಸಂಘಟಿಸಿ ರಾಜಕೀಯ ಶಕ್ತಿಯಾಗಿ ಪರಿವರ್ತಿಸುವ ಕೆಲಸವನ್ನು.

ಹಿಂದುಳಿದ ವರ್ಗಗಳ ಮುಖಂಡ ಜಿನಾಭಾಯ್ ದರ್ಜಿಯವರ `ಕ್ಷತ್ರಿಯ, ಹರಿಜನ, ಆದಿವಾಸಿ ಮತ್ತು ಮುಸ್ಲಿಂ' (ಖಾಂ) ಸಮುದಾಯಗಳನ್ನು ರಾಜಕೀಯವಾಗಿ ಒಗ್ಗೂಡಿಸುವ ಪ್ರಯೋಗಕ್ಕೆ ಇಂದಿರಾ ಅಂಕಿತ ಬಿತ್ತು. ಒಂದೇ ದಶಕದಲ್ಲಿ ಪ್ರಯೋಗ ಯಶಸ್ವಿಯಾಯಿತು. 80ರಲ್ಲಿ `ಖಾಂ' ಅಲೆಯಲ್ಲಿ ಕಾಂಗ್ರೆಸ್ ಗೆದ್ದು ಬಂತು. ಇದರಿಂದ ಮೇಲ್ವರ್ಗಗಳ ಕಣ್ಣು ಕೆಂಪಾಯಿತು. 85ರ ಚುನಾವಣೆಯಲ್ಲೂ ಇದೇ `ಜಾತಿ ಸಮೀಕರಣ' ಫಲ ಕೊಟ್ಟಿತು.ಕಾಂಗ್ರೆಸ್ ಒಳಗೆ ಮತ್ತು ಹೊರಗೆ ಬಂಡಾಯ ಆರಂಭವಾಯಿತು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾಗಿದ್ದ ಪಟೇಲರು, ಬ್ರಾಹ್ಮಣರು ಮತ್ತಿತರ ಮೇಲ್ವರ್ಗದ ರಾಜಕಾರಣಕ್ಕೆ ಸವಾಲೊಡ್ಡಿದ್ದ `ಖಾಂ' ಶಕ್ತಿಯನ್ನು ದುರ್ಬಲಗೊಳಿಸುವ ಪಿತೂರಿ ಮಾಡಲಾಯಿತು. ಚಿಮನ್‌ಭಾಯ್ ಪಟೇಲ್ ಪರ್ಯಾಯವಾಗಿ `ಕೋಳಿ-ಕಣಬಿ- ಮುಸ್ಲಿಂ' (ಕೋಕಮ್) ಜಾತಿಗಳನ್ನು ಒಂದೇ ವೇದಿಕೆಯ ಅಡಿ ಸಂಘಟಿಸುವ ಕಸರತ್ತು ಮಾಡಿದರು. ಜತೆಗೆ ಮೇಲ್ಬರ್ಗಗಳನ್ನು ಓಲೈಸಿದರು.ಮಂಡಲ್ ಮೀಸಲಾತಿ ವಿರೋಧಿ ಚಳವಳಿ- ರಾಮಜನ್ಮಭೂಮಿ ಯಾತ್ರೆ ಅಲೆಯಲ್ಲಿ ಹಿಂದುತ್ವ ಶಕ್ತಿಗಳು ಪ್ರಬಲವಾದವು. 17 ವರ್ಷದಿಂದ ಬಿಜೆಪಿ ಪ್ರಬಲವಾಗಿ ಬೆಳೆದು ನಿಂತಿದೆ. ಒಳಜಗಳ- ಕಚ್ಚಾಟದ ನಡುವೆ ಮೋದಿ ಸದೃಢವಾಗಿದ್ದಾರೆ. ಬಹುತೇಕ ಹಿಂದುಳಿದ ವರ್ಗ ಮೋದಿ ಅವರನ್ನು ಬೆಂಬಲಿಸುತ್ತಿವೆ. ಇದಕ್ಕೆ ಕಾರಣ ಅವರೂ ಹಿಂದುಳಿದ `ತೇಲಿ' ಜಾತಿಗೆ ಸೇರಿರುವುದು.

ಹಿಂದಿನ ಎರಡು ಚುನಾವಣೆಯಲ್ಲಿ `ನರೋಡ ಪಾಟಿಯಾ ಹತ್ಯಾಕಾಂಡ' ಮುಖ್ಯಮಂತ್ರಿಗೆ ರಾಜಕೀಯವಾಗಿ ಲಾಭ ಮಾಡಿಕೊಟ್ಟಿದೆ.

ಮೋದಿ ಅವರನ್ನು `ಸಾವಿನ ವ್ಯಾಪಾರಿ'  (ಮೌತ್ ಕಾ ಸೌದಾಗರ್) ಎಂದು ಲೇವಡಿ ಮಾಡಿ ಸೋನಿಯಾ ಗಾಂಧಿ ಹಿಂದು ಮತಗಳನ್ನು ಒಗ್ಗೂಡಿಸಿದ್ದಾರೆ. ಅವರಿಗೀಗ ತಪ್ಪಿನ ಅರಿವಾಗಿದೆ. ಹೀಗಾಗಿ ಈ ಸಲದ ಪ್ರಚಾರದಲ್ಲಿ ಎಲ್ಲೂ ಗುಜರಾತಿನ ಗಲಭೆ ಪ್ರಸ್ತಾಪಿಸದೆ ಎಚ್ಚರಿಕೆ ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry