ಗುಣಮಟ್ಟದ ಶಿಕ್ಷಣಕ್ಕೆ ಶ್ಲಾಘನೆ

7

ಗುಣಮಟ್ಟದ ಶಿಕ್ಷಣಕ್ಕೆ ಶ್ಲಾಘನೆ

Published:
Updated:

ಹೊಸಕೋಟೆ:   ಇಂದಿನ ಜಾಗತಿಕ ವ್ಯವಸ್ಥೆಗೆ ಅಣಿಮಾಡುವಂತಹ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಾಗಿದೆ ಎಂದು ಸಚಿವ ಬಿ.ಎನ್.ಬಚ್ಚೇಗೌಡ ಅಭಿಪ್ರಾಯಪಟ್ಟರು.  ಸರ್ವ ಶಿಕ್ಷಣ ಆಭಿಯಾನ ಯೋಜನೆ ಸಹಭಾಗಿತ್ವದಲ್ಲಿ ಬೆಂಗಳೂರಿನ ಸಿಸ್ಕೊ ಸಂಸ್ಥೆ ತಾಲ್ಲೂಕಿನ 5 ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಂಡಿರುವ ವಿನೂತನ ಪಠ್ಯಕ್ರಮ ಆಧಾರಿತ ದೂರ ಪೂರಕ ಶಿಕ್ಷಣ ಕಾರ್ಯಕ್ರಮಕ್ಕೆ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.   ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೊಸ ತಂತ್ರಜ್ಞಾನದ ಮೂಲಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ಸಿಸ್ಕೊ ಸಂಸ್ಥೆ ತಾಲ್ಲೂಕಿನಲ್ಲಿ ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದ ಸಚಿವರು ಇದು ಪರಿಣಾಮಕಾರಿಯಾಗಿ ಜಾರಿಯಾಗುವಲ್ಲಿ ಶಿಕ್ಷಕರಿಗೆ ತರಬೇತಿ ನೀಡಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.  ಸರ್ಕಾರಿ ಶಾಲೆಗಳು ಉಚಿತವಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದರೂ ಪೋಷಕರು ಖಾಸಗಿ ಶಾಲೆಗಳ ಮೇಲೆ ವ್ಯಾಮೋಹ ತೋರುತ್ತಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.  ಸಿಸ್ಕೊ ಸಂಸ್ಥೆ ಅಧ್ಯಕ್ಷ ಅರವಿಂದ್ ಸೀತಾರಾಮನ್ ಮಾತನಾಡಿ ನಗರ ಪ್ರದೇಶದ ಮಕ್ಕಳಿಗೆ ಲಭ್ಯವಿರುವ ಸೌಲಭ್ಯವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೂ ದೊರಕಿಸಿ ಆ ಮೂಲಕ ಸರ್ವಾಂಗೀಣ ಪ್ರಗತಿ ಸಾಧಿಸುವಲ್ಲಿ ಸಂಸ್ಥೆ ಈ ಕಾರ್ಯ ನಡೆಸಿದೆ. ರಾಜ್ಯ ಸರ್ಕಾರ ಇದಕ್ಕೆ ಮೂಲ ಸೌಕರ್ಯ ಒದಗಿಸಲಿದೆ ಎಂದು ಹೇಳಿದರು. ಉಪನಿರ್ದೇಶಕ ಎಚ್.ವಿ.ವೆಂಕಟೇಶಪ್ಪ ಮಾತನಾಡಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದ ಅವಶ್ಯಕತೆಯಿದ್ದು ಪೋಷಕರು ಮಕ್ಕಳ ಪ್ರಗತಿ ಬಗ್ಗೆ ಆಸಕ್ತಿ ವಹಿಸಬೇಕಿದೆ ಎಂದು ಹೇಳಿದರು.  ಜಿ.ಪಂ. ಮಾಜಿ ಸದಸ್ಯ ಬಿ.ಎಂ.ನಾರಾಯಣಸ್ವಾಮಿ ಮಾತನಾಡಿದರು. ರಾಜ್ಯ ಮಾರ್ಕೇಟಿಂಗ್ ಫೆಡರೇಷನ್ ನಿರ್ದೇಶಕ ಬಿ.ಎನ್.ಗೋಪಾಲಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ವಿ.ಸತೀಶ್‌ಗೌಡ, ಜಿ.ಪಂ.ಸದಸ್ಯೆ ವೆಂಕಟಲಕ್ಷ್ಮಮ್ಮ, ಎಪಿಎಂಸಿ ಅಧ್ಯಕ್ಷ ಸಿ.ಮುನಿಯಪ್ಪ, ಸರ್ವ ಶಿಕ್ಷಣ ಅಭಿಯಾನದ ಜಂಟಿ ನಿರ್ದೇಶಕ ಡಾ.ಮಹಿದಾಸ್ ಪಾಟೀಲ್, ಸಿಸ್ಕೊ ಸಂಸ್ಥೆಯ ವಾಸುದೇವ್, ಮುಖಂಡ ವೆಂಕಟೇಶಗೌಡ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಸಿ.ಬಸವರಾಜೇಗೌಡ ಸ್ವಾಗತಿಸಿದರು.  ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ತಾಲ್ಲೂಕಿನ ಕುಂಬಳಹಳ್ಳಿ, ಬೆಂಡಿಗಾನಹಳ್ಳಿ, ಮುತ್ಸಂದ್ರ, ದೇವನಗುಂದಿ ಹಾಗೂ ಸೂಲಿಬೆಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ ದೃಶ್ಯ ಮಾಧ್ಯಮದ ದೂರ ಶಿಕ್ಷಣದ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದ್ದು 5 ರಿಂದ 8 ನೇ ತರಗತಿಯಲ್ಲಿ ಓದುತ್ತಿರುವ 750 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry