ಮಂಗಳವಾರ, ನವೆಂಬರ್ 19, 2019
29 °C
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ

ಗುಟ್ಟು ಬಿಡದ ಮತದಾರ; ಗಟ್ಟಿಯಾಗಿರುವ ಕಾಂಗ್ರೆಸ್

Published:
Updated:

ಶಿಡ್ಲಘಟ್ಟ: ದೇಶ ಸ್ವತಂತ್ರಗೊಂಡ ನಂತರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 13 ಚುನಾವಣೆ ನಡೆದಿದ್ದು, ಇದೀಗ 14ನೇ ಚುನಾವಣೆಗೆ ರಂಗ ಸಜ್ಜುಗೊಂಡಿದೆ. ಈವರೆಗಿನ 13 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್ ಅಧಿಕಾರ ಪಡೆದಿದ್ದರೆ, ಜನತಾ ಪಕ್ಷ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ತಲಾ ಒಂದು ಬಾರಿ ಗೆಲುವು ಸಾಧಿಸಿದ್ದಾರೆ.ಈವರೆಗೆ ಆರು ಮಂದಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕಾಂಗ್ರೆಸ್‌ನ ವಿ.ಮುನಿಯಪ್ಪ ಐದು ಬಾರಿ ಆಯ್ಕೆಯಾದರೆ, ಎಸ್.ಮುನಿಶಾಮಪ್ಪ ಅವರು ಕಾಂಗ್ರೆಸ್, ಜನತಾ ಪಕ್ಷ ಮತ್ತು ಜೆಡಿಎಸ್ ಪ್ರತಿನಿಧಿಸಿ ಮೂರು ಬಾರಿ ಶಾಸಕರಾಗಿದ್ದರು. ಜೆ.ವೆಂಕಟಪ್ಪ ಒಮ್ಮೆ ಪಕ್ಷೇತರರಾಗಿ ಮತ್ತೊಮ್ಮೆ ಕಾಂಗ್ರೆಸ್ ಪ್ರತಿನಿಧಿಸಿ ಎರಡು ಬಾರಿ ಶಾಸಕರಾಗಿದ್ದರು.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಸಿದ್ದ ಮಳ್ಳೂರು ಜಿ.ಪಾಪಣ್ಣ 1952ರ ಚುನಾವಣೆಯಲ್ಲಿ ಕ್ಷೇತ್ರದ ಮೊಟ್ಟಮೊದಲ ಶಾಸಕರಾಗಿ ಆಯ್ಕೆಯಾದವರು. ಆಗ ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಎರಡೂ ಸೇರಿ ಒಂದೇ ಕ್ಷೇತ್ರವೆಂದು ಪರಿಗಣಿಸಲಾಗಿತ್ತು. ಶಿಡ್ಲಘಟ್ಟ ಒಂದೇ ಕ್ಷೇತ್ರವೆಂದು ಪರಿಗಣನೆಗೆ ಬಂದ ನಂತರ 1957ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಾತವಾರ ವೆಂಕಟಪ್ಪ (ಪಡೆದ ಮತಗಳು-17,490) ವಿಜೇತರಾದರು.1962ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿ ಸಾದಲಿ ಆವಲರೆಡ್ಡಿ(ಪಡೆದ ಮತಗಳು-21,696) ಗೆಲುವು ಸಾಧಿಸಿದರೆ, 1967ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ಭಕ್ತರಹಳ್ಳಿ ವೆಂಕಟರಾಯಪ್ಪ (ಪಡೆದ ಮತಗಳು-21,908) ಶಾಸಕರಾಗಿ ಆಯ್ಕೆಯಾದರು.1972ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 1957ರಲ್ಲಿ ಪಕ್ಷೇತರರಾಗಿ ವಿಜೇತರಾಗಿದ್ದ ಜಾತವಾರ ವೆಂಕಟಪ್ಪ (ಪಡೆದ ಮತಗಳು-31,308) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾದರು. 1978ರ ಚುನಾವಣೆಯಲ್ಲಿ ಕಾಂಗ್ರೆಸ್ (ಇಂದಿರಾ) ಪ್ರತಿನಿಧಿಸಿದ್ದ ಎಸ್.ಮುನಿಶಾಮಪ್ಪ (ಪಡೆದ ಮತಗಳು-34,683) ವಿಜೇತರಾದರು.1983ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಸಿದ್ದ ವಿ.ಮುನಿಯಪ್ಪ (ಪಡೆದ ಮತಗಳು-34,757) ಆಯ್ಕೆಯಾದರು. ಆದರೆ ಈ ಅಧಿಕಾರಾವಧಿ ಇದ್ದದ್ದು ಕೇವಲ ಎರಡು ವರ್ಷಗಳು ಮಾತ್ರ. ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರು ಬೆಂಬಲಿಗರ ಕೋರಂ ಕಡಿಮೆಯಿದ್ದುದರಿಂದ ಚುನಾವಣೆ ಘೋಷಿಸಿದರು.1985ರಲ್ಲಿ ನಡೆದ ಚುನಾವಣೆಯಲ್ಲಿ ಈ ಹಿಂದೆ ಕಾಂಗ್ರೆಸ್ (ಇಂದಿರಾ) ಪ್ರತಿನಿಧಿಸಿದ್ದ ಎಸ್.ಮುನಿಶಾಮಪ್ಪ ಜನತಾ ಪಕ್ಷದಿಂದ ಟಿಕೆಟ್ ಪಡೆದು ಶಾಸಕರಾದರು (ಪಡೆದ ಮತಗಳು-44,199). ಜನತಾ ಪಕ್ಷದ ಶಾಸಕರ ಬೆಂಬಲದಿಂದ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು.ನಂತರದ ಹದಿನೈದು ವರ್ಷಗಳ ಕಾಲ ಶಿಡ್ಲಘಟ್ಟ ಕ್ಷೇತ್ರದಲ್ಲಿ ನಡೆದದ್ದು ಕಾಂಗ್ರೆಸ್ ಆಡಳಿತ. 1989, 1994 ಮತ್ತು 1999ರ ಚುನಾವಣೆಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಿ.ಮುನಿಯಪ್ಪ ಹ್ಯಾಟ್ರಿಕ್ ವಿಜಯ ಸಾಧಿಸಿದರು. ಈ ಸಮಯದಲ್ಲಿ ಮೊದಲ ಎರಡು ಅವಧಿಗಳಲ್ಲಿ ರೇಷ್ಮೆ ಇಲಾಖೆ ಮತ್ತು ಇಂಧನ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು.1999ರ ಚುನಾವಣೆಯಲ್ಲಿ ಮತ್ತೆ ಗೆದ್ದ (ಪಡೆದ ಮತಗಳು-60,514) ಅವರು, ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಆದರೆ 2004ರ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದರು. ಆ ಚುನಾವಣೆಯಲ್ಲಿ ಜೆಡಿಎಸ್‌ನ ಎಸ್.ಮುನಿಶಾಮಪ್ಪ (ಪಡೆದ ಮತಗಳು-60,212) ವಿಜೇತರಾಗಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಮುನಿಯಪ್ಪ, ಜೆಡಿಎಸ್‌ನ ಎಂ.ರಾಜಣ್ಣ ವಿರುದ್ಧ 6,502 ಮತಗಳ ಅಂತರದಿಂದ ಗೆದ್ದು ಐದನೇ ಬಾರಿಗೆ ಶಾಸಕರಾದರು.ರಾಜಕೀಯ ಇತಿಹಾಸ ವಿವಿಧ ಪಕ್ಷಗಳ ಹಾವು- ಏಣಿ ಆಟದಂತೆ ಕಂಡುಬಂದರೂ ಕಾಲ ಬದಲಾದಂತೆ, ಜನಸಂಖ್ಯೆ ಏರಿದಂತೆ, ಜನರ ಇಷ್ಟ, ಅಭಿರುಚಿ, ಅವಶ್ಯಕತೆ, ಮನಸ್ಥಿತಿ ಬದಲಾಗಿದೆ. ಆಮಿಷ, ಪ್ರಲೋಭನೆಗೆ ಒಳಪಡುವ ಜನರು ಒಂದೆಡೆಯಿದ್ದರೆ, ತನ್ನ ಮನಸ್ಸಿನ ಗುಟ್ಟು ಬಿಟ್ಟುಕೊಡದೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಜನರೂ ಮತ್ತೊಂದೆಡೆಯಿದ್ದಾರೆ.ವಿವಿಧ ಪಕ್ಷಗಳ ಬೆಂಬಲಿಗರು ತಮ್ಮ ಅಭ್ಯರ್ಥಿಗಳ ಪರವಾಗಿದ್ದರೆ, ಇನ್ನೂ ಕೆಲವರು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. 13 ಚುನಾವಣೆಯ ಇತಿಹಾಸದ ಬೆನ್ನಲ್ಲೇ ಆಗಮಿಸಿರುವ 14ರ ಚುನಾವಣೆಯಲ್ಲಿ ಗೆಲುವವರ‌್ಯಾರು ಎಂಬುದು ಗುಟ್ಟಾಗಿ ಉಳಿದುಕೊಂಡಿದೆ.

ಪ್ರತಿಕ್ರಿಯಿಸಿ (+)