ಶನಿವಾರ, ಜುಲೈ 24, 2021
26 °C

ಗುಡವಿಯಲ್ಲಿ ಹಕ್ಕಿಗಳ ಗೊಡವಿ

ಚಿತ್ರ Updated:

ಅಕ್ಷರ ಗಾತ್ರ : | |

ಚಳಿಗಾಲ ಆರಂಭವಾಗುತ್ತಿದ್ದಂತೆ ಹಳ್ಳ-ಕೆರೆ, ಜಲಾಶಯಗಳ ಹಿನ್ನೀರು ಪ್ರದೇಶಗಳಲ್ಲಿ ಹಕ್ಕಿಗಳು ಕಾಣಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ಹಕ್ಕಿಗಳು ಸಂತಾನಾಭಿವೃದ್ಧಿಗಾಗಿ ಇಂಥ ತಾಣಗಳತ್ತ ಬರುತ್ತವೆ. ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ    ಪಕ್ಷಿಧಾಮ ಗುಡವಿಯಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಪಕ್ಷಿಗಳ ಚಿಲಿಪಿಲಿ ಸದ್ದು  ಕೇಳಿ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿಗೆ ಹೊಸ ಹೊಸ ಬಣ್ಣದ ವಲಸೆ ಹಕ್ಕಿಗಳು ಬಂದು ಸೇರಿಕೊಂಡಿವೆ. ಅಲ್ಲೆಗ ನಿತ್ಯವೂ ಪಕ್ಷಿಗಳ ಸಾಮಗಾನ ಪಕ್ಷಿಪ್ರಿಯರ ಮೈ ಮನಗಳಿಗೆ ಮುದ ನೀಡುತ್ತಿದೆ.ಗುಡವಿಯಲ್ಲೆಗ ಐದು ಸಾವಿರಕ್ಕೂ ಹೆಚ್ಚು ಅಪರೂಪದ ಬಿಳಿ ಕಂಚಗಾರ ಹಕ್ಕಿಗಳು ಬಂದು ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿವೆ ಎಂಬ ಅಂದಾಜಿದೆ. ಅವುಗಳಲ್ಲಿ ಬಿಳಿ ಕೆಂಬರಲು ಎಂದು ಕರೆಯಲಾಗುವ  (ವೈಟ್ ಐಬಿಸ್)ಗಳು ಹೆಚ್ಚಿನ ಸಂಖ್ಯೆಯಲ್ಲಿವೆ.ಬಿಳಿ ಕೆಂಬರಲು ಹಕ್ಕಿಗಳು ಸಂಘ ಜೀವಿಗಳು. ಬಿಳಿ ಕಂಚಗಾರ ಹಕ್ಕಿಗಳು ಮೈ ಬಿಳಿ ಬಣ್ಣದಿಂದ ಕೂಡಿದ್ದು, ಕಪ್ಪು ತಲೆ ಹಾಗೂ ಕತ್ತನ್ನು ಹೊಂದಿವೆ.ಈ ಹಕ್ಕಿಗಳು ಹೆಚ್ಚಾಗಿ ಚೌಗು ಪ್ರದೇಶದಲ್ಲಿ ವಾಸಿಸುತ್ತವೆ. ಇವು ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ನೀರ ಮಧ್ಯೆ ಇರುವ ಗಿಡಗಂಟಿಗಳ ಮೇಲೆ ಇವುಗಳ ವಾಸ. ಅಲ್ಲಿ ಒಣಗಿದ ಸಣ್ಣ ಟೊಂಗೆ ಹಾಗೂ ಮುಳ್ಳಿನ ಕಡ್ಡಿ, ಗರಿಗಳಿಂದ ಗೂಡು ನಿರ್ಮಿಸುತ್ತವೆ. ನೀಲಿ-ಹಸಿರು ಮಿಶ್ರಿತ ತೆಳು ಬಿಳಿ ಬಣ್ಣ ಮೊಟ್ಟೆಗಳನ್ನಿಡುತ್ತವೆ.ಮೊಟ್ಟೆಗಳು ಮರಿಯಾಗಿ ಹೊರ ಬಂದು ದೊಡ್ಡದಾಗಿ ಹಾರಾಡುವುದನ್ನು ಕಲಿತು ಸ್ವತಂತ್ರವಾಗಿ ಹಾರುವವರೆಗೆ ತಾಯಿ ಹಕ್ಕಿಗಳಿಗೆ ಬಿಡುವೇ ಇಲ್ಲ.