ಗುರುವಾದ ಶಿಷ್ಯ!

7

ಗುರುವಾದ ಶಿಷ್ಯ!

Published:
Updated:

ಗದುಗಿನ ಪಂಚಾಕ್ಷರಿ ಗವಾಯಿಗಳ ಜೀವನವೇ ಸಂಗೀತ ಕಲಿಯುವುದಕ್ಕಾಗಿ ಮತ್ತು ಕಲಿಸುವುದಕ್ಕಾಗಿ ಮೀಸಲಾಗಿತ್ತು. ಒಂದು ಜನ್ಮದಲ್ಲಿ  ಯಾರೂ ಪೂರ್ತಿಯಾಗಿ ಸಂಗೀತ ಕಲಿಯುವುದು ಸಾಧ್ಯವಿಲ್ಲವೆಂದು ಅವರು ದೃಢವಾಗಿ ನಂಬಿದ್ದರು. ಈ ಜನ್ಮದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನೂ ಪೂರ್ತಿ ಕಲಿತು ಬಿಡಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿತ್ತು.ಗಾಯನ ಇಲ್ಲವೇ ವಾದನ ಇವುಗಳಲ್ಲಿ ಯಾವುದಾದರೊಂದು ವಿಭಾಗದಲ್ಲಿ ನಿರಂತರ ಸಾಧನೆಯನ್ನು ಮಾಡುವುದು, ಅದರಲ್ಲಿಯೇ ಅಪ್ರತಿಮ ಎನಿಸುವಂಥ ಪ್ರಬುದ್ಧತೆಯನ್ನು ಹೊಂದುವುದು ಬಹುತೇಕ ಕಲಾವಿದರು ತಲುಪುವ ಹಂತ. ಪಂಚಾಕ್ಷರಿ ಗವಾಯಿಗಳು ಕರ್ನಾಟಕಿ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಅಸೀಮ ಗಾಯಕರೆನಿಸಿದರು. ಇದಿಷ್ಟೇ ಸಾಲದೆಂಬಂತೆ ವಾದನ ಕ್ಷೇತ್ರದಲ್ಲೂ ಶ್ರೇಷ್ಠರು ಎನಿಸುವಂಥ ಸಾಧನೆಯನ್ನು ಮಾಡಿದರು. ಅಂದಹಾಗೆ, ವಾದನವನ್ನು ಕಲಿಯಲು ಗವಾಯಿಗಳಿಗೆ ಸೂಚಿಸಿದವರು ಹಾನಗಲ್ಲ ಕುಮಾರಸ್ವಾಮಿಗಳು! ಒಮ್ಮೆ ಅವರು ಹೇಳಿದರು-  `ನೀನು ಈಗಾಗಲೇ ಉಭಯಗಾನ ವಿಶಾರದನೆನಿಸಿರುವೆ. ಇವುಗಳ ಜೊತೆಗೆ ವಾದನದಲ್ಲಿಯೂ ಒಂದಿಷ್ಟು ಸಾಧಿಸು~. ಅಂದಿನಿಂದ ಅವರು ವಾದನಕಲೆಯತ್ತಲೂ ತಮ್ಮ ಗಮನವನ್ನು ಕೇಂದ್ರೀಕರಿಸಿದರು.ಪಿಟೀಲು, ಹಾರ್ಮೋನಿಯಂ, ತಬಲಾ ನುಡಿಸುವುದನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸತೊಡಗಿದರು. ಬಳ್ಳಾರಿ ರಾಘವಾಚಾರ್ಯರಲ್ಲಿ ಪಿಟೀಲು ಕಲಿತರು. ತಬಲಾ ಕಲಿಕೆಯ ಬಗೆಗೆ ಅವರಿಗೆ ಅಪಾರ ಆಸಕ್ತಿಯಿತ್ತು. ಆದರೆ ತಬಲಾವಾದನ ಕಲಿಸುವ ಗುರು ದೊರೆಯಬೇಕಲ್ಲ!ಆಗ ಬೆಳಗಾವಿಯಲ್ಲಿ ಶಹಾಪೂರ ಮಲ್ಲೇಶಪ್ಪನೆಂಬುವವರು ಉತ್ತಮ ತಬಲಾವಾದಕರೆಂದು ಹೆಸರುವಾಸಿಯಾಗಿದ್ದರು. ಈಗಾಗಲೇ ಪಂ.ರಾಮಕಷ್ಣಬುವಾ ವಝೆಯವರಲ್ಲಿ ಸಂಗೀತವನ್ನು ಕಲಿತಿದ್ದರಿಂದ ಬೆಳಗಾವಿ ಅವರಿಗೆ ಅಪರಿಚಿತ ಸ್ಥಳವೇನೂ ಆಗಿರಲಿಲ್ಲ. ಆದರೆ ಪಂಚಾಕ್ಷರಿ ಗವಾಯಿಗಳಿಗೆ ಬೆಳಗಾವಿಗೆ ಬಂದು ಕಲಿಯುವಷ್ಟು ಸಮಯಾವಕಾಶ ಇರಲಿಲ್ಲ. ಇದಕ್ಕಾಗಿ ಅವರು ಒಂದು ಉಪಾಯ ಹುಡುಕಿದರು.ದಿನನಿತ್ಯದ ಸಂಗೀತ ಪಾಠ ನಡೆಯುವಾಗ ಗವಾಯಿಗಳ ಶಿಷ್ಯರಲ್ಲಿ ಒಬ್ಬರಾದ ಶಿವಯ್ಯನವರು ತಬಲಾ ಸಾಥಿ ನೀಡುತ್ತಿದ್ದರು. ಗವಾಯಿಗಳು ಅವರನ್ನೇ ಬೆಳಗಾವಿಗೆ ಕಳುಹಿಸಿ ಮಲ್ಲೇಶಪ್ಪನವರಲ್ಲಿ ತಬಲಾ ಕಲಿಯುವ ವ್ಯವಸ್ಥೆ ಮಾಡಿದರು. ಜೇಕಿನಕಟ್ಟೆಯ ಶಿವಯ್ಯನವರು ವ್ಯವಸ್ಥಿತವಾಗಿ ತಬಲಾ ಕಲಿತು ಗದುಗಿಗೆ ಮರಳಿದರು. ಶಿವಯ್ಯನವರ ಸಾಧನೆಯನ್ನು ಕಂಡು ಗವಾಯಿಗಳು ಹಿಗ್ಗಿದರು ಹಾಗೂ ಅವರನ್ನೇ ತಮ್ಮ ಗುರುವೆಂದು ಭಾವಿಸಿ ತಬಲಾವಾದನ ಕಲಿಕೆ ಪ್ರಾರಂಭಿಸಿದರು. ಪಂಚಾಕ್ಷರಿಗಳು ತಬಲಾವಾದನದಲ್ಲಿಯೂ ವೈಶಿಷ್ಟ್ಯ ಮೆರೆಯುತ್ತಿದ್ದರು. ಎಲ್ಲರೂ ಬಲಗೈಯಿಂದ ತಬಲಾ ನುಡಿಸಿದರೆ, ಇವರು ಎಡಗೈಯಿಂದ ನುಡಿಸುತ್ತಿದ್ದರು. ಬಲಗೈ ಡಗ್ಗಾ ನುಡಿಸುತ್ತಿತ್ತು. ಸಾಮಾನ್ಯವಾಗಿ ಸಂಗೀತಗಾರರು ಬಲಗೈಯನ್ನು ಜತನವಾಗಿರಿಸಿಕೊಳ್ಳುತ್ತಾರೆ. ಆ ಕೈ ತಂಬೂರಿ ಮೀಟಲು, ಹಾರ್ಮೋನಿಯಂನ ಸ್ವರಗಳನ್ನು ನುಡಿಸಲು, ಪಿಟೀಲಿನ ಕಮಾನು ತೀಡಲು ಪ್ರಯೋಜನಕಾರಿ. ಆದರೆ, ತಬಲಾವಾದನದಲ್ಲಿಯೂ ಬಲಗೈಯನ್ನೇ ಪ್ರಧಾನವಾಗಿ ಬಳಸಿದರೆ, ತಬಲಾವಾದನದಲ್ಲಿ ಹೆಚ್ಚಿನ ಮಾತ್ರೆಗಳು ತಬಲಾದ ಮೇಲೆಯೇ ನುಡಿಸಲ್ಪಡುವುದರಿಂದ ಅದಕ್ಕೇ ಹೆಚ್ಚಿನ ಒತ್ತಡ ಬೀಳುತ್ತದೆ. ಎಡಗೈ ತಬಲಾದ ಬೋಲ್‌ಗಳಿಗೆ ಪೂರಕವಾದ ಮಾತ್ರೆಗಳನ್ನು ಮಾತ್ರ ಡಗ್ಗಾದ ಮೇಲೆ ನುಡಿಸುತ್ತದೆ. ಹೀಗಾಗಿ ಪಂಚಾಕ್ಷರಿ ಅವರು ಎಡಗೈಯಿಂದ ತಬಲಾ ನುಡಿಸುವುದನ್ನು ರೂಢಿಸಿಕೊಂಡು ಬಲಗೈ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡಿಕೊಂಡರು.ಅಲ್ಪ ಕಾಲದಲ್ಲಿಯೇ ಪಿಟೀಲು, ಹಾರ್ಮೋನಿಯಂ, ಪಖಾವಜ್, ಸಾರಂಗಿ, ದಿಲ್‌ರುಬಾ, ಕೊಳಲು, ಶಹನಾಯಿ ವಾದನಗಳನ್ನು ನುಡಿಸುವಲ್ಲಿಯೂ ಪಂಚಾಕ್ಷರಿ ಗವಾಯಿ ನಿಷ್ಣಾತರೆನಿಸಿದರು. ಶಿಷ್ಯನನ್ನೇ ಗುರುವೆಂದು ಭಾವಿಸಿದ ಅಪರೂಪದ ಹೃದಯವಂತಿಕೆ, ವಿದ್ಯೆ ಯಾವ ಮೂಲದಿಂದ ಬಂದರೂ ಅದು ಗ್ರಾಹ್ಯ ಎನ್ನುವ ತಿಳಿವಳಿಕೆ ಅವರದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry