ಗುಜರಾತ್ ಚುನಾವಣೆ: ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್, ಲ್ಯಾಪ್‌ಟಾಪ್

7
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ

ಗುಜರಾತ್ ಚುನಾವಣೆ: ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್, ಲ್ಯಾಪ್‌ಟಾಪ್

Published:
Updated:

ಅಹಮದಾಬಾದ್ (ಪಿಟಿಐ): ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಕೂಡಾ ಮಂಗಳವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹತ್ತು ಮತ್ತು 12ನೇ ವರ್ಗದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ವಿತರಿಸುವ ಭರವಸೆ ನೀಡಿದೆ. ಜತೆಗೆ ರಾಜ್ಯದ `ನೈಜ ಅಭಿವೃದ್ಧಿ' ಮತ್ತು `ಜನರ ರಕ್ಷಣೆ'ಗೆ ಒತ್ತು ನೀಡುವುದಾಗಿ ಹೇಳಿದೆ.ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಕಡಿತಗೊಳಿಸಿ, ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿರುವ ಕಾಂಗ್ರೆಸ್, ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಶಿಫಾರಸು ಮಾಡಿರುವ ಸಾಚಾರ್ ಸಮಿತಿ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.ಮೋದಿ ತಮ್ಮ ಪಕ್ಷದ ಪ್ರಣಾಳಿಕೆಯನ್ನು `ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯ ನೀಲನಕ್ಷೆ' ಎಂದು ಬಣ್ಣಿಸಿದರೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಗೆ `2012-2017ರ ಗುಜರಾತ್‌ನ ಭವಿಷ್ಯದ ನೀಲನಕ್ಷೆ' ಎಂದು ಹೆಸರಿಸಿದೆ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರ್ಜುನ್ ಮೋದ್ವಾಡಿಯಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.ರೈತರಿಗೆ ಉತ್ತಮ ಕೃಷಿ ಸೌಲಭ್ಯ, ಸಣ್ಣ ಮತ್ತು ಮಧ್ಯಮ ಅಣೆಕಟ್ಟುಗಳ ನಿರ್ಮಾಣ, ರೈತರಿಗೆ ನಿರಂತರ ವಿದ್ಯುತ್ ಮತ್ತು ಮೌಲ್ಯವರ್ಧಿತ ತೆರಿಗೆ ರಹಿತ ರಸಗೊಬ್ಬರಗಳ ಪೂರೈಕೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ದರ ಇಳಿಕೆ, ಎಲ್ಲ ಮಕ್ಕಳಿಗೂ ಶಿಕ್ಷಣ ಹಕ್ಕು, ಆರನೇ ವೇತನ ಆಯೋಗದ ಶಿಫಾರಸು ಜಾರಿ, ಮೀನುಗಾರರಿಗೆ ಜೀವವಿಮೆ ಮತ್ತು ಮೀನುಗಾರಿಕೆ ಬಂದರು ನಿರ್ಮಾಣ ಇತ್ಯಾದಿ ಭರವಸೆಗಳ ಮಹಾಪೂರವನ್ನೇ ಕಾಂಗ್ರೆಸ್ ಹರಿಸಿದೆ.ಸಣ್ಣ ಕೈಗಾರಿಕೆಗಳ ಪುನಶ್ಚೇತನ, ಹಿಂದುಳಿದ ಪ್ರದೇಶಗಳಲ್ಲಿ ಉದ್ಯಮಗಳ ಸ್ಥಾಪನೆ, ಸ್ಥಳೀಯರಿಗೆ ಉದ್ಯೋಗ ಮೀಸಲಾತಿ, ಕಾರ್ಮಿಕ ಕಾಯ್ದೆಗಳ ಕಟ್ಟುನಿಟ್ಟಿನ ಅನುಷ್ಠಾನ, ಉಚಿತವಾಗಿ ಜೀವರಕ್ಷಕ ಔಷಧಗಳ ಹಂಚಿಕೆ, ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನರ್ಮದಾ ಅಣೆಕಟ್ಟು ನಿರ್ಮಾಣ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ.ಮಾಜಿ ಉಪ ಮುಖ್ಯಮಂತ್ರಿ ರಾಜೀನಾಮೆ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ನರಹರಿ ಅಮೀನ್ ಅವರಿಗೆ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಕಾರಣ ಅವರು ಮಂಗಳವಾರ ಪಕ್ಷವನ್ನು ತೊರೆದಿದ್ದಾರೆ.ಕಳೆದ ವಾರ ಪಕ್ಷದ ಅನೇಕ ಮುಖಂಡರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಬಹುಸಂಖ್ಯಾತ ಪಟೇಲ್ ಸಮುದಾಯಕ್ಕೆ ಸೇರಿದ ಅಮೀನ್ ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.1,666 ಕಣದಲ್ಲಿ: ಗುಜರಾತ್‌ನ ಒಟ್ಟು 182 ವಿಧಾನಸಭಾ ಚುನಾವಣಾ ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 1,666 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry