ಬುಧವಾರ, ಆಗಸ್ಟ್ 21, 2019
22 °C
ಪ್ರಬಂಧ

ಗುಬ್ಬಚ್ಚಿ ದಾಟಿಸಿದ ದಾರ

Published:
Updated:

ಎಂದಿನಂತೆ ಅಂದು ಪಶುಚಿಕಿತ್ಸಾಲಯಕ್ಕೆ ಹೊರಟಾಗ ಹೊಸ ಅನುಭವಕ್ಕೆ ಜೀವ ತವಕಿಸುತ್ತಿತ್ತು.

ಬೆಳಗಿನ ಜಾವ ಎದ್ದು ಮನೆಯ ಪುಡಿ ಕೆಲಸಗಳನ್ನು ಮುಗಿಸಿ ಮಕ್ಕಳನ್ನು ಎತ್ತಿ ಕುಣಿದು ಕುಣಿಸಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೊರಟಿದ್ದೆ.ಕಳೆದ ಕ್ಷಣವನ್ನು ಅಲ್ಲೇ ಬಿಟ್ಟು ಹೊಸ ಗಳಿಗೆಗೆ ಮುಖ ಮಾಡುವ ಮಗಳು ಮತ್ತು ಮಗ. ತುರುವೇಕೆರೆ ತಾಲ್ಲೂಕು ತಂಡಗ ಎಂಬ ಹಳ್ಳಿಯಲ್ಲಿ ನಾನು ಕೆಲಸ ನಿರ್ವಹಿಸುತ್ತಿದ್ದ ಆಸ್ಪತ್ರೆ ಇತ್ತು. ಆಸ್ಪತ್ರೆ ಮತ್ತು ಮನೆಗೆ ಆಗತಾನೆ ಫೋನುಗಳು ಅವತರಿಸಿದ್ದವು. ಆಸ್ಪತ್ರೆ ಸೇರಿದ ಸ್ವಲ್ಪ ಹೊತ್ತಿನಲ್ಲಿಯೇ ಹೆಂಡತಿಯಿಂದ ಫೋನು- “ಏನ್ರೀ ಏನ್ ಮಾಡ್ತಾ ಇದ್ದೀರಿ”? -ಹೆಂಡತಿಯ ಪ್ರಶ್ನೆ.`ಎಮ್ಮೆ ಬಾಲ ಹಿಡಿದುಕೊಂಡಿದ್ದೇನೆ'- ನಾನು.

`ಕುದುರೆ ಬಾಲ ಹಿಡಿಯದಿದ್ದರೆ ಸಾಕು!'- ಹೆಂಡತಿ.

`ಕತ್ತೆ ಬಾಲ ಹಿಡಿದರೆ ಆಗಬಹುದೋ?' - ನಾನು.

`ಕತ್ತೆ ಲಾತ ಬಹಳ ಮಜವಾಗಿರುತ್ತಂತೆ!'- ಹೆಂಡತಿ.

ಒಮ್ಮೆ ಕತ್ತೆಯೊಂದರ `ಡಿಸ್ಟೋಕಿಯಾ'ದಲ್ಲಿ ಪಾಲ್ಗೊಂಡು ಕತ್ತೆಯಿಂದ ಸರಿಯಾಗಿ ಲಾತ ತಿಂದಿದ್ದೆ. ಮನೆಯಲ್ಲಿ ಅದನ್ನು ರಸವತ್ತಾಗಿ ವರ್ಣಿಸಿದ್ದು ನನಗೇ ತಿರುಗುಬಾಣವಾಗಿತ್ತು.ಒಮ್ಮೆ ಗೆಳೆಯ ಡಾ. ಸ್ವಾಮಿಯ ಜೊತೆ ಕುದುರೆ ರೇಸಿಗೆ ಹೋಗಿ `ಕ್ವಿನೆಲ್ಲ', `ಟ್ರಿನೆಲ್ಲ' ಮುಂತಾದ ಅರ್ಥವಾಗದ ಆಟಗಳಲ್ಲಿ 25 ರೂಪಾಯಿಗಳನ್ನು ಕುದುರೆ ಬಾಲಕ್ಕೆ ಕಟ್ಟಿ ನಾಮಹಾಕಿಕೊಂಡು ಬಂದದ್ದು ನನ್ನನ್ನು ಅನೇಕ ವರ್ಷಗಳವರೆಗೆ ಕಿಚಾಯಿಸಲು ನನ್ನ ಹೆಂಡತಿಗೆ ನೆಪ ಒದಗಿಸಿತ್ತು. ಇರಲಿ.ಆಸ್ಪತ್ರೆಗೆ ಬಂದ ಹಲವಾರು ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತ ಸುಮಾರು ಹೊತ್ತಾಯಿತು. ಅಷ್ಟರಲ್ಲಿ ಆಗಲೇ ಹಲವಾರು ಸಲ ಚಹಾ ಸಮಾರಾಧನೆಯೂ ಆಗಿತ್ತು. ನನ್ನ ಚಹಾದ ಚಟ ಕಂಡ ರೈತರು ಆಸ್ಪತ್ರೆಗೆ ದೊಡ್ಡ ಚೆಂಬುಗಳಲ್ಲಿ ಪ್ಲಾಸ್ಕುಗಳಲ್ಲಿ ಚಹಾ ತರುವುದನ್ನು ರೂಢಿ ಮಾಡಿಕೊಂಡಿದ್ದರು. ಒಂದು ಕೈಯಲ್ಲಿ ದನ ಹಿಡಿದು ಮತ್ತೊಂದು ಕೈಯ್ಯಲ್ಲಿ ಚಹಾ ಹಿಡಿದು ಬರುತ್ತಿದ್ದ ರೈತರು! ಆಸ್ಪತ್ರೆ ಸಿಬ್ಬಂದಿಯ ಜೊತೆ ಆಸ್ಪತ್ರೆಯಲ್ಲಿರುತ್ತಿದ್ದ ರೈತರಿಗೆಲ್ಲ ಚಹಾ ಸಮಾರಾಧನೆ! ಒಂದೆರಡು ಕಪ್ಪು ಅಲ್ಲ, ಎಲ್ಲರ ಹೊಟ್ಟೆ ತುಂಬುವಂತೆ ಚೆಂಬುಗಟ್ಟಲೆ! ನಾನಂತೂ ಚಹಾ ಕುಡಿಕುಡಿದೇ ವಾಲಾಡುತ್ತಿದ್ದೆ!ರೈತರೆಲ್ಲ ಸರ್ಕಾರಿ ಆಸ್ಪತ್ರೆಗೆ ಬಂದಂತೆ ವರ್ತಿಸದೆ ನೆಂಟರ - ಸ್ನೇಹಿತರ ಮನೆಗೆ ಬಂದಷ್ಟು ಖುಷಿಯಿಂದಿರುತ್ತಿದ್ದರು. ಮಾಯಣ್ಣನೆಂಬ ನನ್ನ ಪರಮಾಪ್ತನಂತೂ ಪ್ರತಿದಿನ ಆಸ್ಪತ್ರೆಗೆ ಬಂದು ನನ್ನ ಹತ್ತಿರ ಒಂದರ್ಧ ಗಂಟೆ ಕಾಲ ಕಳೆಯದಿದ್ದರೆ ನಮ್ಮಿಬ್ಬರಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಮಾಯಣ್ಣನ ಮಕ್ಕಳು ಎಷ್ಟೋಸಲ ಆಸ್ಪತ್ರೆಗೆ ಬಂದು ತಮ್ಮ ತಂದೆಯನ್ನು ಕರೆದುಕೊಂಡು ಹೋದದ್ದೂ ಇದೆ. `ಜನ್ರು ಸಾರಾಯಿ ಅಂಗಡಿಗೆ, ಇಸ್ಪೀಟು ಅಡ್ಡೆಗೆ ಪಾಠ ಆದ್ರೆ ನೀನೇನಪ್ಪ ದನಿನಾಸ್ಪತ್ರೆಗೆ ಪಾಠ ಆಗಿದ್ದೀಯಾ' ಎಂಬುದು ಅವರ ಕಾಮನ್ ಬೈಗುಳವಾಗಿತ್ತು.ಅಂದು ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಪಕ್ಕದ ವಿಠಲದೇವರ ಹಳ್ಳಿಯ ಪುಟ್ಟೇಗೌಡ ಆಸ್ಪತ್ರೆಗೆ ಬಂದು, `ತನ್ನ ಎಮ್ಮೆಯ ಮೈ ಹೊರಟಿದೆ, ಕೂಡಲೆ ಬರಬೇಕು' ಎಂದು ವಿನಂತಿಸಿದ. ಪುಟ್ಟೇಗೌಡ ಮತ್ತು ಅವನ ಹೆಂಡತಿ ಪುಟ್ಟತಾಯಮ್ಮ ನನಗೆ ಬಹಳ ದಿನಗಳಿಂದ ಪರಿಚಿತರಿದ್ದರು. ಆ ದಿನ ಅವರ ಎಮ್ಮೆಯೊಂದು ತೋಟದಲ್ಲಿ ಮೇಯುತ್ತಲೇ ಕರು ಹಾಕಿತ್ತು. ಕರುಹಾಕಿದ ಸ್ವಲ್ಪ ಹೊತ್ತಿನಲ್ಲಿಯೇ ಕಸ (ಪ್ಲಾಸೆಂಟ) ಬಿದ್ದು ಹೋಗುವುದರ ಜೊತೆ ಗರ್ಭ ಚೀಲವೂ ಹೊರಬಂದಿತ್ತು. ಯೋನಿಯಿಂದ ಹೊರಗಡೆ, ಕೆಂಪಗೆ ರಕ್ತಸಿಕ್ತವಾದ ಗರ್ಭಚೀಲ ನೇತಾಡುವುದನ್ನು ಕಂಡು ಗಾಬರಿಯಾಗಿದ್ದ ಪುಟ್ಟೇಗೌಡ ಕೂಡಲೇ ನನ್ನ ಬಳಿ ಬಂದಿದ್ದ.ಬೈಕಿನಲ್ಲಿ ನಾನೂ ಪುಟ್ಟೇಗೌಡನೂ ತೋಟದ ಬಳಿ ಬಂದಾಗ ಅವನ ಹೆಂಡತಿ ಪುಟ್ಟತಾಯಮ್ಮ ಎಮ್ಮೆಯ ಸುತ್ತ ಗಾಬರಿಯಿಂದ ರೌಂಡು ಹೊಡೆಯುತ್ತ ದೇವಾನುದೇವತೆಗಳಿಗೆಲ್ಲ ಪ್ರಾರ್ಥಿಸುತ್ತ ವಿಧವಿಧವಾಗಿ ಹರಕೆ ಹೊರುತ್ತ ಎಳೆಯ ಕರುವನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿದ್ದಳು. ಒಂದೆರಡು ನಿಮಿಷಗಳು ಕಳೆಯುವಷ್ಟರಲ್ಲಿ ಯಾವ ದೇವರುಗಳನ್ನು ಪ್ರಾರ್ಥಿಸುತ್ತಿದ್ದಳೋ ಅದೇ ದೇವರುಗಳನ್ನು ಶಪಿಸಲು ಪ್ರಾರಂಭಿಸುತ್ತಿದ್ದಳು.ನನ್ನನ್ನು ನೋಡಿದ ಕೂಡಲೆ `ಬರ್ರಿ ಬರ್ರಿ ಡಾಕ್ಟ್ರೆ. ನನ್ನ ತವರಿನ ಬಳ್ಳುಳ್ಳಿ ಕಣ್ರಿ ಈ ಎಮ್ಮೆ. ಒಳ್ಳೆ ತಳಿ. ದಿನಕ್ಕೆಂಟು ಲೀಟರಿಗೆ ಮೋಸ ಇಲ್ಲ. ಒಂದೂವರೆ ವರ್ಷ ಹಾಲು ಕೊಡುತ್ತೆ. ಇಂಥ ಎಮ್ಮೆ ಈ ಏರಿಯಾದಲ್ಲೆ ಇಲ್ಲ. ಇವತ್ತು ನೋಡಿದ್ರೆ ಹಿಂಗಾಗೈತೆ. ಮುಕ್ಕುರ್ದು ಮುಕ್ಕುರ್ದು ಮೈ ಹೊಂಡಿಸಿಕೊಂಡು ಬಿಟ್ಟೈತೆ. ಇದೇನು ಅನಿಷ್ಟ ಎಮ್ಮೆ ಸಾರ್? ಅಂತೂ ಅರ್ಜೆಂಟಿಗೆ ದೇವರು ಬಂದಂಗೆ ಬಂದ್ರಿ' ಎನ್ನುತ್ತ ನನ್ನನ್ನು ಸ್ವಾಗತಿಸಿದಳು. ಹೊಗಳಿಕೆ ಮತ್ತು ಶಾಪ ಎರಡಕ್ಕೂ ಈಡಾಗಿದ್ದ ದೇವರುಗಳ ಗತಿ ನನಗೂ ಎಲ್ಲಿ ಒದಗುತ್ತದೋ ಎಂದು ಹೆದರಿಕೆ ಆಯಿತು.ಅವರ ತೋಟದ ಮನೆಯ ಕೊಟ್ಟಿಗೆಯಲ್ಲಿ ಎಮ್ಮೆ ನಾಲ್ಕು ಕಾಲುಚಾಚಿ ಬಿದ್ದುಕೊಂಡಿತ್ತು. ಮಣ್ಣಿನ ನೆಲದ ಕೊಟ್ಟಿಗೆಯಲ್ಲಿ ಬರೀ ಗುಂಡಿ ಗೊಟರುಗಳೇ ಇದ್ದವು. ಅಲ್ಲಿ ಕುರ್ಚಿ ಬೆಂಚು ಸ್ಟೂಲು ಏನೂ ಇರಲಿಲ್ಲವಾದ್ದರಿಂದ ಒಂದು ಗೋಣಿಚೀಲದ ಮೇಲೆ ಕತ್ತರಿ, ಸೂಜಿ, ಇಕ್ಕಳ ಹತ್ತಿ ಮುಂತಾದವುಗಳನ್ನು ಜೋಡಿಸಿಕೊಂಡೆ. ಪುಟ್ಟೇಗೌಡ ಅಲ್ಲಿಯೇ ಮೂರು ಕಲ್ಲುಗಳನ್ನು ಜೋಡಿಸಿ ಒಲೆ ಸಿದ್ದಪಡಿಸಿ ಒಂದು ಪಾತ್ರೆಯಲ್ಲಿ ನೀರು ಕಾಯಿಸತೊಡಗಿದ.ನಾನು ಒಂದು ಬಕೆಟ್‌ನಲ್ಲಿ ಉಗುರುಬಿಸಿ ನೀರು ತರಿಸಿಕೊಂಡು ಪೊಟಾಸಿಯಂ ಪರಮಾಂಗನೇಟ್ ಹರಳುಗಳನ್ನು ಬೆರೆಸಿದೆ. ಹರಳುಗಳು ನೇರಳೆ ಬಣ್ಣದ ಚಿತ್ತಾರವನ್ನು ಬಿಡಿಸುತ್ತ ನೀರಿನಲ್ಲಿ ನಿಧಾನಕ್ಕೆ ಕರಗತೊಡಗಿದವು. ಆರು ಅಡಿ ಉದ್ದವಿದ್ದ ಪುಟ್ಟತಾಯಮ್ಮ ಮಾತುಮಾತಿಗೆ ಗಂಡನನ್ನು ಬೈಯುತ್ತಿದ್ದಳು. ಪುಟ್ಟೇಗೌಡ ಕಮಕ್ ಕಿಮಕ್ ಎನ್ನದೆ ಸುಮ್ಮನಿದ್ದ. ಮನೆಯ ಹೊರಗೆ ದಂಡಿಯಾಗಿ ಮಾತನಾಡುತ್ತ ಮೀಸೆ ತಿರುವುತ್ತಿದ್ದ ಪುಟ್ಟೇಗೌಡ ಹೆಂಡತಿಯೆದುರು ಬಾಲ ಮುದುರಿಕೊಂಡು `ಗಪ್‌ಚುಪ್' ಆಗಿದ್ದ.ಅಡ್ಡಬಿದ್ದಿದ್ದ ಎಮ್ಮೆ ಮುಕ್ಕುರಿಯುತ್ತಿದ್ದುದನ್ನು ಮುಂದುವರಿಸಿಯೇ ಇತ್ತು. ಇಂಥ ಪ್ರಕರಣಗಳಲ್ಲಿ ಮೈಯ್ಯಿಂದ ಹೊರ ಬಂದಿರುವ ಗರ್ಭಚೀಲವನ್ನು ಎಮ್ಮೆಯ ಯೋನಿಯ ಮುಖಾಂತರ ಒಳಗೆ ತಳ್ಳಿ (ಅಂದರೆ ಅದರ ಸ್ವಸ್ಥಾನಕ್ಕೆ ತಳ್ಳಿ) ಎರಡೂ ಯೋನಿ ತುಟಿಗಳನ್ನು ಸಮನಾಗಿ ಜೋಡಿಸಿಕೊಂಡು ಟ್ವೈನ್ ದಾರದಿಂದ ಭದ್ರವಾಗಿ ಹೊಲಿಯಬೇಕು. ಸಾಮಾನ್ಯವಾಗಿ ಕೆಲವು ಹಸು/ಎಮ್ಮೆಗಳು ಕೆಲವು ಕಾರಣಗಳಿಗಾಗಿ ತಿಣುಕಿ ತಿಣುಕಿ ಗರ್ಭಚೀಲವನ್ನು ಮತ್ತೆ ಮತ್ತೆ ಹೊರಕ್ಕೆ ನೂಕುತ್ತವೆ.ಕೆಲವು ಗಂಟೆಗಳಿಂದ ಒಂದೆರಡು ದಿನಗಳವರೆಗೆ ಈ ತಿಣುಕು ಕಾಣಿಸಿಕೊಳ್ಳಬಹುದು. ಆದರೆ ತಿಣುಕಿನ ತೀವ್ರತೆ ಕಾಲಕಳೆದಂತೆ ಕಡಿಮೆಯಾಗುತ್ತದೆ. ನನ್ನ ಎದುರು ಮಲಗಿದ್ದ ಎಮ್ಮೆ ಉಸಿರು ಬಿಗಿಹಿಡಿದು ವಿಪರೀತವಾಗಿ ತಿಣುಕುತ್ತಿದ್ದುದರಿಂದ ತಡಮಾಡದೆ ಗರ್ಭಚೀಲವನ್ನು ಒಳನೂಕಿ ಹೊಲಿಗೆ ಹಾಕಬೇಕಿತ್ತು. ಇಲ್ಲದಿದ್ದರೆ ಭಾಗಶಃ ಹೊರಹೊರಟಿದ್ದ ಗರ್ಭಚೀಲ ಸಂಪೂರ್ಣವಾಗಿ ಹೊರಬರುವ ಅಪಾಯವಿತ್ತು.ಉಪಕರಣಗಳನ್ನೆಲ್ಲ ಮತ್ತೊಮ್ಮೆ ಪರೀಕ್ಷಿಸಿದ ನನಗೆ ಒಂದು ಆಘಾತ ಕಾದಿತ್ತು. ನನ್ನ ಬ್ಯಾಗನ್ನು ಎಷ್ಟು ಹುಡುಕಿದರೂ ಅದರಲ್ಲಿ ಹೊಲಿಗೆ ದಾರ ಇರಲಿಲ್ಲ. ಬ್ಯಾಗನ್ನು ಖಾಲಿಮಾಡಿ ಕೊಡವಿದೆ. ಉಹೂಂ. ದಾರ ಇಲ್ಲ. ಅದರ ಹಿಂದಿನ ದಿನ ತಂತಿಬೇಲಿ ಹಾರಲು ಹೋಗಿ ಚರ್ಮ ಸೀಳಿಕೊಂಡಿದ್ದ ಕುರಿಯೊಂದಕ್ಕೆ ಹೊಲಿಗೆ ಹಾಕಿದ ನಂತರ ದಾರದ ಉಂಡೆಯನ್ನು ವಾಪಸ್ ಬ್ಯಾಗಿನಲ್ಲಿಟ್ಟುಕೊಳ್ಳುವುದನ್ನು ಮರೆತುಬಿಟ್ಟೆನೋ ಏನೋ? ಈಗೇನು ಮಾಡುವುದು?

ನಾನು ಪುಟ್ಟೇಗೌಡನನ್ನು ಹೊರಕ್ಕೆ ಕರೆದು `ಟ್ವೈನ್ ದಾರ ಏನಾದ್ರೂ ಇದೆಯಾ ಮಾರಾಯ?' ಎಂದು ಪಿಸುಮಾತಿನಲ್ಲಿ ಪ್ರಶ್ನಿಸಿದೆ.ಆತ ಹೆಂಡತಿಗೆ ಹೆದರಿ ಬಾಯ್ಬಿಡದೆ ತಲೆಯನ್ನು ಅಡ್ಡಡ್ಡ ಅಲ್ಲಾಡಿಸಿದ. ನನ್ನ ಪಿಸುಮಾತುಗಳು ಅದಾವ ಮಾಯೆಯಿಂದಲೋ ಕೇಳಿಸಿಕೊಂಡಿದ್ದ ಪುಟ್ಟತಾಯಮ್ಮ `ಅಯ್ಯೋ! ಟ್ವೈನ್ ದಾರ ಯಾಕೆ ಬರ್ರಿ ಡಾಕ್ಟ್ರೆ! ನಮ್ಮೂರಿನ ಅಡ್ಡಕಸುಬಿ ಅಣ್ಣೇಗೌಡ ದಬ್ಬಳಕ್ಕೆ ಗೇಣಿದಾರ ಪೋಣಿಸಿಕೊಂಡು ಎಮ್ಮೆ ಮಡ್ಲನ್ನು ಮೆಟ್ಟು ಹೊಲಿದಂಗೆ ಹೊಲಿತಾನೆ! ನೀವೂ ಅಷ್ಟೇ ಮಾಡ್ರಿ' ಎಂದು ಕೂಗು ಹಾಕಿದಳು. ಈ ಮಹಾತಾಯಿಗೆ ಮಾತಾಡಲು ಅವಕಾಶ ಕೊಟ್ಟರೆ ನನ್ನನ್ನು ಮತ್ತು ನನ್ನ ವೃತ್ತಿ ಗೌರವವನ್ನು ಹರಾಜು ಹಾಕುವುದರಲ್ಲಿ ಅನುಮಾನವೇ ಇಲ್ಲ ಎಂದು ನನಗೆ ಖಾತ್ರಿಯಾಯಿತು.ನನಗೆ ಹೆಚ್ಚು ಸಮಯ ಇರಲಿಲ್ಲ. ಎಮ್ಮೆ ಮುಕ್ಕುರಿಯುತ್ತಿತ್ತು. ಸಮಯ ಹೋದಂತೆ ಗರ್ಭಚೀಲ ಎಮ್ಮೆಯ ಯೋನಿಯಿಂದ ಇಂಚಿಂಚೇ ಹೊರಬರುತ್ತ ಎಲ್ಲರನ್ನೂ ದಿಗಿಲು ಬೀಳಿಸತೊಡಗಿತ್ತು. ಎಮ್ಮೆಯ ಕಣ್ಣಿನಲ್ಲಿ ಅಪಾರ ನೋವು ಮಡುಗಟ್ಟಿತ್ತು. ಸಣ್ಣ ಸ್ವರದಲ್ಲಿ ಎಮ್ಮೆ ನರಳತೊಡಗಿತು. ಹೊರಹೊರಟ ಗರ್ಭಚೀಲದಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಹೆಪ್ಪುಗಟ್ಟಿದ ರಕ್ತದ ತುಣುಕುಗಳು ಅಲ್ಲಲ್ಲಿ ಚೆದುರಿ ಬಿದ್ದಿದ್ದವು.ಎಮ್ಮೆಯ ಬಾಲದ ಬಳಿ ಅರ್ಧ ಸಿಮೆಂಟ್ ಮೂಟೆಯಷ್ಟು ಗಾತ್ರಕ್ಕೆ ಹೊರಹೊರಟ ಗರ್ಭಚೀಲ ಮತ್ತು ಆಗಾಗ ಇಕ್ಕುತ್ತಿದ್ದ ಸಗಣಿಯ ಗುಡ್ಡೆ, ಎಮ್ಮೆ ಬಾಲ ಅಲ್ಲಾಡಿಸಿದ ಕೂಡಲೆ ನೊಣಗಳ ಝೇಂಕಾರ!ಸಮಯ ಮೀರುತ್ತಿತ್ತು. ವಾಪಸು ಆಸ್ಪತ್ರೆಗೆ ಹೋಗಿ ದಾರ ತರಬೇಕಿತ್ತು ಅಥವಾ ಊರಿನಲ್ಲಿರುವ ಪುಟ್ಟೇಗೌಡನ ಮನೆಗೆ ಹೋಗಿ ತರಬೇಕಿತ್ತು. ಹೇಗೆ ಅವಸರಿಸಿದರೂ ಅರ್ಧ ಗಂಟೆ ಹೊತ್ತು ಹಾಳಾಗುವುದು ನಿಶ್ಚಿತವಾಗಿತ್ತು.

ತಜ್ಞನಾದ ನಾನು ಎಮ್ಮೆಯ ಬಳಿ ಮೂರ್ಖನಂತೆ ನಿಂತಿದ್ದೆ.ಆಗ ಮನೆಯ ಹೊರಗಡೆ `ಪುರ್ ಪುರ್' ಎಂದು ಪಕ್ಷಿ ಹಾರಾಡುವ ಶಬ್ದ ಕೇಳಿಸಿತು. ಕುತೂಹಲದಿಂದ ಶಬ್ದ ಬರುತ್ತಿದ್ದ ಕಡೆ ನಡೆದೆ. ಅಲ್ಲೊಂದು ತೆಂಗಿನ ಯಡಮಟ್ಟೆಗಳ ರಾಶಿಯಿತ್ತು, ಆ ರಾಶಿಯ ಮಧ್ಯದಲ್ಲಿಂದ ಆ ಶಬ್ದ ಬಿಟ್ಟು ಬಿಟ್ಟು ಕೇಳಿಬರುತ್ತಿತ್ತು. ನನ್ನ ಕುತೂಹಲ ಹೆಚ್ಚುತ್ತಾ ಹೋದುದರಿಂದ ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ್ತ ಮುಂದುವರೆದೆ. `ಯಾವುದೋ ಪಕ್ಷಿಯನ್ನು ಹಾವು ಹಿಡಿದಿರಬಹುದು, ಹುಷಾರು' ಎಂದು ಪುಟ್ಟತಾಯಮ್ಮ ಕೂಗು ಹಾಕಿದಳು. ನನ್ನ ಹಿಂದೆ ಬರುತ್ತಿದ್ದ ಪುಟ್ಟೇಗೌಡ ನಿಂತಲ್ಲೇ ತಟಸ್ಥನಾದ.ಹತ್ತಿರ ಹೋಗಿ ನೋಡಿದರೆ ಅಲ್ಲೊಂದು ಗುಬ್ಬಿಯ ಕಾಲಿಗೆ ನಾಲ್ಕೈದು ಅಡಿ ಉದ್ದದ ದಾರ ಗಂಟುಹಾಕಿಕೊಂಡಿತ್ತು. ದಾರದ ಒಂದು ತುದಿ ಗುಬ್ಬಿಯ ಕಾಲಿಗೆ ಕಟ್ಟಿದ್ದು ಮಿಕ್ಕಂತೆ ದಾರ ಅಲ್ಲಿದ್ದ ಹಲವಾರು ಯಡಮಟ್ಟೆಗಳಿಗೆ ಸುತ್ತು ಹೊಡೆದಿತ್ತು. ಗುಬ್ಬಿ ಹಾರಿಹೋಗಲಾಗದೆ ಅಂತರದಲ್ಲಿ ಇಳಿಬಿದ್ದು ನೇತಾಡುತ್ತಿತ್ತು. ಎಷ್ಟು ಹೊತ್ತಿನಿಂದ ಗುಬ್ಬಿ ಬಿಡಿಸಿಕೊಂಡು ಹಾರಿಹೋಗಲು ಪ್ರಯತ್ನಿಸುತ್ತಿತ್ತೋ ಏನೋ? ಸುಸ್ತಾಗಿದ್ದ ಗುಬ್ಬಚ್ಚಿ ಸುಧಾರಿಸಿಕೊಂಡು ಮತ್ತೆ ಮತ್ತೆ ಹಾರಲು ಪ್ರಯತ್ನಿಸುತ್ತಿತ್ತು.

ನಾನು ಹತ್ತಿರ ಹೋದ ಕೂಡಲೆ ಗುಬ್ಬಚ್ಚಿ ಗಾಬರಿಯಾಗಿ ಭಯದಿಂದ ಹಾರಲು ಪ್ರಯತ್ನಿಸಿ ಮತ್ತೊಂದು ಯಡಮಟ್ಟೆಗೆ ಸುತ್ತು ಹಾಕಿಕೊಂಡು ಭಯ ಮತ್ತು ನೋವಿನಿಂದ ಅರಚಿಕೊಳ್ಳತೊಡಗಿತು. ಸುಲಭಕ್ಕೆ ತುಂಡಾಗದ ದಾರ ಗಟ್ಟಿಮುಟ್ಟಾಗಿದ್ದು, ದಪ್ಪ ಇದ್ದುದರಿಂದ ಸಿಕ್ಕಾಗಿರಲಿಲ್ಲ.ನಾನು ಕೂಡಲೆ ಕತ್ತರಿ ತೆಗೆದುಕೊಂಡು ಗುಬ್ಬಚ್ಚಿಯನ್ನು ಕೈಯಲಿ ಹಿಡಿದು, ಅದರ ಕಾಲಿಗೆ ಗಂಟುಬಿದ್ದಿದ್ದ ದಾರವನ್ನು ಕತ್ತರಿಸಿ ಗುಬ್ಬಚ್ಚಿಯನ್ನು ಕೈಬಿಟ್ಟೆ. ಕೈಯಲ್ಲಿ ಹಿಡಿದಾಗ ನಿತ್ರಾಣಗೊಂಡಂತಿದ್ದ ಗುಬ್ಬಚ್ಚಿ ಬಿಟ್ಟಕೂಡಲೆ ಜಗತ್ತಿನಲ್ಲಿರುವ ಶಕ್ತಿಯೆಲ್ಲವನ್ನು ಕೂಡಿಸಿಕೊಂಡಂತೆ ಕ್ಷಣ ಮಾತ್ರದಲ್ಲಿ ಪುರ್ ಎಂದು ಹಾರಿಹೋಯಿತು. ರೆಕ್ಕೆಗಳ ಬಡಿತದ ಗಾಳಿಯು ನನ್ನ ಮುಖಕ್ಕೆ ತಾಗುವಷ್ಟರಲ್ಲಿ ಗುಬ್ಬಚ್ಚಿಯು ಅನಂತ ಆಗಸದಲ್ಲಿ ಲೀನವಾಗಿ ಹೋಯಿತು.ಬಾಲ್ಯದಿಂದಲೂ ಗುಬ್ಬಚ್ಚಿಯನ್ನು ಹಿಡಿಯಬೇಕೆಂಬ ನನ್ನಾಸೆ ಕೈಗೂಡಿತ್ತಾದರೂ ಅದೆಷ್ಟು ಕ್ಷಣಿಕವಾಗಿತ್ತೆಂದರೆ ನನ್ನ ಪ್ರಜ್ಞೆಗದು ದಾಖಲಾಗುವಷ್ಟರಲ್ಲಿ ಹೌದೋ ಅಲ್ಲವೋ ಎಂಬ ಅನುಮಾನ ಬೆಳೆದುಬಿಟ್ಟಿತು. ಹೌದೋ ಅಲ್ಲವೋ? ನಿಜವೋ ಸುಳ್ಳೊ?ಗುಬ್ಬಚ್ಚಿಯ ಕಾಲಿಗೆ ಸುತ್ತಿಕೊಂಡಿದ್ದ ದಾರವನ್ನು ಮಕ್ಕಳಾರೋ ಕಟ್ಟಿದ್ದಿರಬಹುದೇ? ಗುಬ್ಬಚ್ಚಿಯನ್ನು ಅವರಾದರೂ ಹೇಗೆ ಹಿಡಿದಿರಬಹುದು? ಅಥವಾ ಗುಬ್ಬಚ್ಚಿಯ ಕಾಲಿಗೆ ದಾರ ಆಕಸ್ಮಿಕವಾಗಿ ಸುತ್ತಿಕೊಂಡಿತ್ತೇ? ಅಥವಾ ಗೂಡು ಕಟ್ಟಲೋ ಮತ್ತಾವ ಉದ್ದೇಶಕ್ಕೋ ಗುಬ್ಬಚ್ಚಿಯೇ ದಾರವನ್ನು ಹೆಕ್ಕಲು ಹೋಗಿ ಗಂಟು ಮಾಡಿಕೊಂಡಿತ್ತೇ?ಅಸಲಿ ಪ್ರಶ್ನೆಯೆಂದರೆ ನಿಷ್ಪಾಪಿ ಎಮ್ಮೆಯೊಂದು ಗರ್ಭಚೀಲ ಹೊರಹೊರಡಿಸಿಕೊಂಡು ಮುಕ್ಕುರಿಯುತ್ತ ನರಕ ಅನುಭವಿಸುತ್ತಿರುವಾಗ, ಅದನ್ನು ಸರಿಪಡಿಸಲು ನಾನು ದಾರಕ್ಕಾಗಿ ಪರದಾಡುತ್ತಿರುವಾಗ, ಪುಟ್ಟ ಗುಬ್ಬಚ್ಚಿಯೊಂದು ದಾರವನ್ನು ನನಗೆ ದಾಟಿಸಿ ದೇಶದಿಂದ ಅನಂತ ಅವಕಾಶದಲ್ಲಿ ಅದೃಶ್ಯವಾಗಿ ಹೋಯಿತಲ್ಲ! ಈ ವಿಚಿತ್ರದಲ್ಲಿ ವಿಚಿತ್ರ ಘಟನೆಗೆ ಏನು ಹೇಳುವುದು? ಯಾವುದನ್ನು ತಳುಕು ಹಾಕಿ ತಾಳೆ ನೋಡಿ ಯಾವ ತೀರ್ಮಾನಕ್ಕೆ ಬರುವುದು? ಅಥವಾ ಇದೆಲ್ಲ ಕಾಕತಾಳೀಯವೆಂದು ತಳ್ಳಿಹಾಕಿಬಿಡಬಹುದೇ?ಈ ಕಗ್ಗಂಟನ್ನು ಬದಿಗೊತ್ತಿ ಎಮ್ಮೆಯ ಚಿಕಿತ್ಸೆ ಪ್ರಾರಂಭಿಸಿದೆ. ಗರ್ಭಚೀಲವನ್ನು ಪೊಟಾಸಿಯಂ ಪರಮಾಂಗನೇಟ್ ದ್ರಾವಣದಲ್ಲಿ ಸ್ವಚ್ಛ ಮಾಡತೊಡಗಿದೆ. ಪುಟ್ಟತಾಯಮ್ಮ ಭಾರವಾದ ಗರ್ಭಚೀಲವನ್ನು ಹಿಡಿದೆತ್ತಿ ಸಹಕರಿಸಿದಳು. ಕಿರಿದಾದ ಯೋನಿ ದ್ವಾರದಲ್ಲಿ ಗರ್ಭಚೀಲವನ್ನು ಒಳತಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ನಾನು ಒಳತಳ್ಳತೊಡಗಿದಂತೆ ಎಮ್ಮೆ ಮುಕ್ಕುರಿಯತೊಡಗಿತು.ಸಮುದ್ರದ ಅಲೆಗಳೋಪಾದಿಯಲ್ಲಿ ಗರ್ಭಚೀಲದ ಸಂಕುಚನ ಕ್ರಿಯೆಗಳು ನನ್ನನ್ನು ಹೈರಾಣ ಮಾಡತೊಡಗಿದವು. ನಾನು ನನ್ನೆಲ್ಲ ಶಕ್ತಿ ಬಳಸಿ ಗರ್ಭಚೀಲವನ್ನು ಒಳತಳ್ಳಿದರೆ ಗರ್ಭಚೀಲದ ಸಂಕುಚನಗಳು ಹೊರತಳ್ಳುವುದು- ಈ ಯುದ್ಧ ಕೊನೆಗಾಣದಂತಿತ್ತು. ಈ ಸೆಣಸಾಟದಲ್ಲಿ ಪುಟ್ಟತಾಯಮ್ಮನ ದೈಹಿಕ ಶಕ್ತಿ ನನಗೆ ಆನೆಬಲವನ್ನು ನೀಡಿತು. ಪುಟ್ಟೇಗೌಡ ಎಮ್ಮೆಯ ತಲೆಯನ್ನು ಹಿಡಿದು ಅದು ಮೇಲುಕ್ಕೇಳದಂತೆ ನೋಡಿಕೊಂಡ.ಅಂತೂ ಇಂತೂ ಮೂವತ್ತು ನಲವತ್ತು ನಿಮಿಷದಲ್ಲಿ ಗರ್ಭಚೀಲವನ್ನು ಸಂಪೂರ್ಣವಾಗಿ ಒಳತಳ್ಳಿದೆ. ಗರ್ಭಚೀಲದ ಒಳಗೆ ನಂಜಾಗದಂತೆ ಮಾತ್ರೆಗಳನ್ನು ಹಾಕಿದೆ. ಪುಟ್ಟತಾಯಮ್ಮ ಎಮ್ಮೆಯ ಯೋನಿ ತುಟಿಗಳನ್ನು ಬಿಗಿಹಿಡಿದು ನಾನು ಹೊಲಿಗೆ ಹಾಕಲು ನುರಿತ ಸಹಾಯಕಳಂತೆ ಸಹಕರಿಸಿದಳು. ಹೊಲಿಗೆಗಳ ಮೇಲೆ ಟಿಂಚರ್ ಹಾಕಿ, ಬೇವಿನ ಎಣ್ಣೆ ಸುರಿದು, ನೊಣಗಳು ಹತ್ತಿರ ಸುಳಿಯದಂತೆ ಮಾಡಿದೆ. ಕೊಡಬೇಕಾದ ಚುಚ್ಚುಮದ್ದುಗಳನ್ನು ನೀಡಿದೆ. ಕೆಲವು ಸೂಚನೆಗಳನ್ನು ನೀಡಿ ಮೇಲೆದ್ದೆ.ಅತಿ ವಿಚಿತ್ರವೊಂದು ಘಟಿಸಿದ್ದಕ್ಕೋ ಏನೋ ಪುಟ್ಟತಾಯಮ್ಮ ಗಂಡನೊಡನೆ ಜಗಳವಾಡುವುದಿರಲಿ ಮಾತುಗಳನ್ನು ಸಹ ಆಡದೆ ಬರೀ ಸಂಜ್ಞೆಗಳಲ್ಲಿ ವ್ಯವಹರಿಸಿದಳು. ಹೆಂಡತಿಯ ಅವ್ಯಾಹತ ಬೈಗುಳಗಳಿಂದ ಪಾರಾಗಿದ್ದ ಪುಟ್ಟೇಗೌಡ ಅಳಾರವಾಗಿದ್ದ.ನಾನು ಹೊರಬಂದು ಕೈಕಾಲು ಮುಖಗಳನ್ನೆಲ್ಲ ಚೆನ್ನಾಗಿ ತೊಳೆದುಕೊಂಡು ಕತ್ತೆತ್ತಿ ನೋಡಿದರೆ ಆಳವೂ ವಿಶಾಲವೂ ಶುಭ್ರವೂ ಆದ ಆಕಾಶ! ಎಲ್ಲಿದೆ ಗುಬ್ಬಚ್ಚಿ?ಇದಾದ ನಂತರ ನಾಲ್ಕೈದು ವರ್ಷ ಅದೇ ಊರಿನಲ್ಲಿ ಇದ್ದೆ. ಆ ಎಮ್ಮೆ ಮತ್ತೊಮ್ಮೆ ಗರ್ಭಕಟ್ಟಿ ಯಾವ ತೊಂದರೆಯೂ ಇಲ್ಲದೆ ಕರು ಹಾಕಿತು. ಪುಟ್ಟೇಗೌಡ ಯಾವಾಗ ತಂಡಗಕ್ಕೆ ಬಂದರೂ ತಪ್ಪಿಸದಂತೆ ಆಸ್ಪತ್ರೆಗೆ ಬಂದು ಭರ್ಜರಿ ಮಾತನಾಡುತ್ತ ಚಹಾ ಕುಡಿಸಿ ಕುಡಿದು ಹೋಗುತ್ತಿದ್ದ.

Post Comments (+)