ಶುಕ್ರವಾರ, ನವೆಂಬರ್ 22, 2019
19 °C

ಗುಬ್ಬಿ ದುನಿಯಾ, ಪ್ರೀತಂ ಸ್ಟೈಲ್!

Published:
Updated:

`ಬಿಗ್‌ಬಾಸ್ ಮನೆಯಿಂದ ವಿನಾಯಕ ಜೋಷಿ ಬೇಗನೆ ಹೊರಬರುವಂತಾಗಲಿ...!' ಎಲ್ಲರೂ ಬಿಗ್‌ಬಾಸ್‌ನಲ್ಲಿ ಗೆಲ್ಲಲಿ ಎಂದು ಹಾರೈಸುವಾಗ ಇಂಥದ್ದೊಂದು ವಿಚಿತ್ರ ಬಯಕೆ ವ್ಯಕ್ತಪಡಿಸಿದವರು ನಿರ್ದೇಶಕ ಪ್ರೀತಂ ಗುಬ್ಬಿ.



ಅವರ ನಿರ್ದೇಶನದ `ನಮ್ ದುನಿಯಾ ನಮ್ ಸ್ಟೈಲ್' ಚಿತ್ರದ ಮೂವರು ನಾಯಕರಲ್ಲಿ ವಿನಾಯಕ್ ಜೋಷಿ ಕೂಡ ಒಬ್ಬರು. ಅತ್ತ ಚಿತ್ರತಂಡ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಪೂರೈಸಿದೆ. ಇತ್ತ ವಿನಾಯಕ್ ಜೋಷಿ ಬಿಗ್‌ಬಾಸ್ ಮನೆ ಹೊಕ್ಕಿದ್ದಾರೆ. ಅವರ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡಬೇಕು ಎನ್ನುವುದು ಪ್ರೀತಂ ನಿಲುವು. ಜೋಷಿ ಹೊರಬರದೆ ಡಬ್ಬಿಂಗ್ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಜೋಷಿ ಬೇಗ ಅಲ್ಲಿಂದ ಹೊರಬರಲಿ ಎಂಬ ಆಸೆ ಅವರದು.



ಚಿತ್ರದ ಆಡಿಯೊ ಸಿ.ಡಿ. ಬಿಡುಗಡೆ ಸಮಾರಂಭವದು. ಕೇರಳ ಮೂಲದ ಸಂಗೀತ ನಿರ್ದೇಶಕ ಶಾನ್ ರೆಹಮಾನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ.



`ನಮ್ ದುನಿಯಾ...' ಪಯಣದ ಕಥೆಯುಳ್ಳ ಚಿತ್ರ. ಸ್ಲಂನಿಂದ ತೆರೆದುಕೊಳ್ಳುವ ಕಥನ ಬಳಿಕ ಮಲೇಷ್ಯಾವನ್ನು ಪ್ರವೇಶಿಸುತ್ತದೆ. ವಿದೇಶಿ ಚಿತ್ರೀಕರಣ ಅಂದುಕೊಂಡದ್ದಕ್ಕಿಂತ ಹೆಚ್ಚು ಹಣವನ್ನು ವ್ಯಯಿಸುವಂತೆ ಮಾಡಿದೆ. ಚಿತ್ರೀಕರಣ ಪ್ರಾರಂಭಿಸುವ ತಿಂಗಳ ಮುನ್ನವೇ ಪ್ರಮುಖ ಪಾತ್ರಧಾರಿಗಳಿಗೆ ಚಿತ್ರಕಥೆಯನ್ನು ನೀಡಿದ್ದರು ಗುಬ್ಬಿ. ಹೀಗಾಗಿ ಹೊಸ ಕಲಾವಿದರ ಬಳಗಕ್ಕೆ ಮನೆಯಲ್ಲಿಯೇ ಪೂರ್ವ ತಯಾರಿ ನಡೆಸಿಕೊಳ್ಳಲು ಸಮಯ ದೊರೆತಿದ್ದರಿಂದ ಚಿತ್ರೀಕರಣ ಸಲೀಸಾಯಿತು ಎನ್ನುವುದು ಅವರ ಅನುಭವ.



ಪ್ರೇಮಕಥೆಗಿಂತ ವಿಭಿನ್ನವಾದ ಸಿನಿಮಾ ಮಾಡಬೇಕೆಂಬ ಬಯಕೆಯನ್ನು ಈಡೇರಿಸಿಕೊಳ್ಳಲು ಅವರು ಗೆಳೆಯರ ಕಥನವನ್ನು ಆಯ್ದುಕೊಂಡಿದ್ದಾರೆ. ಅಜ್ಜ ಗುಬ್ಬಿ ವೀರಣ್ಣನವರ ನೆನಪಿಗಾಗಿ `ಗುಬ್ಬಿ ಟಾಕೀಸ್' ಎಂಬ ನಿರ್ಮಾಣ ಸಂಸ್ಥೆಯನ್ನು ಅವರು ತೆರೆದಿದ್ದಾರೆ. ತಮ್ಮ ಚಿತ್ರಗಳ ನಿರ್ಮಾಣ ಮಾತ್ರವಲ್ಲ, ಹೊಸ ನಿರ್ದೇಶಕರಿಗೂ ಇದರ ಮೂಲಕ ಅವಕಾಶ ನೀಡುವುದು ಅವರ ಉದ್ದೇಶ.



ನಾಯಕ ತ್ರಯರಲ್ಲಿ ಕೃಷ್ಣ ಅವರಿಗಿದು ಮೊದಲ ಚಿತ್ರ. ಜಯಂತ ಕಾಯ್ಕಿಣಿ ಅವರ ಸಾಹಿತ್ಯ ಪ್ರೇಮಿಯಾಗಿರುವ ಅವರಿಗೆ ತಾವು ಹೆಜ್ಜೆ ಹಾಕಿದ ಹಾಡಿಗೆ ಕಾಯ್ಕಿಣಿ ಸಾಹಿತ್ಯ ರಚಿಸಿರುವುದು ಅತೀವ ಸಂತಸ ಉಂಟುಮಾಡಿದೆ. ಮತ್ತೊಬ್ಬ ನಾಯಕ ಲಿಖಿತ್ ಶೆಟ್ಟಿ ಟಿ.ವಿ. ವಾಹಿನಿಗಳಲ್ಲಿ ನಿರೂಪಕರಾಗಿದ್ದವರು. ಮೂರು ಸಿನಿಮಾಗಳಲ್ಲಿ ನಟಿಸಿದ ಅನುಭವವೂ ಅವರಿಗಿದೆ.



ಪ್ರೀತಂ ಗುಬ್ಬಿ ವಿಕೃತಿಗಳಿಲ್ಲದ ಮುದ ನೀಡುವ ಸರಳ ಸಿನಿಮಾ ವ್ಯಾಕರಣವನ್ನು ಕಲಿತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಜಯಂತ್ ಕಾಯ್ಕಿಣಿ. ಶಾನ್ ರೆಹಮಾನ್ ಸಂಗೀತದಲ್ಲಿಯೇ ಸಾಹಿತ್ಯವಿದೆ ಎಂಬ ಹೊಗಳಿಕೆಯೂ ಅವರ ಮಾತಿನಲ್ಲಿ ಸೇರಿತ್ತು.

ಸೋನಿಯಾ ಗೌಡ, ಕಾವ್ಯಾಶೆಟ್ಟಿ ಮತ್ತು ಮಿಲನ ಮೂವರು ನಾಯಕಿಯರು. ನಟ ಸುದೀಪ್ ಆಡಿಯೊ ಬಿಡುಗಡೆ ಮಾಡಿ ಶುಭಹಾರೈಸಿದರು.

ಪ್ರತಿಕ್ರಿಯಿಸಿ (+)