ಬುಧವಾರ, ಜೂನ್ 23, 2021
24 °C

ಗುರಿ ತಲುಪಿ... 2030ಕ್ಕೆ ನಿಮ್ಮನ್ನು ಭೇಟಿ ಮಾಡುವೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಾನು ನಿಮಗೆ ಏನು ಕೊಡಲಿ?

-ಹೀಗೆಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನೆರೆದಿದ್ದ ವಿವಿಧ ಶಾಲೆಯ 10 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಆ ಹಿರಿಯ ಜೀವ ಕೇಳಿದಾಗ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ರೋಮಾಂಚನ. ಭಾವೋದ್ವೇಗ...

ಈ ರೀತಿ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಆ ಹಿರಿಯ ಜೀವವೇ ದೇಶ ಕಂಡ ಅಪ್ರತಿಮ ವಿಜ್ಞಾನಿ, ದಾರ್ಶನಿಕ, ಭಾರತದ ಕೋಟ್ಯಂತರ ಮಕ್ಕಳ ಆದರ್ಶ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ.

ಇಲ್ಲಿರುವವರು ವಿದ್ಯಾರ್ಥಿಗಳೆಲ್ಲ ಉಜ್ವಲ ಭವಿಷ್ಯ ಹೊಂದಿದ್ದೀರಿ. ನೀವು ಭವಿಷ್ಯದಲ್ಲಿ ಏನಾಗಬಯಸುತ್ತೀರಿ?  ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ಐಎಎಸ್ ಅಧಿಕಾರಿಗಳು, ಉತ್ತಮ ಶಿಕ್ಷಕರು, ರಾಜಕಾರಣಿಗಳು... ಹೀಗೆ ಕೇಳುತ್ತಾ ಹೋದಂತೆ ಅಂತಹ ಗುರಿಯನ್ನು ಹೊಂದಿದ ವಿದ್ಯಾರ್ಥಿಗಳು ಕೈ ಎತ್ತುವ ಮೂಲಕ ತಾವು ಏನಾಗಬಯಸಬೇಕು ಅಂದುಕೊಂಡಿದ್ದರೋ ಅದನ್ನು ದೃಢಪಡಿಸಿದರು.

ನನಗೆ 2030ಕ್ಕೆ 100 ವರ್ಷ ಆಗುತ್ತದೆ. ಇನ್ನು 18 ವರ್ಷ ಬಿಟ್ಟು ಇಲ್ಲಿಗೆ ಬರುತ್ತೇನೆ. ನಿಮ್ಮನ್ನೆಲ್ಲ ಭೇಟಿ ಮಾಡುತ್ತೇನೆ ಎಂದಾಗ ಎಲ್ಲರಿಗೂ ಕನಸು ಈಡೇರಿಸಿಕೊಳ್ಳಬೇಕೆಂಬ ತವಕ.  ತಾವು ಏನಾಗಬೇಕು ಎಂದು ವಿದ್ಯಾರ್ಥಿಗಳು ಅಂದುಕೊಂಡರೋ ಅದನ್ನೂ ಸಾಧಿಸಿ ಶತಾಯುಷಿ ಸಾಧಕನನ್ನು ಭೇಟಿ ಮಾಡಲೇಬೇಕು ಎನ್ನುವ ಛಲ ಎಲ್ಲರ ಮನದಾಳದಲ್ಲಿ ಕ್ಷಣ ಸುಳಿದು ಹೋದ ಅನುಭವ.

ದೊಡ್ಡ ಗುರಿ, ನಿರಂತರ ಜ್ಞಾನ, ಕಠಿಣ ಪರಿಶ್ರಮ, ಸಮಸ್ಯೆ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಇದ್ದರೆ ನೀವು ಅಂದುಕೊಂಡದ್ದು ಸಾಧಿಸುತ್ತೀರಿ. ಅಂದುಕೊಂಡಂತಹ ವ್ಯಕ್ತಿಯಾಗುತ್ತೀರಿ. ಹೃದಯದಲ್ಲಿ ಎಲ್ಲರ ಬಗೆಗೆ ಪ್ರೀತಿಯ ಭಾವನೆ ಬೆಳೆಸಿಕೊಳ್ಳಿ, ಅದು ನಿಮ್ಮ ಮನೆ, ಗ್ರಾಮ, ರಾಜ್ಯ ದೇಶವನ್ನು ಶಾಂತಿಯಿಂದ ಇರುತ್ತದೆ ಮಾಡುತ್ತದೆ. ಸಮಯಪ್ರಜ್ಞೆ ಇರಲಿ. ಸಮಯ ಅಮೂಲ್ಯ. ಸಮಯವನ್ನು ವ್ಯರ್ಥ ಮಾಡಬೇಡಿ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಜೀವನದಲ್ಲಿ ತಾಯಿ-ತಂದೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರೇ ನಿಜವಾದ ಭವಿಷ್ಯ ನೀಡುವ ನಿರ್ಮಾತೃಗಳು. ಯಾವುದೇ ಕೆಲಸ ಮಾಡುವಾಗ ಧೈರ್ಯ ಅಗತ್ಯ.  ಧೈರ್ಯದಿಂದ ಮುನ್ನುಗ್ಗಿ ಗುರಿ ಸಾಧಿಸಿ. ಉನ್ನತ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಿ ಎಂದು ಕರೆ ನೀಡಿದರು.

ಯುವಪೀಳಿಗೆಯಲ್ಲಿ ಬಹುತೇಕರು ಅಮೆರಿಕ ಗ್ರೇಟ್ ಎನ್ನುತ್ತಾರೆ. ಸ್ವಚ್ಛತೆ, ಶ್ರೀಮಂತಿಕೆ, ಮಿಲಿಟರಿ ಸಾಮರ್ಥ್ಯದಲ್ಲಿ ಅದಕ್ಕೆ ಸರಿಸಾಟಿ ಇಲ್ಲ ಎನ್ನುತ್ತಾರೆ. ಆದರೆ, ನಾನು ಹೇಳುತ್ತೇನೆ ಭಾರತವೇ ಗ್ರೇಟ್... ಭಾರತಕ್ಕೆ ಭಾರತವೇ ಸರಿಸಾಟಿ... ಎಂದಾಗ ನೆರೆದ ವಿದ್ಯಾರ್ಥಿ ಸಮೂಹದಿಂದ ಭಾರತ್ ಮಾತಾಕಿ ಜೈ ಎಂಬ ಘೋಷಣೆ ಮೊಳಗಿತು.

ಮೊದಲು ಯುವ ಸಮೂಹ ದೇಶ ನನಗೇನು ಕೊಟ್ಟಿದೆ ಎಂದು ಕೇಳುತ್ತಿತ್ತು. ಇಂದು ಅಂತಹ ವಾತಾವರಣ ಬದಲಾಗಿದೆ. ಬಹುತೇಕ ಯುವಜನರು ದೇಶಕ್ಕಾಗಿ ನಾನೇನು ಮಾಡಲಿ ಎಂದು ಕೇಳುತ್ತಿದ್ದಾರೆ. ಇದು ಸಂತಸದ ವಿಚಾರ ಎಂದು ಶ್ಲಾಘಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.