ಸಂಜೆಯಾಗುತ್ತಲೇ ‘ಕೊರ್ರ್‌..... ಕೊರ್ರ್‌.....’ ಎಂಬ ಸದ್ದು  ಮಾಡುತ್ತಲೇ ಇರುವ ಕಂಚಗಾರ ಹಕ್ಕಿಗಳು ಮರಿಗಳನ್ನು ರೆಕ್ಕೆಗಳ ನಡುವೆ ಕೂರಿಸಿಕೊಂಡು ನಿದ್ದೆ ಮಾಡುತ್ತವೆ. ಬೆಳಗಾಗುತ್ತಲೇ ಮೀನುಗಳನ್ನು ಬೇಟೆಯಾಡಿ ಮರಿಗಳಿಗೆ ಉಣಬಡಿಸುತ್ತವೆ. ಕಂಚುಗಾರ ಹಕ್ಕಿಗಳಿಗೂ ಮೊದಲು ಎಗ್ರೆಟ್ಟಾ ಆಲ್ಫ್, ಇಂಟರ್‌ಮೀಸಿಯಾ, ಗಾರ್ಫೆಚ್ಚಾ ಮತ್ತು ಬುಬುಲ್‌ಕಸ್ ಇತ್ಯಾದಿ ಬೆಳ್ಳಕ್ಕಿಗಳು ಮೊಟ್ಟೆಗಳನ್ನಿಟ್ಟು ಮರಿ ಮಾಡಲು ಗುಡವಿಗೆ ಬರುತ್ತವೆ.ಇವುಗಳ ಜೊತೆಗೆ ಬಿಳಿ ಮಿಂಚುಳ್ಳಿಗಳು. ಸಂಗಾತಿಗಳೊಂದಿಗೆ ಬಿಡಾರ ಹೂಡಲು ಕೆರೆ ಅಂಚಿನಲ್ಲಿ ಸೂಕ್ತ ಜಾಗಕ್ಕಾಗಿ ಹುಡುಕಾಡುತ್ತವೆ. ಕೆಲ ಹಕ್ಕಿಗಳು ಆಕಾಶದಲ್ಲಿ ಹಾರಾಡುತ್ತಲೇ ನೀರಿನೊಳಕ್ಕೆ ಧುಮುಕಿ ಮೀನು ಬೇಟೆಯಾಡುತ್ತವೆ. ಹಕ್ಕಿಗಳ ಮೀನಿನ ಬೇಟೆ ದೃಶ್ಯಗಳನ್ನು ನೋಡುವುದು ಒಂದು ಸುಂದರ ಅನುಭವ.ಈ ಪಕ್ಷಿಧಾಮದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಹಕ್ಕಿಗಳು ಕಂಡು ಬಂದರೂ ಡಿಸೆಂಬರ್ ಅಂತ್ಯದವರೆಗೆ  ಸಂತಾನೋತ್ಪತ್ತಿ ಕಾರ್ಯದಲ್ಲಿ ನಿರತವಾಗಿರುತ್ತವೆ. ನೀರು ಕಾಗೆಗಳೆಂದು ಸ್ಥಳೀಯರು ಕರೆಯುವ ಹಕ್ಕಿಗಳು ಸಾಮಾನ್ಯ ಕಾಗೆಗಿಂತ ಸ್ವಲ್ಪ ದಪ್ಪಗಿವೆ. ನುರಿತ ಈಜುಪಟುಗಳಂತೆ ಈ ಹಕ್ಕಿಗಳು ಗುಡವಿಯ ಹಳ್ಳ- ಕೊಳ್ಳಗಳಲ್ಲಿ ಈಜಾಡುತ್ತವೆ.ಕುಂಡ ಬಕ (ಗ್ರೆಹೆರಾನ್), ಕೆಂಪು ಟಿಟ್ಟಿಬಾ (ರೆಡ್ ವ್ಯಾಟ್‌ಲೆಡ್ ಲ್ಯಾಫ್‌ವಿಂಗ್),  ಕೆನ್ನೇಲಿ ಚೌಗು ಕೋಳಿ (ಪರ್ಪಲ್ ಮಾರಂಕೆನ್), ಕಾಟನ್‌ಟೇಲ್ (ನೆಟ್ಟಾಪಸ್ ಕೋರೋಮಾಡೇಲಿಯೇಸಸ್), ನೀರು ಬಾತುಕೋಳಿ (ಪುಲಿಕಾಅಟ್ರಾ), ಗೋವಕ್ಕಿ (ಕ್ಯಾಟ್ಲ್ ಇಗ್ರೆಟ್), ನೀರು ಕಾಗೆ (ಕಾಮೋರೆಂಟ್), ಬೆಳ್ಳಕ್ಕಿ (ಮಿಡಿಯಮ್ ಇಗ್ರೆಟ್), ಭತ್ತದ ಹಕ್ಕಿ (ಪಾಂಡ ಹೆರಾನ್), ಕಲ್ಲು ಗೊರವ (ಸ್ಟೋನ್ ಪ್ಲಾವರ್), ದುಬುಕ (ಲಿಟಲ್ ಗ್ರೀಬ್) ಸೇರಿದಂತೆ ಹತ್ತಾರು ಬಗೆಯ ಜಲ ಪಕ್ಷಿಗಳು ಹಾಗೂ ನೆಲ ಪಕ್ಷಿಗಳು ಗುಡವಿ ಪಕ್ಷಿಧಾಮದಲ್ಲಿ ಸದಾ ಕಾಣಸಿಗುತ್ತವೆ.ಪ್ರತಿ ವರ್ಷ ಅಗಸ್ಟ್ ಕೊನೆ ವಾರದ ವೇಳೆಗೆ ಹಕ್ಕಿಗಳ ವಲಸೆ ಆರಂಭವಾಗುತ್ತದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪಕ್ಷಿಗಳು ಇಲ್ಲಿಗೆ ಬರುತ್ತವೆ ಎಂಬ ಅಂದಾಜಿದೆ. ಈ ಪಕ್ಷಿಧಾಮದಲ್ಲಿರುವ ಎತ್ತರದ ಮರಗಳಲ್ಲಿ ಮಂಗಟ್ಟೆ (ಹಾರ್ನ್‌ಬಿಲ್) ಹಕ್ಕಿಗಳಿವೆ. ಪ್ರಸಕ್ತ ವರ್ಷ ಹೆಚ್ಚಾಗಿ ಜಲ ಪಕ್ಷಿಗಳು ವಲಸೆ ಬಂದಿವೆ. ಚಮಚದ ಕೊಕ್ಕಿನ (ಸ್ಪೂನ್ ಬಿಲ್) ಹಕ್ಕಿಗಳು ತಂಡೋಪತಂಡವಾಗಿ ಬಂದಿವೆ. ಅವೆಲ್ಲವೂ ಕೆರೆಯ ಅಂಚಿನಲ್ಲಿ ಹಾಗೂ ನಡುಗಡ್ಡೆಯಲ್ಲಿರುವ ಗಿಡ ಮರಗಳಲ್ಲಿ ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿವೆ ಎನ್ನುತ್ತಾರೆ ಪಕ್ಷಿಧಾಮದ ಅರಣ್ಯ ಪಾಲಕ ಎಚ್.ರಾಮಪ್ಪ.ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಪಕ್ಷಿಧಾಮದ ವ್ಯಾಪ್ತಿಯಲ್ಲಿ ಹಕ್ಕಿಗಳ ನೆಮ್ಮದಿಗೆ ಭಂಗ ಉಂಟು ಮಾಡುವಂತಿಲ್ಲ.ಹಕ್ಕಿಗಳ ನೆಮ್ಮದಿ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಆದರೆ ಗುಡವಿ ಸುತ್ತಮುತ್ತ ಕೆಲ ಸ್ಥಳೀಯರು ಪಕ್ಷಿಗಳನ್ನು ಬೇಟೆಯಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತವೆ. ಇದು ನೋವಿನ ಸಂಗತಿ. ಅರಣ್ಯ ಇಲಾಖೆ ಅಂತಹ ಕಳ್ಳ ಬೇಟೆಗಾರರ ಮೇಲೆ ಕ್ರಮ ಕೈಗೊಳ್ಳಬೇಕಿದೆ.ಕರ್ನಾಟಕದಲ್ಲಿ ಆರು ಪಕ್ಷಿಧಾಮಗಳಿವೆ. ಆದರೆ ಗುಡವಿ ಪಕ್ಷಿಧಾಮ ಪ್ರವಾಸಿಗರಿಂದ ಸಾಕಷ್ಟು ದೂರ ಉಳಿದಿದೆ.ದಟ್ಟ ಕಾಡಿನ ಮಧ್ಯೆ ಇರುವ ಈ ಪಕ್ಷಿಧಾಮಕ್ಕೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಗುಡವಿ ಪಕ್ಷಿಧಾಮಕ್ಕೆ ಹೋಗಬೇಕೆಂದರೆ ಸಾಗರದಿಂದ ಸೊರಬ ಮಾರ್ಗವಾಗಿ ಸುಮಾರು ಐವತ್ತು ಕಿ.ಮೀ. ದೂರ ಕ್ರಮಿಸಬೇಕು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.