ಶನಿವಾರ, ಮೇ 21, 2022
20 °C

ಗುತ್ತಿ ಬಸವೇಶ್ವರ ಯೋಜನೆ: ಕಂಗೆಟ್ಟ ರೈತ

ಪ್ರಜಾವಾಣಿ ವಾರ್ತೆ / ಪವನ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಕೆಂಭಾವಿ: ಉದ್ಘಾಟನೆಗೆ ಕಾದು ಬೇಸತ್ತ ಮೋಟಾರ್‌ಗಳು ಇದೀಗ ಕೆಟ್ಟು ನಿಂತಿದ್ದು, ರೈತರ ಹೊಲಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆಯೊಂದು ಉಪಯೋಗಕ್ಕೆ ಬಾರದಂತಾಗಿದೆ. ಪೈರು ಬೆಳೆದು ನಿಂತಿರುವ ಸಮಯದಲ್ಲಿಯೇ ಮೋಟರ್‌ಗಳು ಕೈಕೊಟ್ಟಿರುವುದು ರೈತರ ಪಾಲಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ.ಸಮೀಪದ ಗುತ್ತಿ ಬಸವಣ್ಣ ಇಂಡಿ ಏತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಗತಿಸಿದರೂ ಇದುವರೆಗೂ  ಉದ್ಘಾಟನೆಯ ಭಾಗ್ಯ ಕೂಡಿ ಬಂದಿಲ್ಲ. ನೀರು ಎತ್ತಿ ಹಾಕಲು ಅಳವಡಿಸಿದ್ದ ಐದು ಮೋಟಾರ್‌ಗಳು ಒಂದೊಂದಾಗಿಯೇ ಕೆಡುತ್ತ ಬಂದಿದ್ದು, ಇದೀಗ ಎಲ್ಲ ಮೋಟಾರ್‌ಗಳು ಕೆಟ್ಟು ನಿಂತಿವೆ.ಸುಮಾರು 41 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಯು ಈ ಭಾಗದ ರೈತರ ಪ್ರಯೋಜನಕ್ಕೆ ಬಾರದಂತಾಗಿದೆ. ಬೇಳೆದ ಬೆಳೆಗೆ ನೀರಿಲ್ಲದೇ ರೈತರು ಪರದಾಡುವ ಪರಿಸ್ಥಿತಿ ಬಂದೊದಗಿದೆ.ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಬೀಜ, ಗೊಬ್ಬರ, ಕೀಟನಾಶಕಗಳನ್ನು ಸಿಂಪರಣೆ ಮಾಡಿದ್ದ ರೈತರು ಹಲವಾರು ನಿರೀಕ್ಷೆಗಳನ್ನೇ ಇಟ್ಟುಕೊಂಡಿದ್ದರು. ಬೆಳೆ ಕೈಗೆ ಬರುವ ಹಂತದಲ್ಲಿರುವಾಗ ನೀರು ಸ್ಥಗಿತಗೊಂಡಿದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಇನ್ನೂ 15 ದಿನ ಈ ಮೋಟಾರಗಳು ದುರಸ್ತಿ ಆಗುವುದಿಲ್ಲ ಎಂದು ವಾರ್ಷಿಕ ನಿರ್ವಹಣೆ ಗುತ್ತಿಗೆ ಪಡೆದ ಪುಣೆಯ ಜ್ಯೋತಿ ಕಂಪೆನಿಯ ಮೆಕ್ಯಾನಿಕ್ ಹೇಳಿರುವುದು ರೈತರ ಬವಣೆಯನ್ನು ಇನ್ನಷ್ಟು ಹೆಚ್ಚಿಸಿದೆ.ಅಧಿಕಾರಿಗಳ ನಿರ್ಲಕ್ಷ್ಯ: ವರ್ಷಗಳ ಹಿಂದೆಯೇ ಈ ಯೋಜನೆ ಸಿದ್ಧವಾಗಿದ್ದು, ಉದ್ಘಾಟನೆಗೆ ಕಾದು ನಿಂತಿದೆ. ಅಂದಿನಿಂದ ಇಂದಿನವರೆಗೆ ಮೋಟಾರ್‌ಗಳು ಒಂದೊಂದಾಗಿಯೇ ಕೆಡುತ್ತ ಬಂದಿದ್ದರೂ, ಸಂಬಂಧಿಸಿದ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ಏತ ನೀರಾವರಿ ಯೋಜನೆಯ ಕೆಂಭಾವಿಯ ಜಾಕ್‌ವೆಲ್‌ಗೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ದೂರುತ್ತಿದ್ದಾರೆ.ಒಂದೆಡೆ ಮಳೆ ಇಲ್ಲದೇ ಬರಪೀಡಿತ ತಾಲ್ಲೂಕು ಎಂದು ಸರ್ಕಾರವೇ ಘೋಷಣೆ ಮಾಡಿದ್ದು, ಇದರ ಬೆನ್ನ ಹಿಂದೆಯೇ ಮೋಟಾರ್‌ಗಳು ಕೆಟ್ಟು ಹೋಗಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.