ಗುಣಮಟ್ಟದ ಶಿಕ್ಷಣ ಈ ಶಾಲೆಯ ಹೆಗ್ಗಳಿಕೆ

7

ಗುಣಮಟ್ಟದ ಶಿಕ್ಷಣ ಈ ಶಾಲೆಯ ಹೆಗ್ಗಳಿಕೆ

Published:
Updated:

ಸುರಪುರ: ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ಮತ್ತು ಮೂಲಸೌಕರ್ಯಗಳಿಗೆ ಹೆಸರು ಮಾಡಿರುತ್ತವೆ. ಸರ್ಕಾರಿ ಶಾಲೆಗಳಿಗೆ ಸರ್ಕಾರ ಎಷ್ಟೆ ಉತ್ತೇಜನ ನೀಡಿದರೂ, ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದಿರುವುದು ಬಹುತೇಕ ಕಡೆ ಕಂಡು ಬರುತ್ತದೆ. ಹೀಗಾಗಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪಾಲಕರು ತುದಿಗಾಲಲ್ಲಿ ನಿಂತಿರುತ್ತಾರೆ.ಸುರಪುರದ ಗಾಯತ್ರಿ ಶಾಲೆ ಖಾಸಗಿ ಶಾಲೆಗಳ ಪೈಕಿ ಯಾದಗಿರಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ಕನ್ನಡ ಮಾಧ್ಯಮ ಬೋಧನಾ ಶಾಲೆಯಾದರೂ ಉತ್ತಮ ಫಲಿತಾಂಶ ಪಡೆಯುವಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಮುಂದಿದೆ. 1996ರಲ್ಲಿ ಆರಂಭವಾದ ಶಾಲೆ ಪ್ರಸ್ತುತ ವರ್ಷ ಪ್ರಾಥಮಿಕ ವಿಭಾಗದಲ್ಲಿ 450 ಮತ್ತು ಪ್ರೌಢ ವಿಭಾಗದಲ್ಲಿ 200 ವಿದ್ಯಾರ್ಥಿಗಳನ್ನು ಹೊಂದಿದೆ. 20 ಶಿಕ್ಷಕರು ಬೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ.2006ರಲ್ಲಿ ಹೊರಬಂದ ಎಸ್ಸೆಸ್ಸೆಲ್ಸಿ ಪ್ರಥಮ ಬ್ಯಾಚ್ ಶೇ. 80 ರಷ್ಟು ಫಲಿತಾಂಶ ಪಡೆಯಿತು. ಅಲ್ಲಿಂದ ಈಚೆಗೆ ಶಾಲೆ ಹಿಂತುರಿಗಿ ನೋಡಿದ್ದೆ ಇಲ್ಲ. ಪ್ರತಿ ವರ್ಷ ಶೇ. 90 ಕ್ಕೂ ಹೆಚ್ಚು ಫಲಿತಾಂಶ ಬರುತ್ತಿದೆ. ಪ್ರತಿ ಬಾರಿ ಉನ್ನತ ಶ್ರೇಣಿಯಲ್ಲಿ ಪಾಸಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದೆ. ಜಿಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಇದೆ.ಪ್ರತಿಭಾ ಕಾರಂಜಿ, ಚರ್ಚಾ ಸ್ಪರ್ಧೆ, ನಾಟಕ, ರಸಪ್ರಶ್ನೆ, ಭಾಷಣ, ಗಾಯನ, ಸ್ತಬ್ಧಚಿತ್ರ ಪ್ರದರ್ಶನ ಇತರ ಸಹಪಠ್ಯ ಚಟುವಟಿಕೆಗಳಲ್ಲಿ ಶಾಲಾ ಮಕ್ಕಳ ಉತ್ಸಾಹ ಎಲ್ಲೆ ಮೀರಿರುತ್ತದೆ.ಕಳೆದ ಸಾಲಿನಲ್ಲಿ ಹತ್ತನೆ ತರಗತಿ ವಿದ್ಯಾರ್ಥಿಗಳಾಗಿದ್ದ ಸಾಗರ ಮತ್ತು ಮಹೇಶ್ವರಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಡೆಸುವ  ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಹೆಸರು ಮಾಡಿದರು.ಈ ಸ್ಥಾನ ಪಡೆದ ಹೈದರಾಬಾದ್ ಕರ್ನಾಟಕದ ಪ್ರಥಮ ಶಾಲೆ ಎಂಬುದು ವಿಶೇಷ. ಪ್ರಸಕ್ತ  ಸಾಲಿನಲ್ಲಿ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಪಟ್ಟಣದಲ್ಲಿ ನಡೆಯುವ ದಸರಾ ಕಾರ್ಯಕ್ರಮದಲ್ಲಿ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಸತತ ಮೂರು ಬಾರಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದೆ. ಸತತ ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೊಡುವ ಕನ್ನಡ ಮಾಧ್ಯಮ ಪ್ರಶಸ್ತಿ ಸ್ವೀಕರಿಸಿ ಮಕ್ಕಳು ಶಾಲೆಗೆ ಕೀರ್ತಿ ತಂದಿದ್ದಾರೆ.`ಮಕ್ಕಳಲ್ಲಿ ಉತ್ತಮ ಬೋಧನೆಯ ಜೊತೆಗೆ ಆದರ್ಶ ಗುಣಗಳನ್ನು, ಸಂಸ್ಕಾರವನ್ನು ಬೆಳೆಸುತ್ತೇವೆ. ಪ್ರತಿಯೊಂದು ವಿದ್ಯಾರ್ಥಿಯ ಬಗ್ಗೆ ಗಮನ ಕೊಡುತ್ತೇವೆ. ದಿನಾಲೂ ಮನೆ ಕೆಲಸ ಕೊಡುತ್ತೇವೆ. ಪಾಲಕರೊಂದಿಗೆ ಸಂಪರ್ಕವಿಟ್ಟುಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಿಗಾವಹಿಸುತ್ತೇವೆ. ಮಕ್ಕಳ ಬೌದ್ಧಿಕ ವಿಕಸನಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಇದು ಉತ್ತಮ ಫಲಿತಾಂಶ ಬರುವಲ್ಲಿ ಸಹಾಯಕವಾಗಿದೆ' ಎನ್ನುತ್ತಾರೆ ಮುಖ್ಯ ಗುರು ಅಪ್ಪಣ್ಣ ಕುಲಕರ್ಣಿ.`ನಮ್ಮ ಶಾಲೆಗೆ ನಮ್ಮ ಶಿಕ್ಷಕರೆ ಆಧಾರಸ್ತಂಭ. ಒಂದು ಶಾಲೆಯ ಫಲಿತಾಂಶ ಅಲ್ಲಿನ ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಕರ ನೇಮಕಾತಿಯಲ್ಲಿ ಆಡಳಿತ ಮಂಡಳಿ ಗಮನಾರ್ಹ ಅಂಶಗಳನ್ನು ಪಾಲಿಸುತ್ತದೆ. ಆಗಾಗ ಶಾಲೆಗೆ ಭೇಟಿ ನೀಡಿ ಸದಸ್ಯರು ಪರಿಶೀಲನೆ ಮಾಡುತ್ತಾರೆ. ಇದು ನಮ್ಮ ಶಾಲೆ ಮಕ್ಕಳು ಉತ್ತಮ ಗುಣಮಟ್ಟ ಶಿಕ್ಷಣ ಹೊಂದಲು ಕಾರಣವಾಗಿದೆ' ಎನ್ನುವುದು ಶಾಲೆಯ ಅಧ್ಯಕ್ಷ ಕಿಶನರಾವ ಕುಲಕರ್ಣಿ ಅವರ ಅಭಿಪ್ರಾಯ.`ಫಲಿತಾಂಶ ಚೆನ್ನಾಗಿದೆ'

`ಗಾಯತ್ರಿ ಶಾಲೆಯ ಫಲಿತಾಂಶ ಚೆನ್ನಾಗಿದೆ. ಅಲ್ಲಿನ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಖಾಸಗಿ ಸಂಸ್ಥೆಗಳಿಗೆ ಗಾಯತ್ರಿ ಶಾಲೆ ಆದರ್ಶವಾಗಿದೆ. ಅಲ್ಲಿನ ಶಿಕ್ಷಕರ ಮುತುವರ್ಜಿ, ಕಳಕಳಿ ಮಾದರಿಯಾಗಿದೆ. ಒಟ್ಟಾರೆ ಶಾಲೆಯ ಪ್ರಗತಿ ನನಗೆ ತೃಪ್ತಿ ತಂದಿದೆ'.

-ಎ.ವ್ಹಿ. ಕೆಂಪರಂಗಯ್ಯ,

ಕ್ಷೇತ್ರ ಶಿಕ್ಷಣಾಧಿಕಾರಿ, ಸುರಪುರ

ಮಾದರಿ ಶಾಲೆ

`ಗಾಯತ್ರಿ ಶಾಲೆಯ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗಿ ಸಂಸ್ಥೆಗಳಿಗೆ ಗಾಯತ್ರಿ ಶಾಲೆ ಮಾದರಿ. ಕಡಿಮೆ ಫೀಯನ್ನು ತೆಗೆದುಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶಾಲೆಯ ಹೈಲೆಟ್'.

-ಎ. ಕೃಷ್ಣ, ಸಾಹಿತಿ, ನಿವೃತ್ತ ಶಿಕ್ಷಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry