ಭಾನುವಾರ, ಫೆಬ್ರವರಿ 28, 2021
29 °C

ಗುರುವಿಗಾಗಿ ಗುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುವಿಗಾಗಿ ಗುರು

`ಗುರು~.

ಎದುರಿಗೆ ಸಿಕ್ಕವರನ್ನು `ಏನ್ ಗುರು~ ಎಂದು ಮಾತನಾಡಿಸುವುದು ನಟ ಜಗ್ಗೇಶ್ ಅವರ ರೂಢಿ. ಇಲ್ಲಿನ `ಗುರು~ ಸಂಬೋಧನೆ ಕುರಿತಾದುದಲ್ಲ. ಅದು ಸಿನಿಮಾದ ಹೆಸರು.`ಗುರು~ ಚಿತ್ರಕ್ಕೆ ಸಂಬಂಧಿಸಿದಂತೆ ಮೂರು ವಿಶೇಷಗಳಿವೆ. ಮೊದಲನೆಯದು, ಜಗ್ಗೇಶ್ ಈ ಸಿನಿಮಾದ ಮೂಲಕ ನಿರ್ದೇಶಕರಾಗುತ್ತಿರುವುದು. ಅವರ ಇಬ್ಬರು ಮಕ್ಕಳಾದ ಗುರುರಾಜ್ ಮತ್ತು ಯತಿರಾಜ್ ಒಟ್ಟಾಗಿ ನಟಿಸುತ್ತಿರುವುದು ಇನ್ನೊಂದು ವಿಶೇಷ. ಮೂರನೇ ವಿಶೇಷ ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದ್ದು. ಜಗ್ಗೇಶ್ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರಷ್ಟೇ. ಇದೇ ಮೊದಲ ಬಾರಿಗೆ ಅವರಿಗೆ ತಮ್ಮ `ಗುರುರಾಜ ಫಿಲಂಸ್~ ಹೆಸರಿನಲ್ಲಿ ಮಂತ್ರಾಲಯದ ಲಾಂಛನವನ್ನು ಬಳಸಿಕೊಳ್ಳಲು ಮಠದವರಿಂದ ಹಸಿರು ನಿಶಾನೆ ದೊರೆತಿದೆಯಂತೆ. ಗುರುರಾಯರ ಆಶೀರ್ವಾದದ ಕುರುಹಾಗಿ ಅವರು ತಮ್ಮ ಚಿತ್ರವನ್ನು `ಗುರು~ ಎಂದು ಕರೆದಿದ್ದಾರೆ.ಗುರುವಾರ (ಮೇ 3) ಮಂತ್ರಾಲಯದಲ್ಲಿ, ಗುರುರಾಜರ ಸನ್ನಿಧಿಯಲ್ಲಿ ಜಗ್ಗೇಶ್ ಮೊದಲ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಿದ್ದಾರೆ. ಒಂದು ದಿನದ ಚಿತ್ರೀಕರಣದ ನಂತರ ಚಿತ್ರತಂಡ ಬೆಂಗಳೂರಿಗೆ ಮರಳಲಿದೆ. ಮತ್ತೆ ಶೂಟಿಂಗ್ ಆರಂಭವಾಗುವುದು ಜೂನ್‌ನಲ್ಲಿ. ಏಕೆಂದರೆ, ಚಿತ್ರದ ನಾಯಕ ಗುರುರಾಜ್ ಪ್ರಸ್ತುತ ಕಾಂಬೋಡಿಯಾ ಗಡಿಯ ತರಬೇತಿ ಶಾಲೆಯಲ್ಲಿ ದೇಹದಾರ್ಢ್ಯಕ್ಕೆ ಸಂಬಂಧಿಸಿದಂತೆ ತರಬೇತಿ ಪಡೆಯುತ್ತಿದ್ದಾರೆ. ಅವರು ವಾಪಸ್ ಆಗಲಿಕ್ಕಿನ್ನೂ ತಿಂಗಳು ಬೇಕು. ಆನಂತರವೇ ಚಿತ್ರೀಕರಣ ಚುರುಕಾಗುವುದು.

 

ಡಬ್ಬಿಂಗ್ ಮಾತೃದ್ರೋಹ
ಡಬ್ಬಿಂಗ್ ಬೇಕಾ? ಡಬ್ಬಿಂಗ್ ನಿಷೇಧ ಕಾನೂನುಬಾಹಿರ ಅಲ್ಲವಾ?ಪ್ರಸ್ತುತ ಚಾಲ್ತಿಯಲ್ಲಿರುವ ಡಬ್ಬಿಂಗ್ ವಿರೋಧಿ ಚರ್ಚೆಯತ್ತ ಜಗ್ಗೇಶರ ಗಮನಸೆಳೆದಾಗ ಅವರು ಸ್ಪಷ್ಟವಾಗಿ ಹೇಳಿದ್ದು- `ಡಬ್ಬಿಂಗ್‌ಗೆ ಧಿಕ್ಕಾರ~. ಆವರೆಗೆ `ಗುರು~ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಅವರು ಡಬ್ಬಿಂಗ್ ವಿಷಯ ಪ್ರಸ್ತಾಪ ಆಗುತ್ತಿದ್ದಂತೆಯೇ ಗುರ್ ಎಂದರು.`ಡಬ್ಬಿಂಗ್ ಮಾಡುತ್ತೇವೆನ್ನುವುದು ಮಾತೃದ್ರೋಹದ ಕೆಲಸ. ಆದರೆ, ಕೆಲವು ವಿತಂಡವಾದಿಗಳು ಡಬ್ಬಿಂಗ್ ಸಮರ್ಥನೆಗೆ ಇಳಿದಿದ್ದಾರೆ. ಇವರದು ಕನ್ನಡವನ್ನು ಸರ್ವನಾಶ ಆಗಿಸುವ ಚಿಂತನೆ. ಈಗ ಸಂವಿಧಾನದ ಬಗ್ಗೆ ಮಾತನಾಡುವವರು, ನಾವು ನಾಶವಾಗುವ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವುದಿಲ್ಲ. ಡಬ್ಬಿಂಗ್ ಬಗ್ಗೆ ಈಗ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆ ವಿಷಯವಾಗಿ ಎಂಥ ಉಗ್ರ ಹೋರಾಟಕ್ಕೂ, ತ್ಯಾಗಕ್ಕೂ ನಾವು ಸಿದ್ಧರಾಗಿದ್ದೇವೆ~.ಜಗ್ಗೇಶ್ ನಿರ್ದೇಶನದ ನಿರ್ಧಾರ ದಿಢೀರ್ ಆದುದೇನೂ ಅಲ್ಲ. ಐಪಿಎಸ್ ಮಾಡಬೇಕು ಎಂದುಕೊಂಡಿದ್ದ ಗುರು, `ಯು ಟರ್ನ್~ ತೆಗೆದುಕೊಂಡು ನಟನಾಗುತ್ತೇನೆ ಎಂದ. ಅಪ್ಪ ಬೇಡ ಅನ್ನಲಿಲ್ಲ. `ಮೊದಲು ಬೇರೆಯವರ ಗರಡಿಯಲ್ಲಿ ಪಳಗು~ ಎಂದು ಹರಸಿದರು. ಆದರೆ, ಆ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಇತರ ಬ್ಯಾನರ್‌ಗಳು ಮಗನನ್ನು ಬಳಸಿಕೊಂಡ ರೀತಿ ಜಗ್ಗೇಶ್ ಅವರಿಗೆ ಇಷ್ಟವಾಗಲಿಲ್ಲ. `ನನ್ನನ್ನು ಪ್ರಯೋಗಪಶು ಆಗಿಸಬೇಕಿತ್ತಾ?~ ಎಂದು ಮಗ ಕೊರಗಿದ.`ಹೆದರಬೇಡ ಮಗನೇ. ಬಲಿಷ್ಠವಾದ ಗೋಡೆ ಅಪ್ಪನ ರೂಪದಲ್ಲಿ ನಿನ್ನ ಪಕ್ಕದಲ್ಲಿದೆ. ಮೊದಲು ಅವಮಾನ ಆಗಬೇಕು. ಆಮೇಲೆ ಸನ್ಮಾನ ಇದ್ದೇ ಇದೆ. ಇದಕ್ಕೆ ಉದಾಹರಣೆಯಾಗಿ ನಾನೇ ನಿನ್ನ ಕಣ್ಣೆದುರಿಗಿದ್ದೇನೆ~ ಎಂದು ಮಂಕಾಗಿ ಕೂತ ಮಗನನ್ನು ಜಗ್ಗೇಶ್ ಸಂತೈಸಿದರು. ಆಗ ಶುರುವಾದದ್ದು ಮಗನಿಗಾಗಿ ತಾವೇ ಚಿತ್ರ ನಿರ್ಮಿಸಿ, ನಿರ್ದೇಶಿಸುವ ಚಿಂತನೆ.`ದಿ ಸೈಲೆಂಟ್ ವಾರಿಯರ್~ ಎನ್ನುವ ಅಡಿ ಟಿಪ್ಪಣಿ `ಗುರು~ ಶೀರ್ಷಿಕೆಗಿದೆ. ಹಾಗಾಗಿ, ಇದು ಸಾಹಸಪ್ರಧಾನ ಚಿತ್ರ ಎಂದು ಸುಲಭವಾಗಿ ಊಹಿಸಬಹುದು. ಜಗ್ಗೇಶ್‌ರ ಮಾತಿನಲ್ಲೇ ಹೇಳುವುದಾದರೆ- `ರ‌್ಯಾಂಬೊ ಶೈಲಿ~ಯ ಸಿನಿಮಾ.ಜಗ್ಗೇಶ್‌ರ ಮತ್ತೊಬ್ಬ ಪುತ್ರ ಯತಿರಾಜ್ ಕೂಡ ತಾರಾಗಣದಲ್ಲಿದ್ದಾರೆ. ತ್ಯಾಗರಾಜನ ಆಯಾಮವಿರುವ ಖಳ ಛಾಯೆಯ ಪಾತ್ರ ಅವರದು. ಇಬ್ಬರು ಮಕ್ಕಳನ್ನು ನಟಿಸಲಿಕ್ಕೆ ಬಿಟ್ಟು ಸೂತ್ರ ಆಡಿಸುವಷ್ಟಕ್ಕೆ ಮಾತ್ರ ತಮ್ಮ ಪಾತ್ರವನ್ನು ಜಗ್ಗೇಶ್ ಸೀಮಿತಗೊಳಿಸಿಕೊಂಡಿದ್ದಾರೆ. ಅವರು ನಟಿಸುವ ಪಾತ್ರ ಚಿತ್ರದಲ್ಲಿ ಇಲ್ಲವಂತೆ.

`ಕಥೆ ಯಾರದ್ದು? ನಿಮ್ಮದೇನಾ? ನಿಮ್ಮ ಅನುಭವಗಳ ಕುರಿತಾದುದೇನಾ?~ ಎಂದರೆ ಜಗ್ಗೇಶ್ ನಗುತ್ತಾರೆ. ತಮ್ಮ ಅನುಭವಗಳೂ ಇರುವ ಮಿಸಳಭಾಜಿ ಕಥೆಯೊಂದನ್ನು ಅವರು ರೂಪಿಸಿದ್ದಾರಂತೆ.ಗುರುವಿಗೆ ನಾಯಕಿ ಯಾರೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. `ಶೈಲೂ~ವಿನ ಭಾಮಾ ಆಗಬಹುದೇನೊ ಎಂದು ಯೋಚಿಸಲಾಗುತ್ತಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಣಿಯ ಮುಖ್ಯ ಪಾತ್ರವೊಂದಿದೆ. ಆ ಪಾತ್ರದಲ್ಲಿ ಸುಧಾರಾಣಿ ಅಥವಾ ಸುಹಾಸಿನಿ ನಟಿಸುವ ಸಾಧ್ಯತೆಯಿದೆ. ರಮೇಶ್‌ಬಾಬು ಅವರ ಛಾಯಾಗ್ರಹಣ, ವಿನಯಚಂದ್ರರ ಸಂಗೀತ ಚಿತ್ರಕ್ಕಿದೆ.ಗುರುವಾರ ಮುಹೂರ್ತ ನಡೆಸುವ `ಗುರು~ವಿಗೆ ಆಮೇಲೆ ಸುಮಾರು ಒಂದು ತಿಂಗಳ ರಜೆ. ಆ ಬಿಡುವಿನಲ್ಲಿ ಜಗ್ಗೇಶ್ ಈಗಾಗಲೇ ಒಪ್ಪಿಕೊಂಡಿರುವ `ಕೂಲ್ ಗಣೇಶ~ ಚಿತ್ರದ ಶೂಟಿಂಗ್ ಮುಗಿಸುತ್ತಾರಂತೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.