ಶುಕ್ರವಾರ, ಮಾರ್ಚ್ 5, 2021
27 °C

ಗುಡಿಸುತ್ತ...ಗುಡಿಸುತ್ತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಸುತ್ತ...ಗುಡಿಸುತ್ತ...

ಮನೇಲಿ ಕಿತ್ತು ತಿನ್ನುವ ಬಡತನ. ತಾಯಿ ಜೊತೆಗೆ ವಯಸ್ಸಿಗೆ ಬಂದ ತಂಗಿ, ತಮ್ಮ ನನ್ನನ್ನೇ ನೆಚ್ಚಿಕೊಂಡಿದ್ದಾರೆ. ಇವರು ಕೊಡುವ 3500 ರೂಪಾಯಿ ಇಂದಿನ ಜೀವನಕ್ಕೆ ಏನೇನೂ ಸಾಕಾಗೋಲ್ಲ. ಹಾಗಾಗಿ ಒಂದೆರಡು ಕಡೆ `ಮನೆಕೆಲಸಕ್ಕೆ~ ಹೋಗುತ್ತೇನೆ.ಏಳು ವರ್ಷಗಳಿಂದ ಇದೇ ಕೆಲಸದಲ್ಲೇ ಜೀವನ ನೂಕುತ್ತಿದ್ದೇವೆ. ಮೊದಲು ಮೂರು ಸಾವಿರ ಕೊಡುತ್ತಿದ್ದರು. ಐದು ತಿಂಗಳ ಹಿಂದಷ್ಟೆ 500 ರೂಪಾಯಿ ಜಾಸ್ತಿ ಮಾಡಿದ್ದಾರೆ.ಸೂರ್ಯ ಹುಟ್ಟೋಕೆ ಮುಂಚೆಯೇ ನಮ್ಮ ದಿನ ಆರಂಭವಾಗುತ್ತದೆ. ಶಾಂತಿನಗರ, ಡಬಲ್ ರೋಡ್‌ನಲ್ಲಿರುವ ಕಸವನ್ನೆಲ್ಲಾ ತೆಗೆದು ಒಂದೆಡೆ ಗುಡ್ಡೆ ಮಾಡ್ಬೇಕು. ಎಲ್ಲೆಂದರಲ್ಲಿ ಗುಡ್ಡೆ ಮಾಡೋ ಹಾಗಿಲ್ಲ. ಜಾಸ್ತಿ ಇದೆ ಅಂತ ಒಂದೆಡೆ ಪೇರಿಸಿದ್ರೆ, ಕಂಡವರ ಬೈಗಳಗಳಿಗೆ ಕಿವಿಯಾಗಬೇಕು. ಕಸ ತೆಗೆದುಕೊಂಡು ಹೋಗುವ ಗಾಡಿ ಬರುವವರೆಗೂ ಕಸದ ಮೂಟೆಯನ್ನು ಜೋಪಾನ ಮಾಡಬೇಕು. ನಾಯಿಗಳು ಬೆನ್ನು ಬೀಳದಂತೆ, ಹರಿಯದಂತೆ.ಅವನ್ನು ಹೊತ್ತೊಯ್ಯುವುದೇ ಒಂದು ಕೆಲಸ. ಗಾಡಿ ಬಂದಾದ ಮೇಲೆ ತುಂಬಬೇಕು.

ಸೂರ್ಯ ಬೆಳಗಿನ ತಿಂಡಿ ಇಲ್ಲದೆ, ಹೊಟ್ಟೆ ಚುರುಗುಟ್ಟುವವರೆಗೂ ಈ ಕೆಲಸ ಸಾಗುತ್ತದೆ.ಕೆಲಸ ಮುಗಿಯುವಷ್ಟರಲ್ಲಿ ಒಂಬತ್ತು ಒಂಬತ್ತೂವರೆ.  ಆಮೇಲೆ ಮನೆಗೋಡಬೇಕು. ಹೊಟ್ಟೆಗೊಂದಿಷ್ಟು ಹಿಟ್ಟು ಬೇಯಿಸಿದ್ದರೆ ತಿಂದು ಬರುತ್ತೇವೆ. ಇಲ್ಲದಿದ್ದರೆ ಬೇಯಿಸಿಕೊಂಡು ತಿಂದು ಬರಬೇಕು. ನಂತರ ಲಾಲ್‌ಬಾಗ್ ಸುತ್ತಮುತ್ತ ಕಸ ಗುಡಿಸಬೇಕು. ಒಮ್ಮಮ್ಮೆ ಶಿವಾಜಿನಗರದಲ್ಲಿರುವ ಆಫೀಸಿಗೆ ಹೋಗಬೇಕು. ಅಲ್ಲೂ ಸ್ವಚ್ಛಗೊಳಿಸುವ ಕೆಲಸ. ಇವೆರಡೂ ಮುಗಿಸಿ ಮನೆಗೆಲಸಕ್ಕೆ ಓಡುತ್ತೇನೆ. ಬರುವ ಆದಾಯವೂ ಅಷ್ಟಕ್ಕಷ್ಟೆ. ತಿಂಗಳಿಗೆ 700ರಿಂದ 1000 ರೂಪಾಯಿ.ನಮ್ಮೆಜಮಾನ್ರು ತೀರಿಹೋಗಿ ಬಹಳ ವರ್ಷಗಳಾಯಿತು. ಮನೇಲಿ ಎರಡನೇ ಮದುವೆ ಮಾಡಿದ್ರು. ಅದು ನನ್ನ ಪಾಲಿಗೆ ದೌರ್ಭಾಗ್ಯವಾಗಿ ಪರಿಣಮಿಸಿತು. ಆತನೂ ನನ್ನ ಬಿಟ್ಟು ಹೋದ.  ಬದುಕಿಗೆ ಆಧಾರವಾಗಿದ್ದ ಒಬ್ಬನೇ ಮಗ ಎದೆಯೆತ್ತರೆಕ್ಕೆ ಬೆಳೆಯುತ್ತಲೇ (16 ವರ್ಷ) ರಸ್ತೆ ಅಪಘಾತದಲ್ಲಿ ತೀರಿಹೋದ. ಅಲ್ಲಿಗೆ ನನ್ನ ಆಸೆ ಕನಸುಗಳು ಕಮರಿ ಹೋದವು. ಮಗ ತೀರಿಕೊಂಡು ಎರಡು ವರ್ಷವಾಯಿತು ಸರ್ಕಾರದಿಂದ ಬರಬೇಕಾಗಿದ್ದ ಹಣ ಮಾತ್ರ ಕೈಸೇರಲಿಲ್ಲ. ಇದಕ್ಕಾಗಿ ಸರ್ಕಾರಿ ಕಚೇರಿ ಮೆಟ್ಟಿಲು ತುಳಿದು ಸಾಕಾಯಿತು. ಚಪ್ಪಲಿ ಸವೆಯಿತು. ಚಪ್ಪಲಿ ಧರಿಸುವುದನ್ನೇ ಬಿಟ್ಟೆ.ಕಷ್ಟ ಇಷ್ಟಕ್ಕೇ ನಿಲ್ಲಲಿಲ್ಲ. ಅಪ್ಪ ಅಮ್ಮನ ಆಸರೆಯಾದರೂ ಸಿಗಬಹುದು ಎಂದುಕೊಂಡಿದ್ದೆ. ಆದರೆ ಅಪ್ಪ ಅಮ್ಮನನ್ನು ಬಿಟ್ಟು ಹೋದ. ನೊಂದ ತಾಯಿಗೆ ನಾನೇ ಆಸರೆಯಾಗಬೇಕಾಯಿತು. ತಾಯಿ ಮನೆಯ ಜವಬ್ದಾರಿಯೂ ನನ್ನ ಹೆಗಲ ಮೇಲಿದೆ.