ಗುಡುಗು ಸಹಿತ ಭಾರೀ ಮಳೆ

7

ಗುಡುಗು ಸಹಿತ ಭಾರೀ ಮಳೆ

Published:
Updated:

ಭದ್ರಾವತಿ:  ಏಕಾಏಕಿ ಗುಡುಗು, ಸಿಡಿಲಿನ ಆರ್ಭಟದ ನಡುವೆ ಸುರಿದ ಭಾರೀ ಮಳೆ ಸುಮಾರು ಎರಡು ಗಂಟೆಗಳ ಕಾಲ ಜನಜೀವನ ಅಸ್ತವ್ಯಸ್ತ ಮಾಡಿತು.ಮಧ್ಯಾಹ್ನ ರಣಬಿಸಿಲಿನ ತಾಪ ಎದುರಿಸಿದ್ದ ಜನರಿಗೆ, ಸಂಜೆ 4.45ರ ಸುಮಾರಿಗೆ ಆಕಾಶ ಆವರಿಸಿದ ಮೋಡಗಳು ಮಳೆಯ ಸೂಚನೆ ನೀಡಿದವು.ತಣ್ಣಗೆ ಬೀಸಿದ ಗಾಳಿ, ಆಕಾಶದಲ್ಲಿನ ಗುಡುಗಿನ ಅಬ್ಬರ, ಮಿಂಚಿನ ಬೆಳಕಿಗೆ ಸೀಮಿತ ಎಂಬ ಭಾವನೆ ಮೂಡಿಸಿತು. ಆದರೆ, ಕೆಲವೇ ನಿಮಿಷದಲ್ಲಿ ಆರಂಭವಾದ ಧೋ... ಎಂಬ ಭಾರೀ ಮಳೆ ಬೆಚ್ಚಿ ಬೀಳಿಸುವ ಅಬ್ಬರದಲಿ ಭುವಿಯನ್ನು ಅಪ್ಪಳಿಸುತ್ತಿತ್ತು.ಸುಮಾರು ಎರಡು ಗಂಟೆ ಕಾಲ ಸುರಿದ ಮಳೆಯಿಂದ ರಸ್ತೆ, ಚರಂಡಿಗಳು ತುಂಬಿ ಹರಿದವು. ರಸ್ತೆ ಬದಿ ಆಶ್ರಯ ಪಡೆದಿದ್ದ ಮಂದಿ ಸ್ಥಳ ಬಿಟ್ಟು ಕದಲಲು ಸಾಧ್ಯವಾಗದೇ ಪರಿತಪಿಸಿದರು.ಸಂತೆಯಲ್ಲಿದ್ದ ವ್ಯಾಪಾರಿಗಳು ಮಳೆಯ ರಭಸಕ್ಕೆ ತತ್ತರಿಸಿದರು. ಅವರು ಹಾಕಿಕೊಂಡಿದ್ದ ತರಕಾರಿ ರಾಶಿಯಲ್ಲಿ ಅನೇಕವು ಕೊಚ್ಚಿಕೊಂಡು ಹೋದವು. ದಿಕ್ಕು ಕಾಣದ ವ್ಯಾಪಾರಿಗಳು ಸಿಕ್ಕಷ್ಟು ಬೆಲೆಗೆ ಅದನ್ನು ಮಾರಾಟ ಮಾಡುವ ತರಾತುರಿಯಲ್ಲಿದ್ದರು.ಒಟ್ಟಿನಲ್ಲಿ ಹಲವು ದಿನದ ನಂತರ ಸುರಿದ ಭಾರೀ ಮಳೆ ಬಹು ಆರ್ಭಟದ ನಡುವೆ ಅಬ್ಬರಿಸಿ, ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದ್ದಲ್ಲದೆ, ಸಂತೆ ವ್ಯಾಪಾರಿಗಳ ನೆಮ್ಮದಿಗೆ ಭಂಗ ತಂದಿದ್ದು ಮಾತ್ರ ಸತ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry