ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

7

ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

Published:
Updated:

ನವದೆಹಲಿ (ಪಿಟಿಐ):  2002ರಿಂದ 2006ರವರೆಗೆ ಗುಜರಾತ್‌ನಲ್ಲಿ ನಡೆದ 22 ನಕಲಿ ಎನ್‌ಕೌಂಟರ್ ಪ್ರಕರಣಗಳ ತನಿಖೆಯ ಉಸ್ತುವಾರಿ ಮಾಡುತ್ತಿದ್ದ ಸಮಿತಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವಾಗ  ತನ್ನ ಜತೆ ಸಮಾಲೋಚಿಸಲಿಲ್ಲ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.ಅನಾರೋಗ್ಯದ ಕಾರಣಕ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನ್ಯಾಯಮೂರ್ತಿ ಎಂ. ಬಿ. ಷಾ ಅವರು ರಾಜೀನಾಮೆ ನೀಡಿದ್ದರಿಂದ ಅವರ ಸ್ಥಾನಕ್ಕೆ ಬಾಂಬೆ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ. ಆರ್. ವ್ಯಾಸ್ ಅವರನ್ನು ಮೋದಿ ಸರ್ಕಾರ ನೇಮಕ ಮಾಡಿದೆ. ಈ ನೇಮಕಾತಿ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುವ ಮೊದಲು ನಮ್ಮ ಗಮನಕ್ಕೆ ತರಬೇಕಾಗಿತ್ತು ಎಂದು ನ್ಯಾಯಮೂರ್ತಿ ಅಫ್ತಾಬ್ ಅಲಂ ಮತ್ತು ರಾಜೇಂದ್ರ ಪ್ರಕಾಶ್ ದೇಸಾಯಿ ಅವರನ್ನು ಒಳಗೊಂಡ ನ್ಯಾಯಪೀಠವು ತಿಳಿಸಿದೆ.ವಕೀಲ ರಣಜೀತ್ ಕುಮಾರ್ ಮತ್ತು ಗುಜರಾತ್‌ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ತುಷಾರ್ ಮೆಹತಾ ಅವರು ಹೊಸ ನೇಮಕಾತಿ ಕುರಿತಂತೆ ಗುಜರಾತ್ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದಾಗ ನ್ಯಾಯಮೂರ್ತಿಗಳು ಮೇಲಿನಂತೆ ಪ್ರತಿಕ್ರಿಯಿಸಿದರು. ಕವಿ ಜಾವೇದ್ ಅಖ್ತರ್ ಮತ್ತು ಹಿರಿಯ ಪತ್ರಕರ್ತ ಬಿ. ಜಿ. ವರ್ಗೀಸ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸಮಿತಿಗೆ ಪ್ರಾಥಮಿಕ ವರದಿಯನ್ನು ಮೂರು ತಿಂಗಳಲ್ಲಿ ಸಲ್ಲಿಸಲು ಆದೇಶಿಸಲಾಗಿತ್ತು.ಇಂತಹ ಸಂದರ್ಭದಲ್ಲಿ ಸಮಿತಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವಾಗ ಗುಜರಾತ್ ಸರ್ಕಾರ ನಮ್ಮ ಜತೆ ಸಮಾಲೋಚಿಸದೆ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸುವ ಅಗತ್ಯವೇನಿತ್ತು ಎಂದು ನ್ಯಾಯ ಮೂರ್ತಿಯವರು ಪ್ರಶ್ನಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry