ಸೋಮವಾರ, ಏಪ್ರಿಲ್ 12, 2021
26 °C

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ನ್ಯಾಯವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ತಾಲ್ಲೂಕಿನಲ್ಲಿ ವಿವಿಧ ಯೋಜನೆ ಗಳಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಸ್ವತಃ ಅಧಿಕಾರಿಗಳೇ ಆರೋಪ, ಪ್ರತ್ಯಾರೋಪ ಮಾಡುವ ಮೂಲಕ ಒಪ್ಪಿಕೊಂಡಿದ್ದಾರೆ. ಅಂತಹ ಸಂದರ್ಭ ಗಳಲ್ಲಿ ಅಧಿಕಾರಿಗಳು ಒಂದಾಗಿ ಕೆಳಮಟ್ಟದ ಸಿಬ್ಬಂದಿ ಮೇಲೆ ಕ್ರಮ ಕೈಕೊಳ್ಳುತ್ತಿರುವುದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಳಸಿದಂತಾಗುತ್ತಿದೆ ಎಂಬ ಆರೋಪಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಿರಿಯ ಎಂಜಿನಿಯರ್ ಮೂಲಗಳಿಂದ ಕೇಳಿಬರುತ್ತಿವೆ.ತಾಲ್ಲೂಕಿನ ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದರಲ್ಲೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಗೊಂಡಾಗಿನಿಂದ ಒಂದಿಲ್ಲೊಂದು ಹಗರಣಗಳು ವರದಿಯಾಗುತ್ತಲೆ ಬಂದಿವೆ. ರೋಡಲಬಂಡ(ಯುಕೆಪಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಣಕಲ್ಲ, ಚಿಕ್ಕಉಪ್ಪೇರಿ ಪುನರ್ವಸತಿ ಕೇಂದ್ರದಗಳ ಬಡಾವಣೆ ಅಭಿವೃದ್ಧಿ ಯಲ್ಲಿ ಸಾಕ್ಷಾಧಾರ ಸಮೇತ ಅಧಿಕಾರಿಗಳೆ ಸರ್ಕಾರಕ್ಕೆ ದೂರು ನೀಡಿರುವುದು ಜೀವಂತ ನಿದರ್ಶನವಾಗಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ ತಿಂಗಳಲ್ಲಿ ನಡೆದಿರುವ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳಿಗೆ ಸಂಬಂಧಿಸಿ ಕೋಡ್ ದುರ್ಬಳಕೆ ಮಾಡಿಕೊಂಡು ಮಾರ್ಚ್ 18ರಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಕೂಲಿಕಾರರ ಬೇಡಿಕೆ ಇಲ್ಲದೆ, ಕೇವಲ ಸಾಮಗ್ರಿ ವೆಚ್ಚ ರೂ. 73.99ಲಕ್ಷದ ಎಂ.ಐ.ಎಸ್. ಅಳವಡಿಸಿ ಹಣ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಪ್ರಕರಣ ಮತ್ತಷ್ಟು ಪುಷ್ಠಿಕರಿಸುವಂತಾಗಿದೆ.ಎಂ.ಐ.ಎಸ್. ಅಳವಡಿಸಿ ಹಣ ದುರ್ಬಳಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್ ಪಾಟೀಲ ಮಾರ್ಚ್ 19ರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರಪ್ಪ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು. ಅಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ಕೋಡ್ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ. ಎಂಐಎಸ್ ಅಳವಡಿಕೆಯಲ್ಲಿ ತಮ್ಮದೇನು ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅಲ್ಲದೆ, ಇದಕ್ಕೆಲ್ಲಾ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಹೊಣೆ ಎಂದು ಕಂಪ್ಯೂಟರ್ ಆಪರೇಟರ್ ನಾಗರಾಜ ಎಂಬಾತ ಕೂಡ ಲಿಖಿತ ಹೇಳಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಮುಚ್ಚಿಟ್ಟ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಪಾಟೀಲ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂಪ್ಯೂಟರ್ ಆಪರೇಟರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿರುವುದು ಪುನಃ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡುವ ಸ್ಪಷ್ಟ ಚಿತ್ರಣ ಹೊರಬಿದ್ದಿದೆ.

ಮಾರ್ಚ 18ರಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಅವರೆ ಸ್ವತಃ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆದು ತಮ್ಮ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಎಂಐಎಸ್ ಅಳವಡಿಸಿ, ಇಲ್ಲವಾದರೆ ವಿಳಂಬವಾಗುತ್ತಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದರು. ಈ ಪತ್ರ ಕೂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದಿಲ್ಲ ಎಂದು ಶಂಕರಪ್ಪ ಸ್ಪಷ್ಟಪಡಿಸಿದ್ದಾರೆ.ಈಗಾಗಲೆ ವಿಚಾರಣೆ ಹಂತದಲ್ಲಿರುವ ಸುಣಕಲ್ಲ ಪ್ರಕರಣದ ಕಾಮಗಾರಿಗಳ ಕುರಿತು ಎಂಐಎಸ್ ಅಳವಡಿಸುವಂತೆ ಎಇಇ ಅವರು ಪತ್ರ ಬರೆದಿರುವುದು ಎಷ್ಟು ಸರಿ? ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಬಾರದಂತೆ ಎಂಐಎಸ್ ಅಳವಡಿಸಿರುವುದು ಸರಿಯೆ?, ಈ ಹಿಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೂಲಿಕಾರರ ಬೇಡಿಕೆ ನೀಡಿಲ್ಲ ಎಂದು ಲಿಖಿತ ಉತ್ತರ ನೀಡಿದ್ದರು ಹಿರಿಯ ಅಧಿಕಾರಿಗಳು ಮೌನ ವಹಿಸಿರುವುದು ಸರಿಯೆ?, ಅಧಿಕಾರಿಗಳ ಮಧ್ಯದಲ್ಲಿನ ಹೊಂದಾಣಿಕೆ ಅಪರಾಧಗಳಿಗೆ ದಾರಿ ಮಾಡಿಕೊಟ್ಟಿರಬಹುದೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂಪ್ಯೂಟರ್ ಆಪರೇಟರ್ ಬರೆದುಕೊಟ್ಟ ಹೇಳಿಕ್ಕೆ ಮುಚ್ಚಿಟ್ಟು ದೂರು ದಾಖಲಿಸಲು ಮುಂದಾಗಿರುವುದು ಸರಿಯೆ? ಮೇಲಿಂದ ಮೇಲೆ ಎಂಐಎಸ್ ಅಳವಡಿಕೆಯಲ್ಲಿ ನಡೆಯುತ್ತಿರುವ ಕಣ್ಣುಮುಚ್ಚಾಲೆಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಹೊಣೆ ಇಲ್ಲವೆ? ಎಂಐಎಸ್ ಅಳವಡಿಕೆಗೆ ಖಾಸಗಿ ಕಂಪ್ಯೂಟರ್ ಬಳಸುತ್ತಿರುವುದು ಸರಿಯೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಹಿರಿಯ ಅಧಿಕಾರಿಗಳೆ ಉತ್ತರಿಸಬೇಕಿದೆ.

ಬಿ.ಎ. ನಂದಿಕೋಲಮಠ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.