ಗುರುಗಳಿಗೆ ಪಾಠ ಮಾಡಿದ ಗುರುರಾಜ ಕರ್ಜಗಿ

7

ಗುರುಗಳಿಗೆ ಪಾಠ ಮಾಡಿದ ಗುರುರಾಜ ಕರ್ಜಗಿ

Published:
Updated:

ಮೈಸೂರು: ನಿತ್ಯ ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕರು ಭಾನುವಾರ ವಿಧೇಯ ವಿದ್ಯಾರ್ಥಿಯಂತೆ ಕುಳಿತು ಗುರುಗಳ ಪಾಠ ಕೇಳುವಲ್ಲಿ ಮಗ್ನರಾಗಿದ್ದರು. ಮಕ್ಕಳಿಗೆ ಪಾಠ ಮಾಡುವುದು ಹೇಗೆ? ಎಂಬುದನ್ನು ಗುರುಗಳು ಪ್ರಾಯೋಗಿಕವಾಗಿ ತಿಳಿಸಿದಾಗ ಎಲ್ಲ ಶಿಕ್ಷಕರಲ್ಲೂ ಕೃತಾರ್ಥಭಾವ.-ಇವು ಜಿಜ್ಞಾಸು ಶಿಕ್ಷಕರಿಗೊಂದು ಕಾರ್ಯಾಗಾರದ ಸಾರ.

ಲಯನ್ಸ್ ಐಕಾನ್, `ಪ್ರಜಾವಾಣಿ~ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಜಯಲಕ್ಷ್ಮೀಪುರಂನ ಚಿನ್ಮಯ ವಿದ್ಯಾಲಯದಲ್ಲಿ ಏರ್ಪಡಿಸಿದ್ದ `ಗುರು ಚಿಂತನ~ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರು `ಬದಲಾದ ಸನ್ನಿವೇಶದಲ್ಲಿ ಶಿಕ್ಷಕರ ಪಾತ್ರ~ ಕುರಿತು ಉಪನ್ಯಾಸ ನೀಡಿದರು.`ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಪಿಎಚ್‌ಡಿ ಪ್ರಬಂಧ ಸಿದ್ಧಪಡಿಸಿ ಅಂಚೆ ಮೂಲಕ ಅಮೆರಿಕಕ್ಕೆ ಕಳುಹಿಸಿದ್ದೆ. ನಾಲ್ಕು ತಿಂಗಳ ಬಳಿಕ, ನಿಮ್ಮ ಪ್ರಬಂಧವನ್ನು ಆಯ್ಕೆ ಮಾಡಲಾಗಿದೆ ಎಂಬ ಉತ್ತರ ಬಂದಿತು. ಆಗ ನನಗಾದ ಸಂತೋಷ ಹೇಳತೀರದು. ನನ್ನ ಪ್ರಬಂಧ ಅವರನ್ನು ತಲುಪಿದೆಯಲ್ಲ ಎಂದು ಖುಷಿಯಾಯಿತು~.. ಎಂದು ಹೇಳಿದಾಗ ಸಭಾಂಗಣದಲ್ಲಿ ನಗುವಿನ ಅಲೆ ತೇಲಿ ಬಂದಿತು. `ಅಂಚೆಯನ್ನೇ ನಂಬಿಕೊಂಡಿದ್ದ ಕಾಲವದು. ಈಗಿನ ಮಕ್ಕಳು ಐದು ನಿಮಿಷದಲ್ಲಿ ಪ್ರಬಂಧ ಸಿದ್ಧಪಡಿಸಿ, ಅಂತರ್ಜಾಲದ       ಮೂಲಕ ಪ್ರಪಂಚದ ಮೂಲೆ ಮೂಲೆಗೂ ಕಳುಹಿಸಿ ಬೆರಗುಗೊಳಿಸುತ್ತಾರೆ. ಹಾಗಾಗಿ ಬದಲಾದ ಇಂತಹ ಸನ್ನಿವೇಶದಲ್ಲಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೂ ಬದಲಾಗಬೇಕು~ ಎಂದು ಹೇಳಿದರು.ಒಂದು ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ ಅವರು, ಶಿಕ್ಷಕ ಹೇಗಿರಬೇಕು? ಪಾಠದ ತಯಾರಿ, ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು. ಉತ್ತಮ ಶಿಕ್ಷಕನಾಗಲು ಇರಬೇಕಾದ ಗುಣಗಳು, ತರಗತಿಯ ಎಲ್ಲ ಮಕ್ಕಳೂ ಮೆಚ್ಚುವ ಶಿಕ್ಷಕ ಆಗುವುದು ಹೇಗೆ? ಎನ್ನುವ ಕುರಿತು ಪ್ರಯೋಗಗಳ ಮೂಲಕ  ಮನದಟ್ಟು ಮಾಡಿಕೊಟ್ಟರು. ತಾವೂ ನಕ್ಕು ಶಿಕ್ಷಕರನ್ನೂ ನಗಿಸಿ, ಬದಲಾದ ಶಿಕ್ಷಕರ ಪಾತ್ರ ಏನು ಎಂಬುದನ್ನು ಪರಿಚಯಿಸಿಕೊಟ್ಟರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಬಸವರಾಜು, ಲಯನ್ಸ್ ಐಕಾನ್ ಅಧ್ಯಕ್ಷ ಎನ್.ಡಿ.ಎಸ್.ಪ್ರಸಾದ್, ಪತ್ರಕರ್ತ ರವೀಂದ್ರ ಭಟ್ಟ ಉಪಸ್ಥಿತರಿದ್ದರು. ಪತ್ರಕರ್ತ ರವೀಂದ್ರ ಜೋಶಿ ಕಾರ್ಯಕ್ರಮ ನಿರೂಪಿಸಿದರು.

 

ತಾಯಿ ಮಗುವಿಗೆ ನಡಿಗೆ ಕಲಿಸಿದಂತೆ..

11 ತಿಂಗಳ ಮಗುವಿಗೆ ತಾಯಿ ನಡೆಯುವುದನ್ನು ಹೇಗೆ ಕಲಿಸಿಕೊಡುತ್ತಾಳೆ ಎಂಬುದರತ್ತ ಗಮನ ಹರಿಸಬೇಕು. ತಾಯಿ ಮಗುವಿನ ಮಟ್ಟಕ್ಕೆ (ಎತ್ತರ) ಬಾಗಿ, ಮಗುವಿನ ಎರಡೂ ಕೈ ಹಿಡಿಯುತ್ತಾಳೆ. ಜೋರಾಗಿ ಹಿಡಿದರೆ ಮಗುವಿಗೆ ನೋವಾಗುತ್ತದೆ. ಹಿಡಿತ ಸಡಿಲಿಸಿದರೆ ಮಗು ಬೀಳುತ್ತದೆ ಎಂಬ ಅರಿವು  ಅವಳಿಗೆ ಇರುತ್ತದೆ. ಕೈ ಹಿಡಿದ ಬಳಿಕ ಮಗುವಿನ ವೇಗಕ್ಕೆ ಹೆಜ್ಜೆ ಹಾಕುತ್ತಾಳೆ. ಮಗು ನಿಧಾನವಾಗಿ ಹೆಜ್ಜೆ ಹಾಕಿದರೆ ತಾಯಿಯೂ ನಿಧಾನವಾಗಿ ಹೆಜ್ಜೆ ಹಾಕುತ್ತಾಳೆ. ಮಗು ವೇಗವಾಗಿ ಹೆಜ್ಜೆ ಹಾಕಿದರೆ ತನ್ನ ನಡಿಗೆಯ ವೇಗ ಹೆಚ್ಚಿಸಿಕೊಳ್ಳುತ್ತಾಳೆ. ಶಿಕ್ಷಕರು ಮಾಡಬೇಕಾದದ್ದೂ ಇದನ್ನೇ. ಪ್ರತಿಯೊಬ್ಬ ಶಿಕ್ಷಕರೂ ಮಗುವಿನ ಮಟ್ಟಕ್ಕೆ ಇಳಿದು, ಕಲಿಯಲು ಅನುಕೂಲವಾಗುವ ಹಾಗೆ ಕೈ ಹಿಡಿದು, ಅವರ ವೇಗಕ್ಕೆ ತಕ್ಕಂತೆ ಪಾಠ ಮಾಡಿದರೆ ಖಂಡಿತ ಉತ್ತಮ ಶಿಕ್ಷಕರಾಗಬಹುದು. ಕಲಿಕೆಯ ವೇಗ ಬಹಳ ಮುಖ್ಯ. ಕಲಿಸುವ ವಿಧಾನ ಭಿನ್ನವಾಗಿರುವಂತೆ ಕಲಿಯುವ ವಿಧಾನವೂ ಭಿನ್ನವಾಗಿರುತ್ತದೆ. ಬೋಧನೆ ಮತ್ತು ಕಲಿಕೆ ಎರಡೂ ಹೊಂದಾಣಿಕೆ ಆದರೆ ಮಾತ್ರ ಕಲಿಕಾ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.ದೃಶ್ಯ-ಶ್ರವ್ಯ-ಓದು/ಬರಹ-ಕೈಗೆಲಸ


ಪಾಠ ಮಾಡುವಾಗ ದೃಶ್ಯಗಳು ಬೇಕು. ಆದ್ದರಿಂದ ಶಿಕ್ಷಕರು ಪಾಠೋಪಕರಣ, ವಿಜ್ಞಾನ ಮಾದರಿಗಳು, ನಕ್ಷೆಗಳೊಂದಿಗೆ ಪಾಠ ಮಾಡಬೇಕು. ಧ್ವನಿಯ  ಏರಿಳಿತ ಬಹಳ ಮುಖ್ಯ. ಪಠ್ಯಕ್ಕೆ ಅನುಗುಣವಾಗಿ ಧ್ವನಿಯ ಏರಿಳಿತವಿದ್ದರೆ ಪಾಠ ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ. ಬೋಧನೆ ಮಾಡುವಾಗ ಶ್ರವ್ಯ  (ಮಾತುಗಳು) ದೃಶ್ಯವಾಗಿ ಪರಿವರ್ತನೆ ಆಗುವ ಹಾಗೆ ಪಾಠ ಮಾಡಬೇಕು. ಕಥೆ, ಜೀವನ ಚರಿತ್ರೆ, ವಿಜ್ಞಾನಿಗಳ ಇತಿಹಾಸಗಳನ್ನು ಹೇಳಬೇಕು. ಓದು-ಬರಹ  ಅಭ್ಯಾಸ ಮಾಡಿಸಬೇಕು. ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಕೈಗೆಲಸ ಕೊಡಬೇಕು. ಈ ನಾಲ್ಕೂ ತತ್ವಗಳನ್ನು ಅಳವಡಿಸಿಕೊಂಡರೆ ಪಾಠ ಮಾಡುವುದು ಬಹು ಸುಲಭ.ದೈಹಿಕ-ಭಾವನಾತ್ಮಕ-ಬೌದ್ಧಿಕ-ಅಧ್ಯಾತ್ಮ

