ಶನಿವಾರ, ಮೇ 15, 2021
24 °C

ಗುಣಮಟ್ಟಕ್ಕೆ ಆದ್ಯತೆ: ಅಧಿಕಾರಿಗಳಿಗೆ ಶೆಟ್ಟರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅವಳಿನಗರದ ಅನುಕೂಲಕ್ಕಾಗಿ ಬೃಹತ್ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ನಗರದ ಹೊರವಲಯದ ಅಂಚಟಗೇರಿ ಬಳಿ 60 ಎಕರೆ ಜಮೀನು ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಸೋಮವಾರ ಹುಬ್ಬಳ್ಳಿ-ಧಾರವಾಡ ಸಮಗ್ರ ಅಭಿವೃದ್ಧಿ ಅನುದಾನದ ಎರಡನೇ ಹಂತದ ರೂ 100 ಕೋಟಿ ಯೋಜನೆಯ ಕಾಮಗಾರಿಗಳನ್ನು ಉದ್ಘಾಟಿಸಿ  ಅವರು ಮಾತನಾಡಿದರು.ಯಾವುದೇ ರಾಜಕೀಯ ಪ್ರಭಾವಗಳಿಗೆ ಮಣಿಯದಂತೆ ಪಾಲಿಕೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಿಡ್ನಾಳ-ಗದಗ ರಸ್ತೆ-ವಿಜಾಪುರ ರಸ್ತೆ ಹಾಗೂ ಗಬ್ಬೂರು ಸಂಪರ್ಕಿಸುವ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದ್ದು, ಸರ್ಕಾರದಿಂದ ರೂ.8.5 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.ಪಾಲಿಕೆಗೆ ದೊರೆತ ಮೊದಲ ಹಂತದ ರೂ 100 ಕೋಟಿ ಅನುದಾನದಲ್ಲಿ ಈಗಾಗಲೇ ಶೇ 95ರಷ್ಟು ಕೆಲಸ ಮುಕ್ತಾಯವಾಗಿದೆ. ಈ ಬಾರಿಯ ಅನುದಾನದಲ್ಲಿ ಅವಳಿನಗರದ ಒಳರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಿ ಕೆಲವೇ ದಿನಗಳಲ್ಲಿ ಅವುಗಳನ್ನು ಅಗೆಯುವ ಕೆಲಸವನ್ನು ಪಾಲಿಕೆ ಅಧಿಕಾರಿಗಳೇ ಮಾಡುತ್ತಿದ್ದಾರೆ. ಕನಿಷ್ಠ ಐದು ವರ್ಷ ರಸ್ತೆಯನ್ನು ಅಗೆಯುವುದಿಲ್ಲ  ಎಂಬ ನಿರ್ಣಯ ಅಂಗೀಕರಿಸುವಂತೆ ಪಾಲಿಕೆಗೆ ಸಲಹೆ ನೀಡಿದರು.ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಪಾಲಿಕೆಯ ಅಭಿವೃದ್ಧಿ ಕಾಮಗಾರಿ ಆಯ್ಕೆ ವೇಳೆ ತಾರತಮ್ಯ ಮಾಡದೆ ಎಲ್ಲಾ ವಾರ್ಡ್‌ಗಳಿಗೂ ಸಮಾನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ಸಮಾರಂಭದಲ್ಲಿ ಶಾಸಕರಾದ ಚಂದ್ರಕಾಂತ ಬೆಲ್ಲದ, ವೀರಭದ್ರಪ್ಪ ಹಾಲಹರವಿ, ವಿಧಾನ ಪರಿಷತ್ ಸದಸ್ಯರಾದ ವೀರಣ್ಣ ಮತ್ತಿಕಟ್ಟಿ, ಮೋಹನ ಲಿಂಬಿಕಾಯಿ, ಬಿಜೆಪಿ ಮುಖಂಡರಾದ ದತ್ತಾ ಡೋರ್ಲೆ, ಮಲ್ಲಿಕಾರ್ಜುನ ಸಾವಕಾರ, ಮೇಯರ್ ಪೂರ್ಣಾ ಪಾಟೀಲ, ಉಪಮೇಯರ್ ನಾರಾಯಣ ಜರತಾರಘರ, ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಮತ್ತಿತರರು ಹಾಜರಿದ್ದರು.ಧಾರವಾಡ ವರದಿ

ಇಲ್ಲಿನ ಆಲೂರು ಭವನದಲ್ಲಿ ಸೋಮವಾರ ಮಹಾನಗರ ಪಾಲಿಕೆ ಏರ್ಪಡಿಸಿದ್ದ ಸಮಾರಂಭದಲ್ಲಿ ಸರ್ಕಾರದ 2ನೇ ಹಂತದ 100 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಧಾರವಾಡ ವಿಭಾಗದ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಚಾಲನೆ ನೀಡಿದರು. ಶಾಸಕ ಚಂದ್ರಕಾಂತ ಬೆಲ್ಲದ ಕ್ರಿಯಾಯೋಜನೆ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.  ಸಮಾರಂಭದಲ್ಲಿ ಮೇಯರ್ ಪೂರ್ಣಾ ಪಾಟೀಲ, ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ ಚಿಂಚೋರೆ  ಮಾತನಾಡಿದರು. ಶಾಸಕಿ ಸೀಮಾ ಮಸೂತಿ ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ ಸಭಾ ನಾಯಕ  ವೀರಣ್ಣ ಸವಡಿ, ವಿಜಯಲಕ್ಷ್ಮಿ ಲೂತಿಮಠ,  ವೀರನಗೌಡ ಪಾಟೀಲ, ರಾಜಣ್ಣ ಕೊರವಿ ಸೇರಿದಂತೆ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.