ಬುಧವಾರ, ಜೂನ್ 23, 2021
23 °C

ಗುಬ್ಬಚ್ಚಿ ಬರೆದ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಯ ಸ್ನೇಹಿತರೇ...

ಪತ್ರ ಓದಲು ಸಮಯವಿಲ್ಲ, ಒಂದು ಎಸ್‌ಎಂಎಸ್ ಕಳಿಸಿಬಿಡು; ಓದಿಕೊಳ್ಳುತ್ತೇವೆ ಎನ್ನುತ್ತಿದ್ದೀರಾ? ನನಗೆ ನಿಮ್ಮ ಮೊಬೈಲ್ ಕಂಡರೆ ಇಷ್ಟವಿಲ್ಲ ಹಾಗಾಗಿ ಈ ಪತ್ರ. ತುಸು ಬಿಡುವು ಮಾಡಿಕೊಂಡು ಓದಿ...ಇಂದು ನನ್ನ ದಿನ. ಅದನ್ನು ಎಲ್ಲರೂ ಆಚರಿಸುತ್ತಿರುವುದು ಸಂತಸವೇ. ಆದರೆ ಒಂದು ಬೇಸರ. ಮದುವೆಯಲ್ಲಿ ಮದುಮಗಳಿಲ್ಲದಿದ್ದರೆ ಕಂಬಕ್ಕೆ ತಾಳಿ ಕಟ್ಟುತ್ತೀರಾ? ಇಲ್ಲೂ ಅದೇ. ನಮ್ಮ ಹೆಸರಲ್ಲಿ ದಿನ ಆಚರಿಸಿಕೊಳ್ಳಬೇಕಾದ ನಮ್ಮನ್ನೇ ಆಚೆ ಓಡಿಸಿ ನೀವು ಬಿಳಿಹಾಳೆಯ ಕಪ್ಪು ಅಕ್ಷರಗಳಲ್ಲಿ `ಗುಬ್ಬಚ್ಚಿಯನ್ನು ಮರಳಿ ಕರೆಸಬೇಕು~ ಎಂದು ಬರೆದು ಸುಮ್ಮನಾಗುತ್ತೀರಿ. ನಮಗಾಗಿ ಸಭೆ, ಸಮಾರಂಭ, ವಿಚಾರಗೋಷ್ಠಿ, ಉಪನ್ಯಾಸ ಮಾರ್ಚ್ 20 ಮುಗಿದರೂ ಸಾಗಿರುತ್ತವೆ. ಇದು ಅಕ್ಷರದ ಮೇಲಷ್ಟೇ ನಲಿದಾಡುತ್ತದೆ.ನಿಮ್ಮ ಪಕ್ಷಿ ಕಾಳಜಿ ತೋರಿಕೆಗಾಗಿಯೇನೋ ಎಂಬ ಅನುಮಾನ ನನಗೆ.

ಮೊದಲೆಲ್ಲಾ ದಿನವೂ ನಮಗೆ ಹಬ್ಬವೇ. ನಿಮ್ಮಮ್ಮ- ಅಜ್ಜಿ ಅಕ್ಕಿಯಲ್ಲಿ ಸಿಗುವ ಹುಳುಗಳನ್ನು ಹೆಕ್ಕಿಹೆಕ್ಕಿ ನಮಗೆ ಹಾಕುತ್ತಿದ್ದರು. ಸಾಲದೆಂಬಂತೆ ಅಂಗಳದ ತುಂಬೆಲ್ಲಾ ನಮಗಾಗಿ ಕಾಳು ಹರಡುತ್ತಿದ್ದರು. ಇಂದು ಅಂಥ ನಿಸ್ಪೃಹ ಜೀವಗಳಿಗಾಗಿ ಹುಡುಕಾಡಬೇಕು. ಬಹುಪಾಲು ಬೆಂಗಳೂರಿಗರು ಕೊಂಡು ತರುವ ಶುದ್ಧ ಸಣ್ಣಕ್ಕಿಯಲ್ಲಿ ತಿನ್ನಲು ನಮಗೆ ಹುಳುಗಳೆಲ್ಲಿ ಸಿಕ್ಕಾವು?ಅಂದು ಮನೆಗೊಂದಾದರೂ ಮರವಿರುತ್ತಿತ್ತು. ಮರದಲ್ಲೇ ಕುಳಿತು ನಿಮ್ಮಮ್ಮ ಹೊರಬರುವುದನ್ನೇ ಇಣುಕಿ ನೋಡುತ್ತಿದ್ದೆವು, ಈಗೇನು ತಂದಳು ತಿನ್ನಲು ಎಂದು. ಈಗ ಸಣ್ಣ ಹೂಕುಂಡಗಳಿಗೆ ನೀರು ಹಾಕಲು ಮನಸ್ಸು ಮಾಡುವವರೂ ಅಪರೂಪವಾಗಿಬಿಟ್ಟಿದ್ದಾರೆ.ನಿಮ್ಮಂದಿಗೂ ನಾನು ಆಟವಾಡಿದ ನೆನಪು...

ಗುಬ್ಬಿ ಗುಬ್ಬಿ ಗುಬ್ಬಕ್ಕ

ಕಡ್ಡಿ ಕೂಳಿ ಹೆಕ್ಕಕ್ಕ

ಮಕ್ಳಿಗೆಂದರೆ ನೀನು

ಬಲು ಇಷ್ಟ ಕಣಕ್ಕ

ಎಂದು ಹಾಡಿ ತುಸು ತುಂಟಾಟ, ಚೇಷ್ಟೆ ಮಾಡುತ್ತಿದ್ದಿರಿ. ಆದರೆ ನಿಮ್ಮ ಮಕ್ಕಳಿಗೆ ಮಾತ್ರ ನನ್ನನ್ನು ಫೋಟೊ ಫ್ರೇಮ್‌ನಲ್ಲಿ ನೋಡುವಂತೆ ಮಾಡಿದ್ದೀರಿ. ಇದ್ಯಾವ ನ್ಯಾಯ? ಹಾಗಂತ ನನ್ನ ಸಂತತಿ ಸಂಪೂರ್ಣ ನಾಶವಾಗಿದೆ ಅಂತ ಭಾವಿಸಬೇಡಿ. `ಅಳಿವಿನಂಚಿನ ಪಕ್ಷಿ~ಗಳ ಪಟ್ಟಿಯಲ್ಲಿ ಸ್ಥಾನ ಪಡಿಯುತ್ತಿದ್ದೀನಷ್ಟೆ.ನಿಮ್ಮ ಪ್ರೀತಿಯ ಉದ್ಯಾನನಗರಿಯಲ್ಲಿ ನಾನಿನ್ನೂ ಇದ್ದೀನಿ. ಈಗಲೋ ಆಗಲೋ ಇಲ್ಲಿಂದ ಜಾಗ ಖಾಲಿ ಮಾಡಿಸುತ್ತೀರೆಂಬುದೂ ನಂಗೆ ಗೊತ್ತು. ಆದರೆ ನಂಗೆ ನಿಮ್ಮನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ನೀವೇ ನಂಗೆ ಬಿರುದು ಕೊಟ್ಟಂತೆ (ಸ್ನೇಹಜೀವಿ) ನಾನು ನಿಮ್ಮ ಸ್ನೇಹವನ್ನು ಬಯಸುತ್ತೇನೆ. ಕಾಡಿನಲ್ಲೆಲ್ಲೋ ಒಂಟಿಯಾಗಿ ಬದುಕುವ ತಾಕತ್ತು ನನಗಿಲ್ಲ. ವಲಸೆ ಹೋಗುವುದು ನನ್ನ ಜಾಯಮಾನವಲ್ಲ. ನಿಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಆಡುವ ಆಸೆ ಇನ್ನೂ ಇದೆ. ಅದಕ್ಕೆ ಅವಕಾಶ ಮಾಡಿಕೊಡಿ.

 

 ಇಂತಿ ಪ್ರೀತಿಯ

 ಗುಬ್ಬಚ್ಚಿ

ಗುಬ್ಬಕ್ಕ... ಎಲ್ಹೋದ್ಯಕ್ಕ!

ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಲು ಕಾರಣವಾದರೂ ಏನು? ಎನ್ನುವ ಪ್ರಶ್ನೆಗೆ ಸಾಮಾನ್ಯವಾಗಿ ಇಲ್ಲರ ಬಾಯಲ್ಲೂ ತಕ್ಷಣಕ್ಕೆ ಬರುವ ಉತ್ತರ `ಮೊಬೈಲ್~. ಈ ಉತ್ತರವನ್ನು ಒಪ್ಪಿಕೊಳ್ಳಲು ಅದನ್ನು ದೃಢಪಡಿಸುವ ಯಾವ ಸಂಶೋಧನೆಗಳೂ ಸದ್ಯಕ್ಕೆ ಲಭ್ಯವಿಲ್ಲ.ಕೆಲವು ವಿಜ್ಞಾನಿಗಳ ಪ್ರಕಾರ ಸೀಸರಹಿತ ಪೆಟ್ರೋಲ್ ಬಳಕೆಗೆ ಬಂದನಂತರ ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಿದೆ. ಮೊದಲು ಸೀಸಯುಕ್ತ ಪೆಟ್ರೋಲ್ ಬಳಕೆಯಲ್ಲಿತ್ತು. ನಮ್ಮ ವಾಹನಗಳ ಎಂಜಿನ್‌ನಲ್ಲಿ ಉಂಟಾಗುವ ನಾಕಿಂಗ್ ಪರಿಣಾಮದ ನಿವಾರಣೆಗೆ ಸೀಸವನ್ನು ಬಳಸುತ್ತಿದ್ದರು. ಆದರೆ ಈ ಪೆಟ್ರೋಲ್ ಬಳಕೆಯಿಂದ ಸೀಸ ಮಾಲಿನ್ಯ ಹೆಚ್ಚಾಗಿ ಮನುಷ್ಯನಿಗೆ ತೊಂದರೆಯಾಗುತ್ತಿತ್ತು.

 

ಈಗ ಸೀಸಕ್ಕೆ ಬದಲಾಗಿ `ಮಿಥೈಲ್ ಟರ್‌ಶಿಯರಿ ಬ್ಯುಟೈಲ್ ಈಥರ್~ (ಆಉ) ಎಂಬ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಇದರಿಂದ ಉಂಟಾಗುವ ಮಾಲಿನ್ಯ ಗುಬ್ಬಚ್ಚಿ ಮರಿಗಳಿಗೆ ಅಗತ್ಯವಾಗಿರುವ ಕೀಟಗಳನ್ನು ಕೊಲ್ಲುತ್ತದೆ.ಬೆಳೆದ ಗುಬ್ಬಚ್ಚಿಗಳಿಗೆ ದವಸ ಧಾನ್ಯಗಳೇ ಸಾಕು. ಆದರೆ ಬೆಳೆಯುವ ಮರಿಗಳಿಗೆ ಪ್ರೊಟೀನ್‌ಯುಕ್ತ ಕೀಟಗಳೇ ಬೇಕು. ಈ ಕೀಟಗಳನ್ನು ಸೀಸರಹಿತ ಪೆಟ್ರೋಲ್ ಹೊಗೆ ಉಸಿರುಗಟ್ಟಿಸುವುದರಿಂದ ಮರಿಗಳು ಪೌಷ್ಟಿಕ ಆಹಾರವಿಲ್ಲದೆ ಸಾಯುತ್ತವೆ.ಇದೊಂದೇ ಕಾರಣದಿಂದ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿವೆ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಲಿಕ್ಕಾಗದು. ಬದಲಾಗುತ್ತಿರುವ ನಮ್ಮ ಜೀವನಶೈಲಿಯ ಹಿನ್ನೆಲೆಯಲ್ಲಿ ಗುಬ್ಬಚ್ಚಿಗಳು ಕಾಣೆಯಾಗುತ್ತಿರುವುದಕ್ಕೆ ಸಮಂಜಸ ಉತ್ತರ ಕಂಡುಹಿಡಿಯುವುದು ಸಾಧ್ಯವಿದೆ.`ಎಪ್ಪತ್ತರ ದಶಕದಲ್ಲಿ ನಗರದ ಸೆಂಟ್ರಲ್ ಕಾಲೇಜು ಆವರಣ, ಬನಶಂಕರಿಯಲ್ಲಿದ್ದ ನಮ್ಮ ಮನೆಯ ಬಳಿ ತುಂಬಾ ಗುಬ್ಬಿಗಳಿದ್ದವು. ಕಾಲೇಜಿನಲ್ಲಿ ಪಾಠ ಮಾಡಲೂ ಆಗುತ್ತಿರಲಿಲ್ಲ. ತರಗತಿಯ ಕಿಟಕಿ ಪಕ್ಕ ಬಂದು ಚಿಂವ್ ಚಿಂವ್ ಎಂದು ಗುದ್ದಾಡುತ್ತಾ ತೊಂದರೆ ಕೊಡುತ್ತಿದ್ದವು. ಆಗೆಲ್ಲ ಎಷ್ಟೋ ಸಲ ಅವುಗಳನ್ನು ಬೈದುಕೊಳ್ಳುತ್ತ್ದ್ದಿದೆ.ಆದರೆ ತೊಂಬತ್ತರ ದಶಕದಿಂದ ನಿಧಾನವಾಗಿ ಕಣ್ಮರೆಯಾಗುತ್ತಾ ಹೋದವು. ನಾನು ಗಮನಿಸಿದ ಹಾಗೆ ಗುಬ್ಬಚ್ಚಿಗಳ ಸಂತತಿ ಕಡಿಮೆಯಾದರೂ ಬುಲ್‌ಬುಲ್ ಹಕ್ಕಿಗಳು ನಗರಲ್ಲಿ ಹೆಚ್ಚಾಗುತ್ತಿವೆ. ಅದಕ್ಕೆ ಕಾರಣ ತಿಳಿಯದು~ ಎನ್ನುತ್ತಾರೆ ನಿವೃತ್ತ ಉಪನ್ಯಾಸಕ ಹಾಗೂ ದೀನಬಂಧು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ಜಯದೇವ.ಸ್ನೇಹಜೀವಿಯನ್ನು ಕಳೆದುಕೊಳ್ಳುವ ಮುಂಚೆ ಒಮ್ಮೆ ಯೋಚಿಸುವ ಅಗತ್ಯವಿದೆ. ನಮ್ಮ ಮನೆಯ ಮುಂದೆಯೇ ಕೃತಕ ಗೂಡುಗಳನ್ನಿಟ್ಟು, ಕಾಳುಗಳನ್ನು ಹಾಕಿ ಒಂದಷ್ಟು ಪ್ರೀತಿ, ಕಾಳಜಿ ತೋರಿಸಿ, ನೋಡಿ. ಗುಬ್ಬಚ್ಚಿ ಚಿಂವ್‌ಗುಟ್ಟೀತು.

ಬಿಸಿಐಎಲ್-ಜೆಡ್ ಹೆಬಿಟೆಟ್: ಸೇಂಟ್ ಜೋಸೆಫ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು, ಲಾಂಗ್‌ಫೋರ್ಡ್ ರಸ್ತೆ, `ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಆನ್ ಸ್ಪ್ಯಾರೋಸ್~ (ಗುಬ್ಬಿಗಳ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣ) ಉದ್ಘಾಟನೆ-ರಾಜ್ಯಪಾಲ ಹಂಸರಾಜ್ ಭಾರದ್ವಾಜ್. ಬೆಳಿಗ್ಗೆ 10.  

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.