ಗುಟುಕು ಚಹಾ... ಕೇಕ್‌ನ ತುಂಡು...

7

ಗುಟುಕು ಚಹಾ... ಕೇಕ್‌ನ ತುಂಡು...

Published:
Updated:
ಗುಟುಕು ಚಹಾ... ಕೇಕ್‌ನ ತುಂಡು...

ನಿಶಾ 26ರ ಹರೆಯದ ದಿಟ್ಟ ಹುಡುಗಿ. ಚಿಕ್ಕ ವಯಸ್ಸಿನಲ್ಲೇ ಅಮ್ಮನ್ನನ್ನು ಕಳೆದುಕೊಂಡ ದುರದೃಷ್ಟವಂತೆ. ಬದುಕಿನ ನದಿಯಲ್ಲಿ ಎಲ್ಲೂ ಮುಳುಗದ ಛಾತಿ ಅವಳದ್ದು. ತನ್ನ ಭವಿಷ್ಯವನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡು, ಉತ್ತಮ ಕೆಲಸವನ್ನೂ ಗಿಟ್ಟಿಸಿಕೊಳ್ಳುತ್ತಾಳೆ. ಈ ಮಧ್ಯೆ ಸಮೀರ್ ಶರ್ಮ ಎಂಬ ಯುವಕನ ಪರಿಚಯವಾಗಿ, ಬಾಳ ಸಂಗಾತಿಗಳಾಗಿ ಕೈಹಿಡಿಯುತ್ತಾರೆ. ಆದರೆ ಆ ದಾಂಪತ್ಯ ಬಹುಕಾಲ ಬಾಳುವುದಿಲ್ಲ. ಸಮೀರ್ ಬೇರೊಬ್ಬ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. 

ಅದಾಗಲೇ ಎರಡು ಜೀವಗಳಿಗೆ ತಾಯಿಯಾಗಿದ್ದ ನಿಶಾ, ತನ್ನ ಅಸ್ಮಿತೆಯನ್ನು ಅರಸಿ ಹೊರಡುತ್ತಾಳೆ. ಮತ್ತೊಮ್ಮೆ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಡುತ್ತಾಳೆ.  ಎಂಟು ವರ್ಷದ ಬಳಿಕ ಆಕಸ್ಮಿಕವಾಗಿ ಆಕಾಶ್ ಎಂಬ ಯುವಕನ ಪರಿಚಯವಾಗುತ್ತದೆ, ಆತ ನಿಶಾಳ ಕೈಹಿಡಿಯಬೇಕೆಂಬ ಇಂಗಿತ ವ್ಯಕ್ತಪಡಿಸುತ್ತಾನೆ. ಆದರೆ ನಿಶಾಗೆ ಪುರುಷನ ಸಾಂಗತ್ಯದ ಕಹಿನೆನಪು ಮಾಸಿರುವುದಿಲ್ಲ. ಎರಡು ಮಕ್ಕಳೊಂದಿಗೆ ತಾಯಿಯಾಗಿರುವ ಆಕೆ ಆಕಾಶ್ ಜೊತೆ ಬದುಕಲು ಹಿಂದೇಟು ಹಾಕುತ್ತಾಳೆ. ಆದರೆ ಒಂದೆಡೆ ಒಲವು, ಇನ್ನೊಂದೆಡೆ ಸ್ವಾವಲಂಬಿತನ. ಕೊನೆಗೆ ನಿಶಾಳ ಆಯ್ಕೆ ಏನು?

ಇದಾವ ಹೆಣ್ಣಿನ ಕತೆ? ಧಾರಾವಾಹಿಯ ಕಂತು ಅಥವಾ ಸಿನಿಮಾ ಎಂದು ಯೋಚಿಸುತ್ತಿರುವಿರೆ? ಉತ್ತರ ಬೇಕಿದ್ದರೆ ನೀವು ಓದುಗರಾಗಬೇಕು.

ಲೇಖಕಿ ಪ್ರೀತಿ ಶಣೈ ಅವರ `ಟೀ ಫಾರ್ ಟು ಅಂಡ್ ಎ ಪೀಸ್ ಆಫ್ ಕೇಕ್~ ಪುಸ್ತಕದ ಕತೆಯಿದು.

`ಪ್ರೇಮಿಗಳ ದಿನ~ದ ಸಂಜೆ ಕೊರಮಂಗಲದ ಫೋರಂ ಮಾಲ್‌ನಲ್ಲಿರುವ ಲ್ಯಾಂಡ್‌ಮಾರ್ಕ್ ಮಳಿಗೆಯಲ್ಲಿ ಈ ಪುಸ್ತಕ ಲೋಕಾರ್ಪಣೆಯಾಯಿತು. ನಿಶಾಳ ಸುತ್ತ ಹೆಣೆದಿರುವ ಪ್ರೀತಿಯ ಕತೆ ಪುಸ್ತಕ ಈ ದಿನದಂದೇ ಬಿಡುಗಡೆಯಾಗಬೇಕೆಂಬುದು ಲೇಖಕಿಯ ಬಯಕೆಯಾಗಿತ್ತಂತೆ. 

ಕೃತಿ ಬಿಡುಗಡೆ ಮಾಡಿದ ಲೇಖಕಿ ಮಿಲನ್ ವೋಹ್ರಾ ಇದೊಂದು ಹೃದಯಸ್ಪರ್ಶಿ ಪ್ರೇಮಕತೆ. ಸಮಾಜದ ಅನೇಕ ಹೆಣ್ಣುಮಕ್ಕಳ ಬಾಳಲ್ಲಿ ನಿಶಾಳ ಪಾತ್ರ ಕಾಣುತ್ತೇವೆ. ಹೆಣ್ಣಿನ ಮೇಲಾಗುತ್ತಿರುವ ಶೋಷಣೆಯ ಸೂಕ್ಷ್ಮ ಮುಖವನ್ನು ಇಲ್ಲಿ ಲೇಖಕರು ತೋರಿಸಿದ್ದಾರೆ ಎಂದರು.

ಇಲ್ಲಿ ನಿಶಾಳ ಪಾತ್ರ ಕೇವಲ ಒಂದು ಹೆಣ್ಣಿನ ಪ್ರತಿಬಿಂಬವಲ್ಲ. ಸಮಾಜದ ಕನ್ನಡಿ. ನಾನು ವಾಸಿಸುತ್ತಿರುವ ಸುತ್ತಮುತ್ತಲ ವಾತಾವರಣ ಈ ಕೃತಿ ಬರೆಯಲು ಪ್ರೇರಣೆ ನೀಡಿತು. ಮುಂಬೈನಂತಹ ಮಹಾನ್ ನಗರಗಳಲ್ಲಿ ಪ್ರತಿಯೊಬ್ಬರೂ ತಮ್ಮದೇ ಜಂಜಾಟದಲ್ಲಿ ಬದುಕುತ್ತಿರುತ್ತಾರೆ. ಅಲ್ಲಿ ಯಾರಿಗೆ ಏನಾದರೂ ಕೇಳುವವರು ಸಹ ಗತಿ ಇರುವುದಿಲ್ಲ. ಈ ರೀತಿಯ ಸಂಗತಿಗಳು ನನ್ನನ್ನು ಬರೆಯಲು ಪ್ರೇರೇಪಿಸಿದವು. ನನ್ನ ಪುಸ್ತಕ ಇಂಥ ಸನ್ನಿವೇಶಗಳ ಚಿತ್ರಣದಿಂದ ಒಡಮೂಡಿದೆ ಎನ್ನುವಾಗ ಪ್ರೀತಿ ಶಣೈ ಮುಖದಲ್ಲಿ ಸಾರ್ಥಕ್ಯ ಭಾವ.

ಪುಸ್ತಕದಲ್ಲಿ ತಮಗೆ ಇಷ್ಟವಾಗಿರುವ ಕೆಲವು ಸಾಲುಗಳನ್ನು ಪ್ರೀತಿ ಶೆಣೈ ವಾಚಿಸಿದರು. ಕತೆಗೂ, ಪುಸ್ತಕದ ಹೆಸರಿಗೂ ಯಾವ ರೀತಿಯ ಹೋಲಿಕೆಯೂ ಇಲ್ಲವಲ್ಲ ಎಂದು ಪ್ರಶ್ನಿಸಿದ್ದಕ್ಕೆ ಕತೆಯ ಬಹುಭಾಗ ಟೀ ಜೊತೆಗೆ ಸಂಭಾಷಣೆ ನಡೆಯುತ್ತದೆ. ಆದುದರಿಂದ ಈ ಹೆಸರಿಟ್ಟೆ ಎಂಬುದು ಅವರ ಸಮಜಾಯಿಷಿ.

ಇವರು 2008ರಲ್ಲಿ `34 ಬಬ್ಬಲ್‌ಗಮ್ಸ ಅಂಡ್ ಕ್ಯಾಂಡೀಸ್~, 2011ರಲ್ಲಿ `ಲೈಫ್ ಈಸ್ ವಾಟ್ ಯು ಮೇಕ್ ಇಟ್~ ಕೃತಿಯನ್ನು ರಚಿಸಿದ್ದರು. ಈ ಎರಡು ಕೃತಿಗಳೂ `ನ್ಯಾಷನಲ್ ಬೆಸ್ಟ್ ಸೆಲ್ಲರ್~ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ನಿಮ್ಮ ಬಾಳಸಂಗಾತಿಯಾಗಿ ಬರುವವರೊಂದಿಗೆ ಮನಬಿಚ್ಚಿ ಮಾತಾಡಿ. ಎಲ್ಲಾ ದುಗುಡಗಳನ್ನೂ ವಿನಿಮಯ ಮಾಡಿಕೊಳ್ಳಿ. ಹೆಚ್ಚು ಹೆಚ್ಚು ಮಾತಾಡುವ ಮೂಲಕ ಭಿನ್ನಾಭಿಪ್ರಾಯಗಳನ್ನು ದೂರಮಾಡಿಕೊಳ್ಳಿ ಎಂಬುದು ಯುವಕ, ಯುವತಿಯರಿಗೆ ಪ್ರೀತಿ ಶಣೈ  ನೀಡಿದ ಕಿವಿಮಾತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry