ಭಾನುವಾರ, ಜೂನ್ 13, 2021
26 °C

ಗುಡ್ಡದಮಲ್ಲಾಪುರ ಜಾತ್ರೆ ಇಂದಿನಿಂದ

ಪ್ರಜಾವಾಣಿ ವಾರ್ತೆ/ –ವೀರೇಶ ಕೊಪ್ಪದ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ತಾಲ್ಲೂಕಿನ ಸುಕ್ಷೇತ್ರ ಗುಡ್ಡದ ಮಲ್ಲಾಪುರದ ಮೂಕಪ್ಪ ಶಿವಯೋಗಿಗಳ ಜಾತ್ರಾ ಮಹೋತ್ಸವ ಇದೇ 6 ರಂದು ನಡೆಯಲಿದೆ. ಅಂದು ಮುಂಜಾನೆ 8ಕ್ಕೆ ಮೂಕಪ್ಪ ಸ್ವಾಮಿಗಳ ಉತ್ಸವ, ಗುಗ್ಗಳ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗಲಿದೆ.ಸಂಜೆ 6ಕ್ಕೆ ಮರಿಕಲ್ಯಾಣ ಭಾಗದ ೬0ನೇ ಶಿವಾನುಭವ ಸಮ್ಮೇಳನ ಹಾಗೂ ಹಿರಿಯ ಮೂಕಪ್ಪ ಸ್ವಾಮಿಗಳ ೪ನೇ ವರ್ಷದ ತುಲಾಭಾರ ಕಾರ್ಯಕ್ರಮ ನಡೆಯಲಿದೆ. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೂಡಲದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ದಾಸೋಹಮಠದ ಮೃತ್ಯುಂಜಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.ಹಿನ್ನೆಲೆ : ತಾಲ್ಲೂಕಿನ ಗುಡ್ಡದಮಲ್ಲಾಪುರ ಗ್ರಾಮದಲ್ಲಿ  ಗುರುಹುಚ್ಚೇಶ್ವರರು ಸ್ಥಾಪಿಸಿದ ಮೂಕಪ್ಪ ಶಿವಯೋಗಿಗಳ ಮಹಾಸಂಸ್ಥಾನದಲ್ಲಿ  ನಿತ್ಯ ದಾಸೋಹ ಇಂದಿಗೂ ನಡೆದುಕೊಂಡು ಬಂದಿರುವುದು ಒಂದು ವಿಶೇಷ. ಅವಿಭಜಿತ ನೆರೆಯ ಆಂಧ್ರದ ರಾಚೋಟಿ ಗ್ರಾಮದ ಮಲ್ಲಯ್ಯ ದಂಪತಿಗಳ ಪುತ್ರನಾದ ‘ಅಜ್ಜಯ್ಯಸ್ವಾಮಿ’  ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತರಾಗಿದ್ದರು.ಅವರು ೮ನೇ ವಯಸ್ಸಿನಲ್ಲಿಯೇ ವೀರಶೈವ ಧರ್ಮದ ದೀಕ್ಷೆ ಪಡೆದು ಮಲ್ಲಿಕಾರ್ಜುನ ಶಿವಾಚಾರ್ಯರರ ಬಳಿ ವಿದ್ಯಾಭ್ಯಾಸ ಪೂರೈಸಿದರು. ಬಳಿಕ ಧರ್ಮಜಾಗೃತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ದೇಶ ಸಂಚಾರ ಕೈಕೊಂಡು ಕಾರವಾರ, ಹಾವೇರಿ, ಶಿವಮೊಗ್ಗ ಜಿಲ್ಲೆಗಳ ಗುಹೆಗಳಲ್ಲಿ ತಪಸ್ಸು ಮಾಡಿದರು. ಕೊನೆಗೆ ಗುಡ್ಡದ ಮಲ್ಲಾಪುರ ಗ್ರಾಮದ ಗುಹೆಯಲ್ಲಿ ನೆಲೆ ನಿಂತು ‘ಮಹಾ ತಪಸ್ವಿ ಗಳಾದರು. ಅಲ್ಲಿ ಜನ ಸಾಮಾನ್ಯರ ಸಂಕಷ ್ಟ ಗಳನ್ನು ಪರಿಹರಿಸುತ್ತಾ ಪೂಜಾ ಅನುಷ್ಠಾನ ಕೈಕೊಂಡರು.ಪರಶಿವನ ಹಾಗೆ ತಮ್ಮೆರಡು ‘ಕಂಟಲೆ ಬಸವನ‘ ಮೇಲೇರಿ ಸುತ್ತಲಿನ ಗ್ರಾಮಗಳಿಗೆ ಸಂಚರಿಸಿ ಭಕ್ತರು ನೀಡಿದ ಕಾಣಿಕೆಯಿಂದ ಮಠದಲ್ಲಿ ಮಹಾ ದಾಸೋಹವನ್ನು ಆರಂಭಿಸಿದರು. ಮಹಾ ತಪಸ್ವಿ ಅಜ್ಜಯ್ಯಸ್ವಾಮಿ ನಂತರ ಹುಚ್ಚೇಶ್ವರ ಶಿವಯೋಗಿಗಳಾಗಿ ಜೀವಂತ ಸಮಾಧಿಯಾದರು. ಇದಕ್ಕಿಂತ ಪೂರ್ವದಲ್ಲಿ ತಮ್ಮೊಂದಿಗಿದ್ದ ಕಂಟಲೆ ಬಸವನಿಗೆ ಕರ್ಣದಲ್ಲಿ ಶಟಸ್ಥಲ ಬ್ರಹ್ಮೋಪದೇಶ ಹಾಗೂ ದೀಕ್ಷಾ ಸಂಸ್ಕಾರವನ್ನು ನೀಡಿ ತಮ್ಮ ಉತ್ತರಾಧಿಕಾರಿತ್ವದ ಧರ್ಮದಂಡವನ್ನು ನೀಡಿದರು. ಹೀಗಾಗಿ ಜಗತ್ತಿನ ಯಾವುದೇ ಮೂಲೆಯಲ್ಲಿ ಕಂಡರಿಯದಂತ ಒಂದು ವಿಶಿಷ್ಟ ಪರಂಪರೆಗೆ ನಾಂದಿ ಹಾಡಿದಂತಾಗಿದೆ.ಅಂದಿನಿಂದಲೂ “ವೃಷಭ ಮೂರ್ತಿ ಗಳಾದ ಮೂಕಪ್ಪ ಶಿವಯೋಗಿಗಳು” ಶ್ರೀ ಕ್ಷೇತ್ರದ ಅಧಿಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶತಮಾನ ಗಳಿಂದಲೂ ಭಿಕ್ಷೆಯ ಜೋಳಿಗೆಯಿಂದ ಸಂಗ್ರಹಿಸಿದ ಧಾನ್ಯಗಳಲ್ಲಿ ನಿತ್ಯದಾಸೋಹ ನಡೆಯುತ್ತಿದೆ. ಭಕ್ತರ ಇಷ್ಟಾರ್ಥ ನೆರವೇರಿಸುತ್ತ ಬಂದಿರುವ ಮೂಕಪ್ಪ ಶಿವಯೋಗಿಗಳು ನಾಡಿನಾದ್ಯಂತ ಭಕ್ತರ ಸಮೂಹವನ್ನೇ ಹೊಂದಿದ್ದಾರೆ.“ಮೂಕಪ್ಪ ಶಿವಯೋಗಿ”ಗಳು ಯಾವುದೇ ಧರ್ಮ ಹಾಗೂ  ಜಾತಿಯನ್ನದೆ ಗೋಗರ್ಭದಲ್ಲಿ ಜನ್ಮತಾಳಿದ ಕರು ತಾಯಿಯ ಹಾಲು ಸೇವಿಸದೆ ಇರುತ್ತದೆ ಎನ್ನಲಾಗಿದೆ. ಪೂಜಾ ವಿಧಿ ವಿಧಾನಗಳ ಬಳಿಕ ಭಕ್ತರ ಸಮ್ಮುಖದಲ್ಲಿ ತಾಯಿಯ ಹಾಲನ್ನು ಸೇವಿಸುವ ಕರುವನ್ನು ಮೂಕಪ್ಪ ಸ್ವಾಮಿಗಳೆಂದು ನಂಬಲಾಗಿದೆ. ಇಂತಹ ವೃಷಭ ರೂಪಿ ಮೂಕಪ್ಪ ಸ್ವಾಮಿಗಳನ್ನು ಮಠಕ್ಕೆ ಕರೆತಂದು ಪಟ್ಟಾಭಿಷೇಕ ಮಾಡಿ ಅಧಿಕಾರವನ್ನು ನೀಡುವ ಪರಂಪರೆ ಈಗಲೂ ನಡೆದುಕೊಂಡು ಬಂದಿದೆ.ದಿನನಿತ್ಯ ಮೂಕಪ್ಪ ಶಿವಯೋಗಿಗಳು ತ್ರಿಕಾಲ ಪೂಜೆಯ ಬಳಿಕ ಪ್ರಸಾದ ಸ್ವೀಕರಿಸುವುದು ವಾಡಿಕೆ. ಇಂತಹ ಪವಾಡ ಹೊಂದಿರುವ ಬ್ಯಾಡಗಿ ತಾಲ್ಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.