ಭಾನುವಾರ, ಡಿಸೆಂಬರ್ 15, 2019
20 °C

ಗುಜರಾತ್ ರಾಜ್ಯಪಾಲರಿಗೆ ಮೇಲುಗೈ : ಮೋದಿಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತ್ ರಾಜ್ಯಪಾಲರಿಗೆ ಮೇಲುಗೈ : ಮೋದಿಗೆ ಹಿನ್ನಡೆ

ಅಹಮದಾಬಾದ್ (ಪಿಟಿಐ): ರಾಜ್ಯ ಸರ್ಕಾರದ ಅಭಿಪ್ರಾಯ ಕೇಳದೇ, ಎಂಟು ವರ್ಷಗಳಿಂದ ಖಾಲಿಯಿದ್ದ ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಒಬ್ಬರನ್ನು ನೇಮಕ ಮಾಡಿದ ಗುಜರಾತ್ ರಾಜ್ಯಪಾಲರ ಕ್ರಮವನ್ನು ಗುಜರಾತ್ ಹೈಕೋರ್ಟ್ ಬಹುಮತದ ಆಧಾರದ ಮೇಲೆ ಎತ್ತಿ ಹಿಡಿದಿದೆ. ಇದರಿಂದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹಿನ್ನಡೆಯಾಗಿದೆ.ಲೋಕಾಯುಕ್ತರನ್ನು ನೇಮಕ ಮಾಡಿದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾ ಮಾಡಿದೆ. ಪ್ರಕರಣದ ವಿಚಾರಣೆಯನ್ನು ನಡೆಸಿದ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತಿಮ ತೀರ್ಪು ನೀಡಲು ನ್ಯಾಯಮೂರ್ತಿ ವಿ.ಎಂ.ಸಹಾಯ್ ಅವರ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು.`ದ್ವಿಸದಸ್ಯ ಪೀಠದ ನ್ಯಾಯಮೂರ್ತಿ ಸೋನಿಯಾ ಗೋಕಾನಿ ಅವರ ಭಿನ್ನ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಬದಲಾಗಿ ನ್ಯಾಯಮೂರ್ತಿ ಅಖಿಲ್ ಖುರೇಷಿ ಅವರ ಅಭಿಪ್ರಾಯಕ್ಕೆ ಸಹಮತ ಇದೆ. ಲೋಕಾಯುಕ್ತರನ್ನು ನೇಮಕ ಮಾಡಿರುವ ರಾಜ್ಯಪಾಲರ ಕ್ರಮ ಸಂವಿಧಾನ ಬದ್ಧವಾಗಿದೆ~ ಎಂದು ಹೇಳಿ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿರುವ ರಾಜ್ಯ ಸರ್ಕಾರದ ಅರ್ಜಿ ವಜಾ ಮಾಡಿರುವುದಾಗಿ ನ್ಯಾಯಮೂರ್ತಿ ಸಹಾಯ್ ತಿಳಿಸಿದರು.ಎಂಟು ವರ್ಷಗಳಿಂದ ಖಾಲಿಯಿದ್ದ ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಆರ್.ಎ.ಮೆಹತಾ ಅವರನ್ನು ಕಳೆದ ವರ್ಷದ ಆಗಸ್ಟ್ 25ರಂದು ರಾಜ್ಯಪಾಲರಾದ ಕಮಲಾ ಬೇನಿವಾಲ ನೇಮಕ ಮಾಡಿದ್ದರು.ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳದೇ ಲೋಕಾಯುಕ್ತರನ್ನು ನೇಮಕ ಮಾಡಿದ ಕ್ರಮವನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ವಿರೋಧಿಸಿದ್ದರು. ಮರು ದಿನವೇ ರಾಜ್ಯಪಾಲರ ಕ್ರಮವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು.

ವಿಚಾರಣೆ ನಡೆಸಿದ ವಿಭಾಗೀಯ ಪೀಠ ಅಕ್ಟೋಬರ್ 11ರಂದು ವಿಭಿನ್ನ ಅಭಿಪ್ರಾಯದ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಖುರೇಷಿ ಅವರು ರಾಜ್ಯಪಾಲರ ಕ್ರಮ ಸಂವಿಧಾನ ಬದ್ಧ ಎಂದು ಹೇಳಿದರೆ, ಗೋಕಾನಿ ರಾಜ್ಯಪಾಲರ ಕ್ರಮ ಅಸಂವಿಧಾನಿಕ ಎಂದು ತೀರ್ಪು ನೀಡಿದ್ದರು. ಹಾಗಾಗಿ ಪ್ರಕರಣವನ್ನು ವಿ.ಎಂ.ಸಹಾಯ್ ಅವರ ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು.`ಸುಪ್ರೀಂಗೆ ಮೇಲ್ಮನವಿ~ (ಗಾಂಧಿನಗರ ವರದಿ):
ಸರ್ಕಾರದ ಅಭಿಪ್ರಾಯ ಕೇಳದೇ ಲೋಕಾಯುಕ್ತರನ್ನು ನೇಮಕ ಮಾಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದಿರುವ ಗುಜರಾತ್ ಹೈಕೋರ್ಟಿನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಸರ್ಕಾರದ ವಕ್ತಾರ ಹಾಗೂ ಆರೋಗ್ಯ ಸಚಿವ ಜೈನಾರಾಯಣ ವ್ಯಾಸ್ ತಿಳಿಸಿದ್ದಾರೆ.`ಹೈಕೋರ್ಟಿನ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ ಕೆಲವು ವಿಷಯಗಳ ಬಗ್ಗೆ ಇನ್ನೂ ಸ್ಪಷ್ಟನೆ ದೊರೆಯದ ಕಾರಣ ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು~ ಎಂದರು.`ಮೋದಿ ಬೂಟಾಟಿಕೆ~ (ನವದೆಹಲಿ ವರದಿ): ಗುಜರಾತ್ ಹೈಕೋರ್ಟಿನ ತೀರ್ಪು ಹೊರ ಬೀಳುತ್ತಿದ್ದಂತೆಯೇ ಮೋದಿ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್, ನರೇಂದ್ರ ಮೋದಿ ಅವರ ಬೂಟಾಟಿಕೆ ಮತ್ತು ದ್ವಂದ್ವ ನಿಲುವನ್ನು ನ್ಯಾಯಾಲಯ ಖಚಿತಪಡಿಸಿದೆ ಎಂದು ಹೇಳಿದೆ.ಕೇಂದ್ರ ಸರ್ಕಾರ ಲೋಕಪಾಲ ಮಸೂದೆ ಜಾರಿಗೆ ತರಬೇಕು ಎಂದು ಒತ್ತಾಯಿಸುವ ಬಿಜೆಪಿ, ತನ್ನ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಿಸುವ ಕೆಲಸವನ್ನೂ ಮಾಡುತ್ತಿಲ್ಲ. ತನ್ಮೂಲಕ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ಆರೋಪಿಸಿದ್ದಾರೆ.`ಒಕ್ಕೂಟ ವ್ಯವಸ್ಥೆಗೆ ಹಿನ್ನಡೆ~: ಲೋಕಾಯುಕ್ತರನ್ನು ನೇಮಕ ಮಾಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದಿರುವ ಗುಜರಾತ್ ಹೈಕೋರ್ಟಿನ ತೀರ್ಪು ಒಕ್ಕೂಟ ವ್ಯವಸ್ಥೆಗೆ ಹಿನ್ನಡೆ ಎಂದು ಬಿಜೆಪಿ ಬಣ್ಣಿಸಿದೆ.ಕೇಂದ್ರ ಸರ್ಕಾರ ನೇಮಿಸಿದ ರಾಜ್ಯಪಾಲರು ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಹಿನ್ನಡೆಯಾಗುವಂತೆ ಮಾಡಿದ್ದಾರೆ ಎಂದು ಪಕ್ಷದ ಮುಖಂಡ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

 

 

ಪ್ರತಿಕ್ರಿಯಿಸಿ (+)