ಗುತ್ತಿಗೆ ಪದ್ಧತಿ ಕಾರ್ಮಿಕರಿಗೆ ಮಾರಕ

7

ಗುತ್ತಿಗೆ ಪದ್ಧತಿ ಕಾರ್ಮಿಕರಿಗೆ ಮಾರಕ

Published:
Updated:

ಬಳ್ಳಾರಿ: ಖಾಸಗಿ ಔದ್ಯೋಗಿಕ ವಲಯದಲ್ಲಿನ ಗುತ್ತಿಗೆ ಪದ್ಧತಿಯು ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದ್ದು, ಬಂಡವಾಳಶಾಹಿಯ ಈ ಅವೈಜ್ಞಾನಿಕ ಪದ್ಧತಿಯನ್ನು ಪ್ರತಿಯೊಬ್ಬರೂ ಪ್ರತಿಭಟಿಸುವ ಅಗತ್ಯವಿದೆ ಎಂದು ಕಾರ್ಮಿಕ ಮುಖಂಡ ಎ.ಎಸ್. ಮಲೇಬೆನ್ನೂರ್ ಅಭಿಪ್ರಾಯಪಟ್ಟರು.ಇದೇ 28ರಂದು ದೇಶದಾದ್ಯಂತ ನಡೆಯಲಿರುವ ಅಖಿಲ ಭಾರತ ಸಾರ್ವ್ರತ್ರಿಕ ಮುಷ್ಕರದ ಅಂಗವಾಗಿ ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ನಗರದ ಗಾಂಧಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ `ಆರ್ಥಿಕ, ರಾಜಕೀಯ ವಿದ್ಯಮಾನಗಳು ಕಾರ್ಮಿಕರ ಸವಾಲುಗಳು~ ವಿಷಯದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾರಿ ಉದ್ದಿಮೆಗಳ ಮಾಲೀಕರು ಜಿಲ್ಲೆಯಲ್ಲಿ ಸಾವಿರಾರು ಜನರ ಶ್ರಮದಿಂದ ಬೃಹತ್ ಉಕ್ಕಿನ ಕಾರ್ಖಾನೆ ನಡೆಸುತ್ತಿದ್ದು, ಅಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರಿಗೆ ಕೆಲಸದ ಭದ್ರತೆಯೇ ಇಲ್ಲದಂತಾಗಿದೆ. ಈ ಕುರಿತು ಕಾರ್ಮಿಕ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಭ್ಯುದಯವನ್ನೇ ಮರೆತು, ಬಂಡವಾಳಶಾಹಿ ಶಕ್ತಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು, ಖಾಸಗಿಯವರಿಗೆ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ವಿನಾಯಿತಿ ನೀಡುತ್ತಿರುವುದೇ  ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.ಇದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಬೆಲೆ ಏರಿಕೆಗೆ ಕಾರಣವೇನು, ಹಿನ್ನೆಲೆ ಏನು ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.ಕೃತಕವಾಗಿ ಸೃಷ್ಟಿಸಲಾಗುವ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕಿದೆ. ಈ ಕುರಿತು  ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ಕೋರಿದರು.ಹೋರಾಟ, ಪತ್ರಿಭಟನೆಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗದೆ, ಸಂಪೂರ್ಣವಾಗಿ ಹದಗೆಟ್ಟಿರುವ ರಾಜಕೀಯ ಕ್ಷೇತ್ರದ ಬದಲಾವಣೆಗಾಗಿ ಉಗ್ರ ಸ್ವರೂಪದ ಹೋರಾಟ ನಡೆಯಬೇಕಿದೆ. ಲೋಕಸಭೆಯಲ್ಲಿ ನಡೆಯುವ ಗಂಭೀರ ವಿಷಯಗಳ ಚಿಂತನೆ ಕುರಿತು ಈ ಭಾಗದ ಸಂಸದರಿಗೆ ಅರಿವೇ ಇಲ್ಲ. ಹಣದ ಮದದಿಂದ ಆಡಳಿತ ನಡೆಸುತ್ತಿರುವವರು ಜನರ ಸಮಸ್ಯೆಗಳತ್ತ ಲಕ್ಷ್ಯ ವಹಿಸಬೇಕು ಎಂದು ಅವರು ತಿಳಿಸಿದರು.ಬ್ರಿಟಿಷರು ದೇಶ ಬಿಟ್ಟು ಹೋದರೂ, ಕಾರ್ಮಿಕ ವರ್ಗಕ್ಕೆ, ಜನಸಾಮಾನ್ಯರಿಗೆ ನಿಜವಾದ ಸ್ವಾತಂತ್ರ್ಯ ದೊರೆತಿಲ್ಲ. ಅದು ಉಳ್ಳವರ ಪಾಲಾಗಿದೆ. ಎಲ್ಲ ಪಕ್ಷಗಳ ನಾಯಕರು ಸ್ವತಃ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ.ಎಚ್.ಡಿ. ಪ್ರಶಾಂತ್ ಅವರು ಆರೋಪಿಸಿದರು.ಕಳೆದ ಸಾಲಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾವಿರಾರು ಕೋಟಿ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿ 2010-11ರ ಬಜೆಟ್‌ನಲ್ಲಿ ಶೇ 115ಕ್ಕೆ ಹೆಚ್ಚಲಿದೆ. ಇದು 2 ಜಿ ಹಗರಣಕ್ಕಿಂತ ನಾಲ್ಕರಷ್ಟು ದೊಡ್ಡದಾಗಿದೆ. ರಾಜ್ಯ ಸರ್ಕಾರವು ಕಳೆದ ವರ್ಷ ಮಠ, ಮಂದಿರಗಳಿಗೆ ರೂ 400 ಕೋಟಿ  ಅನುದಾನ ನೀಡಿದೆ, ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಅವರು ದೂರಿದರು. ಕಾರ್ಮಿಕ ಮುಖಂಡರಾದ ಟಿ.ಜಿ. ವಿಠ್ಠಲ್, ಆರ್ಥಿಕ ತಜ್ಞ ಡಾ.ಶೇಷಾದ್ರಿ, ಇಸ್ಮಾಯಿಲ್, ಸೋಮಶೇಖರ ಗೌಡ, ಹಾಲೇಶ್‌ಗೌಡ, ಸತ್ಯಬಾಬು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry