ಗುರುವಾರ , ನವೆಂಬರ್ 21, 2019
23 °C

ಗುಡುಗು ಸಹಿತ ಮಳೆ: ತಣಿದ ಇಳೆ

Published:
Updated:

ಹುಬ್ಬಳ್ಳಿ: ಅವಳಿ ನಗರ ಹಾಗೂ ಗುಡಿಗೇರಿ ಸುತ್ತಮುತ್ತ ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿಯಿತು. ಮಳೆಯ ಆರ್ಭಟಕ್ಕೆ ಕೆಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.ರಾತ್ರಿ 11 ಗಂಟೆ ಸುಮಾರಿಗೆ ಆರಂಭಗೊಂಡ ಜಿಟಿ ಜಿಟಿ ಮಳೆ ಅರ್ಧ ಗಂಟೆಯ ಬಳಿಕ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಜೋರಾಗಿ ಸುರಿಯಿತು. ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನರಿಗೆ ತಂಪೆರೆಯಿತು. ಅಲ್ಲದೆ ಇಡೀ ವಾತಾವರಣವನ್ನು ತಣಿಸಿತು.ನವನಗರ, ಹಳೇಹುಬ್ಬಳ್ಳಿ, ಹೊಸೂರು, ಹಳೇ ಬಸ್ ನಿಲ್ದಾಣ, ಕುಸುಗಲ್ ರಸ್ತೆ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಪರಿಣಾಮ ರಸ್ತೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಎಲ್ಲ ಒಳಚರಂಡಿಗಳೂ ಮಳೆ ನೀರಿನಿಂದ ತುಂಬಿಕೊಂಡು ರಸ್ತೆಯುದ್ದಕ್ಕೂ ಹರಿಯಿತು. ಕೆಲ ಹೊತ್ತು ಆರ್ಭಟಿಸಿದ ಬಳಿಕ ಮಳೆ ನಿಂತರೂ ಚರಂಡಿಯ ಹೊಲಸು, ಪ್ಲಾಸ್ಟಿಕ್ ಹಾಗೂ ಕಸಕಡ್ಡಿ ರಸ್ತೆ ಮೇಲೆ ನಿಂತುಕೊಂಡು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿತು.ಹಳೆ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೀರು ಹರಿದು ಹೋಗುವವರೆಗೆ ವಾಹನಗಳು ಅತ್ತಿತ್ತ ಅಲುಗಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದ್ದಕ್ಕಿದ್ದಂತೆ ಮಳೆ ಸುರಿದಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ತಡರಾತ್ರಿ ರಸ್ತೆ ಬದಿಯಲ್ಲಿ ಇಡ್ಲಿ, ಚಹಾ ಮಾರಾಟ ಅಂಗಡಿಗಳಿಗೂ ಸಮಸ್ಯೆಯಾಯಿತು.ಗುಡುಗು, ಸಿಡಿಲು, ಗಾಳಿಯ ಅಬ್ಬರಕ್ಕೆ ವಿದ್ಯುತ್ ಸಂಪರ್ಕವೂ ಕಡಿತಗೊಂಡ ಪರಿಣಾಮ ನಗರದ ಅನೇಕ ಭಾಗ ಕತ್ತಲೆಯಲ್ಲೇ ರಾತ್ರಿ ಕಳೆಯ ಬೇಕಾಯಿತು. ಗಾಳಿ ರಭಸಕ್ಕೆ ರಸ್ತೆ ಬದಿಯಲ್ಲಿ ಮರಗಳ ಒಣಗಿದ ಕೊಂಬೆಗಳು ತುಂಡಾಗಿ ಬಿದ್ದವು. ಆದರೆ ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.ಗುಡಗೇರಿ: ಗುಡಗೇರಿ, ಸಂಶಿ, ಕುಂದಗೋಳ, ಹರ್ಲಾಪುರ, ರಟ್ಟಿಗೇರಿ, ಗೌಡಗೇರಿ ಸುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆ ಒಂದು ಗಂಟೆ ಕಾಲ ಗುಡುಗು, ಸಿಡಿಲು, ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.ಸಂಜೆ 6ರಿಂದ 7ಗಂಟೆಯವರೆಗೆ ಮಳೆಯಾಗಿದೆ. ಭಾರೀ ಗಾಳಿಯಿಂದ ವಿದ್ಯುತ್ ಕಂಬಗಳು ಉರುಳಿಬಿದ್ದ ಪರಿಣಾಮ ಗುಡಗೇರಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.ಮಳೆಯಿಂದ ಭೂಮಿ ಹಸನಾಗಿದ್ದು, ಬಿತ್ತನೆಗೆ ಅನುಕೂಲವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)