ಯೋಜನೆ ಪೂರ್ಣಗೋಂಡು ನಾಲ್ಕು ವರ್ಷ ಗತಿಸಿವೆ. ರೂ. 320 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯಿಂದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ 4,400 ಹೆಕ್ಟೇರ್, ಗುಲ್ಬರ್ಗ ಜಿಲ್ಲೆ ಜೇವರ್ಗಿ ತಾಲ್ಲೂಕಿನ 500 ಹೆಕ್ಟೇರ್, ಮತ್ತು ವಿಜಾಪುರ ಜಿಲ್ಲೆಯ ಇಂಡಿ, ಸಿಂದಗಿ ತಾಲ್ಲೂಕಿನ 37, 000ಹೆಕ್ಟೇರ್ ಸೇರಿದಂತೆ ಒಟ್ಟು 41 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿದೆ.ಜಾಕ್‌ವೆಲ್‌ನಲ್ಲಿ ಅಧಿಕ ಶಕ್ತಿಯುಳ್ಳ ಪಂಪ್‌ಗಳು, ಪಂಪ್‌ಹೌಸ್, ವಿದ್ಯುತ್ ಸರಬರಾಜಿಗೆ ಪ್ರತ್ಯೇಕ 110 ಕೆವಿ ವಿದ್ಯುತ್ ಸ್ಥಾವರ, ಮುಖ್ಯ ಕಾಲುವೆ ಹಾಗೂ ವಿತರಣಾ ಕಾಲುವೆ ಸೇರಿದಂತೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಾಲುವೆಗಳಿಗೆ ನೀರನ್ನೂ ಹರಿಸಲಾಗುತ್ತಿತ್ತು. ಜಾಕ್‌ವೆಲ್‌ನಲ್ಲಿ ಐದು ಮೋಟಾರ್‌ಗಳನ್ನು ಅಳವಡಿಸಿದ್ದು, ಇದರಲ್ಲಿ 3 ಮೋಟಾರ್‌ಗಳನ್ನು ನೀರೆತ್ತಲು ಬಳಸಲಾಗುತ್ತಿತ್ತು.ಎರಡು ಮೋಟಾರ್‌ಗಳನ್ನು ಕಾಯ್ದಿರಿಸಲಾಗಿತ್ತು, ಜಾಕ್‌ವೆಲ್ ವಾರ್ಷಿಕ ನಿರ್ವಹಣೆಯನ್ನು ನಿಗಮವು ಕೋಟ್ಯಂತರ ರೂಪಾಯಿಗೆ ಗುತ್ತಿಗೆ ನೀಡಿದೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ವಹಣೆ ಮಾಡದೇ ಹಣ ಎತ್ತಿ ಹಾಕಿದ್ದೇ ಈ ಪರಿಸ್ಥಿತಿಗೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.ಎಚ್ಚರಿಕೆ: ಗುತ್ತಿ ಬಸವಣ್ಣ ಇಂಡಿ ಏತ ನೀರಾವರಿ ಯೋಜನೆ ಮೋಟಾರ್‌ಗಳು ಕೆಟ್ಟು ನಿಂತಿದ್ದು, ನೀರು ಸ್ಥಗಿತಗೊಂಡಿದ್ದರಿಂದ ಮೂರು ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ ಹಾಳಾಗುತ್ತಿದೆ. ಇದಕ್ಕೆ ನೇರವಾಗಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ರೈತ ಮುಖಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ ಆರೋಪಿಸಿದ್ದಾರೆ.ಕಳೆದ ಮೂರು ವರ್ಷಗಳಿಂದಲೂ ನೀರಾವರಿ ಸಚಿವರು, ಈ ಭಾಗದ ನೀರಾವರಿ ಪ್ರದೇಶದ ಯೋಜನೆಗಳಿಗೆ ಭೇಟಿ ನೀಡದೇ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಈಗ ಬೆಳೆದಿರುವ ಬೆಳೆಗಳಿಗೆ ನೀರಉ ಹರಿಯದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಸರ್ಕಾರವೇ ನೇರವಾಗಿ ಹೊಣೆಯಾಗುತ್ತದೆ. ಶೀಘ್ರದಲ್ಲಿ ಮೋಟಾರ್‌ಗಳನ್ನು ದುರಸ್ತಿ ಮಾಡದಿದ್ದಲ್ಲಿ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.