ಶುಕ್ರವಾರ, ಏಪ್ರಿಲ್ 23, 2021
22 °C

ಗುರಿ ಮೀರಿದ ಸಾಧನೆ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರಿ ಮೀರಿದ ಸಾಧನೆ ವಿಶ್ವಾಸ

ಬೆಂಗಳೂರು: `ರಾಜ್ಯದಲ್ಲಿ ಉದ್ಯಮಗಳ ಆರ್ಥಿಕ ಸ್ಥಿತಿ ಸಮಾಧಾನಕರವಾಗಿಲ್ಲದಿದ್ದರೂ ವಾಣಿಜ್ಯ ತೆರಿಗೆ ಇಲಾಖೆಯು ತೆರಿಗೆ ವಸೂಲಿಯಲ್ಲಿ ಗುರಿ ಮೀರಿದ ಸಾಧನೆ ಮಾಡುವ ವಿಶ್ವಾಸ ಇದೆ~ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಯೋಗೇಂದ್ರ ತ್ರಿಪಾಠಿ ಹೇಳಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, `ಜುಲೈಯಲ್ಲಿ 2,520 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು. ಆರ್ಥಿಕ ವರ್ಷದ ಮೂರು ತಿಂಗಳಲ್ಲಿ 7,600 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಆರ್ಥಿಕ ವರ್ಷದಲ್ಲಿ 31,000 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಗುರಿ ಇದ್ದು, ಅದಕ್ಕಿಂತ ಶೇ 15ರಷ್ಟು ಅಧಿಕ ತೆರಿಗೆ ಸಂಗ್ರಹವಾಗುವ ವಿಶ್ವಾಸ ಇದೆ~ ಎಂದರು.`ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಕೈಗಾರಿಕೆಗಳಿವೆ. ಆದರೆ, ಇಲಾಖೆಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ನಾಲ್ಕು ಲಕ್ಷದಷ್ಟು ಮಾತ್ರ~ ಎಂಬ ಎಫ್‌ಕೆಸಿಸಿಐ ರಾಜ್ಯ ತೆರಿಗೆ ಸಮಿತಿಯ ಉಪಾಧ್ಯಕ್ಷ ಎಲ್.ಎಸ್.ರಾಘವೇಂದ್ರ ಶರ್ಮ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಕಾನೂನಿನ ಪ್ರಕಾರ ವಾರ್ಷಿಕ ಐದು ಲಕ್ಷ ರೂಪಾಯಿಗಿಂತಲೂ ಹೆಚ್ಚು ವಹಿವಾಟು ಹೊಂದಿರುವ ಕಂಪೆನಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.ಪ್ರತಿ ತಿಂಗಳು ನಾಲ್ಕು ಸಾವಿರಕ್ಕೂ ಅಧಿಕ ಕಂಪೆನಿಗಳ ನೋಂದಣಿ ಆಗುತ್ತಿದೆ. ನೋಂದಣಿ ಆಗದವರ ಪತ್ತೆಗೆ ಆಗಾಗ ಸಮೀಕ್ಷೆ ನಡೆಸುತ್ತಿರುತ್ತೇವೆ. ಉದ್ಯಮಗಳ ಸಮಗ್ರ ಮಾಹಿತಿಗೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಸಮೀಕ್ಷೆ ನಡೆಸುವ ಯೋಜನೆ ಇದೆ~ ಎಂದರು. ಅಕ್ರಮ ಗಣಿಗಾರಿಕೆಯ ಬಗ್ಗೆ ಇಲಾಖೆ ನಡೆಸುತ್ತಿರುವ ತನಿಖೆ ಬಗ್ಗೆ ಉತ್ತರಿಸಿದ ಅವರು, `ಕಬ್ಬಿಣದ ಅದಿರು ಗಣಿಗಾರಿಕೆಯ ಹೆಚ್ಚಿನ ಕಂಪೆನಿಗಳು ಅದಿರು ರಫ್ತು ಮಾಡುತ್ತವೆ. ಹಾಗಾಗಿ ಆ ಸಂಸ್ಥೆಗಳಿಗೆ ಇಲಾಖೆಯಿಂದ ವ್ಯಾಟ್ ವಿಧಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆಯು ಈಗ 148 ಪ್ರಕರಣಗಳ ತನಿಖೆ ನಡೆಸುತ್ತಿದೆ. ಬೇರೆ ಬೇರೆ ಇಲಾಖೆಗಳಿಂದ ಮಾಹಿತಿ ಲಭಿಸಬೇಕಿದೆ. ತನಿಖೆ ಪ್ರಗತಿಯಲ್ಲಿದೆ~ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಕೆ.ಶಿವಷಣ್ಮುಗಂ ಮಾತನಾಡಿ, `ಉದ್ಯಮಗಳಿಗೆ ಮಾರ್ಗದರ್ಶನ ನೀಡಲು ಇಲಾಖೆಯು ಗಾಂಧಿನಗರದಲ್ಲಿ ಸಹಾಯವಾಣಿಯನ್ನು ಆರಂಭಿಸಬೇಕು. ಹಾಗೆಯೇ ಎಲ್ಲ ಜಿಲ್ಲೆಗಳಲ್ಲಿ ಸಹಾಯವಾಣಿ ಆರಂಭಿಸಬೇಕು~ ಎಂದು ಆಗ್ರಹಿಸಿದರು. ಎಫ್‌ಕೆಸಿಸಿಐ ರಾಜ್ಯ ತೆರಿಗೆಗಳ ಸಮಿತಿಯ ಅಧ್ಯಕ್ಷ ಬಿ.ಟಿ. ಮನೋಹರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.