ಗುರುವಂದನೆಯೆಂಬ ವಾರ್ಷಿಕ ಆಚರಣೆ ಎಷ್ಟು ಸಾರ್ಥಕ?

6

ಗುರುವಂದನೆಯೆಂಬ ವಾರ್ಷಿಕ ಆಚರಣೆ ಎಷ್ಟು ಸಾರ್ಥಕ?

Published:
Updated:

ಬ್ರಹ್ಮಾವರ: ದೇಶದಾದ್ಯಂತ ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬಾರ್ಕೂರು ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಚಿಂತಕ ರಾಮಭಟ್ಟ ಸಜಂಗದ್ದೆ ಅವರು `ಪ್ರಜಾ ವಾಣಿ'ಯೊಂದಿಗೆ ಶಿಕ್ಷಕರ ದಿನಾಚರಣೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ಹಂಚಿಕೊಂಡರು.     

                      

ಅಧ್ಯಾಪನ ವೃತ್ತಿಗೆ ಅದರದ್ದೇ ಆದ ಗೌರವ ವಿದೆ. ಅದನ್ನು ಉಳಿಸುವುದು, ಅಳಿಸುವುದು ಅಥವಾ ಹೆಚ್ಚಿಸುವುದು ಆ ವೃತ್ತಿಯನ್ನು ನೆಚ್ಚಿಕೊಂಡಿರುವವರ ಕೈಯಲ್ಲಿದೆ. ಅಧ್ಯಾಪನ ವೃತ್ತಿ ದಕ್ಕಿಸಿ ಕೊಡುವ ನೆಮ್ಮದಿಯೇ ಬೇರೆ. ಹಾಗೇ ಹೇಳುವುದಾದರೆ, ಅಧ್ಯಾಪನವೆನ್ನುವುದು ಬೇರೆಲ್ಲ ವೃತ್ತಿಗಳಿಗಿಂತ ಬಹಳ ಭಿನ್ನವಾಗಿರುವ, ಆ ಕಾರಣಕ್ಕಾಗಿಯೇ ತೀರಾ ಸಂಕೀರ್ಣವೂ ಕ್ಲಿಷ್ಟವೂ ಆಗಿರುವ ಒಂದು ಕಾಯಕ.ಅದರ ಯಶಸ್ಸು ಮತ್ತು ಫಲ ನಾವೆಷ್ಟು ಪರಿಣಾಮಕಾರಿಯಾಗಿ ಅದನ್ನು ನಡೆಸುತ್ತೇವೆ ಎನ್ನುವುದನ್ನು ಅವಲಂಬಿಸಿದೆ.

ಬದುಕಿನ ಸತ್ವ, ತತ್ವಗಳ ಅರಿವನ್ನು ಮೂಡಿಸಿ ಜನಸಮುದಾಯಗಳ ಚಿಂತನೆಯ ಸಾಮರ್ಥ್ಯ ವನ್ನು ದಟ್ಟವಾಗಿಸುವ ವೃತ್ತಿಯೊಂದು ಈ ಪ್ರಪಂಚದಲ್ಲಿದ್ದರೆ ಅದು ಅಧ್ಯಾಪನ ಮಾತ್ರ.ಕೈಯಲ್ಲಿ ಸುಣ್ಣದ ಚಿಕ್ಕ ಬಂದೂಕು ಹಿಡಿದುಕೊಂಡು ತರಗತಿಯೊಳಗಿರುವ ಕರಿಹಲಗೆಯ ಮೇಲೆ ಮುಗ್ಧ ಮಕ್ಕಳ ಕನಸು ಗಾರಿಕೆಗೆ ಅಕ್ಷರಗಳ ರೂಪ ಕೊಟ್ಟು ಜ್ಞಾನದೀವಿಗೆ ಬೆಳಗುವ ಅಧ್ಯಾಪನ ಶಿಕ್ಷಣ ಕ್ಷೇತ್ರಕ್ಕೆ ಅನಿವಾರ್ಯವಾಗಿದ್ದ ಕಾಲವೊಂದಿತ್ತು. ಈಗ ಎಲ್ಲೂ ಸಲ್ಲದವರು ಇಲ್ಲಿ ಸಲ್ಲುತ್ತಿದ್ದಾರೇನೋ ಎಂಬ ಗುಮಾನಿಗೆ ಅವಕಾಶವಾಗು ವಂತಹ ರೀತಿಯಲ್ಲಿ ಗುರು ಸ್ಥಾನ ಗುಜರಿಯಾ ಗುತ್ತಿದೆ. ಇದು ಅರಗಿಸಿ ಕೊಳ್ಳಲಾಗದ ವಾಸ್ತವ.ಗುರು-ಶಿಷ್ಯ ಸಂಬಂಧಕ್ಕೆ ಸಾದರ ಸುಂದರ ಭಾಷ್ಯ ಬರೆದ ಗುರುಕುಲ ಪದ್ಧತಿ ಹಾಗೂ ವಿಶ್ವಕವಿ ರವೀಂದ್ರನಾಥ ಠಾಗೋರರ ಶಾಂತಿ ನಿಕೇತನಕ್ಕೆ ಜನ್ಮಾಂತರದ ಪ್ರಾಯ. ಓದಿ ಖುಷಿಪಡುವುದಕ್ಕಷ್ಟೇ ಅವುಗಳೀಗ ಸೀಮಿತ. ಸದ್ಯ ಜಾರಿಯಲ್ಲಿರುವ, ಬ್ರಿಟಿಷರಿಂದ ಬಳುವಳಿಯಾಗಿ ಬಂದ, ಶಿಕ್ಷಣ ವ್ಯವಸ್ಥೆ ಎಷ್ಟು ಗುರುಕೇಂದ್ರಿತವೋ  ಅಷ್ಟೇ ಶಿಷ್ಯಕೇಂದ್ರಿತವೂ ಹೌದು. ಆದರೆ ಗುರು-ಶಿಷ್ಯ ಎನ್ನುವ ಪದಗಳು ಹೊಸಯುಗದ ಹಾಳು ಹಿಕ್ಕೆಯೇ ಸೈ.ಜ್ಞಾನ ವಿಜ್ಞಾನಗಳ ಆಳ ಮತ್ತು ವಿಸ್ತಾರ ವಿವೇಚನೆಯಾಚೆಗೂ ಚಾಚಿ ಚೆಲ್ಲಿರುವ ಇಂದಿನ ದಿನಗಳಲ್ಲಿ ಪೂರ್ವ ಪ್ರಾಥಮಿಕ ಮಟ್ಟದಿಂದಲೇ ನೂರಕ್ಕೆ ನೂರು ಅಂಕಗಳನ್ನು ಪಡೆಯುವ ಪೈಪೋಟಿಗೆ ಲೋಕಜ್ಞಾನವಿನ್ನೂ ಬೆಳೆಯದ ಪುಟಾಣಿಗಳನ್ನು ಅಣಿಗೊಳಿಸುವ ಮಹಾ ಕೈಂಕರ್ಯ ನಡೆಯುತ್ತಿದೆ. ಮನೆಪಾಠದ ಹಠಕ್ಕೆ ಬಿದ್ದಿರುವ ಹೆತ್ತವರ ಮುಂದೆ ಶಿಕ್ಷಕನೆಂಬ ಉದ್ಯೋಗಿ ಕಾಲಕಸವಾಗಿದ್ದಾನೆ. ಅದಕ್ಕೆ ಸರಿಯಾಗಿ ಸರ್ಕಾರದ ನೀತಿ ನಿಯಮಗಳು ಕ್ಷಣಕ್ಷಣವೂ ಬದಲಾಗುತ್ತಿರುತ್ತವೆ.ಅದರಿಂದಾಗಿ ಶೈಕ್ಷಣಿಕ ಗುಣಮಟ್ಟ ಪಾತಾಳದ ಬುಡ ಕಾಣುತ್ತಿದೆ. ಹಾಳುಹರಟೆ, ಏನು ಬರೆದರೂ ತಪ್ಪು-ಒಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಅಂಕಗಳನ್ನು ನೀಡಿ ಮಕ್ಕಳನ್ನು ಮುಂದಿನ ತರಗತಿಗಳಿಗೆ ತಳ್ಳಿಬಿಡುವ ಮೌಲ್ಯಮಾಪನ ಕ್ರಮದಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಆದರ್ಶಗಳೆಲ್ಲ ವ್ಯಕ್ತಿಗತ ಸಂಗತಿಗಳಾಗಿಬಿಟ್ಟಿವೆ. ವೇದಿಕೆ ಸಿಕ್ಕಿದರೆ ಧ್ವನಿವರ್ಧಕದ ಮೂಲಕ ಜಗತ್ತಿಗೆ ಸಾರಿ ಹೇಳುವುದಕ್ಕೆ ಹೇಳಿ ಮಾಡಿಸಿದಂತಿವೆ.ಅಧ್ಯಾಪಕರೇ ಜ್ಞಾನಪಿಪಾಸುಗಳಾಗದಿದ್ದರೆ, ಹೊಸ ಹೊಸ ಚಿಂತನೆಗಳಿಗೆ ಇಂಬು ಕೊಡುವಂತಹ ಜ್ಞಾನಮಟ್ಟವನ್ನು ಹೆಚ್ಚಿಸುವ ವ್ಯಾಪಕ ಓದಿನ ಹವ್ಯಾಸವನ್ನು ಬೆಳೆಸಿ ಕೊಳ್ಳದಿದ್ದರೆ, ಅಂತಹ ಸ್ಫೂರ್ತಿ ಹಾಗೂ ಪ್ರೇರಣೆಯ ಕಾರಂಜಿ ಚಿಮ್ಮದಿದ್ದರೆ, ವಿದ್ಯಾರ್ಥಿ ಗಳನ್ನು ಭಾವನಾತ್ಮಕವಾಗಿ ಅರ್ಥ ಮಾಡಿಕೊಂಡು ಕಲಿಕಾ ಹಂತದಲ್ಲಿ ಅವರ ಭಿನ್ನ ಸಮಸ್ಯೆಗಳಿಗೆ ಸ್ಪಂದಿಸುವ ಆಸಕ್ತಿ ತೋರದಿದ್ದರೆ, ಎಲ್ಲ ವಿಧಗಳಲ್ಲೂ ಮಾದರಿ ವ್ಯಕ್ತಿಯಾಗಿ ವಿದ್ಯಾರ್ಥಿಗಳ ನಡುವೆ ಓಡಾಡದಿದ್ದರೆ, ಅಂತಹ ಅಧ್ಯಾಪಕರು ಧಾರೆ ಎರೆಯುವ ಶಿಕ್ಷಣ ಹೇಗಿರಬಹುದು? ಉತ್ತರ ಪ್ರಶ್ನೆಯಲ್ಲೇ ಇದೆ.ಒಟ್ಟಿನಲ್ಲಿ ಹೇಳುವುದಾದರೆ, ಅನನ್ಯ, ಅವ್ಯಕ್ತ ನೆಮ್ಮದಿ ನೀಡುವ ಅಧ್ಯಾಪನ ವೃತ್ತಿಯ ಘನತೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಅಧ್ಯಾಪಕರ ಮೇಲಿದೆ. ಅಧ್ಯಾಪಕನಿಗೆ ಆಳವಾದ ವಿಷಯ ಜ್ಞಾನ ಎಷ್ಟು ಮುಖ್ಯವೋ ಪ್ರಾಪಂಚಿಕ ಪರಿಜ್ಞಾನವೂ ಅಷ್ಟೇ ಮುಖ್ಯ. ಹಾಗೆಂದು ಎಲ್ಲರೂ ಡಾ.ರಾಧಾಕೃಷ್ಣನ್ ಅಥವಾ ಸಾಕ್ರೆಟೀಸ್ ಆಗಲು ಸಾಧ್ಯವಿಲ್ಲ. ಆದರೆ ಆ ಶ್ರೇಷ್ಠತೆಯ ಸನಿಹದಲ್ಲೆಲ್ಲಾದರೂ ಮಿಸುಕಾಡುವ ಪುಟ್ಟ ಪ್ರಾಮಾಣಿಕ ಪ್ರಯತ್ನವನ್ನಾದರೂ ಮಾಡಿದರೆ ನಾವು ನೀವು ನಡೆದಾಡುವ ಈ ನೆಲ ಪರಮ ಪಾವನವಾದೀತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry