ಗುರುವಾರ , ಏಪ್ರಿಲ್ 22, 2021
31 °C

ಗುರುಗಳ ಮನೆಗೆ ಶಿಷ್ಯರ ನಡಿಗೆ-ಹಿರಿಯರ ಗೌರವಿಸಿದ ಧನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಅದೊಂದು ಭಾವಪೂರ್ಣ ಕಾರ್ಯಕ್ರಮ. ಅಲ್ಲಿ ಹಿರಿಯರನ್ನು ಗೌರವಿಸಿದ ಧನ್ಯತೆ ಇತ್ತು. ಸಮಾಜ ಸೇವಕರನ್ನು ಗುರುತಿಸಿ ಮನ್ನಿಸಿದ ಸಾರ್ಥಕ ಭಾವ ಇತ್ತು. ಮೈಯಲ್ಲಿ ಕಸುವು ತುಂಬಿದ್ದಾಗ ನಡೆಸಿದ ಸಮಾಜ ಸೇವೆಗಳ ಕನವರಿಕೆ ಇತ್ತು.ದೇಹದ ಶಕ್ತಿ ಉಡುಗಿ ಅಸಹಾಯಕರಾಗಿ ಮೂಲೆ ಗುಂಪಾದಾಗ ಮನೆ ಬಾಗಿಲಿಗೆ ಬಂದು ಸಂತೈಸಿದರಲ್ಲ ಎಂಬ ಖುಷಿಯೂ ಇತ್ತು. ಇವೆಲ್ಲವೂ ಮೇಳೈಸಿ ಅಲ್ಲಿದ್ದವರ ಕಣ್ಣಂಚಿನಲ್ಲಿ ನೀರು ಜಿನುಗಿತ್ತು... ಹೌದು, ಅದು ಗುರುವಂದನಾ ಕಾರ್ಯಕ್ರಮ. ಮಂಗಳೂರಿನ `ಸಂಸ್ಕಾರ ಭಾರತಿ~ ರಾಷ್ಟ್ರೀಯ ಸಂಘಟನೆ ಗುರು ಪೂರ್ಣಿಮೆ ಅಂಗವಾಗಿ ನಗರದ ಐದು ಮಂದಿ ಹಿರಿಯ ಚೇತನಗಳನ್ನು ಆತ್ಮೀಯವಾಗಿ ಗೌರವಿಸಿದ ಸನ್ನಿವೇಶ. ಇದಕ್ಕೆ ಕಾರಣವಾದದ್ದು `ಗುರುಗಳ ಮನೆಗೆ ಶಿಷ್ಯರ ನಡಿಗೆ~ ಹೃದಯಸ್ಪರ್ಶಿ ಸಮಾರಂಭ.ತೆರೆಮರೆಯಲ್ಲೇ ಇದ್ದು, ನಿಸ್ವಾರ್ಥದಿಂದ ಸಮಾಜಕ್ಕೆ ಸೇವೆ ಸಲ್ಲಿಸಿ ಬದುಕಿನ ಮುಸ್ಸಂಜೆಗೆ ಸರಿದ ಐವರು ಹಿರಿಯರನ್ನು ಹುಡುಕಿಕೊಂಡು ಅವರವರ ಮನೆಗೆ ಹೋಗಿ ಗೌರವಿಸಿದ್ದು ಸಮಾರಂಭದ ವೈಶಿಷ್ಟ್ಯವಾಗಿತ್ತು.

ಬಹುತೇಕ ಜೀವನವನ್ನು ಯಕ್ಷಗಾನ ಚೌಕಿಯಲ್ಲೇ ಕಳೆದು ಇದೀಗ ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ 64ರ ಹರೆಯದ ವೀರಪ್ಪ ಕಾನಡ್ಕ, ನೃತ್ಯರಂಗಕ್ಕೆ ಜೀವನ ಮುಡಿಪಾಗಿಟ್ಟ ಶಾಸ್ತ್ರೀಯ ನೃತ್ಯಗುರು, 76ರ ಹರೆಯದ ಬಿ. ಪ್ರೇಮನಾಥ, ಸ್ವಾತಂತ್ರ್ಯ ಸಂಗ್ರಾಮದ ಕ್ವಿಟ್ ಇಂಡಿಯಾ ಚಳವಳಿಯಿಂದ ಹಿಡಿದು ಜೀವನಪೂರ್ತಿ ಸಮಾಜ ಸೇವೆ ಹಾಗೂ ಹೋರಾಟದ ಬದುಕು ನಡೆಸಿದ 86ರ ಹರೆಯದ ಎಂ.ಕೃಷ್ಣಮೂರ್ತಿ, ತುಳುನಾಡಿನ ದೈವಾರಾಧನೆಯಲ್ಲಿ ಸಕ್ರಿಯವಾಗಿ ತೊಡಗಿ ದೀವಟಿಗೆ ಹಿಡಿಯುವ ಕಾಯಕ ನಡೆಸಿದ 68ರ ಹರೆಯದ ಪದ್ಮನಾಭ ಮಡಿವಾಳ, ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ನಡೆಸಿ ಮನ್ನಣೆ ಪಡೆದ 81ರ ಹರೆಯದ ಲಕ್ಷ್ಮೀ ಕುಂಜತ್ತೂರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಹಿರಿಯರ ಗೌರವದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಗಳ ಕುಲಾಧಿಪತಿ ವಿನಯ ಹೆಗ್ಡೆ ನೀಡಿದ ತಲಾ ರೂ. ಐದು ಸಾವಿರ ಹಾಗೂ ಗೌರವ ಪತ್ರ, ಶಾಲು, ಹಾರ ಸೇರಿದೆ.ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಲಕ್ಷ್ಮೀ ಕುಂಜತ್ತೂರು ಅವರಿಗೆ ಅಪಾರ ಶಿಷ್ಯ ವೃಂದ ಇದೆ.

 

ಅವರ ಶಿಷ್ಯರು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಶಿಷ್ಯಂದಿರು ಊರಿಗೆ ಬಂದಾಗ ಈ ಹಿರಿಯ ಶಿಕ್ಷಕಿಯನ್ನು ಕಂಡು ಗೌರವ ಸೂಚಿಸುವುದು, ಆಶೀರ್ವಾದ ಪಡೆಯುವುದು ರೂಢಿ. ಅಂಥ ಸಂದರ್ಭದಲ್ಲಿ ಶಿಷ್ಯರು ನೀಡಿದ ಕಾಣಿಕೆಗಳನ್ನು ಸ್ವೀಕರಿಸದೆ ಆತ್ಮೀಯತೆಯಿಂದ ಅವರಿಗೇ ವಾಪಸ್ ಕೊಡುವುದು ಅವರ ಗುಣ.

 

ಅವರ ಕಾಣಿಕೆ ತಮಗೇಕೆ ಎಂಬ ಭಾವ. ಹೀಗಾಗಿ ಲಕ್ಷ್ಮೀ ಕುಂಜತ್ತೂರು ಅವರು ಗುರುವಂದನಾ ಕಾರ್ಯಕ್ರಮದಲ್ಲಿ ತಮಗೆ ನೀಡಿದ ರೂ. ಐದು ಸಾವಿರ ನಗದನ್ನು ಸ್ವೀಕರಿಸದೆ ಪ್ರೀತಿಯಿಂದಲೇ ವಾಪಸ್ ಮರಳಿಸಿರುವುದು ವಿಶಿಷ್ಟವಾಗಿತ್ತು.ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಮಾತನಾಡಿ, ವಿಭಿನ್ನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಆದರೆ ಸಮಾಜದಲ್ಲಿ ಯಾರೂ ಗುರುತಿಸದಂತಹ ಹಿರಿಯ ವ್ಯಕ್ತಿಗಳನ್ನು ಗೌರವಿಸುವುದು ಈ ಕಾರ್ಯಕ್ರಮದ ವಿಶೇಷ. ಸಂಸ್ಕಾರ ಭಾರತಿಯಿಂದ ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತಿದೆ. ಇಂಥ ಹಿರಿಯ ಚೇತನಗಳ ಆದರ್ಶಗಳನ್ನು ಎಳೆಯರು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಸುರೇಶ್‌ರಾಜ್, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಶಶಿಕಾಂತ್ ನಾಗ್ವೇಕರ್, ನಾಗರಾಜ ಶೆಟ್ಟಿ, ಸ್ವರುಣ್‌ರಾಜ್, ಸನಾತನ ನಾಟ್ಯಾಲಯದ ಶಾರದಾಮಣಿ ಶೇಖರ್, ಮ.ಯೋಗೀಶ್ ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.