ಗುರುವಾರ , ಜನವರಿ 23, 2020
27 °C

ಗುಜರಾತ್ ನಕಲಿ ಎನ್‌ಕೌಂಟರ್ - 3 ತಿಂಗಳಲ್ಲಿ ವರದಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗುಜರಾತ್‌ನಲ್ಲಿ 2002ರಿಂದ 2006ರ ಅವಧಿಯಲ್ಲಿ ನಡೆದಿವೆ ಎನ್ನಲಾದ ನಕಲಿ ಎನ್‌ಕೌಂಟರ್‌ಗಳು ಮತ್ತು ಅವುಗಳಲ್ಲಿ ಹತ್ಯೆಯಾದ ವ್ಯಕ್ತಿಗಳ ವಿವರ ಸೇರಿದಂತೆ ಮೂರು ತಿಂಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಮೇಲ್ವಿಚಾರಣಾ ಪ್ರಾಧಿಕಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ.ನಕಲಿ ಎನ್‌ಕೌಂಟರ್‌ಗಳ ಬಗ್ಗೆ ಅಧ್ಯಯನ ನಡೆಸಲು ಗುಜರಾತ್ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎಸ್.ಷಾ ನೇತೃತ್ವದಲ್ಲಿ ಮೇಲ್ವಿಚಾರಣಾ ಪ್ರಾಧಿಕಾರವನ್ನು ನೇಮಕ ಮಾಡಿತ್ತು.ನಕಲಿ ಎನ್‌ಕೌಂಟರ್‌ಗಳ ಸತ್ಯಾಸತ್ಯತೆಯ ತನಿಖೆ ನಡೆಸುವಂತೆ ಪತ್ರಕರ್ತ ಬಿ.ಜಿ.ವರ್ಗೀಸ್ ಮತ್ತು ಗೀತ ರಚನಾಕಾರ ಜಾವೇದ್ ಅಖ್ತರ್ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಪ್ರತಿ ಎನ್‌ಕೌಂಟರ್ ಪ್ರಕರಣದ ಹಿಂದಿರುವ ಸತ್ಯ ಸಂಗತಿಗಳ ಮೇಲೆ ವರದಿ ಬೆಳಕು ಚೆಲ್ಲಬೇಕು ಎಂದು ಸಲಹೆ ನೀಡಿದರು.  ಪ್ರಕರಣಗಳ ವಿಚಾರಣೆಗೆ ಗುಜರಾತ್ ವಿಶೇಷ ಕಾರ್ಯಪಡೆ ಅಥವಾ ಹೊರಗಿನ ಸಂಸ್ಥೆಗಳಿಂದ ಸ್ವತಂತ್ರ ತನಿಖಾ ತಂಡ ರಚಿಸಲು ತಮ್ಮದೇನೂ ಅಭ್ಯಂತರವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಸಿ.ಕೆ.ಪ್ರಸಾದ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲಿ ಮೇಲ್ವಿಚಾರಣಾ ಪ್ರಾಧಿಕಾರವು ಪೊಲೀಸ್ ಅಧಿಕಾರಿಗಳು, ಮಾನವ ಹಕ್ಕು ಹೋರಾಟಗಾರರನ್ನು ವಿಚಾರಣೆಗೆ ಕರೆಯಬಹುದು. ಬೇಕಾದ ಯಾವುದೇ ದಾಖಲೆಗಳನ್ನು ಪಡೆಯಬಹುದು ಎಂದು ಸೂಚಿಸಿತು.ಸುಪ್ರೀಂಕೋರ್ಟ್ ಆದೇಶದಂತೆ ಇತರ ಯಾವುದೇ ತನಿಖಾ ಸಂಸ್ಥೆ ನಡೆಸುತ್ತಿರುವ ಎನ್‌ಕೌಂಟರ್ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸದಂತೆಯೂ ತಾಕೀತು ಮಾಡಿತು.ಒಂದು ವೇಳೆ ಪ್ರಾಧಿಕಾರದ ಅಧ್ಯಕ್ಷರು ಬಯಸಿದಲ್ಲಿ ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾದ ವ್ಯಕ್ತಿಗಳ ಸಂಬಂಧಿಗಳನ್ನು ಕೂಡ ವಿಚಾರಣೆಗೆ ಕರೆಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದರು.21 ನಕಲಿ ಎನ್‌ಕೌಂಟರ್‌ಗಳ ಬಗ್ಗೆ ವರ್ಗೀಸ್ ಮತ್ತು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಜಾವೇದ್ ಅಖ್ತರ್ ಕೋರಿದ್ದರು.

 

ಪ್ರತಿಕ್ರಿಯಿಸಿ (+)