ಶುಕ್ರವಾರ, ಮೇ 14, 2021
31 °C

ಗುಡ್ಡೇಕೊಪ್ಪ ಪಿಎಚ್‌ಸಿ: ಸೌಲಭ್ಯಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ತಾಲ್ಲೂಕಿನ ಗುಡ್ಡೇಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧಿ ಮತ್ತು ಚಿಕಿತ್ಸಾ ಸಲಕರಣೆಗಳನ್ನು ತಕ್ಷಣ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಗ್ರಾಮ ಸಮಿತಿ ನೇತೃತ್ವದಲ್ಲಿ ಈಚೆಗೆ ತಹಶೀಲ್ದಾರ್ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗೆ  ಮನವಿ ಸಲ್ಲಿಸಲಾಯಿತು.ಅಗ್ರಹಾರ ಹೋಬಳಿಯ ಗುಡ್ಡೇಕೊಪ್ಪ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಗೊಂಡು ನಾಲ್ಕು ವರ್ಷಗಳು ಕಳೆದರೂ ಗ್ರಾಮಸ್ಥರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಅವಶ್ಯಕವಾಗಿರುವ ಕನಿಷ್ಠ ಪ್ರಮಾಣದ ಔಷಧಿ ಮತ್ತು ಚಿಕಿತ್ಸಾ ಉಪಕರಣಗಳು ಈ ಕೇಂದ್ರದಲ್ಲಿ ಇಲ್ಲದೇ ಇರುವುದರಿಂದ ತೊಂದರೆಯಾಗಿದೆ.ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ವ್ಯವಸ್ಥೆಗೆ ಅನುದಾನ ಲಭ್ಯವಿದ್ದರೂ, ಗುಡ್ಡೇಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳನ್ನು ಸರಬರಾಜು ಮಾಡದೇ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.  ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗ್ರಾಮ ಪಂಚಾಯ್ತಿಗೆ ಸೇರಿದ ಚಿಕ್ಕ ಕೊಠಡಿಯಲ್ಲಿ ತೆರೆಯಲಾಗಿದ್ದುಮ ಚಿಕಿತ್ಸೆ ತಪಾಸಣೆ ಹಾಗೂ ಸಲಕರಣೆಗಳನ್ನು ಇಟ್ಟು ಕೊಳ್ಳಲು ಯೋಗ್ಯವಾಗಿಲ್ಲ. ಕೇಂದ್ರ ಸರ್ಕಾರದ ಗ್ರಾಮೀಣ ಆರೋಗ್ಯ ಮಿಷನ್ ಅನುದಾನದಡಿಯಲ್ಲಿ ಅಥವಾ ಎಸ್‌ಡಿಪಿಆರ್‌ಎಸ್ ಯೋಜನೆಯ ಅನುದಾನದ ಅಡಿಯಲ್ಲಿ ಕೂಡಲೇ ವ್ಯವಸ್ಥಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನು ನಿರ್ಮಿಸಬೇಕು ಎಂದು ಗ್ರಾಮ ಸಮಿತಿ ಒತ್ತಾಯಿಸಿದೆ.ಆರೋಗ್ಯ ಕೇಂದ್ರಕ್ಕೆ ಸೂಕ್ತ ಔಷಧಿ ಮತ್ತು ಆರೋಗ್ಯ ಸಲಕರಣೆಗಳೊಂದಿಗೆ ಕಟ್ಟಡದ ವ್ಯವಸ್ಥೆಗೆ ತಕ್ಷಣ ಕ್ರಮ ಕೈಗೊಳ್ಳದೇ ಇದ್ದರೆ ಗ್ರಾಮಸ್ಥರು ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.ಶಿರಸ್ತೇದಾರ್ ರಾಜಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.  ಗ್ರಾಮ ಸಮಿತಿ ಅಧ್ಯಕ್ಷ ಜಿ.ಟಿ. ನಾಗೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಟಿ.ಎಲ್. ಸುಂದರೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.