ಗುಡುಗಿದ ಹೈಕೋರ್ಟ್ ನಡುಗಿದ ಅಧಿಕಾರಿಗಳು

7

ಗುಡುಗಿದ ಹೈಕೋರ್ಟ್ ನಡುಗಿದ ಅಧಿಕಾರಿಗಳು

Published:
Updated:

ಬೆಂಗಳೂರು:  ಒಂದೆಡೆ ಬಂಧಿಸಲು ಸಿದ್ಧರಾಗಿರುವ ಪೊಲೀಸರು, ಇನ್ನೊಂದೆಡೆ ನ್ಯಾಯಮೂರ್ತಿಗಳ ಮಾತಿನ ಬಿರುಸು, ಇವುಗಳ ಮಧ್ಯೆ ಹವಾನಿಯಂತ್ರಿತ ಕೊಠಡಿಯಲ್ಲಿಯೂ ಮೂವರು ಉನ್ನತ ಅಧಿಕಾರಿಗಳು ಅಕ್ಷರಶಃ ಬೆವತುಹೋದ ಘಟನೆಗೆ ಶುಕ್ರವಾರ ಹೈಕೋರ್ಟ್ ಸಾಕ್ಷಿಯಾಯಿತು!ನ್ಯಾಯಮೂರ್ತಿಗಳ ಗುಡುಗಿನಂಥ ಮಾತಿಗೆ ನಡುಗಿ ಹೋದ ಅಧಿಕಾರಿಗಳೆಂದರೆ ಐಎಎಸ್ ಅಧಿಕಾರಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಬಿ.ಎಸ್.ರಾಮಪ್ರಸಾದ, ಐಎಫ್‌ಎಸ್ ಅಧಿಕಾರಿಗಳಾದ ಅರಣ್ಯ ಇಲಾಖೆ ಕಾರ್ಯದರ್ಶಿ ಕನ್ವರ್ ಪಾಲ್ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಎಂ.ಎಸ್.ಗೌಡರ್.ಕಲ್ಲು ಗಣಿಗಾರಿಕೆ ನಡೆಸಲು ಸುರಕ್ಷಿತ ವಲಯ ಸ್ಥಾಪನೆಗೆ ಹೈಕೋರ್ಟ್ ಆದೇಶ ಹೊರಡಿಸಿ 13 ವರ್ಷ ಸಂದಿದ್ದರೂ, ಅದನ್ನು ಸುಪ್ರೀಂಕೋರ್ಟ್ ಊರ್ಜಿತಗೊಳಿಸಿ ಎರಡೂವರೆ ವರ್ಷಗಳಾಗಿದ್ದರೂ ಮೌನ ತಾಳಿರುವ ಸರ್ಕಾರ ಹಾಗೂ ಅದರ ಅಧಿಕಾರಿಗಳಿಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೀರಿಳಿಸಿತು.‘ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುವುದನ್ನೇ ಪರಿಪಾಠ ಮಾಡಿಕೊಂಡು ಬಿಟ್ಟಿದ್ದೀರಿ. ಇದನ್ನು ಇನ್ನು ನಾವೆಂದೂ ಸಹಿಸುವುದಿಲ್ಲ. ನ್ಯಾಯಾಲಯದ ಆದೇಶಗಳು ಎಂದರೆ ಇಷ್ಟು ಕಡೆಗಣನೆ ಅಲ್ಲವೇ ನಿಮಗೆ? ನಿಮ್ಮಂಥವರಿಗೆ ಬುದ್ಧಿ ಕಲಿಸದ ಹೊರತು ಮಲಗಿಕೊಂಡೇ ಇರುತ್ತೀರಿ. ಇದರಿಂದ ನಾವೇ ಎಚ್ಚರಿಸಬೇಕಾಗುತ್ತದೆ. ಇಷ್ಟು ಗಂಭೀರ ವಿಷಯವನ್ನು ಲಘುವಾಗಿ ಪರಿಗಣಿಸುತ್ತೀರಲ್ಲ. ಈ ರಾಜ್ಯವನ್ನು ಎತ್ತ ಕೊಂಡೊಯ್ಯುತ್ತೀರೋ ನಮಗಂತೂ ಗೊತ್ತಾಗುತ್ತಿಲ್ಲ. ಹೀಗೇ ಇದ್ದರೆ ಪರಿಸ್ಥಿತಿ ಸರಿಹೋಗುವುದಿಲ್ಲ. ಕೋರ್ಟ್‌ನಿಂದ ಸೀದಾ ಜೈಲಿಗೆ ಹಾಕಿದರೆ ಆಗ ಕೋರ್ಟ್ ಆದೇಶದ ಬೆಲೆ ಗೊತ್ತಾಗುತ್ತದೆ’ ಎಂದು ಪೀಠ ಕಿಡಿ ಕಾರಿತು.‘ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಅಧಿಕಾರಿಗಳ ಜೊತೆ ಚರ್ಚಿಸಿ ಅರ್ಧ ಗಂಟೆಯಲ್ಲಿ ಹೇಳಬೇಕು’ ಎಂದು ಸರ್ಕಾರದ ಪರ ವಕೀಲರಿಗೆ ಪೀಠ ಸೂಚಿಸಿತು.

ಎ.ಜಿ. ಹಾಜರು: ಅರ್ಧ ಗಂಟೆಯ ನಂತರ ಪ್ರಕರಣ ವಿಚಾರಣೆ ಬಂದಾಗ, ಅಡ್ವೊಕೇಟ್ ಜನರಲ್ ಅಶೋಕ ಹಾರ್ನಹಳ್ಳಿ ಹಾಜರಿದ್ದರು.ಈ ಮಧ್ಯೆ, ತಾವು ಇಲ್ಲಿಯವರೆಗೆ ಕೆಲವೊಂದು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಸಮರ್ಥಿಸಿಕೊಳ್ಳಲು ಅಧಿಕಾರಿಗಳು ಮುಂದಾದರು. ಸ್ಥಳ ಗುರುತು ಮಾಡಿರುವುದಕ್ಕೆ ಸಂಬಂಧಿಸಿದಂತೆ ಕೆಲವು ಬಣ್ಣಗಳು ಉಳ್ಳ ನಕ್ಷೆಯನ್ನು ಅವರು ಪೀಠದ ಮುಂದಿಟ್ಟರು. ಅವರು ಅಸಮಂಜಸ ಹೇಳಿಕೆ ನೀಡುತ್ತಿರುವುದನ್ನು ಕಂಡು ಮತ್ತಷ್ಟು ಸಿಟ್ಟಿಗೆದ್ದ ನ್ಯಾ.ಕೇಹರ್, ಕೂಡಲೇ ಪೊಲೀಸರನ್ನು ಕರೆಸಿದರು. ‘ಕೋರ್ಟ್ ಆದೇಶ ಪಾಲನೆ ಮಾಡಿ ಎಂದರೆ ಹಸಿರು, ಕೆಂಪು, ಹಳದಿ ಬಣ್ಣ ನಮ್ಮ ಮುಂದಿಟ್ಟು ದಾರಿ ತಪ್ಪಿಸುತ್ತೀರಾ?’ ಎಂದ ನ್ಯಾಯಮೂರ್ತಿಗಳು, ಪೊಲೀಸರನ್ನು ವಿಚಾರಣೆ ನಡೆಯುವ ಸ್ಥಳದಲ್ಲಿಯೇ ನಿಲ್ಲಿಸಿಕೊಂಡರು.ಹಾರ್ನಹಳ್ಳಿ ಅವರು ಕೋರ್ಟ್ ಆದೇಶ ಪಾಲನೆಗೆ ತಮಗೆ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂದು ಅಧಿಕಾರಿಗಳ ಜೊತೆ ಚರ್ಚಿಸಿದ ನಂತರ ನುಡಿದರು. ಆದರೆ ನ್ಯಾಯಮೂರ್ತಿಗಳು ಅದನ್ನು ಸುತರಾಂ ಒಪ್ಪಲಿಲ್ಲ. ನಂತರ ಹಾರ್ನಹಳ್ಳಿ ಅವರು ಕೋರ್ಟ್ ನೀಡುವ ಗಡುವಿಗೆ ನಾವು ಬದ್ಧರಾಗಿರುವುದಾಗಿ ನುಡಿದಾಗ, ಕೊನೆಗೂ ಪೀಠ ಎರಡು ವಾರಗಳ ಅಂತಿಮ ಗಡುವು ನೀಡಿತು.ಏನಿದು ವಿವಾದ?: ಕಲ್ಲುಗಣಿಗಾರಿಕೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ದೂರಿ 1998ರಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು. ರಾಜ್ಯದಾದ್ಯಂತ ಕಲ್ಲುಗಣಿಗಾರಿಕೆ ನಡೆಸುವ ಸ್ಥಳಗಳನ್ನು ಗುರುತಿಸಿ, ಸುರಕ್ಷಿತ ವಲಯ ಸ್ಥಾಪನೆ ಮಾಡುವಂತೆ ನಿರ್ದೇಶಿಸಿದ್ದ ಅದು, ಈ ಸಂಬಂಧ ಕೆಲವೊಂದು ಮಾರ್ಗಸೂಚಿಗಳನ್ನು ಅಳವಡಿಸಿತ್ತು.ಮಾರ್ಗಸೂಚಿ ಅನ್ವಯ ಆರು ತಿಂಗಳ ಒಳಗೆ ಸುರಕ್ಷಿತ ವಲಯ ಗುರುತಿಸಬೇಕು, ಎರಡು ವಲಯಗಳ ಕನಿಷ್ಠ ಅಂತರ 50 ಕಿ.ಮೀ. ಇರಬೇಕು, ರಾಷ್ಟ್ರೀಯ ಹೆದ್ದಾರಿ, ಶಾಲಾ-ಕಾಲೇಜುಗಳಿಂದ ಒಂದೂವರೆ ಕಿ.ಮೀ ದೂರ ಇರಬೇಕು, ಜಿಲ್ಲಾ ಕೇಂದ್ರ ಸ್ಥಳದಿಂದ ನಾಲ್ಕು ಹಾಗೂ ತಾಲ್ಲೂಕು ಕೇಂದ್ರ ಸ್ಥಳದಿಂದ ಎರಡು ಕಿ.ಮೀ. ಅಂತರ ಇರಬೇಕು ಇತ್ಯಾದಿಯಾಗಿ ತಿಳಿಸಲಾಗಿದೆ.ಆದರೆ ಸರ್ಕಾರ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. 2009ರಲ್ಲಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್, ಒಂದು ವರ್ಷದ ಒಳಗೆ ಆದೇಶ ಪಾಲನೆಗೆ ನಿರ್ದೇಶಿಸಿತ್ತು. ಆದರೆ ಇದುವರೆಗೆ ಸುರಕ್ಷಿತ ವಲಯ ಸ್ಥಾಪನೆ ಆಗದ ಕಾರಣ, ತಮಗೆ ಕಲ್ಲುಗಣಿ ನಡೆಸಲು ಅನುಮತಿ ನೀಡಲಾಗುತ್ತಿಲ್ಲ ಎಂದು ದೂರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ‘ಹುನಗುಂದ ಹೊಸಪೇಟೆ ಹೈವೇಸ್ ಪ್ರೈವೇಟ್ ಲಿಮಿಟೆಡ್’ ಸೇರಿದಂತೆ ಹಲವು ಗಣಿ ಕಂಪೆನಿಗಳು ಈಗ ಕೋರ್ಟ್ ಮೊರೆ ಹೋಗಿವೆ.

ಎರಡು ವಾರಗಳ ಗಡುವು

ಕಲ್ಲುಗಣಿಗಾರಿಕೆಗೆ ಸಂಬಂಧಿಸಿದಂತೆ ಸುರಕ್ಷಿತ ವಲಯ ಆರಂಭಕ್ಕೆ ಸ್ಥಳ ಗುರುತಿಸಿ ಅದನ್ನು ಅಂತಿಮಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್ ಎರಡು ವಾರಗಳ ಗಡುವು ನೀಡಿದೆ. ಅಂತೆಯೇ ಸುರಕ್ಷಿತ ವಲಯವನ್ನು ಹೊರತುಪಡಿಸಿ ಇರುವ ಕಲ್ಲುಗಣಿಗಾರಿಕೆ ಘಟಕಗಳನ್ನು ಈ ಅವಧಿಯಲ್ಲಿ ಮುಚ್ಚುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry