ಶುಕ್ರವಾರ, ಮೇ 14, 2021
35 °C

ಗುಣಾತ್ಮಕ ಶಿಕ್ಷಣ ಯೋಜನೆ : ಮದರಸಾಗಳು ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದರಸಾಗಳಲ್ಲಿ ಸಾಂಪ್ರದಾಯಿಕವಾದ ಧಾರ್ಮಿಕ ಶಿಕ್ಷಣದ ಜೊತೆಗೆ, ಆಧುನಿಕ ಶಿಕ್ಷಣವನ್ನು ನೀಡುವ ಮೂಲಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2009-10ರಲ್ಲಿ ರೂಪಿಸಿರುವ ಗುಣಾತ್ಮಕ ಶಿಕ್ಷಣ ಯೋಜನೆಯ ಸದುಪಯೋಗ ಪಡೆಯುವಲ್ಲಿ ಮದರಸಾಗಳು ಹಿಂದೆ ಬಿದ್ದಿವೆ.ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಮದರಸಾಗಳಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಹಿಂದಿ, ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣವನ್ನು ನೀಡಲು ಈ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಆಧುನಿಕ ಶಿಕ್ಷಣ ನೀಡಲು ಬೇಕಾದ ಶಿಕ್ಷಕರನ್ನು ಆಯಾ ಮದರಸಾಗಳು ನೇಮಕ ಮಾಡಿಕೊಳ್ಳಬಹುದು. ಸರ್ಕಾರ ಇದರಲ್ಲಿ ತಲೆ ಹಾಕುವುದಿಲ್ಲ. ಶಿಕ್ಷಕರಿಗೆ ಸಂಬಳ ನೀಡಲು ಬೇಕಾಗುವ ಅನುದಾನವನ್ನು ಸರ್ಕಾರವೇ ನೀಡುತ್ತದೆ.ಇಷ್ಟಾದರೂ ಈ ಯೋಜನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿರುವ ಸುಮಾರು ಐದು ಸಾವಿರ ಮದರಸಾಗಳ ಪೈಕಿ ಕೇವಲ 128 ಮದರಸಾಗಳು ಮಾತ್ರ ಈ ಯೋಜನೆಯಡಿ ದೊರೆಯುವ ಅನುದಾನ ಪಡೆಯುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.11ನೇ ಪಂಚವಾರ್ಷಿಕ ಯೋಜನೆಯಡಿ ಕೇಂದ್ರ ಸರ್ಕಾರ ಈ ಕಾರ್ಯಕ್ರಮಕ್ಕೆ 325 ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಿದೆ. ಅಲ್ಲದೆ ಇದಕ್ಕೆ ಹಣದ ಮಿತಿ ಇಲ್ಲ. ಬೇಡಿಕೆ ಬಂದರೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಉದ್ದೇಶಿಸಲಾಗಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ ಹತ್ತು ಮಕ್ಕಳಿದ್ದರೂ ಒಬ್ಬ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ.ಪದವೀಧರ ಶಿಕ್ಷಕರಿಗೆ ಮಾಸಿಕ ಆರು ಸಾವಿರ ರೂಪಾಯಿ, ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರಿಗೆ 12 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ.ಅಷ್ಟೇ ಅಲ್ಲದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಪ್ರಯೋಗಾಲಯ, ಗ್ರಂಥಾಲಯಗಳನ್ನು ಬಲಪಡಿಸಲು, ಕಲಿಕಾ ಉಪಕರಣಗಳನ್ನು ಖರೀದಿಸಲು ಪ್ರತಿಯೊಂದು ಮದರಸಾಗೆ ಒಮ್ಮೆಗೆ 50 ಸಾವಿರ ರೂಪಾಯಿ ನೀಡಲಾಗುತ್ತದೆ. ಇದರ ಜೊತೆಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನೆಗೆ ಅಗತ್ಯವಿರುವ ಕಿಟ್‌ಗಳ ಖರೀದಿಗೆ ರೂ 15 ಸಾವಿರ ಮತ್ತು ನಿರ್ವಹಣಾ ವೆಚ್ಚವಾಗಿ ವಾರ್ಷಿಕ ಐದು ಸಾವಿರ ರೂಪಾಯಿ ನೀಡಲಾಗುತ್ತದೆ.ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್‌ಗಳನ್ನು ತೆರೆಯಲು ತಲಾ ಒಂದು ಲಕ್ಷ ರೂಪಾಯಿ ಅನುದಾನ ದೊರೆಯಲಿದೆ. ಇವುಗಳ ನಿರ್ವಹಣೆಗೆ ವಾರ್ಷಿಕ ಐದು ಸಾವಿರ ರೂಪಾಯಿ ನೀಡಲಾಗುತ್ತದೆ. ಶಿಕ್ಷಕರಿಗೆ 15 ದಿನಗಳ ಕಾಲ ತರಬೇತಿ ನೀಡಲು ಅವಕಾಶವಿದ್ದು, ತರಬೇತಿ ಭತ್ಯೆ, ದಿನ ಭತ್ಯೆ, ಪ್ರಯಾಣ ಭತ್ಯೆ ಇತ್ಯಾದಿಗಳನ್ನು ಪಡೆಯಬಹುದು.ಅಲ್ಲದೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್‌ನ (ಎನ್‌ಐಒಎಸ್) ನಿಯಮಾವಳಿಗಳಿಗೆ ಅನುಗುಣವಾಗಿ ಮದರಸಾಗಳಲ್ಲಿ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಆರಂಭಿಸಲು ಅವಕಾಶವಿದೆ.ಮದರಸಾ ಮತ್ತು ಕೈಗಾರಿಕಾ ಸಂಸ್ಥೆಗಳ ನಡುವೆ ಸಮನ್ವಯ ಏರ್ಪಡಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ಐಟಿಐಗಳನ್ನು ಆರಂಭಿಸಲು ನೆರವು ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಮದರಸಾ ಮಂಡಳಿಗೆ ವಾರ್ಷಿಕ ಐದು ಲಕ್ಷ ರೂಪಾಯಿ ಅನುದಾನ ನೀಡಲು ಅವಕಾಶವಿದೆ.ಮದರಸಾಗಳಲ್ಲಿ ಕಲಿಯುವ 14 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಕೌಶಲ ಆಧಾರಿತ ತರಬೇತಿಯನ್ನು ನೀಡುವುದು ಸಹ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ.ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ. ಅನುದಾನಕ್ಕಾಗಿ ಮದರಸಾಗಳಿಂದ ಬರುವ ಅರ್ಜಿಗಳನ್ನು ಪರಿಶೀಲಿಸಿ ಕೇಂದ್ರಕ್ಕೆ ಶಿಫಾರಸು ಮಾಡುವುದಷ್ಟೇ ರಾಜ್ಯ ಸರ್ಕಾರದ ಕೆಲಸ. `ಈ ರೀತಿಯ ಯೋಜನೆ ಇದೆ. ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಎಲ್ಲ ಮದರಸಾಗಳಿಗೆ ತಿಳಿಸಲಾಗಿದೆ. ಆದರೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ~ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.ರಚನೆಯಾಗದ ಮಂಡಳಿ: ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಹಲವಾರು ಯೋಜನೆಗಳಿದ್ದರೂ, ಅವುಗಳ ಸದುಪಯೋಗ ಆಗುತ್ತಿಲ್ಲ ಎಂಬ ಕೂಗು ಒಂದೆಡೆ ಕೇಳಿಬರುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಇದುವರೆಗೆ ಮದರಸಾ ಮಂಡಳಿಯೇ ರಚನೆಯಾಗಿಲ್ಲ. ಹಿಂದೆ ಒಮ್ಮೆ ಮಂಡಳಿ ರಚನೆಯ ಪ್ರಯತ್ನ ನಡೆದಿತ್ತು. ಆದರೆ ಅದಕ್ಕೆ ವಿರೋಧ ವ್ಯಕ್ತವಾದ ಪರಿಣಾಮ ಅಲ್ಲಿಗೇ ಕೈಬಿಡಲಾಯಿತು. ಇದಾದ ನಂತರ ಮಂಡಳಿ ರಚನೆಯ ಪ್ರಯತ್ನ ನಡೆದಿಲ್ಲ ಎಂಬುದಾಗಿ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.