ಗುಜರಾತ್ ಫಲಿತಾಂಶ `ಬಿಎಸ್‌ವೈಗೆ ತಕ್ಕ ಪಾಠ'

7

ಗುಜರಾತ್ ಫಲಿತಾಂಶ `ಬಿಎಸ್‌ವೈಗೆ ತಕ್ಕ ಪಾಠ'

Published:
Updated:

 


ಚಿಕ್ಕಮಗಳೂರು: `ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಮುಂದಿನ ಸ್ಪಷ್ಟ ದಿಕ್ಸೂಚಿ. ಜಾತಿ ಮತ್ತು ಹೊಸ ಪಕ್ಷದ ಹೆಸರಿನಲ್ಲಿ ರಾಜಕಾರಣ ಮಾಡುವವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಅದೇ ಪರಿಸ್ಥಿತಿ ರಾಜ್ಯದಲ್ಲಿಯೂ ಆಗಲಿದೆ' ಎಂದು ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಟಾಂಗ್ ನೀಡಿದರು.

 

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಇಂದು ನಮ್ಮ ಪಕ್ಷಕ್ಕೆ ಮಹತ್ವಪೂರ್ಣ ದಿನ. ಗುಜರಾತ್‌ನಲ್ಲಿ ಪಕ್ಷ ಜಯಭೇರಿ ಬಾರಿಸಿದೆ. ಪಕ್ಷದ ಸಂಘಟನೆ ಮತ್ತು ವಿಚಾರಕ್ಕೆ ಜನ ಬೆಂಬಲ ಸಿಕ್ಕಿದೆ. ದೇಶದ ಜನತೆಗೆ ಮೋದಿ ಮೇಲೆ ಮತ್ತಷ್ಟು ವಿಶ್ವಾಸ ಬಂದಿದೆ' ಎಂದರು. 

 

`ಗುಜರಾತ್‌ನಲ್ಲೂ ಪಕ್ಷ ವಿರೋಧಿ ಚಟುವಟಿಕೆಯ ವ್ಯಕ್ತಿಗಳಿದ್ದರು. ನಮ್ಮ ಪಕ್ಷದಲ್ಲೇ ಇದ್ದ ಕೇಶುಭಾಯ್ ಪಟೇಲ್ ಜಾತಿ ಬಲ ಇಟ್ಟುಕೊಂಡು ಗೆಲ್ಲಲು ಹೊಸ ಪಕ್ಷ ಕಟ್ಟಿದರು. ಆದರೆ, ಅವರಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಜಾತಿ ಮೀರಿ ಪಕ್ಷದ ಸಂಘಟನೆಗೆ ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಎದುರಾಗಿ ಜಾತಿ ಬಲದಿಂದ ಕೆಜೆಪಿ ಕಟ್ಟಲು ಹೋಗಿರುವ ಬಿಎಸ್‌ವೈಗೂ ಜನರೇ ಪಾಠ ಕಲಿಸುತ್ತಾರೆ' ಎಂದರು.

 

`ನನ್ನಿಂದಲೇ ಗುಜರಾತ್ ಎಂದು ನರೇಂದ್ರ ಮೋದಿ ಹೇಳಿಕೊಳ್ಳಲಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ನಡೆದುಕೊಂಡರು. ವ್ಯಕ್ತಿಯ ಜಾತಿ ನೋಡದೆ, ಪಕ್ಷದ ತತ್ವ ಮತ್ತು ವಿಚಾರ ಆಧರಿಸಿ ಮತ ನೀಡಿರುವುದನ್ನು ಸ್ವಾಗತಿಸುತ್ತೇವೆ. ಈ ಫಲಿತಾಂಶ ರಾಜ್ಯದಲ್ಲೂ ಪಕ್ಷವನ್ನು ಸಂಘಟಿಸಲು ಮತ್ತು ಪಕ್ಷ ಪುನಃ ಅಧಿಕಾರಕ್ಕೆ ಬರಲು ಪ್ರೇರಣೆ ನೀಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

`ಕಳೆದ ವರ್ಷ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಘಟನಾ ಸಾಮರ್ಥ್ಯ ಪಕ್ಷಕ್ಕೆ ಇಲ್ಲದೆ, ಜಾತಿ ಮತ್ತು ಹಣ ಬಲವುಳ್ಳವರಿಗೆ ಟಿಕೆಟ್ ನೀಡಲಾಯಿತು. ಆ ತಪ್ಪಿನ ಪರಿಣಾಮವನ್ನು ನಾಲ್ಕೂವರೆ ವರ್ಷದ ಅವಧಿಯಲ್ಲಿ ಸಾಕಷ್ಟು ಅನುಭವಿಸಿದ್ದೇವೆ. ಅಂತಹ ತಪ್ಪನ್ನು ಪುನರಾವರ್ತನೆ ಮಾಡುವುದಿಲ್ಲ. ಈ ಬಾರಿ ಸಂಘಟನೆ ಮತ್ತು ಸ್ಥಳೀಯ ಮುಖಂಡರು ಸೂಚಿಸುವ ಯೋಗ್ಯರಿಗೆ ಮಾತ್ರ ಟಿಕೆಟ್ ನೀಡುತ್ತೇವೆ' ಎಂದರು.

 

`ಗಣಿ ಹಗರಣ ಹೊಸದಲ್ಲ. ನಮ್ಮ ಪಕ್ಷದ ಶಾಸಕರು ಮತ್ತು ಸಚಿವರ ಮೇಲೆ ಭ್ರಷ್ಟಾಚಾರದ ನೇರ ಆರೋಪಪಟ್ಟಿಗಳಿಲ್ಲ. ಖಾಸಗಿ ದೂರುಗಳು ದಾಖಲಾಗಿವೆ. ನೇರ ಆರೋಪಪಟ್ಟಿಗೆ ಗುರಿಯಾಗಿದ್ದವರು ಈಗ ಪಕ್ಷದಲ್ಲಿ ಉಳಿದಿಲ್ಲ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry