ಭಾನುವಾರ, ಏಪ್ರಿಲ್ 11, 2021
25 °C

ಗುಜರಾತ್ ವಜ್ರ ಲೋಕಕ್ಕೆ ದೀರ್ಘ ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್ (ಪಿಟಿಐ): ಭಾರತದಲ್ಲಿ ವಾರ-ತಿಂಗಳು ಲೆಕ್ಕದಲ್ಲಿ ಒಟ್ಟಿಗೇ ರಜೆ ಇರುವುದು ಶಾಲೆ-ಕಾಲೇಜುಗಳಿಗೆ ಮಾತ್ರ. ಅದು ವಿದ್ಯಾರ್ಥಿಗಳ ಜತೆ ಶಿಕ್ಷಕ-ಉಪನ್ಯಾಸಕರಿಗೂ ವಿರಾಮ-ವಿಹಾರದ ಕಾಲ. ಇಂಥ ಅದೃಷ್ಟ ಬೇರಾರಿಗೂ ಇಲ್ಲ ಎಂದೇ ಬಹುತೇಕರ ನಂಬಿಕೆ.ಆದರೆ, `ನಮಗೂ ಉಂಟು ದೀರ್ಘ ರಜೆ~ ಎಂದಿದ್ದಾರೆ ವಜ್ರಗಳನ್ನು ಕತ್ತರಿಸಿ ಹೊಳಪು ನೀಡುವ ಗುಜರಾತ್‌ನ ಕುಶಲಕರ್ಮಿಗಳು. ಇವರಿಗೂ ಪ್ರತಿ ವರ್ಷ ನವೆಂಬರ್‌ನಲ್ಲಿ ಭರ್ತಿ 25 ದಿನ ರಜೆಯ ಮಜ.`ಹೌದು, ನಮ್ಮಲ್ಲಿನ 4000 ವಜ್ರ ವಿನ್ಯಾಸ ಘಟಕಗಳು ನಾಳೆಯಿಂದ(ನ. 5) ಬಾಗಿಲು ಮುಚ್ಚಲಿವೆ. ಮತ್ತೆ ಇವುಗಳ ಚಟುವಟಿಕೆ ಆರಂಭವಾಗುವುದು ಡಿಸೆಂಬರ್ 1ರಂದು. ಅಲ್ಲಿಯವರೆಗೂ ನಮ್ಮ ಎಲ್ಲ ನೌಕರರಿಗೂ ವಿಶ್ರಾಂತಿ-ವಿಹಾರದ ಖುಷಿ~ ಎಂದಿದ್ದಾರೆ ಸೂರತ್ ಡೈಮಂಡ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ನವಾಡಿಯಾ.ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಪ್ರಕಾರ ವಿಶ್ವದ ಒಟ್ಟು ವಜ್ರ ವಿನ್ಯಾಸ ಉದ್ಯಮದಲ್ಲಿ ಶೇ 72ರಷ್ಟು ಪಾಲು ಗುಜರಾತ್‌ನದ್ದೇ ಆಗಿದೆ. ಭಾರತದಲ್ಲಿನ ವಜ್ರ ರಫ್ತು ವಹಿವಾಟಿಗೂ ಗುಜರಾತ್ ಕೊಡುಗೆ ಶೇ 80ರಷ್ಟಿದೆ.

ಗುಜರಾತ್ ಸರ್ಕಾರಿ ಅಂಕಿ-ಅಂಶ ಪ್ರಕಾರ, ರಾಜ್ಯದಲ್ಲಿ 6547 ವಜ್ರ ಸಂಸ್ಕರಣೆ-ವಿನ್ಯಾಸ ಘಟಕಗಳಿವೆ.ಇವೆಲ್ಲದರಿಂದ ಏಳು ಲಕ್ಷ ಮಂದಿಗೆ ಉದ್ಯೋಗ ದೊರಕಿದೆ. ಇಲ್ಲಿನ ಶೇ 38ರಷ್ಟು ಘಟಕಗಳು ಸೂರತ್‌ನಲ್ಲಿಯೇ ಇವೆ. ಶೇ 57ರಷ್ಟು ವಜ್ರ ಕುಶಲಕರ್ಮಿಗಳು ಈ ಜವಳಿ ನಗರಿಯಲ್ಲಿಯೇ ನೆಲೆಸಿದ್ದಾರೆ. ಸೂರತ್, ವಜ್ರ ಕತ್ತರಿಸುವ, ಪಾಲಿಶ್ ಮಾಡುವ ಕೆಲಸದಲ್ಲಿ ಇಡೀ ಏಷ್ಯಾದಲ್ಲಿಯೇ ಅತಿದೊಡ್ಡ ಕೇಂದ್ರವಾಗಿದೆ. ವಿಶ್ವದಲ್ಲಿ ವಿನ್ಯಾಸಗೊಳ್ಳುವ 11 ವಜ್ರಗಳಲ್ಲಿ 9 ವಜ್ರಗಳು ಸೂರತ್‌ನಲ್ಲಿ ಅಂತಿಮ ರೂಪು ಪಡೆದಿರುತ್ತವೆ!ಗುಜರಾತ್‌ನ ವಜ್ರ ಉದ್ಯಮದಲ್ಲಿ ಅಮ್ರೇಲಿಗೆ ಎರಡನೇ ಸ್ಥಾನ. ರಾಜ್ಯದಲ್ಲಿನ ಒಟ್ಟಾರೆ ಘಟಕಗಳಲ್ಲಿ ಅಮ್ರೇಲಿ ಜಿಲ್ಲೆಯಲ್ಲಿಯೇ ಶೇ 22 ಕೇಂದ್ರಗಳಿವೆ. ರಾಜ್ಯದ ಒಟ್ಟು ಕುಶಲಕರ್ಮಿಗಳ ಲೆಕ್ಕದಲ್ಲಿ ಅಹಮದಾಬಾದ್‌ಗೆ ಎರಡನೇ ಸ್ಥಾನ. ಇಡೀ ರಾಜ್ಯದ ವಜ್ರ ವಿನ್ಯಾಸಕರಲ್ಲಿ ಶೇ 14.3ರಷ್ಟು ಮಂದಿ ಇಲ್ಲಿಯೇ ಇದ್ದಾರೆ ಎನ್ನುತ್ತದೆ ಆರ್‌ಬಿಐ ವರದಿ.ಉಳಿದಂತೆ ವಜ್ರ ರಫ್ತು ವಹಿವಾಟಿನಲ್ಲಿ ಅಮೆರಿಕ ಮತ್ತು ಯೂರೋಪ್ ದೇಶಗಳ ಪಾಲೂ ದೊಡ್ಡದಿದೆ. ಆ ದೇಶಗಳಿಂದ ಹಾಂಕಾಂಗ್, ಥೈಲ್ಯಾಂಡ್, ಸಿಂಗಪುರ, ಜಪಾನ್‌ಗೆ ವಜ್ರ ಹೆಚ್ಚು ರಫ್ತಾಗುತ್ತವೆ. ಈಗ ಅಮೆರಿಕದಲ್ಲಿ `ಸ್ಯಾಂಡಿ ಚಂಡಮಾರುತ~ ಹಾವಳಿ ಮಾಡಿರುವುದು ಅಲ್ಲಿನ ವಜ್ರದ ಉದ್ಯಮಕ್ಕೆ ಸಾಕಷ್ಟು ಪೆಟ್ಟು ನೀಡಿದೆ ಎಂದು ನವಾಡಿಯಾ ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.