ಶುಕ್ರವಾರ, ನವೆಂಬರ್ 15, 2019
20 °C

ಗುಣಾತ್ಮಕ ಶಿಕ್ಷಣ ನೀಡಲು ಸಲಹೆ

Published:
Updated:

ಹೊನ್ನಾಳಿ: ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು ಎಂದು ಬನ್ನಿಕೋಡು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಲ್. ಲಕ್ಷ್ಮಣ್‌ರಾವ್ ಹೇಳಿದರು. ತಾಲ್ಲೂಕಿನ ಬನ್ನಿಕೋಡು-ಸರಸ್ವತಿ ನಗರದ ಸರಸ್ವತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಬೈಸಿಕಲ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.`ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು' ಎಂಬಂತೆ ಪ್ರೌಢಶಾಲಾ ಹಂತದ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ತಾವೇನಾಗಬೇಕು ಎಂಬ ಬಗ್ಗೆ ಚಿಂತಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅವರಿಗೆ ಶಿಕ್ಷಕರು, ಪೋಷಕರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದೆ. ಬಿಸಿಯೂಟ, ಉಚಿತ ಬೈಸಿಕಲ್, ಸಮವಸ್ತ್ರ, ಪಠ್ಯಪುಸ್ತಕ ನೀಡುತ್ತಿದೆ. ಇವೆಲ್ಲವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಅಧ್ಯಯನ ನಡೆಸುವ ಮೂಲಕ ಶಾಲೆಗೂ, ಗ್ರಾಮಕ್ಕೂ ಕೀರ್ತಿ ತರಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಬೇಕು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸಂಸ್ಕಾರಯುತ ಶಿಕ್ಷಣ ಪಡೆಯಬೇಕು. ಇದರಿಂದ ತಮ್ಮ ಮುಂದಿನ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಅವರು ತಿಳಿಸಿದರು.15 ಶಾಲೆಗಳ ಎಸ್‌ಡಿಎಂಸಿ ಒಕ್ಕೂಟದ ಅಧ್ಯಕ್ಷ ಎಲ್. ರುದ್ರನಾಯ್ಕ ಮಾತನಾಡಿ, ಗ್ರಾಮೀಣ ಪರಿಸರದಲ್ಲಿನ ಸರಸ್ವತಿ ಗ್ರಾಮಾಂತರ ಪ್ರೌಢಶಾಲೆ ಉತ್ತಮ ಶಿಕ್ಷಣಕ್ಕೆ ಹೇಳಿ ಮಾಡಿಸಿದ ಜಾಗ. ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಬನ್ನಿಕೋಡು ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಬಿ. ಮಂಜುನಾಥ್ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮಸ್ಥರು ಸದಾ ಸಿದ್ಧರಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಆಶಿಸಿದರು.ಸರಸ್ವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಿಪ್ಪಯ್ಯ, ಗ್ರಾಮದ ಮುಖಂಡರಾದ ನಾಗರಾಜಯ್ಯ, ಜೆ. ವೀರಪ್ಪ, ಕೆ.ಎಚ್. ವಿರೂಪಾಕ್ಷಪ್ಪ, ಬಿ.ಎಸ್. ರಂಗನಾಥ್, ಕರಿಯಪ್ಪ, ರವಿಕುಮಾರ್, ಮಂಜುನಾಥ್ ಮಾತನಾಡಿದರು.ತಾ.ಪಂ. ಮಾಜಿ ಉಪಾಧ್ಯಕ್ಷ ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಕವನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ರೇವಣ ಸಿದ್ದಪ್ಪ ಸ್ವಾಗತಿಸಿದರು. ಶಿಕ್ಷಕಿ ಶಾರದಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಚಂದ್ರಶೇಖರಪ್ಪ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿದರು.

ಪ್ರತಿಕ್ರಿಯಿಸಿ (+)