ಮಂಗಳವಾರ, ಏಪ್ರಿಲ್ 13, 2021
23 °C

ಗುಬ್ಬಿ ಗೂಡಿನ ಹೊಸ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿಯಿಂದ ಗುಬ್ಬಚ್ಚಿ, ದೇಶಿ ಜನರ ಬಾಯಲ್ಲಿ ಹಕ್ಕಿಪಿಳ್ಳೆ ಎಂದು ಕರೆಸಿಕೊಂಡು ಮನುಷ್ಯ ವಾಸದ ಸುತ್ತಲೇ ಗೂಡು ಕಟ್ಟಿ ವಾಸಿಸುತ್ತಿದ್ದ; ಮುಷ್ಟಿ ಗಾತ್ರಕ್ಕೂ ಕಿರಿದಾಗಿರುತ್ತಿದ್ದ ಹಕ್ಕಿಗಳ ಸಮೂಹ `ಗುಬ್ಬಚ್ಚಿ~ ಕಾಣೆಯಾಗಿ ದಶಕಗಳೇ ಗತಿಸಿವೆ.ಒಂದು ದಶಕದ ಹಿಂದೆ ಮನೆ ಗೋಡೆ ಸಂದಿಯಲ್ಲಿ, ಅಂಗಳದ ಚಪ್ಪರದಲ್ಲಿ, ಹಿತ್ತಲ ಗಿಡದಲ್ಲಿ ಗೂಡು ಕಟ್ಟಿಕೊಂಡು ಮುಂಜಾನೆಯಿಂದ ಸಂಜೆವರೆಗೂ ಮನುಷ್ಯರ ಸುತ್ತಲೇ ಪುರ‌್ರನೇ ಹಾರಿ ಗಿರಕಿ ಹೊಡೆಯುತ್ತಿದ್ದ ಗುಬ್ಬಚ್ಚಿಗಳು ಈಗ ಕಾಣ ಸಿಗುವುದು ಅಪರೂಪ.ಮೊಬೈಲ್‌ಗಳ ನಡುವೆ ಹರಿಯುವ ತರಂಗಗಳಿಂದ `ಗುಬ್ಬಿ~ ನಾಪತ್ತೆಯಾದವು ಎಂದು ವಿಜ್ಞಾನ ಸಾರಿತು. ಇದ್ದರೂ ಇದ್ದೀತು ಎಂದು ಒಪ್ಪಿಕೊಂಡು ಸುಮ್ಮನಾದೆವೇ ಹೊರತು `ಮೊಬೈಲ್ ಬಳಕೆ ನಿಲ್ಲಿಸಿ; ಗುಬ್ಬಿ ಉಳಿಸಿ~ ಎಂದು ಯಾರೂ ಚಳವಳಿ ಆರಂಭಿಸಲಿಲ್ಲ. ಈಚೆಗೆ ಅಲ್ಲಲ್ಲಿ ಗುಬ್ಬಚ್ಚಿಗಳು ಕಡಿಮೆ ಸಂಖ್ಯೆಯಲ್ಲಿಯಾದರೂ ಕಂಡುಬರುತ್ತಿರುವುದು ಸಂತೋಷದ ಸಂಗತಿ.ನಾಲ್ಕು ಮೊಟ್ಟೆಗಳಿಗೆ ಕಾವು ಕೊಡುತ್ತಾ ಸಂತತಿ ವೃದ್ಧಿಸುತ್ತಿರುವ ಬಾಣಂತಿ ಹಕ್ಕಿಪಿಳ್ಳೆ (ಗುಬ್ಬಿ) ಕಂಡು ಬಂದಿದ್ದು ಶಿರಾ ತಾಲ್ಲೂಕಿನ ಕುಂಬಾರಹಳ್ಳಿ ಹಾಗೂ ಜೆ.ಹೊಸಹಳ್ಳಿ ಸೀಳು ದಾರಿಯಲ್ಲಿ ಸಿಗುವ ಪುಟ್ಟಜ್ಜಿ ಹೊಲದಲ್ಲಿ. ಇಲ್ಲಿ ಚಂದ್ರಬಿಕ್ಕೆಯ (ಸೀಬೆ) ಗಿಡವೊಂದು ಇದ್ದು, ಈ ಗುಬ್ಬಿ ಗೂಡು ಕಟ್ಟಿದೆ.ಗೂಡು ಕಟ್ಟಲು ಬಳಸಿರುವುದು ಅಜ್ಜಿ ಹೊಲದಲ್ಲೇ ಬೆಳೆದ ಹತ್ತಿ ಮತ್ತು ಗರುಕೆ. ಈ ಗೂಡಿಗೆ ಸೀಬೆ ಗಿಡದ ಹಸಿರು ಎಲೆಯನ್ನೇ ಹೊರ ಹೊದಿಕೆಯಾಗಿ ಬಳಸಿ ಒಳಗೆ ಮೆತ್ತನೆಯ ಹತ್ತಿ ಹಾಸಿ ಗರುಕೆಯಿಂದ ನೇಯಲಾಗಿದ್ದು, ಇದು ಹಕ್ಕಿಯ ಕರಕುಶಲ ಕಸುಬಿಗೆ ಸಾಕ್ಷಿಯಾಗಿದೆ.ಮೊನ್ನೆ ಶಾಲೆಗೆ ಹೋಗಿ ಬಂದ ಪುಟ್ಟಜ್ಜಿಯ ಮೊಮ್ಮಗಳು `ತಿಳಿ~ ಎಂಬುವಳು ಎಂದಿನಂತೆ ಬಿಕ್ಕೆ ಹಣ್ಣಿಗೆ ಓಡಿದವಳೇ ಗುಬ್ಬಚ್ಚಿ ಗೂಡು ಮತ್ತು ಅದರಲ್ಲಿದ್ದ ಎರಡು ಮೊಟ್ಟೆ ಕಂಡು ಕೂತೂಹಲದಿಂದ ಮುಟ್ಟಿದ್ದಾಳೆ. ಹಕ್ಕಿಯ ಮೊಟ್ಟೆ ಮುಟ್ಟಿದ ಹೊಸ ಅನುಭವದ ಬಗ್ಗೆ ಅಜ್ಜಿಗೂ ಹೇಳಿದ್ದಾಳೆ. ಆಗ ಅಜ್ಜಿ ಏಕಮ್ಮ ಗೂಡಿನೊಳಗಿನ ಮೊಟ್ಟೆ ಮುಟ್ಟಿದೆ? ಮನುಷ್ಯರ ಸೂತಕವಾದರೆ ಹಕ್ಕಿ ಮತ್ತೆ ಆ ಮೊಟ್ಟೆಗಳನ್ನು ಮುಟ್ಟುವುದಿಲ್ಲ ಎಂದು ಪೇಚಾಡಿದೆ. ಆದರೆ ಆಶ್ಚರ್ಯ ! ಮತ್ತೆರಡು ದಿನದಲ್ಲೇ ಅದೇ ಗೂಡಿನಲ್ಲಿ ಇನ್ನೆರಡು ಮೊಟ್ಟೆ ಇಟ್ಟ ಗುಬ್ಬಿ ಸಂತಾನೋತ್ಪತ್ತಿಯನ್ನು ಸಾಂಗವಾಗಿ ಮುಂದುವರೆಸುತ್ತಿದೆ.ಇದನ್ನು ಡಾರ್ವಿನ್ ಸಿದ್ಧಾಂತದ ಪ್ರಕಾರ ಉಳಿವಿಗಾಗಿ ಹೋರಾಟ ಎನ್ನೋಣವೇ? ಏಕೆಂದರೆ ಮೊಬೈಲ್ ಹಾವಳಿಯಿಂದ ಗುಬ್ಬಿ ಸಂತತಿಯೇ ನಾಶವಾಗುತ್ತಿದೆ ಎನ್ನುವ ವೇಳೆ ಅದರ ಜೊತೆಯೂ ಪೈಪೋಟಿ ಮಾಡಿಕೊಂಡು ಅಲ್ಲಲ್ಲಿ ಕಾಣ ಸಿಗುತ್ತಿರುವ ಗುಬ್ಬಿಗಳು; ಹಿಂದಿನಂತೆ ಮನುಷ್ಯ ಮುಟ್ಟಿದ ಮೊಟ್ಟೆಗಳನ್ನು ಮತ್ತೆ ಮುಟ್ಟದಿದ್ದ ಗುಬ್ಬಿಗಳು; ಈಗ ಆ ಸೂತಕವನ್ನೆಲ್ಲಾ ಬದಿಗೊತ್ತಿ ಸಂತತಿ ವೃದ್ಧಿಸುತ್ತಿರುವುದು ಉಳಿವಿಗಾಗಿ ಹೋರಾಟ ಅಥವಾ ಹೊಂದಾಣಿಕೆಯಲ್ಲದೇ ಬೇರೇನು?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.