ಬರುವ ಸಂಬಳದಿಂದ ಬದುಕುವುದಾದರೂ ಹೇಗೆ? ಶಾಲೆಯ ಮೆಟ್ಟಿಲನ್ನೂ ಹತ್ತದ ನನಗೆ ಒಳ್ಳೆಯ ಕೆಲಸ ಯಾರು ಕೊಡುತ್ತಾರೆ. ಕಷ್ಟವೋ ನಷ್ಟವೋ ಇದೇ ಕೆಲಸ ಅನಿವಾರ್ಯವಾಗಿದೆ. ಈ ಮೊದಲು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ದಿನದ 12 ತಾಸೂ ನೀರಿನಲ್ಲೇ ಇರಬೇಕಾಗುತ್ತದೆ. ಇದರಿಂದ ದೇಹಸ್ಥಿತಿಯ ಮೇಲೆ ಪರಿಣಾಮ ಬೀರಿತು. ಹಾಗಾಗಿ ಈ ಕೆಲಸಕ್ಕೆ ಬಂದೆ. ಈ ಕೆಲಸವೂ ಅಷ್ಟು ಸುಲಭವೇನಲ್ಲ. ಧೂಳು-ಕಸ ತೆಗೆಯುವಾಗ ಕಣ್ಣು, ಮೂಗು, ಬಾಯಿಯಲ್ಲಿ ಕಸ ಸೇರಿಕೊಳ್ಳುತ್ತದೆ. ಇದುವರೆಗೂ ನಮಗೆ ಕೈಗವಸು,  ಮಾಸ್ಕ್, ಬೂಟು ಇದಾವುದೂ ನೋಡಲೂ ಸಿಕ್ಕಿಲ್ಲ.ಏಳು ವರ್ಷಗಳಿಂದ ಪಿ.ಎಫ್ ಇಲ್ಲ, ಇಎಸ್‌ಐ ಇಲ್ಲ. ಈಗಿನ ಜಮಾನದಲ್ಲಿ ಯಾವ ಸಾಮಾನು ಕೊಳ್ಳಲು ಹೋದರೂ ದುಬಾರಿಯೇ. ಸಾಲದೆಂಬಂತೆ 80 ಸಾವಿರ ರೂಪಾಯಿ ಸಾಲ ನನ್ನ ತಲೆಯ ಮೇಲೆ.ಸಂಜೆ ಐದಾದರೂ ನಮ್ಮ ಕೆಲಸ ಮುಗಿಯುವುದಿಲ್ಲ. ಊರನ್ನು ಸ್ವಚ್ಛಗೊಳಿಸುವ ನಾವು ನಮ್ಮ ಮನೆ ಸ್ವಚ್ಛಗೊಳಿಸಲೂ ಸಮಯವಿರುವುದಿಲ್ಲ. ಹಬ್ಬಗಳ ಸಮಯದಲ್ಲಿ ಇನ್ನೂ ಕಷ್ಟ. ಎಲ್ಲ ಹಬ್ಬಗಳಿಗೂ ರೆಜೆ ಸಿಗುವುದಿಲ್ಲ. ನಿಗದಿತ ದಿನಗಳಂದು ಮಾತ್ರ ರಜೆ. ಹಬ್ಬದ ದಿನ ಬೆಳಿಗ್ಗೆಯೇ ಕೆಲಸ ಪೂರ್ಣಗೊಳಿಸಿ ಹೋಗಬೇಕು. ಇನ್ನು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತಿತರ ದಿನಗಳ ಸಮಯದಲ್ಲಿ ಹಿಂದಿನ ದಿನದ ರಾತ್ರಿವರೆಗೂ ದುಡಿಸಿಕೊಳ್ಳುತ್ತಾರೆ. ಮತ್ತೆ ಮರುದಿನ ಬೆಳಿಗ್ಗೆಯೇ ಹಾಜರಿರಬೇಕು.ಎಲೆ ಉದುರುವ  ಸಮಯದಲ್ಲಿ  ಕಸ ಗುಡಿಸಲೂ ಆಗುವುದಿಲ್ಲ. ಒಮ್ಮಮ್ಮೆ ಮರಗಳೂ ನಮ್ಮ ಶತೃವೇನೋ ಎನ್ನಿಸುತ್ತದೆ. ರಾಜಕಾರಣಿ ಗೆದ್ದಾಗ ಅಥವಾ ಇನ್ನಾವುದೋ ಸಂಭ್ರಮಕ್ಕೆ ಪಟಾಕಿ ಸುಡುತ್ತಾರೆ. ಅದಷ್ಟೇ ಅವರಿಗೆ ಗೊತ್ತು. ಆ ಪಟಾಕಿಯಂತೇಯೇ ನಮ್ಮ ಬದುಕೂ ಸುಡುತ್ತಿದೆ ಎಂಬ ಅರಿವು ಅವರಿಗಿರುವುದೇ ಇಲ್ಲ. ಆ ಕಸವನ್ನ ತೆಗೆಯುವ ಕರ್ಮವೂ ನಮ್ಮದೆ.ಕಸ ಗುಡಿಸುವವರೆಂದು ನಮ್ಮನ್ನು ಕೀಳಾಗಿ ಕಾಣುವವರೇ ಹೆಚ್ಚು. ಕೈತಪ್ಪಿ ಚೂರು ಜೋರಾಗಿ ಚಿಮ್ಮಿದರೆ ವಾಕ್ ಹೋಗುವ ಮಂದಿ ಗೊಣಗಿ, ದುರುಗುಟ್ಟಿ, ಕೆಲವೊಮ್ಮೆ ಜೋರು ಮಾಡಿಯೂ ಹೋಗುತ್ತಾರೆ. ಇನ್ನೂ ಕೆಲವರು ಹತ್ತಿರ ಬಂದು ಮುಖಕ್ಕೆ ಮಂಗಳಾರತಿ ಎತ್ತುತ್ತಾರೆ. ಧೂಳಿನಿಂದಾಗಿ ಕೆಮ್ಮು ದಮ್ಮುಗಳಿಂದ ಬಳಲುತ್ತೇವೆ. ವೈದ್ಯಕೀಯ ಸಹಾಯವೇನೂ ದೊರೆಯುವುದಿಲ್ಲ. ಕೆಲಸದ ಭದ್ರತೆಯೂ ಅಷ್ಟಕ್ಕಷ್ಟೇ. ಗುತ್ತಿಗೆಯ ಆಧಾರದ ಮೇಲೆ ನಮ್ಮನ್ನೆಲ್ಲ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರರು ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ ಎಂದರೆ ಸುಮ್ಮನೆ ಮನೆಗೆ ಹೋಗಬೇಕು. ಇಂತಹ ಆತಂಕ ಪ್ರತಿನಿತ್ಯ ಕಾಡುತ್ತಿರುತ್ತದೆ.ವಾರಕ್ಕೊಮ್ಮ ರಜೆ. ಆದರೆ ನಮ್ಮ ತಂಡದಲ್ಲಿ ಯಾರಿಗಾದರೂ ಹುಷಾರು ತಪ್ಪಿದರೆ ನಮ್ಮ ರಜೆಯ ದಿನವೂ ನಾವು ಕೆಲಸ ಮಾಡಬೇಕು. ನಮ್ಮ ತಂಡದಲ್ಲಿ ಎಷ್ಟು ಜನರಿದ್ದಾರೋ ತಿಳಿಯದು. ನಾವು ಮೂರು ಜನ ಮಾತ್ರ  (ಉಳಿದ ಇಬ್ಬರು ಹೆಂಗಸರನ್ನು ತೋರಿಸಿ) ಶಾಂತಿನಗರ, ಡಬಲ್ ರೋಡ್, ರಿಚ್‌ಮಂಡ್ ಸರ್ಕಲ್, ಲಾಲ್‌ಬಾಗ್‌ಗಳ ಮುಖ್ಯರಸ್ತೆಗಳನ್ನು ಸ್ವಚ್ಛಮಾಡುತ್ತೇವೆ. ಬೇಸಿಗೆಯಲ್ಲಿ ಬೆಳಗಿನ ಕೆಲಸ ಆರಾಮೆನಿಸುತ್ತದೆ.ಆದರೆ ಮಧ್ಯಾಹ್ನದ ಬಿಸಿಲನ್ನು ತಡೆಯಲಾಗುವುದಿಲ್ಲ. ಚಳಿಗಾಲದಲ್ಲಿ ಮಧ್ಯಾಹ್ನ ಅರಾಮವೆನಿಸುತ್ತದೆ. ಬೆಳಿಗ್ಗೆ ಕೊರೆಯುವ ಚಳಿಯಲ್ಲಿ ಕೆಲಸ ಮಾಡುವುದೂ ಕಷ್ಟವೇ..!ಯಾವ ಕಾಲವಾದರೇನು ಮಾಡುವುದಂತೂ ತಪ್ಪುವುದಿಲ್ಲ ಎನ್ನುತ್ತ ಕಸ ಬಾಚಿಕೊಂಡರು; ಕಷ್ಟಗಳನ್ನೂ ಬಾಚಿಕೊಂಡಂತೆ! ಅವರಿಗೆ ತಮ್ಮ ಹೆಸರು ಏನೆಂದು ಹೇಳಿಕೊಳ್ಳಲೂ ಹಿಂಜರಿಕೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.