ಗುಜರಾತ್ ಗಲಭೆ: ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

7

ಗುಜರಾತ್ ಗಲಭೆ: ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

Published:
Updated:

ನವದೆಹಲಿ (ಪಿಟಿಐ): ಹತ್ಯೆಗೀಡಾದ ಗುಜರಾತ್ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಎಹಸಾನ್ ಜಾಫ್ರಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಕ್ತಾಯ ವರದಿಯ ದಾಖಲೆಗಳನ್ನು ಅವರ ಪತ್ನಿ ಜಾಕಿಯಾ ಜಾಫ್ರಿ ಅವರಿಗೆ ನೀಡಲಾಗಿದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ನೀಡುವಂತೆ 2002ರ ಗುಜರಾತ್ ಹತ್ಯಾಕಾಂಡದ ವಿಚಾರಣೆ ನಡೆಸುತ್ತಿರುವ ವಿಶೆಷ ತನಿಖಾ ತಂಡಕ್ಕೆ (ಎಸ್‌ಐಟಿ) ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.

ತಮ್ಮ ಪತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಲ್ಲಿಸಿದ ತನಿಖೆ ಮುಕ್ತಾಯ ವರದಿಯ ಕೆಲವು ದಾಖಲೆಗಳನ್ನು ನೀಡುವಂತೆ ಕೋರಿ ಜಾಕಿಯಾ ಸಲ್ಲಿಸಿದ್ದ ವಿಶೇಷ ಅರ್ಜಿಯ ವಿಚಾರಣೆ ನಡೆಸಿದ ಡಿ.ಕೆ. ಜೈನ್ ಮತ್ತು ಮದನ್ ಬಿ.ಲೋಕುರ್ ಈ ಆದೇಶ ನೀಡಿದರು.

ಸಿಬಿಐ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದಲ್ಲಿ ರಚಿಸಲಾಗಿದ್ದ ಎಸ್‌ಐಟಿ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿದ ವರದಿಯನ್ನು ಇದೇ ಮಾರ್ಚ್‌ನಲ್ಲಿ ಅಹಮದಾಬಾದ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯ ನವೆಂಬರ್ 27ರಂದು ವರದಿಯನ್ನು ಸ್ವೀಕರಿಸಿತ್ತು.

ಈ ವರದಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಒದಗಿಸುವಂತೆ ಕೋರಿ ಜಾಕಿಯಾ ಅವರು ಅಹಮಾದಾಬಾದ್ ನ್ಯಾಯಾಲಯದಲ್ಲಿ ವಿಶೇಷ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತ್ತು. 

ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಹಮದಾಬಾದ್ ಗುಲ್‌ಬರ್ಗ್ ಹೌಸಿಂಗ್ ಸೊಸೈಟಿ ನರಮೇಧದಲ್ಲಿ ಕಾಂಗ್ರೆಸ್ ಸಂಸದರಾಗಿದ್ದ ಎಹಸಾನ್ ಜಾಫ್ರಿ ಹತ್ಯೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry