ಗುತ್ತಿಗೆ ನೇಮಕಾತಿಗೆ ಸುಪ್ರೀಂ ಆಕ್ಷೇಪ

7

ಗುತ್ತಿಗೆ ನೇಮಕಾತಿಗೆ ಸುಪ್ರೀಂ ಆಕ್ಷೇಪ

Published:
Updated:

ನವದೆಹಲಿ: ರಾಜ್ಯ ಸರ್ಕಾರಗಳು ಗುತ್ತಿಗೆ ಆಧಾರದಲ್ಲಿ ಶಿಕ್ಷಕರು, ವೈದ್ಯರು ಮತ್ತು ವಿಜ್ಞಾನಿಗಳನ್ನು ನೇಮಿಸಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ನೇಮಕಾತಿಗೆ ಸಂಬಂಧಿಸಿದ ಪ್ರತಿಯೊಂದು ಹಂತದ ಸಮಸ್ಯೆಯ ಇತ್ಯರ್ಥಕ್ಕೂ ನ್ಯಾಯಾಲಯದ ಕದ ತಟ್ಟಬೇಕಾಗಿರುವುದರಿಂದ ರಾಷ್ಟ್ರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವುಂಟಾಗುತ್ತಿದೆ ಎಂದಿದೆ.ಇದೇ ವೇಳೆ ಈ ಹುದ್ದೆಗಳಿಗೆ ಅಖಿಲ ಭಾರತ ಮಟ್ಟದಲ್ಲಿ ನೇಮಕಾತಿ ನಡೆಸದೇ ಇರುವ ಕ್ರಮಕ್ಕೆ ನ್ಯಾಯಮೂರ್ತಿಗಳಾದ ಜಿ. ಎಸ್. ಸಿಂಘ್ವಿ ಮತ್ತು ಅಲೋಕ್‌ಕುಮಾರ್ ಗಂಗುಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.‘ನೇಮಕಾತಿಯಿಂದ ಹಿಡಿದು ನಿವೃತ್ತಿಯವರೆಗಿನ ಸೇವಾ ಸಂಬಂಧಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ನ್ಯಾಯಾಲಯ ಬೇಸತ್ತಿದೆ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರುಗಳು ಕೂಡ ನ್ಯಾಯಾಲಯ ಕೊನೆಯ ಬೆಂಚಿನಲ್ಲಿ ಪ್ರಕರಣದ ಇತ್ಯರ್ಥವನ್ನು ಕಾದು ಕುಳಿತಿರುವುದನ್ನು ನಾವು ಎಷ್ಟೋ ಬಾರಿ ನೋಡಿದ್ದೇವೆ’ ಎಂದಿರುವ ವಿಭಾಗೀಯ ಪೀಠ, ಈ ಹುದ್ದೆಗಳಿಗೆ ಅಖಿಲ ಭಾರತ ಮಟ್ಟದಲ್ಲಿ ನೇಮಕಾತಿ ನಡೆಸುವುದಕ್ಕೆ ಸರ್ಕಾರಕ್ಕೆ ಇರುವ ತೊಂದರೆಯಾದರೂ ಏನು ಎಂದು  ಪ್ರಶ್ನಿಸಿದೆ.ಆಲ್ ಇಂಡಿಯಾ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕರಾಗಿದ್ದ ಖ್ಯಾತ ಹೃದ್ರೋಗ ತಜ್ಞ ಪ್ರೊ. ಪಿ. ವೇಣುಗೋಪಾಲ್ ಅವರ ಪ್ರಕರಣವನ್ನು ಉದಾಹರಣೆ ನೀಡಿದ ಪೀಠ, ‘ಹೃದಯ ಶಸ್ತ್ರಚಿಕಿತ್ಸೆಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದ ತಮ್ಮ ಅತ್ಯಮೂಲ್ಯ ಸಮಯವನ್ನು ವೇಣುಗೋಪಾಲ್ ಅವರು ನ್ಯಾಯಾಲಯದ ಕಾರಿಡಾರ್‌ಗಳಲ್ಲಿ ಕಳೆದಿದ್ದಾರೆ’ ಎಂದಿದೆಯಲ್ಲದೆ ಸರ್ಕಾರದ ನೀತಿಯ ವಿರುದ್ಧ ಕಳವಳ ವ್ಯಕ್ತಪಡಿಸಿದೆ.ದೆಹಲಿ ಸರ್ಕಾರದ ವಿರುದ್ಧ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ವಿಭಾಗೀಯ ಪೀಠ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ಇದೇ ವೇಳೆ ದಿನಗೂಲಿ ನೌಕರರು ಮತ್ತು ನಾಲ್ಕನೇ ದರ್ಜೆ ನೌಕರರ ಕುರಿತಾಗಿಯೂ ಸರ್ಕಾರಗಳ ನಿಲುವಿಗೆ ಪೀಠ ಅತೃಪ್ತಿ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry