ಶುಕ್ರವಾರ, ಮೇ 7, 2021
24 °C

ಗುಡ್ಡದ ಮಲ್ಲಾಪುರದಲ್ಲಿ `ಟ್ರೀಪಾರ್ಕ್'

ಪ್ರಜಾವಾಣಿ ವಾರ್ತೆ/ ಬಸವರಾಜ್ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಗಡಿ ಪಹರೆ ಲೆಕ್ಕಿಸದೆ ದೇಶ-ವಿದೇಶದಿಂದ ಪ್ರತಿ ವರ್ಷ ಆಹಾರ ಅರಸಿ ಆಲಮಟ್ಟಿ ಜಲಾಶಯದ ಹಿನ್ನೀರ ಪ್ರದೇಶಕ್ಕೆ ವಲಸೆ ಬಂದು, ಸಂತಾನೋತ್ಪತ್ತಿ ಮಾಡಿ ಹಾರಿಹೋಗುವ ಬಾನಾಡಿಗಳಿಗೆ ಶಾಶ್ವತ ನೆಲೆ ಕಲ್ಪಿಸಲು ಬಾಗಲಕೋಟೆ ನಗರ ಸಮೀಪದ ಗುಡ್ಡದ ಮಲ್ಲಾಪುರದಲ್ಲಿ `ಟ್ರೀಪಾರ್ಕ್' ನಿರ್ಮಿಸಲು ಅರಣ್ಯ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ.ಗುಡ್ಡದ ಮಲ್ಲಾಪುರದಲ್ಲಿ ಸಸ್ಯೋದ್ಯಾನ (ಟ್ರೀ ಪಾರ್ಕ್) ನಿರ್ಮಾಣ ಮಾಡುವ ಮೂಲಕ ಬಾನಾಡಿಗಳಿಗೆ ತಂಗಲು ವ್ಯವಸ್ಥೆ ಕಲ್ಪಿಸುವ ಜೊತೆಗೆ ಭವಿಷ್ಯದಲ್ಲಿ ಪಕ್ಷಿಧಾಮವೊಂದನ್ನು ನಿರ್ಮಿಸುವ ಅರಣ್ಯ ಇಲಾಖೆಯ ಪ್ರಸ್ತಾವಕ್ಕೆ ಸರ್ಕಾರದಿಂದ ಈಗಾಗಲೇ ಹಸಿರು ನಿಶಾನೆ ಸಿಕ್ಕಿದೆ.`ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಆವೃತವಾಗಿರುವ ಗುಡ್ಡದ ಮಲ್ಲಾಪುರದ 100 ಹೆಕ್ಟೇರ್ ಪ್ರದೇಶದಲ್ಲಿ ಬಗೆಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿ, ದೇಶ-ವಿದೇಶದಿಂದ ಆಗಮಿಸುವ ಪಕ್ಷಿ ಸಂಕುಲಕ್ಕೆ ಆಶ್ರಯ ಒದಗಿಸುವ ಜೊತೆಗೆ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಕಲ್ಪಸಲು ಟ್ರೀ ಪಾರ್ಕ್ ನಿರ್ಮಾಣ ಮಾಡಲು ಇಲಾಖೆಗೆ ಸರ್ಕಾರ ್ಙ50 ಲಕ್ಷ ಅನುದಾನ ಮಂಜೂರು ಮಾಡಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ನಾಯಕ ಗುರುವಾರ `ಪ್ರಜಾವಾಣಿ'ಗೆ ತಿಳಿಸಿದರು.`ಟ್ರೀ ಪಾರ್ಕ್ ನಿರ್ಮಾಣಕ್ಕೆ ಮುಂಬರುವ ಅಕ್ಟೋಬರ್‌ನಿಂದ ಸಿದ್ಧತೆ ಆರಂಭಿಸಲಾಗುವುದು, ಪ್ರಾರಂಭದಲ್ಲಿ ಗುಡ್ಡದ ಮಲ್ಲಾಪುರದ ನಿಗದಿತ ಪ್ರದೇಶದ ಸುತ್ತ ಬೇಲಿ ನಿರ್ಮಾಣ ಮತ್ತು ವಿವಿಧ ಹಣ್ಣಿನ ಗಿಡಗಳನ್ನು ನೆಡಲು ಗುಂಡಿ ತೋಡಿಸಿ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸಲಾಗುವುದು' ಎಂದರು.ಬಾಗಲಕೋಟೆ ಅರಣ್ಯ ವಲಯದ ಎಸಿಎಫ್ ಆನಂದ ಹುದ್ದಾರ `ಪತ್ರಿಕೆ'ಯೊಂದಿಗೆ ಮಾತನಾಡಿ, `ಉದ್ದೇಶಿತ ಟ್ರೀ ಪಾರ್ಕ್ ಆವರಣದಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರು, ಸಾರ್ವಜನಿಕರಿಗೆ ಕೂರಲು ಆಸನ, ಮಕ್ಕಳು ಆಡಲು ವ್ಯವಸ್ಥೆ, ಟ್ರೆಕ್ಕಿಂಗ್ ಪಾಥ್, ಶೌಚಾಲಯ, ವೀಕ್ಷಣಾ ಗೋಪುರ, ಮುಖ್ಯಪ್ರವೇಶ ದ್ವಾರ, ಟಿಕೆಟ್ ಕೌಂಟರ್ ನಿರ್ಮಾಣ, ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಅಂದುಕೊಂಡಂತೆ ನಿರ್ಮಾಣವಾದರೆ ಗುಡ್ಡದ ಮಲ್ಲಾಪುರ ಪ್ರಸಿದ್ಧ ಪಕ್ಷಿಧಾಮ, ಪ್ರವಾಸಿ ತಾಣವಾಗಿ ಮಾರ್ಪಾಡಾಗಲಿದೆ' ಎಂದು ತಿಳಿಸಿದರು.ವಿಹಂಗಮ ದೃಶ್ಯ

ಬಾಗಲಕೋಟೆ ನಗರದಿಂದ ಮೂರು ಕಿ.ಮೀ. ದೂರದಲ್ಲಿರುವ ಗುಡ್ಡದ ಮಲ್ಲಾಪುರ ಪ್ರಾಕೃತಿಕ ಸೌಂದರ್ಯದಿಂದ ಕಣ್ಮನ ಸೆಳೆಯುತ್ತಿದೆ.

ಗುಡ್ಡದ ಮಲ್ಲಾಪುರದ ಸುತ್ತಲೂ ವಿಸ್ತಾರವಾಗಿ ಹರಡಿಕೊಂಡಿರುವ ಆಲಮಟ್ಟಿ ಜಲಾಶಯದ ದರ್ಶನವಾಗುತ್ತದೆ. ಪಕ್ಷಿಗಳಿಗೆ ಅತ್ಯಂತ ಸುರಕ್ಷಿತ ಪ್ರದೇಶವಾಗಿರುವ ಮಲ್ಲಾಪುರ ಗುಡ್ಡದ ಆಸುಪಾಸಿನಲ್ಲಿ ವಿವಿಧ ಜಾತಿಯ ಬಾನಾಡಿಗಳು ಆಹಾರ ಅರಸಿ ಹಾರಾಡುತ್ತಿರುವುದನ್ನು ಕಾಣಬಹುದಾಗಿದೆ.ಬೆಳ್ಳಕ್ಕಿ, ನೀರು ಕಾಗೆ, ಬಾತುಕೋಳಿ, ಹೆಜ್ಜಾರ್ಲೆ, ಹುಂಡುಕೋಳಿ, ಹಾವಕ್ಕಿ, ಕಂಚಗಾರ ಕುಕ್ಕ, ಹಾರ್ನ್ ಬಿಲ್, ಗೀಜಗ, ಮಿಂಚುಳ್ಳಿ, ಕೌಜುಗ, ಟಿಟ್ಟಿಭ, ನವಿಲು ಸೇರಿದಂತೆ ಮತ್ತಿತರ ಪಕ್ಷಿಗಳು ಬಹು ಸಂಖ್ಯೆಯಲ್ಲಿ ಇಲ್ಲಿ ಕಾಣಸಿಗುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.