ಮಕ್ಕಳ ಮನಸ್ಸನ್ನು ನಿರ್ಮಾಣ ಮಾಡುವುದೇ ಶಿಕ್ಷಣದ ಮೂಲ ತತ್ವ. ಶಿಸ್ತು ಇರಬೇಕು, ಪ್ರೀತಿಯೂ ಇರಬೇಕು. ಮಕ್ಕಳು ಶಿಕ್ಷಕರು ಹೇಳಿದ ಹಾಗೆ  ಮಾಡುವುದಿಲ್ಲ. ಆದರೆ, ಮಾಡಿದ ಹಾಗೆ ಮಾಡುತ್ತಾರೆ, ಇದನ್ನು ಅರಿತುಕೊಳ್ಳಬೇಕು. ಶಿಕ್ಷಕ, ಸನ್ಯಾಸಿಗೆ ಮೌಲ್ಯ ಎಂಬುದು ಅಪೇಕ್ಷಿತ. ಇವರಿಬ್ಬರೂ ಹೀಗೆಯೇ ಇರಬೇಕು ಎಂದು ಸಮಾಜ ಬಯಸುತ್ತದೆ. ಸಮಾಜವೇ ಒಂದು ಚೌಕಟ್ಟು ಮಾಡಿದೆ. ಶಿಕ್ಷಕರು ಆ ಚೌಕಟ್ಟಿನೊಳಗೆ ಸೇರಿ ಪಾಠ ಮಾಡಬೇಕು. ಮೌಲ್ಯಗಳನ್ನು ಹೇಳುವ ಮೊದಲು ತಾವು ಅಳವಡಿಸಿಕೊಂಡಿರಬೇಕು. ಅಂದಾಗ ಮಾತ್ರ ದೈಹಿಕ-ಭಾವನಾತ್ಮಕ- ಬೌದ್ಧಿಕ-ಅಧ್ಯಾತ್ಮ ಶಿಕ್ಷಣ ನೀಡಲು ಸಾಧ್ಯ.ಕರ್ಜಗಿ ಹೇಳಿದ ಕಥೆಕೋಟ್ಯಧೀಶ ಹೂವಿನ ಅಂಗಡಿಗೆ ಹೋದ. ಅತಿ ಹೆಚ್ಚು ಬೆಲೆ ಬಾಳುವ ಹೂಗುಚ್ಛ ಕೇಳಿ ಪಡೆದ. ಅದನ್ನು ತನ್ನ ತಾಯಿಗೆ ಅಂಚೆ ಮೂಲಕ ಕಳುಹಿಸುವಂತೆ  ಅಂಗಡಿಯಾತನಿಗೆ ಸೂಚಿಸಿ, ಹಣ ನೀಡಿದ. ಬಳಿಕ, ಅಂಚೆ ಮೂಲಕ ತಲುಪುವುದು ವಿಳಂಬವಾಗಬಹುದು ಎಂದು ಯೋಚಿಸಿ ಬಾಡಿಗೆ ಕಾರು ತರಿಸಿ, ವ್ಯಕ್ತಿಯೊಬ್ಬನನ್ನು ಕೆಲಸಕ್ಕೆ ನೇಮಿಸಿಕೊಂಡು ಅವನ ಕೈಯಲ್ಲಿ ಹೂಗುಚ್ಛ ಕೊಟ್ಟು ಕಳುಹಿಸಬೇಕು ಎಂದು ನಿರ್ಧರಿಸಿ ಹೊರಬಂದ. ಅಂಗಡಿಯ ಪಕ್ಕದಲ್ಲೇ ಬಾಲಕಿಯೊಬ್ಬಳು ಅಳುತ್ತ ಕೂತಿದ್ದಳು. ಕಾರಣ ಕೇಳಿದಾಗ, ನನ್ನ ತಾಯಿಗೆ ಹೂ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಆದರೆ, ನನ್ನ ಬಳಿ ಹಣವಿಲ್ಲ. ಆದ್ದರಿಂದ ಒಂದು ಡಾಲರ್ ಕೊಡಿ ಎಂದು ವಿನಂತಿಸಿಕೊಂಡಳು. ಈತ ಹಣ ಕೊಟ್ಟ. ಆ ಬಾಲಕಿ ಖುಷಿಯಿಂದ ಅಂಗಡಿಗೆ ಹೋಗಿ ಗುಲಾಬಿ ಹೂ ಖರೀದಿಸಿ ಓಡತೊಡಗಿದಳು. ಇದರಿಂದ ಆಶ್ಚರ್ಯ ಚಕಿತನಾದ ಶ್ರೀಮಂತ ಹೂವನ್ನು ಹೇಗೆ ಕೊಡುತ್ತಾಳೆ ಎಂದು ನೋಡುವ ಕುತೂಹಲದಿಂದ ಅವಳನ್ನು ಹಿಂಬಾಲಿಸಿದ. ಅವಳು ಸ್ಮಶಾನಕ್ಕೆ ಹೋಗಿ, ತನ್ನ ತಾಯಿಯ ಗೋರಿಯ ಮೇಲೆ ಹೂ ಇಟ್ಟು ಅಳತೊಡಗಿದಳು.ಇದನ್ನು ನೋಡಿದ ಶ್ರೀಮಂತನ ಮನಸ್ಸು ಬದಲಾಯಿತು. ಸತ್ತು ಹೋಗಿರುವ ತಾಯಿಗೆ ಇಷ್ಟು ಪ್ರೀತಿಯಿಂದ ಆ ಬಾಲಕಿ ಹೂ ಕೊಡಬೇಕಾದರೆ, ನನ್ನ ತಾಯಿ ಇನ್ನೂ ಬದುಕಿದ್ದಾಳೆ. ನಾನು ಅಂಚೆ ಮೂಲಕ ಅಥವಾ ಕಾರಿನಲ್ಲಿ ಕಳುಹಿಸುವ ಬದಲು ನಾನೇ ಹೋದರೆ ಹೇಗೆ? ಎಂದು ಯೋಚಿಸಿ, ತಕ್ಷಣ ವೃದ್ಧಾಶ್ರಮಕ್ಕೆ ಹೋದ. ಆಗ ತಾಯಿ ಹೇಳಿದ್ದು, `ಅಲ್ಲಪ್ಪ..ನಿನಗೆ ಸಮಯ ಇರಲ್ಲ. ನೀನೇಕೆ ಬರೋಕ್ಕೆ ಹೋದೆ. ಕೊರಿಯರ್‌ನಲ್ಲೆ ಕಳುಹಿಸಬಾರದಾ?~

ಸದ್ಗುಣ ಬಿಟ್ಟು ಎಲ್ಲವೂ ಇದೆ!

ಸ್ವಾತಂತ್ರ್ಯ ನಂತರ ನೆಹರು ಸೇರಿದಂತೆ ಎಲ್ಲರೂ ಶಿಕ್ಷಣ ರಾಷ್ಟ್ರೀಕರಣವಾಗಲಿ ಎಂದು ಹೇಳಿತ್ತ ಬಂದರು. ಆದರೆ, ಇಂದಿಗೂ ರಾಷ್ಟ್ರೀಕರಣ ಎಂದರೆ ಏನು ಎಂದು ತಿಳಿದುಕೊಳ್ಳಲು ಸಾಧ್ಯವವಾಗಿಲ್ಲ. ಡಾ.ರಾಧಾಕೃಷ್ಣನ್, ಸ್ವಾಮಿ ವಿವೇಕಾನಂದ ಅವರೂ ಅದೇ ಶಿಕ್ಷಣ ಪದ್ಧತಿಯಲ್ಲಿ ಬೆಳೆದರು. ಶಿಕ್ಷಣದ ರಾಷ್ಟ್ರೀಕರಣ ಎಂದರೆ ಏನು? ಎಂದು ಅವರೂ ಯೋಚಿಸಲಿಲ್ಲ. ಜಾಗತೀಕರಣದ ಬಳಿಕ ಶಿಕ್ಷಣ ಅನುಕೂಲ/ಅನಾನುಕೂಲ ಎರಡೂ ಆಗಿದೆ. ಮನುಷ್ಯನಲ್ಲಿ ಸದ್ಗುಣ ಬಿಟ್ಟು ಎಲ್ಲವೂ ಬೆಳೆದಿವೆ. ಮಾನವೀಯತೆ ಕಡಿಮೆ ಆಗುತ್ತಿದೆ. ಇತ್ತೀಚೆಗೆ ಬಂಧಿತರಾಗಿರುವ 13 ಶಂಕಿತ ಉಗ್ರರು ಎಲ್ಲರೂ ಉನ್ನತ ಶಿಕ್ಷಣ ಪಡೆದವರೇ. ಹಾಗಾದರೆ ಅವರಲ್ಲಿ ಕ್ರೌರ್ಯ ಬಂದದ್ದಾರೂ ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

-ಪ್ರೊ.ಎನ್.ವೆಂಕೋಬರಾವ್,ಮೌಲ್ಯಾಧಾರಿತ ಶಿಕ್ಷಣ ಅಗತ್ಯ


ಮೌಲ್ಯಧಾರಿತ ಶಿಕ್ಷಣ ಇಂದಿನ ಅಗತ್ಯ. ವರ್ಷವಿಡೀ ಪಾಠ, ಪ್ರವಚನ, ಅಂಕ ಗಳಿಕೆ, ಕಾರ್ಯಾಗಾರ, ಮನೆಪಾಠದ ನಡುವೆ ಮಕ್ಕಳಲ್ಲಿ ಮೌಲ್ಯ ಬೆಳೆಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಸರ್ಕಾರದ ಮೇಲೆ ಅವಲಂಬನೆ ಆಗದೇ ಮೌಲ್ಯ ಬೆಳೆಸಲು ಮುಂದಾಗಬೇಕು. ಮಕ್ಕಳಲ್ಲಿ ಉತ್ತಮ ಮೌಲ್ಯ, ಸದ್ಗುಣ, ಸ್ಫೂರ್ತಿ ಬೆಳೆಸಬೇಕು. ಮಕ್ಕಳ ಮನಸ್ಸು ಅರಿತು ಪಾಠ ಮಾಡಬೇಕು. ಮನೆ, ಮಾಧ್ಯಮ, ಸಮಾಜ ಹಾಗೂ ಶಾಲಾ ಶಿಕ್ಷಣ ಮಗುವಿಗೆ ಉತ್ತಮ ರೀತಿಯಲ್ಲಿ ದೊರೆಯುವಂತಾಗಬೇಕು. ಶಿಕ್ಷಣದಲ್ಲಿ ಮೌನ ಕ್ರಾಂತಿ ಆಗಬೇಕು.

ನಮ್ಮ ಸಂಸ್ಕೃತಿ, ಹಿರಿಮೆ-ಗರಿಮೆ ವಿಶ್ವಮಾನ್ಯವಾಗಿದೆ. ಆದರೆ, ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮವರು ಮೌಲ್ಯಗಳ ಕಡೆಗಣನೆ ಮಾಡುತ್ತಿದ್ದಾರೆ. ಅಧ್ಯಾತ್ಮ ಇಲ್ಲದಿದ್ದರೆ ಮೌಲ್ಯ ಬರುವುದಿಲ್ಲ. ಶಿಕ್ಷಕರು ವಿದ್ಯಾರ್ಥಿಯಾಗಬೇಕು. ತಾವು ವಿದ್ಯಾರ್ಥಿ ಆಗಿದ್ದಾಗ ತಮ್ಮ ಶಿಕ್ಷಕರಿಂದ ಏನು ಬಯಸುತ್ತಿದ್ದರು ಎಂಬುದು ಅರ್ಥವಾದರೆ ಇಂದಿನ ಮಕ್ಕಳಿಗೆ ಏನು ಬೋಧನೆ ಮಾಡಬಹುದು ಎಂಬುದು ಅರ್ಥವಾಗುತ್ತದೆ. ಈ ಸತ್ಯವನ್ನು ಶಿಕ್ಷಕರು ಅರಿತುಕೊಳ್ಳಬೇಕು.

-ಸ್ವಾಮಿ ಮುಕ್ತಿದಾನಂದಜಿ, ರಾಮಕೃಷ್ಣ ಆಶ್ರಮದ ಅಧ್ಯಕ್ಷಶಿಕ್ಷಕರು ರಕ್ಷಕರಾಗಬೇಕು

ಶಿಕ್ಷಕರನ್ನು ಅಳೆದರೆ ಶಿಕ್ಷಣದ ಗುಣಮಟ್ಟ ಪರೀಕ್ಷಿಸಬಹುದು. ಬೋಧಕ, ಬೋಧ್ಯ, ಶಿಕ್ಷಕ ಈ ಮೂರು ಅಂಶಗಳು ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗುರು ಎನ್ನುವುದು ಈಗ ಹಾಸ್ಯಾಸ್ಪದವಾಗಿ ಬದಲಾಗುತ್ತಿರುವುದು ವಿಷಾದನೀಯ. ಶಿಷ್ಯರ ಚಿತ್ತ ಅಪಹರಿಸುವ ಗುರುಗಳು ಈಗ ಅಪರೂಪ. ವೇಗ, ಸ್ಥಿತಿ ಸ್ಥಾಪಕ, ಬೌದ್ಧಿಕ ಸಂಸ್ಕಾರಗಳು ಶಿಕ್ಷಕರಲ್ಲಿ ಇರಬೇಕು. ಸಂಸ್ಕಾರವನ್ನು ಇನ್ನೊಬ್ಬರಿಗೆ ಸಂಕ್ರಮಣ ಮಾಡುವುದೇ ನಿಜವಾದ ಶಿಕ್ಷಣ. ಶಿಕ್ಷಕರು ಮಕ್ಕಳಲ್ಲಿ ರಕ್ಷಕ ಮನೋಭಾವ ಬೆಳೆಸಬೇಕು. ಶಿಕ್ಷಕರು ಬ್ರಹ್ಮ (ಸೃಜನ ಶಕ್ತಿ), ವಿಷ್ಣು (ರಕ್ಷಣೆ), ಮಹೇಶ್ವರರಂತೆ (ಲಯ-ಶಿಷ್ಯನಲ್ಲಿ ಬೇಡವಾದದ್ದನ್ನು ತೆಗೆದು ಹಾಕುವುದು) ಕಾರ್ಯ ನಿರ್ವಹಿಸಬೇಕು.

-ಗಂಗಾಧರ್ ಭಟ್, ಉಪನ್ಯಾಸಕಕಾಯಕಲ್ಪ ಅಗತ್ಯ


ಶಿಕ್ಷಣ ಕ್ಷೇತ್ರದ ಕಾಯಕಲ್ಪ ಆಗಬೇಕು. ಗಣಿತ, ವಿಜ್ಞಾನದಲ್ಲಿ ಮನಮುಟ್ಟುವಂತೆ ಹೇಳಿಕೊಡುವುದು ಕಷ್ಟ. ಏಕೆಂದರೆ, ಅಂತಹ ಸಾಮರ್ಥ್ಯದ ಶಿಕ್ಷಕರು ಈಗ ಇಲ್ಲ. ವಿಜ್ಞಾನ ಪದವಿ (ಬಿ.ಎಸ್ಸಿ) ಓದಲು ಯಾರೂ ಮುಂದೆ ಬರುತ್ತಿಲ್ಲ. ಶಿಕ್ಷಕರು ಇ-ಲರ್ನಿಂಗ್, ಇ-ಲೈಬ್ರರಿಗಳನ್ನು ಬಳಸಿಕೊಳ್ಳಬೇಕು. ಮಕ್ಕಳ ಮನಸ್ಸನ್ನು ತಿದ್ದಬೇಕು.

-ಎಚ್.ಎನ್.ರಾಮತೀರ್ಥ, ಚಿನ್ಮಯ ವಿದ್ಯಾಲಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry